• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಲಗಣಪತಿ ಪೂಜೆಗೆ ನ್ಯೂಯಾರ್ಕ್ ಮಕ್ಕಳ ಪೌರೋಹಿತ್ಯ

By Staff
|

ನಮ್ಮ ಮಕ್ಕಳೇ ನಡೆಸಿಕೊಟ್ಟ ಪೂಜೆಯನ್ನು ನೋಡಿ ಬಹಳ ಹೆಮ್ಮೆಯಾಯಿತು. ಪೂಜೆಯ ನಂತರ ಪ್ರಸಾದ ರೂಪದ ಉಸಲಿ ಮತ್ತು ಕಡುಬಿನ ವಿನಿಯೋಗವಾಯಿತು. ಆಮೇಲೆ..

  • ಟಿ. ಮಹದೇವ ರಾವ್, ನ್ಯೂಯಾರ್ಕ್

ಬಾಲಗಣಪತಿ ಪೂಜೆಗೆ ನ್ಯೂಯಾರ್ಕ್ ಮಕ್ಕಳ ಪೌರೋಹಿತ್ಯಪಶ್ಚಿಮ ನ್ಯೂಯಾರ್ಕ್‌ನಲ್ಲಿರುವ ರಾಚೆಸ್ಟರ್‌ನಲ್ಲಿ ಕಳೆದ ಭಾನುವಾರ(ಸೆ. 23) ಗಣೇಶನ ಹಬ್ಬದ ಸಡಗರ. ಹಿಂದೊಮ್ಮೆ ನಾನು ಬರೆದಂತೆ ನಮ್ಮದು ಚಲಿಸುವ ನಾಯಕ(ಕೀ)ತ್ವ. ಈ ಸಲದ ಸಾರಥ್ಯವನ್ನು ವಹಿಸಿದವರು ಗೀತಾ ಮತ್ತು ಶಾಂತಾರಾಮ; ಭಾಗ್ಯ ಮತ್ತು ಗುರುನಾಥ್; ಮತ್ತು ಅಮೃತ್ ಮತ್ತು ಪದ್ಮನಾಭ ಕಾಮತ್. ಬೆಳಿಗ್ಗೆ ಹನ್ನೊಂದೂವರೆ ಗಂಟೆಗೆ ಗಣೇಶನ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಣೇಶನ ಪೂಜೆಗೆ ಯಾವ ಜೋಯಿಸರೂ ಇರಲಿಲ್ಲ. ನಮ್ಮ ಮಕ್ಕಳೇ ನಡೆಸಿಕೊಟ್ಟ ಪೂಜೆಯನ್ನು ನೋಡಿ ಬಹಳ ಹೆಮ್ಮೆಯಾಯಿತು. ಪೂಜೆಯ ನಂತರ ಪ್ರಸಾದ ರೂಪದ ಉಸಲಿ ಮತ್ತು ಕಡುಬಿನ ವಿನಿಯೋಗವಾಯಿತು.

ನಮ್ಮ ರಾಚೆಸ್ಟರ್ ನಗರದಲ್ಲಿ ಇಂಡಿಯಾ ಕಮ್ಮ್ಯೂನಿಟಿ ಸೆಂಟರ್ ICC ಎಂಬ ಸಂಸ್ಥೆಯೊಂದಿದೆ. ಮನ್ರೋ ಮತ್ತು ವೇಯ್ನ್ ಕೌಂಟಿಗಳ ಗಡಿರೇಖೆಯ ಮೇಲೆ, ಪುಟ್ಟದೊಂದು ಬೆಟ್ಟದ ಮೇಲೆ ICC www.icor.org ಭವನವಿದೆ. ಅದರಲ್ಲಿ, ದೊಡ್ಡ ಆಡಿಟೋರಿಯಂ, ಮೀಟಿಂಗ್ ರೂಮುಗಳು, ಪೂಜೆಯ ಕೋಣೆಗಳು, ಅಡಿಗೆ ಮನೆ ಇತ್ಯಾದಿ ಇವೆ. ಭಾರತೀಯ ಗುಂಪುಗಳ ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಚಟುವಟಿಕೆಗಳಿಗೆ ಇದು ಹೇಳಿ ಮಾಡಿಸಿದಂಥ ಸ್ಥಳ. ದಶಕಗಳ ಹಿಂದೆಯೇ, ದೂರಾಲೋಚನೆಯುಳ್ಳ ರಾಚೆಸ್ಟರ್‌ನ ಭಾರತೀಯ ನಾಯಕರು, ಈ ಭವನವನ್ನೂ, ಅದರ ಸುತ್ತ ಮುತ್ತಲಿನ ತಾಣವನ್ನೂ ಖರೀದಿಸಿ ಇಲ್ಲಿನ ಭಾರತೀಯ ಜನ ಸಮುದಾಯಕ್ಕೆ ಮಹದುಪಕಾರ ಮಾಡಿದ್ದಾರೆ. ಆ ನಾಯಕರಲ್ಲಿ ಅನೇಕರು ಕನ್ನಡಿಗರೆಂಬುದು ನಮಗೆ ಬಹಳ ಹೆಮ್ಮೆ.

ICCಯ ಹಿರಿಯ ನಾಯಕರಲ್ಲಿ ಪದ್ಮನಾಭ ಕಾಮತ್ ಪ್ರಮುಖರು. ಅವರ ಮುಂದಾಳುತನದಲ್ಲಿ, ಪ್ರತಿವರ್ಷವೂ ಭಾರತೀಯ ಮಕ್ಕಳಿಗೆ ಹಿಂದೂ ಹೆರಿಟೇಜ್ ಕ್ಯಾಂಪ್ ಎಂಬ ಬೇಸಿಗೆ ಶಿಬಿರ ನಡೆಯುತ್ತದೆ. ಜುಲೈ ತಿಂಗಳಲ್ಲಿ ನಡೆಯುವ ಈ ಕ್ಯಾಂಪಿಗೆ ಅಮೇರಿಕದ ವಿವಿಧ ರಾಜ್ಯಗಳಿಂದ ಇನ್ನೂರಕ್ಕೂ ಹೆಚ್ಚು ಮಕ್ಕಳು ಬರುತ್ತಾರೆ. ಎರಡು ವಾರ ಅವಧಿಯ ಈ ಕ್ಯಾಂಪಿನಲ್ಲಿ ಮಕ್ಕಳು ICCಯ ಪಕ್ಕದಲ್ಲೇ ಇರುವ ಕ್ಯಾಬಿನ್‌ಗಳಲ್ಲಿ ವಾಸ ಮಾಡುತ್ತಾರೆ. ರಾಚೆಸ್ಟರ್‌ನ ಸ್ವಯಂಸೇವಕರು (ಗೀತಾ ಮತ್ತು ಶಾಂತಾರಾಮ ಅವರಲ್ಲಿ ಮುಖ್ಯರು) ಅಡಿಗೆ, ಸ್ವಚ್ಛತೆ ಮುಂತಾದ ಎಲ್ಲ ಸೇವೆಗಳನ್ನೂ ಒದಗಿಸುತ್ತಾರೆ.

ಇಷ್ಟೆಲ್ಲಾ ICC ಪುರಾಣ ಏಕೆ ಬರೆಯುತ್ತಾ ಇದ್ದಾನೆ ಅಂದುಕೋಬೇಡಿ. ಈ ಕ್ಯಾಂಪಿನ ಕಾರ್ಯಗಳಲ್ಲಿ, ಮಕ್ಕಳಿಗೆ ದೇವರ ಪೂಜೆಯನ್ನೂ ಹೇಳಿಕೊಡುತ್ತಾರೆ. ಹೆಣ್ಣು ಗಂಡೆಂಬ ಭೇದವಿಲ್ಲದೆ, ಮಕ್ಕಳೇ ದೇವರ ಮುಂದೆ ಕೂತು, ಸ್ವಚ್ಛವಾಗಿ ಸಂಸ್ಕೃತದಲ್ಲಿ ಮಂತ್ರಗಳನ್ನು ಹೇಳಿ, ಪೂಜೆ ಮಾಡುವುದನ್ನು ನೋಡುವುದೇ ಒಂದು ಸೊಗಸು. ಕೇಳಲು ಹೆಮ್ಮೆಯಾಗುತ್ತದೆ. ನಮ್ಮ ಕನ್ನಡಕೂಟದ ಅನೇಕ ಮಕ್ಕಳು ಈ ಕ್ಯಾಂಪಿನಲ್ಲಿ ಭಾಗವಹಿಸಿದವರೇ. ನಮ್ಮ ಗಣೇಶನ ಹಬ್ಬದಲ್ಲಿ ಪೂಜೆಯನ್ನು ಮಾಡಿದವರೂ ಅವರೇ.

ಈ ಸಲದ ಕನ್ನಡ ಕೂಟದ ಪ್ರಮುಖ ಆಕರ್ಷಣೆ, "ಕುಜದೋಷವೋ? ಶುಕ್ರದೆಸೆಯೋ?" ಎಂಬ ನಾಟಕ ಪ್ರದರ್ಶನ. ಬಾಲ್ಟಿಮೋರಿನಲ್ಲಿ, ವಿಶ್ವಕನ್ನಡ ಸಮ್ಮೇಳನದಲ್ಲಿ ಈ ನಾಟಕವನ್ನು ನೋಡಿದಾಗಿನಿಂದ ಅದನ್ನು ರಾಚೆಸ್ಟರ್‌ನಲ್ಲಿ ಮಾಡಬೇಕೆಂಬ ಬಯಕೆ ನನ್ನಲ್ಲಿ ಮೂಡಿತ್ತು. ನಾಟಕದ ಲೇಖಕಿ ಶ್ರೀಮತಿ ಅಲಮೇಲು ಅಯ್ಯಂಗಾರ್ ಅವರ ಅನುಮತಿಯೂ ದೊರೆಯಿತು. ನಾಟಕದ ಪಾತ್ರಧಾರಿಗಳ ಆಯ್ಕೆ, ನಾಟಕದ ಅಭ್ಯಾಸದ ವೇಳೆಯ ನಿರ್ಧಾರ ಮುಂತಾದ ಕೆಲಸಗಳಿಗೆ ಬಹಳ ಸಮಯ ಹಿಡಿಯಿತು. ನಾಟಕ ಆಡುವುದರಲ್ಲಿ ಹೆಚ್ಚು ಅನುಭವ ನಮ್ಮಲ್ಲಿ ಯಾರಿಗೂ ಇರಲಿಲ್ಲ. ಹೇಗೋ ನಮಗೆ ತೋಚಿದ ಹಾಗೆ ಅಭ್ಯಾಸ ಮಾಡುತ್ತಿದ್ದೆವು. ಆಗ ನಮ್ಮ ಸುಕೃತವೋ ಎಂಬಂತೆ ರಾಚೆಸ್ಟರ್‌ಗೆ ಬಿ. ಎನ್. ಕೃಷ್ಣಮೂರ್ತಿಯವರ ಆಗಮನವಾಯಿತು.

ಕೃಷ್ಣಮೂರ್ತಿಯವರು ನಮ್ಮ ನಾಟಕದ ಪಾತ್ರಧಾರಿಗಳಾಲ್ಲೊಬ್ಬರಾದ ಶಶಿ ಭಾರ್ಗವ ಅವರ ತಂದೆ. ಬಹುಮುಖ ಪ್ರತಿಭೆಯ ಕೃಷ್ಣಮೂರ್ತಿ ಅವರಿಗೆ ನಾಟಕ, ಸಿನಿಮಾ, ಟೆಲಿವಿಷನ್ ರಂಗಗಳಲ್ಲಿ ೪೦ ವರ್ಷಗಳ ಪರಿಶ್ರಮವಿದೆ. ಎಲ್ಲ ಶಾಲಾ-ಕಾಲೇಜುಗಳೂ ದುಡ್ಡು ಮಾಡುವ ಕಾರ್ಖಾನೆಗಳಾಗಿರುವಾಗ, ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಏಕೈಕ ಕಾಲೇಜೆಂದು ಪ್ರಖ್ಯಾತವಾಗಿರುವ ಬೆಂಗಳೂರಿನ ಚಾಮರಾಜಪೇಟೆ ಕಲಾ ಮತ್ತು ವಾಣಿಜ್ಯ (ಆರ್ಟ್ಸ್ ಅಂಡ್ ಸೈನ್ಸ್) ಕಾಲೇಜಿನ ಸ್ಥಾಪಕ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ಕೃಷ್ಣಮೂರ್ತಿ ಅವರು ಈಗ ನಿವೃತ್ತಿಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಪಾಠ ಹೇಳುವ ಇವರು, "ಶ್ರೇಷ್ಠ ಶಿಕ್ಷಕ" ಪ್ರಶಸ್ತಿಯನ್ನೂ ಪಡೆದಿದ್ದಾರೆ.

500ಕ್ಕೂ ಹೆಚ್ಚಿನ ನಾಟಕಗಳಲ್ಲಿ ಪಾತ್ರ ಮತ್ತು ನಿರ್ದೇಶನ, ಬೆಂಗಳೂರು ವಿಶ್ವವಿದ್ಯಾಲದ ನಾಟಕ ವಿಭಾಗಕ್ಕೆ ಸಂಪನ್ಮೂಲ ಪ್ರೊಫೆಸರ್. ಮಕ್ಕಳ ನಾಟಕ ರಚನೆ, ನಿರ್ದೇಶನ, ಮೊದಲಾದವು ಇವರ ಚಟುವಟಿಕೆಗಳು. ಬೆಂಗಳೂರು ಆಕಾಶವಾಣಿಯಲ್ಲಿ ಏ-ಗ್ರೇಡ್ ಕಲಾವಿದ, ದೂರದರ್ಶನದಲ್ಲಿ ಪ್ರಥಮ ಕ್ವಿಜ್-ಮಾಸ್ಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಮಗ, ಸೊಸೆ ಮತ್ತು ಮೊಮ್ಮಕ್ಕಳ ಜತೆ ನೆಮ್ಮದಿಯಾಗಿ ಕಾಲಕಳೆಯಲು ಬಂದ ಅವರನ್ನು ನಾವು ನಮ್ಮ ನಾಟಕಕ್ಕೆ ನಿರ್ದೇಶನ ಮಾಡಿ ಎಂದು ಕೇಳಿಕೊಂಡಾಗ ಹಿಂದೆ ಮುಂದೆ ನೋಡದೆ ಒಪ್ಪಿಕೊಂಡರು. ಸುಮಾರು ಎರಡು ತಿಂಗಳ ಕಾಲ ನಮ್ಮ ಪ್ರತಿ ಅಭ್ಯಾಸಕ್ಕೂ ಬಂದು ಪ್ರತಿಯೊಂದು ಪಾತ್ರದ ಮಾತುಗಳನ್ನು ಹಾವ ಭಾವಗಳನ್ನು ಧ್ವನಿಯ ಏರಿಳಿತಗಳನ್ನು ತಿದ್ದಿದರು.

ಹನ್ನೆರಡು ಗಂಟೆಗೆ ಪ್ರಾರಂಭವಾದ ನಾಟಕ ಒಂದೂವರೆಗೆ ಮುಗಿಯಿತು. ಪಾತ್ರಧಾರಿಗಳೆಲ್ಲರೂ ಹವ್ಯಾಸಿಗಳಾಗಿದ್ದರೂ ಪಳಗಿದ ಕಲಾವಿದರಂತೆ ಅಭಿನಯಿಸಿದರು. ನಾಟಕದ ಕೊನೆಯಲ್ಲಿ ಪಾತ್ರಧಾರಿಗಳಾದ ಶಾಂತಾ ಮತ್ತು ಮಹದೇವ ರಾವ್, ಶಶಿ ಮತ್ತು ಅರುಣಾ ಭಾರ್ಗವ, ಅರ್ಚನಾ ಮತ್ತು ಕಿರಣ್ ಹೆಗಡೆ, ವಸಂತಾ ಮತ್ತು ರವೀಂದ್ರ, ಲತಾ ರಾಮಚಂದ್ರನ್ ಮತ್ತು ಜಗದೀಶ್ ಅವರನ್ನು ಕೃಷ್ಣಮೂರ್ತಿಯವರು ಪರಿಚಯಿಸಿದರು. ನಾಟಕ ಚೆನ್ನಾಗಿ ಮೂಡಿ ಬಂತು ಎಂಬುದು ಬಹು ವೀಕ್ಷಕರ ಪ್ರತಿಕ್ರಿಯೆ. ಪ್ರೇಕ್ಷಕರಿಂದ ಮತ್ತೆ ಮತ್ತೆ ಏಳುತ್ತಿದ್ದ ನಗೆ ಬುಗ್ಗೆಗಳಿಂದ ನಾಟಕ ಯಶಸ್ವಿಯಾಯಿತೆಂದು ಹೇಳಬಹುದು. "ಕಾಳಿದಾಸ" ಎಂಬ ಭಾರತೀಯ ನಾಟಕ ಸಂಸ್ಥೆಯೊಂದನ್ನೂ ನಡೆಸುವ ಪದ್ಮನಾಭ ಕಾಮತರು, ನಾಟಕವನ್ನು ಮೆಚ್ಚಿಕೊಂಡು ಕೆಲವು ನಟ ನಟಿಯರಿಗೆ ಕಾಳಿದಾಸ ಸಂಸ್ಥೆಯ ನಾಟಕಗಳಲ್ಲೂ ಅಭಿನಯಿಸಬೇಕೆಂಬ ಆಮಂತ್ರಣವಿತ್ತರು.

ನಾಟಕದ ನಂತರ ಪಾಟ್ ಲಕ್ ಪದ್ಧತಿಯ ಸುಗ್ರಾಸ ಭೋಜನವಿತ್ತು. ಬಿಸಿಬೇಳೆ ಭಾತು, ಆಂಬೊಡೆ, ವಿವಿಧ ಪಲ್ಯಗಳು, ಸಾರು, ಮಜ್ಜಿಗೆ ಹುಳಿ, ಗಸಗಸೆಯ ಪಾಯಸ, ರವೆ ಉಂಡೆ, ಯಾವುದು ತಿನ್ನಲಿ, ಯಾವುದು ಬಿಡಲಿ ಎನ್ನುವಂತಿತ್ತು ಊಟ. ಹೊಸ ಮುಖಗಳ ಪರಿಚಯ, ಬರಲಿರುವ ದೀಪಾವಳಿ ಕಾರ್ಯಕ್ರಮಕ್ಕೆ ಆತಿಥೇಯರ ಆಯ್ಕೆ ಇಂದಿನ ಆತಿಥೇಯರಿಗೆ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X