ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲಿನಾಯ್‌ನಲ್ಲಿ ಸದುದ್ದೇಶದ ‘ಸತ್ಸಂಗ’

By Staff
|
Google Oneindia Kannada News
  • ಅನುಪಮ ಮಂಗಳ್‌ವೇಢೆ, ಇಲಿನಾಯ್‌, ಅಮೆರಿಕ.
    [email protected]
Anupama Managalavedhe, Illinoisಮೂರು ವರ್ಷಗಳ ಹಿಂದೆ ನಮ್ಮ ಅತ್ತೆ ಮಾವನವರು ಅಮೆರಿಕಾಗೆ ಬಂದಾಗ ತುಂಬಾ ಅಚ್ಚರಿಪಟ್ಟಿದ್ದರು. ಇಲ್ಲಿಯ ರೀತಿ ನೀತಿಗಳನ್ನು ನೋಡಿ ಆಶ್ಚರ್ಯ ಪಟ್ಟರು ಎಂದು ಹೇಳಲು ಅವರಿಗೆ ಅಮೆರಿಕಾ ಏನೂ ಹೊಸದಲ್ಲ. ಅವರ ಆಶ್ಚರ್ಯ ಮತ್ತು ಸಂತೋಷಕ್ಕೆ ಕಾರಣವೇನೆಂದರೆ ನನಗಿರುವ ಕನ್ನಡ ಕುಟುಂಬಗಳ ಪರಿಚಯದ ಬಗ್ಗೆ. ಇದರ ವಿಶೇಷತೆ ಏನೆಂದರೆ ಈ ಕುಟುಂಬಗಳು ನನ್ನ ಆತ್ಮ ಬಂಧುಗಳು ಇಲ್ಲ ನನ್ನ ಜೊತೆ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದ ಸ್ನೇಹಿತೆಯರು! ಎಲ್ಲಾ ಹಳೆಯ ಪರಿಚಯಗಳೇ. ನನಗಿರುವ ಒಬ್ಬಳೇ ಅಕ್ಕನ ಸಂಸಾರ 200 ಮೈಲಿ ದೂರದಲ್ಲಿ, ಹಾಗು ಇರುವ ಒಬ್ಬನೇ ಬ್ಯಾಚಲರ್‌ ತಮ್ಮ ಕೇವಲ 2 ಮೈಲಿ ದೂರದಲ್ಲಿರುವ ಸಂಗತಿಯೇ ಬೇರೆ ಬಿಡಿ. ಇಷ್ಟು ಆಕಸ್ಮಿಕವಾಗಿ ನಾವೆಲ್ಲರೂ ಹೀಗೆ ಒಟ್ಟಿಗೆ ಇಲಿನಾಯ್‌ನಲ್ಲಿ ಸೇರಿರುವುದೇ ನನ್ನ ಅದೃಷ್ಟ. ಪರದೇಶದಲ್ಲೂ ಸುಖ ದುಃಖ ಹಂಚಿಕೊಳ್ಳಲು ನಮ್ಮತಮ್ಮವರು ಅಂತ ಇರುವುದು ಸಮಾಧಾನಕರವಾದ ವಿಷಯ.

ಬಂಧು-ಮಿತ್ರರನ್ನು ಭೇಟಿಮಾಡುವ ಅವಕಾಶ ನಮಗೆ ವಾರಾಂತ್ಯದಲ್ಲೇ. ಬರ್ತಡೇ ಪಾರ್ಟಿಯಲ್ಲೋ, ಹಬ್ಬ-ಹರಿದಿನಗಳಲ್ಲೋ, ಶಾಪಿಂಗ್‌ ಮಾಲ್‌ಗಳಲ್ಲೋ ನೋಡುತ್ತೇವೆ. ಹೀಗೆ ಭೆಟ್ಟಿಯಾದಾಗ ಕುಶಲೋಪರಿ ವಿಚಾರಣೆ, ಪರಸ್ಪರ ವಿಚಾರ ವಿನಿಮಯ ಬಿಟ್ಟರೆ constructive ಆಗಿ ಮಾಡುವುದಾದರೂ ಏನು?

Bhajan as an outlet to Indian Culture in Illinoisಎರಡು ತಿಂಗಳ ಹಿಂದೆ ನನ್ನ ದೊಡ್ಡಮ್ಮನ ಮೊಮ್ಮಗಳು ಆಶಾ, ಫೋನ್‌ ಮಾಡಿ ತಾನು ಹಾಕಿಕೊಂಡ ಕಾರ್ಯಕ್ರಮದ ಬಗ್ಗೆ ತಿಳಿಸಿದಾಗ ನನಗಾದ ಸಂತೋಷ ಅಪಾರ. ಅವಳ ಸಲಹೆ ಏನೆಂದರೆ, ಆಗಾಗ ನಮ್ಮ ಕುಟುಂಬಗಳು ಒಂದೆಡೆ ಸೇರಿ ಭಜನೆಯನ್ನು ಮಾಡುವುದು. ನಮ್ಮ ಸಂಸ್ಕೃತಿ ನಮ್ಮ ಮಕ್ಕಳಿಗೂ ಬರಬೇಕೆಂಬ ಇಚ್ಛೆ ಇದ್ದರೆ ಇದೂ ಒಂದು ಮಾರ್ಗವೇ ಎನ್ನಿಸಿ ತಕ್ಷಣವೇ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡೆ. ಮಿಕ್ಕವರೂ ಸೈ ಎಂದಮೇಲೆ, ಕಾರ್ಯಕ್ರಮ ರೂಪಗೊಳ್ಳಲು ಪ್ರಾರಂಭಿಸಿತು.

ಒಂದೊಂದು ಸಲ ಒಬ್ಬೊಬ್ಬರ ಮನೆಯಲ್ಲಿ ಎಲ್ಲರೂ ಕಲೆತು ಭಜನಾ ಕಾರ್ಯಕ್ರಮವನ್ನು ನಿರ್ವಹಿಸುವುದು ಎಂದು ತೀರ್ಮಾನವಾದಮೇಲೆ ಸರ್ವರಿಗೂ ಊಟದ ಬಗ್ಗೆ ಚಿಂತೆ. ಭಜನೆಯಿಂದ ಕೃಷ್ಣ ಪರಮಾತ್ಮ ಒಬ್ಬನೇ ಸಂತುಷ್ಟನಾದರೆ ಸಾಲದು, ಉದರ ಪರಮಾತ್ಮನನ್ನು ಸಂತೋಷಪಡಿಸಬೇಕಾದರೆ ಊಟದ ಚಿಂತನೆ ಮಾಡಲೇಬೇಕು, ಅಲ್ಲವೇ? ಭಜನೆಯೇ ಮುಖ್ಯ ಉದ್ದೇಶವಾದುದರಿಂದ ಭರ್ಜರಿ ಅಡುಗೆಯ ಅವಶ್ಯಕತೆ ಇಲ್ಲವೆಂದು ಎಲ್ಲರೂ ಅಭಿಪ್ರಾಯಪಟ್ಟರು. ಹಾಗಾಗಿ ಯಾರ ಮನೆಯಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತದೋ ಅವರೇ ಊಟದ ವ್ಯವಸ್ಥೆ ಮಾಡುವುದು ಎಂದು ತೀರ್ಮಾನವಾಯಿತು. ಈ ಕಾರ್ಯಕ್ರಮದ ಒಂದೇ ಒಂದು ಕಟ್ಟು ಪಾಡು ಎಂದರೆ to keep the menu as simple as possible. ಹೋಸ್ಟ್‌ಗೆ ಅನುಕೂಲವಾಗಲೆಂದೇ ಹಾಕಿರುವ ಕಟ್ಟುಪಾಡು ಇದು. ಎಲ್ಲರೂ ಒಮ್ಮತಿ ನೀಡಿದಮೇಲೆ ಅನಿತ-ರವಿಕುಮಾರ್‌ರವರು ಮೊದಲನೆಯ ಭಜನಾ ಕಾರ್ಯಕ್ರಮವನ್ನು ನವೆಂಬರ್‌ 4ರಂದು ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡರು.

Bhajan as an outlet to Indian Culture in Illinoisಸಮಯ ವ್ಯರ್ಥಮಾಡದೇ ನನಗೆ ತಿಳಿದಿರುವ ಭಜನೆಗಳನ್ನು ಬರೆಯಲು ಪ್ರಾರಂಭಿಸಿದೆ. ನಾವು ಚಿಕ್ಕವರಿದ್ದಾಗ ನಮ್ಮ ತಂದೆಯವರು ಹೇಳುತ್ತಿದ್ದ ಕೆಲವು ಭಜನೆಗಳು ನೆನಪಾದವು. ‘ರಾಧೆ ಗೋವಿಂದ’, ‘ಜಯ್‌ ಜಯ್‌ ಹನುಮಾನ್‌’, ‘ಪ್ರೇಮ ಮುದಿತ ಮನಸೆ ಕಹೋ’ ಇವೇ ಮುಂತಾದ ಭಜನೆಗಳು ಸಂಗ್ರಹವಾದವು. ಕಿವಿಗೆ ಇಂಪಾದ ಮಧುರಾಷ್ಟಕ, ಲಿಂಗಾಷ್ಟಕ, ಲಕ್ಷ್ಮಿಅಷ್ಟೋತ್ತರ ಮುಂತಾದ ಸ್ತೋತ್ರಗಳು ಇದಕ್ಕೆ ಮೆರಗು ನೀಡಿದವು. ಸಂಗ್ರಹಗಳ ಪ್ರತಿಗಳನ್ನು ತೆಗೆದು ಫೈಲ್‌ ಮಾಡಿದ ನಂತರ ಆದ ತೃಪ್ತಿಯೇ ಒಂದು ರೀತಿಯದು. ಮಕ್ಕಳಿಗೂ ಇದರಿಂದ ಉಪಯೋಗವಾಗಬೇಕೆಂಬ ಉದ್ದೇಶವಿದ್ದುದ್ದರಿಂದ ಆಶಾ-ಗುರುದತ್‌ ತಮ್ಮ ಕೆಲಸಗಳ ಮಧ್ಯದಲ್ಲೂ ವಿರಾಮ ಮಾಡಿಕೊಂಡು ಎರಡು ಸಾಲುಗಳ ಹಲವಾರು ಶ್ಲೋಕಗಳನ್ನು ಹಾಗು ಕೆಲವು ಚಿಕ್ಕ ಭಜನೆಗಳನ್ನು ಇಂಗ್ಲಿಷ್‌ನಲ್ಲಿ ಬರೆದರು. ಮಕ್ಕಳಿಗೆ ಹೆಚ್ಚು ಕಷ್ಟವಾಗದೆ ಸರಳವಾದ ರೀತಿಯಲ್ಲೇ ಹೇಳಬಹುದಾದಂತ ‘ಶುಕ್ಲಾಂಬರಧರಂ’, ‘ಪೂಜ್ಯಾಯ ರಾಘವೇಂದ್ರಾಯ’, ‘ಮೂಕಂ ಕರೋತಿ ವಾಚಾಲಂ’, ಇನ್ನಿತರ ದಿನನಿತ್ಯದ ಪ್ರಾರ್ಥನಾ ಶ್ಲೋಕಗಳನ್ನು ಬರೆದದ್ದು ಬಹಳ ಉಪಯುಕ್ತವಾಯಿತು. ಭಜನೆಯ ಪುಸ್ತಕ ಸಿದ್ಧವಾದಮೇಲಂತೂ ಕಾರ್ಯಕ್ರಮಕ್ಕೆ ಎದುರು ನೋಡುವಂತಾಯಿತು.

ಭಜನಾ ಕಾರ್ಯಕ್ರಮ ಆಗಲೇ ಪ್ರಾರಂಭವಾಗಿ ಎರಡು ತಿಂಗಳು ಕಳೆದವು. ಮೂರು ವಾರಕೊಮ್ಮೆ ಸೇರಿ ಮಾಡುವ ಈ ಭಜನಾ ಕಾರ್ಯಕ್ರಮ ‘ಸತ್ಸಂಗ’ ಎಂಬ ನಾಮಧೇಯವನ್ನು ಮಾಡಿಸಿಕೊಂಡು, ಭಜನೆ ಮಾಡುವ ಎಲ್ಲಾ ಹಿರಿ-ಕಿರಿಯರ ಮನಸ್ಸಿಗೂ ಅಹ್ಲಾದವನ್ನು ಉಂಟುಮಾಡುತ್ತಿದೆ.

‘ಸತ್ಸಂಗ’ ಎಂದು ನಾಮಕರಣ ಮಾಡಿದವರು ಆಶಾಳ ತಂದೆ ನಾರಾಯಣರವರು. ಈಗ ಭಾರತದಿಂದ ಇಲ್ಲಿಗೆ ಪ್ರವಾಸಕ್ಕಾಗಿ ಬಂದಿರುವ ಅವರು ನೀಡಿದ ಸಲಹೆ ಅರ್ಥಗರ್ಭಿತವಾಗಿದೆ ಎಂದೆನಿಸಿತು. ಎಲ್ಲರು ಸೇರಿದಾಗ ಕಾಡುಹರಟೆ ಹೊಡೆಯದಲೆ, ಊಟಕ್ಕೇ ಪ್ರಾಮುಖ್ಯತೆ ನೀಡದಲೆ, ಮನಃಶಾಂತಿಗೋಸ್ಕರ ಭಕ್ತಿಯಿಂದಲೂ, ಒಂದೇ ಮನಸ್ಸಿನಿಂದಲೂ ಶ್ಲೋಕಪಠನೆ ಹಾಗು ಭಜನೆಯನ್ನು ಮಾಡುವ ಈ ಸಂಘಕ್ಕೆ ‘ಸತ್ಸಂಗ’ ಎಂಬ ಹೆಸರು ಸರಿಯಾಗಿಯೇ ಇದೆ. ಸಂಘ ಎಂದಾಕ್ಷಣ ನೂರಾರು ಮಂದಿ ಇರುವ ಭಾವನೆ ಬರಬಹುದೇನೋ, ಆದರೆ ಸತ್ಸಂಗದ ಸದಸ್ಯರು ಕೇವಲ ಐದು ಕುಟುಂಬಗಳು. ಬೆನಕ ಬೆನಕ ಎಂಬ ಶ್ಲೋಕದಿಂದ ಗಣೇಶನನ್ನು ನೆನೆದು, 75 ನಿಮಿಷಗಳು ನಿರರ್ಗಳವಾಗಿ ಭಜನೆಯನ್ನು ಮಾಡಿ ಮಂಗಳಮ್‌ ಗುರುಶ್ರೀ ಎಂಬ ಮಂಗಳದಿಂದ ಭಜನೆಯು ಮುಕ್ತಾಯಗೊಳ್ಳುತ್ತದೆ. ಎರಡು ತಾಳದಿಂದ ಪ್ರಾರಂಭವಾಗಿರುವ ಭಜನೆಗೆ ಮುಂದೆ ಹಾರ್ಮೋನಿಯಂ, ಜಾಗಟೆಯ ನಾದ ಸೇರಬೇಕೆಂಬ ದೂರೋದ್ದೇಶ.

ಭಜನೆ ಮುಗಿಯುತ್ತಿದ್ದಂತೆ ಪ್ರಸಾದವನ್ನು ಸ್ವೀಕರಿಸಿ, ಭೋಜನ ಭಕ್ಷಿಸುವ ಕಾತುರ ಎಲ್ಲರ ಮನದಲ್ಲೂ. ‘ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ’ ಎಂದು ಹೇಳುವಾಗಲೇ ‘ಚುರ್ರ್‌’ ಎನ್ನುವ ಹೊಟ್ಟೆಗೆ ರುಚಿಯಾದ ಘಮಘಮಿಸುವ ಅಡುಗೆಯನ್ನು ಭುಂಜಿಸಿ, ‘ಅನ್ನದಾತೋ ಸುಖೀ ಭವ’ ಎಂದು ತೇಗಿದಾಗಲೇ ಭಜನೆ-ಭೋಜನಾ ಕಾರ್ಯಕ್ರಮ ಪರಿಪೂರ್ಣಗೊಳ್ಳುವುದು.

ಮಕ್ಕಳಿಗೆ ಕಾರ್ಯಕ್ರಮ ಆಕರ್ಷಣೆಯಾಗಿ ಇರಬೇಕೆಂಬ ದೃಷ್ಟಿಯಿಂದ ಭೋಜನಾನಂತರ ಚಂದಮಾಮ ಅಮರಚಿತ್ರಕತೆಗಳಿಂದ ಆಯ್ದ ಕತೆಗಳನ್ನು ಅವರಿಗೆ ಹೇಳಿ, ಇಲ್ಲ ಅವರಿಂದಲೇ ಹೇಳಿಸಿ, ಆ ಕತೆಗಳ moral ಏನೆಂಬುದನ್ನು ಮನವರಿಕೆ ಮಾಡಿಸಿ, ಮುಂದೆ ಇದರ ಜೊತೆಗೆ ರಾಮಾಯಣ, ಮಹಾಭಾರತದ ಉಪಕತೆಗಳನ್ನು ಹೇಳಿ, ನಮ್ಮ ಮಹಾಕೃತಿಗಳ ಪರಿಚಯ ಮಾಡುವ ಬಯಕೆ ನಮ್ಮೆಲ್ಲರದ್ದು. ಮಕ್ಕಳಿಗೆ ನಮ್ಮ ದೇಶದ ಸಂಸ್ಕೃತಿ, ಕಲೆ, ಸಾಹಿತ್ಯ ಹಾಗು ನಾವಾಡುವ ಭಾಷೆ ಮನಸ್ಸಿಗೆ ಅಂಟುವಂತೆ ಮಾಡುವುದೇ ಈ ಕಾರ್ಯಕ್ರಮದ ಇನ್ನೊಂದು ಉದ್ದೇಶ. ರವಿ-ರೋಹಿಣಿ ಅಠಾವಣೆಯವರ 10 ವರ್ಷ ವಯಸ್ಸಿನ ಪುತ್ರ ಬಿಪಿನ್‌ ತಾನು ಒಂದೇ ಬಾರಿ ಕನ್ನಡ ಭಾಷೆಯಲ್ಲಿ ಕೇಳಿದ ಕತೆಯನ್ನು ಬ್ರಿಟಿಷ್‌, ಆಸ್ಟ್ರೇಲಿಯನ್‌, ಇಂಡಿಯನ್‌, ಹಾಗು ಸದರ್ನ್‌ accentನಲ್ಲಿ ಚಾಚು ತಪ್ಪದಂತೆ ಇಂಗ್ಲಿಷ್‌ನಲ್ಲಿ ಅನುವಾದ ಮಾಡಿ ಹೇಳಿದಾಗ ನಾವೆಲ್ಲರು ಬೆರಗಾದೆವು. ಅವರಲ್ಲಿರುವ ಪ್ರತಿಭೆಯನ್ನು ಪ್ರಕಟಿಸಲು ಅನುಕೂಲವಾಗುವಂತಹ ಚಟುವಟಿಕೆಗಳನ್ನು ಈ ಕಾರ್ಯಕ್ರಮಕ್ಕೆ ಅಳವಡಿಸಿಕೊಂಡು ಮಕ್ಕಳಿಗೆ ಇದರಲ್ಲಿ ಆಸಕ್ತಿ ಹುಟ್ಟಿಸುವ ಉದ್ದೇಶ ನಮ್ಮದು.

ಮನರಂಜನೆ ಕೇವಲ ಮಕ್ಕಳಿಗಲ್ಲದೆ, ದೊಡ್ಡವರೂ ಪಾಲ್ಗೊಳ್ಳುವ ದೃಷ್ಟಿಯಿಂದ ಒಂದು ಚರ್ಚಾ ವಿಷಯವನ್ನು ಮುಂದಿಟ್ಟು, ಆ ವಿಷಯದ ಬಗ್ಗೆ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ತಿಳಿಸುವುದು. ಆನಿಸಿಕೆಗಳು ಪರ-ವಿರೋಧವಾಗಿದ್ದರೂ ಇದರಿಂದ ನಮ್ಮ ಜ್ಞಾನವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಸತ್ಸಂಗದ ಕೊನೆಯ ಹಂತವಾದ ‘ಚರ್ಚೆ’ ಮುಗಿದ ಮೇಲೆ ಅವತ್ತಿನ ಕಾರ್ಯಕ್ರಮ ಮುಗಿದಂತೆ.

ಮಗುವಂತಿರುವ ಸತ್ಸಂಗವು ದೇವರ ಅನುಗ್ರಹದಿಂದ ಬೆಳೆದು, ಅಡಚಣೆ ಇಲ್ಲದೆ ನಿರಂತರವಾಗಿ ನಡೆದು ಎಲ್ಲರಿಗೂ ಯಶಸ್ಸನ್ನು ತರಲಿ ಎಂದು ಪ್ರಾರ್ಥಿಸುತ್ತಾ, ಮುಂದಿನ ಭಜನಾ ಕಾರ್ಯಕ್ರಮಕ್ಕೆ ಎದುರು ನೋಡುತ್ತಿದ್ದೇನೆ.

ಅಂದಹಾಗೆ, ನಿಮ್ಮ ಪ್ರದೇಶದಲ್ಲೂ ಸತ್ಸಂಗ ಕೂಟಗಳು ಯಾಕೆ ಪ್ರಾರಂಭವಾಗಬಾರದು? ಪ್ರಯತ್ನಿಸಿ ನೋಡಿ- ಸತ್ಸಂಗವದು ಹೆಜ್ಜೇನು ಸವಿದಂತೆ!

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X