• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹರಿ ರಾವ್‌ ಶಾಮ ರಾವ್‌ ಇನಾಮತಿ : ಒಂದು ನೆನಪು

By Staff
|
  • ಡಾ। ಸುಬ್ಬಣ್ಣ ಜಯಪ್ರಕಾಶ್‌, ವಿಸ್ಕಾನ್ಸಿನ್‌

drj@execpc.com

Dr. Subbanna Jayaprakash, Wisconsinನನ್ನ ತಾತನವರಾದ ಹರಿ ರಾವ್‌ ಶಾಮ ರಾವ್‌ ಇನಾಮತಿ, ಬಹುಮಂದಿಗೆ ‘ಹರಿ’ ಎಂದೇ ಪರಿಚಿತರಾದವರು. ಚಿತ್ರಕಲೆ ಮತ್ತು ರೇಖಾಗಣಿತದ ವಿದ್ಯಾರ್ಥಿವೃಂದಕ್ಕಂತೂ ಅವರು ನಲ್ಮೆಯ ‘ಎಚ್‌ ಎಸ್‌ ಐ’. ಬೆಂಗಳೂರಿನ ನ್ಯಾಷನಲ್‌ ಹೈಸ್ಕೂಲ್‌, ಬೆಂಗಳೂರು ಹೈಸ್ಕೂಲ್‌, ಆಚಾರ್ಯ ಪಾಠಶಾಲೆ, ವಿಜಯಾ ಹೈಸ್ಕೂಲ್‌ಗಳ ಹಳೆವಿದ್ಯಾರ್ಥಿಗಳಲ್ಲಿ ಬಹಳಷ್ಟು ಜನಕ್ಕೆ ‘ಎಚ್‌ ಎಸ್‌ ಐ’ ಇನಿಷಿಯಲ್‌ಗಳೇ ನೆನಪುಗಳ ಕಂತೆ ಬಿಚ್ಚಬಹುದು. ಅಂತಹ ಜನಾನುರಾಗಿ ಹರಿ ರಾವ್‌ ಅವರ ಮೊಮ್ಮಗನಾಗಿ, ಅವರೊಂದಿಗೆ ಸುಮಾರು 24 ವರ್ಷಗಳ ಕಾಲ ಬಾಳಬುತ್ತಿಯನ್ನುಂಡ ನನಗೆ ಎಷ್ಟೋ ಸಲ ಧನ್ಯತೆಯ ರೋಮಾಂಚನವಾಗಿದೆ, ಈ ಮೇರುಸದೃಶ ವ್ಯಕ್ತಿತ್ವದ ಬಗ್ಗೆ ನೆನೆದು.

ನಮ್ಮ ಕುಟುಂಬದ ಟೊಂಗೆಟಿಸಿಲುಗಳಲ್ಲೆಲ್ಲ ಅಗೋಚರ ಶಕ್ತಿಯಾಗಿ ನೆಲೆನಿಂತಿರುವ ಹರಿತಾತನ ಬದುಕಿನ ಬಗ್ಗೆ ಕೆಲವು ಆತ್ಮೀಯ ಸಂಗತಿಗಳನ್ನು ಈ ಲೇಖನದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ.

South Bank Kaveri

Kaveri at Talakadu

Pharsi Manಹರಿ ರಾವ್‌ ಹುಟ್ಟಿದ್ದು 1906ರಲ್ಲಿ , ಮಹಾರಾಷ್ಟ್ರದ ಅಕೋಲಾದಲ್ಲಿ. ಅವರ ತಂದೆ ಶಾಮ ರಾವ್‌ ಐ.ಎಫ್‌.ಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ತಂದೆ-ತಾಯಿ ಮತ್ತು ಹಿರಿಯ ಅಣ್ಣಂದಿರ ಪ್ರಭಾವ ಹರಿರಾವ್‌ ಬದುಕನ್ನು ರೂಪಿಸುವುದರಲ್ಲಿ ಗಾಢವಾಗಿಯೇ ಇತ್ತು. ಮುಂಬೈಯ ಪ್ರತಿಷ್ಠಿತ ಜೆ.ಜೆ.ಸ್ಕೂಲ್‌ ಆಫ್‌ ಆರ್ಟ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ಮಾಟುಂಗಾದಲ್ಲಿ ಇತರ ಕನ್ನಡಿಗರೊಂದಿಗೆ ರೂಮ್‌ ಮಾಡಿಕೊಂಡಿದ್ದರು. ಆಗ ಅವರ ಒಡನಾಡಿಯಾಗಿದ್ದವರಾರು ಗೊತ್ತೆ ? ಟಿಪಿಕಲ್‌ ಟಿ.ಪಿ ಕೈಲಾಸಂ! ಇವರಿಬ್ಬರೂ ಸೇರಿ ಸಂಜೆಯ ಹೊತ್ತು ಅಕ್ಕಪಕ್ಕದವರಿಗೆಲ್ಲ ಪುಕ್ಕಟೆ ಮನರಂಜನೆ ಒದಗಿಸುತ್ತಿದ್ದರಂತೆ! ‘ದ ಬಾರ್ಡ್‌ ಆಫ್‌ ಮೈಸೂರ್‌’ ಕುರಿತಂತೆ ಅನೇಕ ಕಥೆಗಳನ್ನು ನಾನೂ ಕೇಳಿದ್ದೇನೆ.

ಅಪಾರ ಧಾರ್ಮಿಕ ಶ್ರದ್ಧೆ ಇಟ್ಟುಕೊಂಡಿದ್ದರು ನಮ್ಮ ತಾತ. ಶಿಸ್ತಿನ ಸಿಪಾಯಿ; ದಿನಾ ಮೆಡಿಟೇಷನ್‌ ಮಾಡುತ್ತಿದ್ದರು. ಓದಿನಲ್ಲೂ ವಿಪರೀತ ಆಸಕ್ತಿ. ಅಂತಃಕರಣದಲ್ಲಿ ಆರ್ದ್ರತೆಯಿದ್ದವರು. ಮನೆಯವರೊಂದಿಗೆ ಸರಸಕ್ಷಣಗಳನ್ನು ಕಳೆಯುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಎಲ್ಲಾದರೂ ಹೊರಗಡೆ ಹೊರಟರೆಂದರೆ ಒಂದೋ ಕಾಲ್ನಡಿಗೆ ಇಲ್ಲ ಬೈಸಿಕಲ್‌ ಮೇಲೆ ಹೋಗುತ್ತಿದ್ದರು. ಚಿತ್ರಕಲಾವಿದನೊಬ್ಬನ ಐಡೆಂಟಿಟಿಯಾಗಿ ಅವರು ‘ಜುಬ್ಬಾ ಆರ್ಟಿಸ್ಟ್‌’ ಎಂದೇ ಗುರುತಿಸಲ್ಪಡುತ್ತಿದ್ದರು. ಒಟ್ಟಿನಲ್ಲಿ ಒಬ್ಬ ಇಂಟೆರೆಸ್ಟಿಂಗ್‌ ಪರ್ಸನ್‌.

ಜೆ.ಜೆ ಸ್ಕೂಲ್‌ ಆಫ್‌ ಆರ್ಟ್‌ನಲ್ಲಿ ವ್ಯಾಸಂಗದ ವೇಳೆ ಪ್ರತಿವರ್ಷವೂ ಕಾಲೇಜಿಗೆ ಪ್ರಥಮಸ್ಥಾನ ಪಡೆದು ಅಂತಿಮ ವರ್ಷದಲ್ಲಿ ಪ್ರತಿಷ್ಠಿತ ದಾದಾಭಾಯಿ ನವರೋಜಿ ಪ್ರಶಸ್ತಿ-ಪದಕ ಪಡೆದು ಅತ್ಯುತ್ತಮ ವಿದ್ಯಾರ್ಥಿ ಎಂಬ ಗೌರವಕ್ಕೆ ಪಾತ್ರರಾದವರು. ಆ ಪದಕವನ್ನು ಅವರು ಗಳಿಸಿದ್ದೂ ಒಂದು ರೋಚಕ ಕಥೆ. ಫೈನಲ್‌ ಪರೀಕ್ಷೆ ನಡೆಯುವ ದಿನದಂದು ಎಷ್ಟೇ ಹುಡುಕಿದರೂ ಚಿತ್ರಿಸಲು ಸರಿಯಾದ ವಿಷಯವೇ ಸಿಗಲಿಲ್ಲವಂತೆ. ಪರೀಕ್ಷೆ ಹಾಲ್‌ಗೆ ಹೋಗುತ್ತಿರಬೇಕಿದ್ದರೆ ಒಬ್ಬ ಪಾರ್ಸಿ ಮುದುಕ ರಸ್ತೆಯ ಬದಿ ಕುಳಿತುಕೊಂಡಿದ್ದವನು ಕಂಡ. ಅವನನ್ನೇ ರೂಪದರ್ಶಿಯಾಗುವೆಯಾ ಎಂದು ಕೇಳಿ ಅವನು ಒಪ್ಪಲು, ಅದ್ಭುತವಾದ ಕ್ಯಾರಿಕೇಚರ್‌ ಒಂದನ್ನು ಚಿತ್ರಿಸಿದ ಹರಿ ರಾವ್‌ ಜೆ.ಜೆ.ಸ್ಕೂಲ್‌ನ ಇತಿಹಾಸದಲ್ಲೇ ಯಾರೂ ಗಳಿಸಿರದಿದ್ದಷ್ಟು ಅತ್ಯಧಿಕ ಅಂಕಗಳನ್ನು ಪಡೆದು ಪ್ರಶಸ್ತಿಗೆ ಭಾಜನರಾದರು!

ಹೇಳಿಕೇಳಿ ಒಬ್ಬ ಚಿತ್ರಕಲಾವಿದ; ಡಾಕ್ಟರ್‌ ಆಗಲೀ ಅಥವಾ ಇಂಜನಿಯರ್‌ ಆಗಲೀ ಅಲ್ಲ. ಹಾಗಾಗಿ ಸಂಸಾರರಥವನ್ನು ನಿರ್ವಹಿಸುವುದು ತುಂಬ ಸಲ ಕಷ್ಟವಾಗುತ್ತಿತ್ತು. ಅದಕ್ಕಾಗಿಯೇ ಹರಿ ರಾವ್‌ ಪೋಸ್ಟರ್‌ಗಳನ್ನು ಚಿತ್ರಿಸುವುದು, ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಮೊದಲಾದ ಪತ್ರಿಕೆಗಳಿಗೆ ಜಾಹೀರಾತು ವಿನ್ಯಾಸ ಮಾಡುವುದು, ಕಾಫಿಬೋರ್ಡ್‌ ಮತ್ತಿತರ ಸಂಸ್ಥೆಗಳ ಹೋರ್ಡಿಂಗ್‌ಗಳನ್ನು ಚಿತ್ರಿಸುವುದು ಮುಂತಾದವನ್ನೂ ಮಾಡಬೇಕಾಗಿ ಬರುತ್ತಿತ್ತು. ಅವರ ಸೀದಾಸಾದಾತನ, ಪ್ರಾಮಾಣಿಕತೆಗಳಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ತತ್ತರಗೊಳ್ಳುವ ಸಂದರ್ಭಗಳು ಬರುತ್ತಿದ್ದುವು. ಚಾಲಾಕಿತನ, ವ್ಯಾಪಾರಿ ಮನೋಭಾವವನ್ನು ಅವರೆಂದೂ ಪ್ರದರ್ಶಿಸಿದ್ದಿಲ್ಲ. ಎಷ್ಟೋ ಸಲ ಅತಿ ಕಡಿಮೆ ಶುಲ್ಕಕ್ಕೆ ಅಥವಾ ಮುಫತ್ತಾಗಿ ವಿದ್ಯಾರ್ಥಿಗಳಿಗೆ ಪೈಂಟಿಂಗ್‌ ಕಲಿಸಿಕೊಡುತ್ತಿದ್ದರು. ನಮ್ಮ ಮನೆಗೆ ಅವರ ವಿದ್ಯಾರ್ಥಿಗಳು ಅನೇಕ ಮಂದಿ ಬರುತ್ತಿದ್ದರು. ಒಬ್ಬಿಬ್ಬರು ಅಮೆರಿಕದಿಂದ ಭಾರತಕ್ಕೆ ರಜೆಯಲ್ಲಿ ಬಂದಿದ್ದಾಗ ಚಿತ್ರಕಲೆ ತರಬೇತಿ ಅಪೇಕ್ಷಿಸಿ ಬಂದವರೂ ಇದ್ದಾರೆ. ನನ್ನ ಸಹಧರ್ಮಿಣಿ ಸಮೇತ ಅವರ ವಿದ್ಯಾರ್ಥಿಗಳೊಡನೆ ಬೆರೆತು ಸೂಕ್ತ ಸಲಹೆ ವಿಮರ್ಶೆ ಪ್ರಶಂಸೆ ಕೊಟ್ಟು ಆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದ್ದಾಳೆ.

ತಾತನ ಕಲಾಪ್ರಾವೀಣ್ಯವನ್ನು ಹತ್ತಿರದಿಂದ ನೋಡಿ ತಲೆದೂಗಿದ್ದೇನೆ ನಾನು. ಅವರು ಬಿಡಿಸಿದ ಚಿತ್ರಗಳ ವಿಷಯಗಳೂ ಅದಕ್ಕೆ ಅವರು ಕೊಡುವ ಫಿನಿಶ್‌ ಕೂಡ ಯಾರನ್ನಾದರೂ ದಂಗುಬಡಿಸುತ್ತಿತ್ತು. ಅಂಥ ಲವಲವಿಕೆ ಅವರ ಚಿತ್ರಗಳಲ್ಲಿರುತ್ತಿತ್ತು. ಆಶ್ಚರ್ಯದ ಸಂಗತಿಯೆಂದರೆ ಅವರು ಯಾವುದೇ ಚಿತ್ರವನ್ನಾಗಲೀ ಒಮ್ಮೆ ಬಿಡಿಸಿದ ಮೇಲೆ ಅದರ ಮೇಲೆ ಮತ್ತೆ ಕುಂಚವಾಡಿಸುವ ಕ್ರಮವೇ ಇಲ್ಲ. ಒಮ್ಮೆ ಮೂಡಿಸಿದ ಗೆರೆಗಳೇ ಫೈನಲ್‌. ಕೆಲವೊಮ್ಮೆ ಸರಿಯಾದ ಬಣ್ಣ, ಶೇಡ್‌ ಮತ್ತು ರೇಖೆಗಳ ಸರಿಯಾದ ಸ್ಟ್ರೋಕ್‌ ಕೈಗೂಡಿಬರಲು ದಿನಗಟ್ಟಲೆ ಕಾಯುತ್ತಿದ್ದರು. ಅಂಥ ತಾಳ್ಮೆ ಅವರಲ್ಲಿತ್ತು. ಸೂಕ್ತ ಐಡಿಯಾ ಹೊಳೆದಾಗ, ಅರ್ಧ ಮಾಡಿಟ್ಟ ಪೈಂಟಿಂಗನ್ನು ಮತ್ತೆ ಕೈಗೆತ್ತಿಕೊಳ್ಳುತ್ತಿದ್ದರು.

ವಿದ್ಯಾರ್ಥಿಗಳಿಗೆ ಅವರು ಕೆಲವೊಂದು ಅಮೂಲ್ಯ ಸಲಹೆಗಳನ್ನು ಕಿವಿಮಾತುಗಳನ್ನು ಹೇಳಿಕೊಡುತ್ತಿದ್ದರು. ಬಣ್ಣಗಳ ಮಿಶ್ರಣದಲ್ಲೇ ವೈವಿಧ್ಯ ತರುತ್ತಿದ್ದ ಅವರು ಬಿಳಿಬಣ್ಣವನ್ನು ಆದಷ್ಟು ಮಟ್ಟಿಗೆ ದೂರವಿಡುತ್ತಿದ್ದರು. ಪ್ರಕೃತಿಯನ್ನು ಅನುಸರಿಸಿ ಅನುಕರಿಸುವುದು ಅವರ ಇಷ್ಟದ ವಿಷಯ. ಅವರ ಇತರ ಕೆಲವು ಕಿವಿಮಾತುಗಳೆಂದರೆ,

  • ಯಾವುದೇ ವಿಷಯದ ಸೂಚೀರಂಧ್ರ ಬಿಂಬವನ್ನು ಗ್ರಹಿಸಿ ಮನದಲ್ಲಿ ಏನು ಅಚ್ಚಾಗುತ್ತದೋ ಅದನ್ನು ಕ್ಯಾನ್‌ವಾಸ್‌ಗಿಳಿಸಬೇಕು.
  • ತಿಳಿ ಮತ್ತು ಗಾಢ ಬಣ್ಣಗಳಿಂದಲೇ ನೆರಳು ಬೆಳಕಿನ ಪರಿಣಾಮವನ್ನು ಚಿತ್ರಿಸಬೇಕೇ ವಿನಹ ಬಿಳಿಬಣ್ಣವನ್ನುಪಯೋಗಿಸಿ ಅಂದಗೆಡಿಸಬಾರದು. ಅಚ್ಚಬಿಳಿ ಕ್ಯಾನ್‌ವಾಸ್‌ ಉಪಯೋಗಿಸಿ ಬಿಳಿಛಾಯೆ ಬೇಕಾದಲ್ಲೆಲ್ಲ ಬಣ್ಣಕೊಡದೇ ನಿಭಾಯಿಸಬೇಕು. ವಸ್ತುವಿನ, ವಿಷಯದ ಕೇಂದ್ರದಿಂದ ಆರಂಭಿಸಿ ಸುತ್ತಲ ವಿವರಗಳನ್ನೆಲ್ಲ ಸೇರಿಸುತ್ತ ಹೋಗಬೇಕು. ವಸ್ತು ಕ್ಯಾನ್‌ವಾಸಿನ ಕೇಂದ್ರಬಿಂದುವಿನಲ್ಲೇ ಇರಬೇಕೆಂದೇನೂ ಇಲ್ಲ.
  • ಚಿತ್ರಿತ ವ್ಯಕ್ತಿಯ ಕಣ್ಣುಗಳು, ಒಂದು ಚಿತ್ರವನ್ನು ‘ಪರಿಪೂರ್ಣ’ ಆಗಿದೆಯೋ ಅಥವಾ ‘ಹತ್ತರ ಜತೆ ಹನ್ನೊಂದು’ ಆಗಿದೆಯೋ ಎಂದು ನಿರ್ಧರಿಸುವ ಅಂಶ. ಮೇಲೆ ಹೇಳಿದ ‘ಕ್ಯಾನ್‌ವಾಸಿನ ಬಿಳಿ ಬಣ್ಣವನ್ನೇ ಬೇಕಾದಲ್ಲಿ ಉಪಯೋಗಿಸು’ ಸೂತ್ರವನ್ನವರು ಅಕ್ಷಿಪಟಗಳನ್ನು ಚಿತ್ರಿಸಲು ಬಳಸುತ್ತಿದ್ದರು.

ಇವೆಲ್ಲ ಓದಿದಷ್ಟು, ಹೇಳಿದಷ್ಟು ಕಾರ್ಯರೂಪಕ್ಕಿಳಿಸುವುದು ಸುಲಭವಲ್ಲ. ಆದರೆ ಹರಿ ರಾವ್‌ಗೆ ಇದೆಲ್ಲ ಸುಲಿದಿಟ್ಟ ಬಾಳೆಹಣ್ಣು. ಅವರ ಇನ್ನೊಂದು ವೈಶಿಷ್ಟ್ಯವೆಂದರೆ ತೈಲವರ್ಣಚಿತ್ರಗಳತ್ತ ಅವರ ಅಭಿರುಚಿ ಇರಲಿಲ್ಲ. ಜಲವರ್ಣಚಿತ್ರಗಳು ಮತ್ತು ಇದ್ದಿಲಮಸಿಯ ರೇಖಾಚಿತ್ರಗಳೇ ಅವರ ಪ್ರೌಢಿಮೆ. ಅದರಲ್ಲೇ ಗಮನಸೆಳೆಯುವ ಕೃತಿಗಳನ್ನವರು ರಚಿಸಬಲ್ಲವರಾಗಿದ್ದರು. ಒಂದೊಂದು ರೇಖಾಚಿತ್ರವೂ ದೈನಂದಿನ ಪ್ರಪಂಚದ ಆಗುಹೋಗುಗಳನ್ನು, ಅಪರೂಪದ ಕ್ಷಣಗಳನ್ನು ಅಪ್ರತಿಮವಾಗಿ ಸೆರೆಹಿಡಿದಿಡುತ್ತಿತ್ತು. ಒಂದು ಮರವೇ ಇರಲಿ, ಜುಳುಜುಳು ಹರಿಯುವ ಕಿರುತೊರೆಯಿರಲಿ, ದೇವಾಲಯದ ಬಳಿ ನಿಂತಿರುವ ಭಕ್ತಸಮೂಹವಿರಲಿ, ಬೆಂಗಳೂರಿನ ಗಾಂಧಿಬಜಾರಿನ ಗಜಿಬಿಜಿಯ ದೃಶ್ಯವಿರಲಿ, ಅಪರಾಹ್ನದ ನೇಸರನಿರಲಿ, ಹಳ್ಳಿಯಾಂದರ ದೃಶ್ಯವಿರಲಿ - ಅವರ ಪ್ರತಿಯಾಂದು ಚಿತ್ರವೂ ಸಜೀವವಾಗಿರುತ್ತಿತ್ತು.

ಹರಿ ರಾವ್‌ ಬಿಡಿಸಿದ ಚಿತ್ರಗಳೆಲ್ಲ ಈಗ ಅವರ ಸಂಬಂಧಿಕರ ಮನೆಗಳಲ್ಲಿ , ಸ್ನೇಹಿತರಲ್ಲಿ , ವಿದ್ಯಾರ್ಥಿಗಳಲ್ಲಿ , ಅವರ ಸಮಕಾಲೀನ ಕಲಾವಿದರಲ್ಲಿ ಹಂಚಿಹೋಗಿವೆ. ಹಲವಾರನ್ನು ಸ್ಮರಣಿಕೆಗಳನ್ನಾಗಿ, ಉಡುಗೊರೆಗಳನ್ನಾಗಿ ಕೊಡಲಾಗಿದೆ. ಎರಡು ಮಾತ್ರ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಪ್ರದರ್ಶನಕ್ಕಿವೆ. ‘ಬೀದಿಯಲ್ಲಿನ ಅನಾಥ ಮಕ್ಕಳು’ ಮತ್ತು ‘ಕೊಳಲ ಕರೆ’ - ಇವೆರಡು ಮೈಸೂರು ಮಹಾರಾಜರು ಮೆಚ್ಚಿ ಮೈಸೂರ ಕಲಾವಿದರನ್ನು ಪ್ರೋತ್ಸಾಹಿಸುವುದಕ್ಕಾಗಿ ಖರೀದಿಸಿಟ್ಟ ಕೃತಿಗಳು.

ನಮ್ಮ ತಾತನ ಚಿತ್ರಗಳಲ್ಲೆಲ್ಲ ಸಹಜತೆಯಿರುತ್ತಿತ್ತೆಂದು ಮೊದಲೇ ಹೇಳಿದ್ದೇನೆ. ಇನ್ನೊಂದೆಂದರೆ ಅವರ ಸೌಮ್ಯ ಸ್ವಭಾವ, ಜೀವನರೀತಿ, ಜೀವನಪ್ರೀತಿಗಳೂ ಅವುಗಳಲ್ಲಿ ಮೇಳೈಸಿರುತ್ತಿದ್ದುವು. ಯಾವುದೋ ಒಂದು ಕಲ್ಪನೆಯನ್ನು ಕ್ಯಾನ್‌ವಾಸ್‌ಗಿಳಿಸದೆ ಅವರು ಸುತ್ತಮುತ್ತ ನೋಡಿದ್ದನ್ನೇ ಪಂಚೇಂದ್ರಿಯಗಳ ಅನುಭವಕ್ಕೆ ಬಂದದ್ದನ್ನೇ ಚಿತ್ರಿಸುತ್ತಿದ್ದುದರಿಂದ ನೋಡುಗನ ಎದೆಯಲ್ಲೂ ಅವು ಊರಿಬಿಡುತ್ತಿದ್ದುವು. ಲಾಲ್‌ಬಾಗಿನ ಬೆಂಚುಗಳ ಮೇಲೆ ಸ್ನೇಹಿತರೊಂದಿಗೆ ಕುಳಿತು ಹರಟೆಹೊಡೆಯುತ್ತಿದ್ದಾಗ ಎದುರುಗಡೆ ನೋಡಿದ ಗುಲ್‌ಮೊಹರ್‌ ಮರಗಳು, ಬೊಗನ್‌ವಿಲ್ಲಾ ಬಳ್ಳಿಗಳು, ರಾಮೋಹಳ್ಳಿಯ ದೊಡ್ಡ ಅಶ್ವತ್ಥದ ಮರ, ತಲಕಾಡಿನಲ್ಲಿ ಅಥವಾ ಶ್ರೀರಂಗಪಟ್ಟಣದಲ್ಲಿ ಕಂಡಂತೆ ಕಾವೇರಿ - ಇವೆಲ್ಲ ಕ್ಯಾನ್‌ವಾಸಿನ ಮೇಲೆ ಮೈದಳೆಯುತ್ತಿದ್ದವು. ಹೆಚ್ಚಾಗಿ ಅವರ ಆಪ್ತ ಎಚ್‌.ಎಸ್‌.ನಾರಾಯಣ್‌ ಅವರೊಂದಿಗೆ ‘ಚಿತ್ರೀಕರಣ’ಕ್ಕೆ ಹೊರಡುತ್ತಿದ್ದರು. ಹೊರಾಂಗಣದಲ್ಲಿ ತೋರಮಟ್ಟಿಗೆ ಚಿತ್ರಿಸಿದ್ದಕ್ಕೆ ಮನೆಗೆ ಬಂದು ಸೂಕ್ಷ್ಮ ವಿವರಗಳನ್ನೆಲ್ಲ ಸೇರಿಸುತ್ತಿದ್ದರು.

ಖ್ಯಾತ ಚಿತ್ರಕಾರರಾದ ನಾರ್‌ಮನ್‌ ರಾಕ್‌ವೆಲ್‌ ಮತ್ತು ವಿಸ್ಲರ್‌ರನ್ನು ವಿಶೇಷವಾಗಿ ಅವರ ವಿವರಣಾತ್ಮಕ ಚಿತ್ರಗಳಿಗಾಗಿ ಮೆಚ್ಚುತ್ತಿದ್ದ ಹರಿ ರಾವ್‌, ಪಿಕಾಸೋ ನಿರ್ಮಿತ ಮಾಡರ್ನ್‌ ಆರ್ಟ್‌ ಬಗ್ಗೆ ಅಷ್ಟೇನೂ ಆಸಕ್ತಿ ಹೊಂದಿರಲಿಲ್ಲ.

ಜೀವನಸಂಧ್ಯಾಕಾಲದಲ್ಲಿ ಕೀರ್ತಿ, ಖ್ಯಾತಿ ಒಂದಿಷ್ಟು ಸಂಪಾದನೆ ಕೂಡ ಬಂತು. ಪರಿಸ್ಥಿತಿಯಾಂದಿಗೆ ರಾಜಿಮಾಡಿ ನುಣುಚಿಕೊಳ್ಳುವ ಪ್ರವೃತ್ತಿ ಅವರದಲ್ಲವಾದ್ದರಿಂದ ಕಷ್ಟಗಳೇ ಪರವಾ ಇಲ್ಲವೆನ್ನುವ ಸ್ವಭಾವ. ಕೇಂದ್ರ ಸರಕಾರದಿಂದ ಮೊದಲು, ಆಮೇಲೆ ರಾಜ್ಯ ಸರಕಾರದಿಂದಲೂ ಪ್ರಶಸ್ತಿ, ಪುರಸ್ಕಾರಗಳು ಬಂದುವು.

ಇವತ್ತಿನ ದಿನ ನಾನಿಲ್ಲಿ ಅಮೆರಿಕದಲ್ಲಿ ಒಬ್ಬ ವೈದ್ಯನಾಗಿ ಸರ್ಜನ್‌ ಆಗಿ ಕೆಲವೊಮ್ಮೆ ಮನಸ್ಸಲ್ಲೇ ನೆನೆಯುತ್ತೇನೆ. ನನಗೂ ತಾತನಿಗೂ ಸಾಮಾನ್ಯ ಅಂಶಗಳು ಕೆಲವಿದ್ದುವು. ಒಮ್ಮೆಯಾದರೂ ಅವರನ್ನು ಇಂಗ್ಲಂಡ್‌ಗೆ, ಅಮೆರಿಕೆಗೆ ಕರಕೊಂಡುಬರಬೇಕೆಂಬ ಹಂಬಲವಿತ್ತು ; ಅದು ಕೈಗೂಡಲಿಲ್ಲ. ಈಗ ಅವರ ಕೆಲವು ಚಿತ್ರರತ್ನಗಳು ಅವರ ನೆನಪಾಗಿ ನನ್ನ ಬಳಿ ಇವೆ. ಅವರ ಹೆಸರನ್ನೇ ನನ್ನ ಮಗನಿಗಿಟ್ಟಿದ್ದೇನೆ - ಅನುದಿನ ಅವರ ನಾಮಸ್ಮರಣೆಯಾಗಲೆಂದು!

* * *

ಕೃತಜ್ಞತೆಗಳು:

1. ಲಲಿತಕಲಾ ಅಕಾಡೆಮಿಯ ಸದಸ್ಯರು, ಚಿತ್ರಕಲಾ ಪರಿಷತ್ತು, ಕರ್ನಾಟಕ ಸರಕಾರ, ಪ್ರೊ। ಎಸ್‌.ಕೆ.ಆರ್‌ ರಾವ್‌, ಅರ್ಚಕ ವೆಂಕಟೇಶ ಮತ್ತು ಶಿವಲಿಂಗಪ್ಪ - ನಮ್ಮ ತಾತನ ಚಿತ್ರಗಳನ್ನು ಜತನವಾಗಿರಿಸುವಲ್ಲಿ ಸರ್ವಸಹಕಾರ ನೀಡಿದ ಇವರೆಲ್ಲರಿಗೂ ನಾನೂ, ನಮ್ಮ ಕುಟುಂಬವೂ ಕೃತಜ್ಞರಾಗಿದ್ದೇವೆ.

2. ಇಂಗ್ಲಿಷಲ್ಲಿ ಬರೆದ ಈ ಲೇಖನವನ್ನು ಕನ್ನಡೀಕರಿಸಲು ನೆರವಾದ ಶ್ರೀವತ್ಸ ಜೋಶಿಯವರಿಗೆ ಧನ್ಯವಾದಗಳು.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more