ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜ್ಞಾನಕ್ಕೆ ಯಾವ ಪರಿಧಿ?ತ್ರಿವಿಕ್ರಮ ಪ್ರಗತಿ ಸಾಧಿಸಿರುವ ವಿಜ್ಞಾನದ ಬೆಳವಣಿಗೆ ಜ್ಞಾನದ ಸ್ಫೋಟವಾ? ನಮ್ಮ ವಿಜ್ಞಾನದ ಪರಿಧಿಗಳಾದರೂ ಏನು? ಇಂದು ವಿಜ್ಞಾನದಲ್ಲಿ ಎಲ್ಲಿದ್ದೇವೆ ನಾವು?

By Staff
|
Google Oneindia Kannada News

ಮುಖಪುಟ -->ಸಾಹಿತ್ಯ ಸೊಗಡು -->ಎನ್‌ಆರ್‌ಐ ಕನ್ನಡ ಕಲರವ -->ಸಮಾಚಾರ

ಫೆಬ್ರವರಿ 24, 2003

ವಿಜ್ಞಾನಕ್ಕೆ ಯಾವ ಪರಿಧಿ?
ತ್ರಿವಿಕ್ರಮ ಪ್ರಗತಿ ಸಾಧಿಸಿರುವ ವಿಜ್ಞಾನದ ಬೆಳವಣಿಗೆ ಜ್ಞಾನದ ಸ್ಫೋಟವಾ? ನಮ್ಮ ವಿಜ್ಞಾನದ ಪರಿಧಿಗಳಾದರೂ ಏನು? ಇಂದು ವಿಜ್ಞಾನದಲ್ಲಿ ಎಲ್ಲಿದ್ದೇವೆ ನಾವು?

*ಎಂ.ಆರ್‌. ದತ್ತಾತ್ರಿ,
ಸನ್ನಿವೇಲ್‌, ಕ್ಯಾಲಿಫೊರ್ನಿಯಾ - 94086

E mail : [email protected]

Dattatri Ramanna, The Authorಇಂಟರ್‌ನೆಟ್‌ ತನ್ನ ವಿರಾಟ್‌ ಸ್ವರೂಪದಿಂದಾಗಿ ನಮ್ಮ ಜೀವನದ ಕಕ್ಷೆಯನ್ನು ಅನೇಕ ರೀತಿಯಲ್ಲಿ ಬದಲಿಸಿಬಿಟ್ಟಿದೆ. ಬರೀ ವಾಣಿಜ್ಯ ಉದ್ದೇಶಗಳಿಗೆ ಮಾತ್ರವಲ್ಲದೆ ಜ್ಞಾನ ಸಂವಹನಕ್ಕೂ ಅತ್ಯುತ್ತಮ ಸಾಧನವಾಗಿ ಪರಿಣಮಿಸಿದೆ. ಸಣ್ಣ ಪುಟ್ಟ ವಿಷಯಗಳಿಂದ ಹಿಡಿದು ವಿಶ್ವದ ರಚನೆಯವರೆಗೆ ಎಲ್ಲವನ್ನೂ ತನ್ನಲ್ಲಿ ಅಡಗಿಸಿಕೊಂಡಿರುವ ‘ಕಾಣದ’ ವಿಶ್ವಕೋಶವಾಗಿದೆ.

ಇಂಟರ್‌ನೆಟ್‌ನಲ್ಲಿ ‘ನ್ಯೂಸ್‌ ಗ್ರೂಪ್‌’ಗಳಿವೆ. ಇವುಗಳು ಒಂದು ರೀತಿಯಲ್ಲಿ ಚರ್ಚಾವೇದಿಕೆಗಳಂತೆ. ಒಂದೊಂದು ವಿಷಯಕ್ಕೂ ಒಂದೊಂದು ಪ್ರತ್ಯೇಕ ನ್ಯೂಸ್‌ ಗ್ರೂಪ್‌ಗಳು. ನೀವಿಲ್ಲಿ ಪ್ರಶ್ನೆಗಳನ್ನು ಕೇಳಬಹುದು. ವಿಶ್ವದ ಮೂಲೆಮೂಲೆಗಳಿಂದ ನೀವು ಕಂಡು ಕೇಳಿರದ ಜಾಗಗಳಿಂದ ನಿಮಗೆ ಉತ್ತರಗಳು ಬರುತ್ತವೆ. ಎಲ್ವಿಸ್‌ ಪ್ರೆಸ್ಲಿಯ ಮಾದಕ ಸಂಗೀತಕ್ಕೆ ಏನು ಕಾರಣವಾಗಿತ್ತು ಎಂದು ಕೇಳುವಿರಾದರೆ ಅದಕ್ಕೆ ಒಂದು ನ್ಯೂಸ್‌ ಗ್ರೂಪ್‌ ಇದೆ. ಪಂಡಿತ ರವಿಶಂಕರ್‌ರ ಹೊಸ ಬಿಡುಗಡೆಗಳೇನು ಎಂದು ತಿಳಿಯಲು ಮತ್ತೊಂದು. ತಾತ್ವಿಕವಾಗಿ ಇದು ಜ್ಞಾನ ಸಂಚಲನೆಗೆ ಅತ್ಯುತ್ತಮ ಮಾರ್ಗವಾಗಿ ಕಂಡರೂ, ಒಮ್ಮೊಮ್ಮೆ ಸಾವಿರಾರು ಜನರ ‘ಓಡಾಟ’ದಿಂದಾಗಿ ನಮ್ಮ ಬಸ್‌ ಸ್ಟಾಂಡಿನ ಟಾಯ್ಲೆಟ್‌ಗಳ ಮಾದರಿಯಲ್ಲಿ ಮಲಿನಗೊಂಡುಬಿಡುತ್ತದೆ.

ವಿಜ್ಞಾನಕ್ಕೆ ಸಂಬಂಧಿಸಿದಂತೆ ಒಂದು ‘ಲಾಜಿಕ್‌’ ಎನ್ನುವ ಗುಂಪಿದೆ. ಇದ್ದುದರಲ್ಲಿ ಸ್ವಲ್ಪ ಶುದ್ಧವಾದ ಗುಂಪಾದುದರಿಂದ ಮಾಡಲೇನೂ ಕೆಲಸವಿಲ್ಲದಿದ್ದಾಗ ಯಾವಾಗಲಾದರೊಮ್ಮೆ ಅಲ್ಲಿ ಹರಿದಾಡುವ ಪ್ರಶ್ನೆ ಮತ್ತು ಉತ್ತರಗಳ ಮೇಲೆ ಕಣ್ಣಾಡಿಸುವುದು ನನ್ನ ಒಂದು ಹವ್ಯಾಸ. ಈ ನ್ಯೂಸ್‌ ಗ್ರೂಪ್‌ನಲ್ಲಿ ಒಮ್ಮೆ ಕಾಣಿಸಿಕೊಂಡ ಒಂದು ಪ್ರಶ್ನೆ ಮತ್ತು ಅದಕ್ಕೆ ಒಬ್ಬರು ನೀಡಿದ ಉತ್ತರ ವಿಶೇಷವಾಗಿ ನನ್ನ ಗಮನವನ್ನು ಸೆಳೆದದ್ದರಿಂದ ಅದನ್ನು ಇಲ್ಲಿ ಬರೆಯುತ್ತಿದ್ದೇನೆ.

ಪ್ರಶ್ನೆ ಹೀಗಿತ್ತು - ವಸುಂಧರೆಯ ಮೇಲೆ ಮಾನವನ ಉಗಮವಾಗಿ ಲಕ್ಷಾಂತರ ವರ್ಷಗಳಾಗಿದ್ದರೂ ನಮ್ಮ ವೈಜ್ಞಾನಿಕ ಪ್ರಗತಿಗಳು ಮತ್ತು ವಿಜ್ಞಾನವನ್ನು ಜೀವನಕ್ಕೆ ಅಳವಡಿಸಿಕೊಂಡ ವೇಗ ಈ ನೂರು ಅಥವಾ ನೂರೈವತ್ತು ವರ್ಷಗಳಲ್ಲಿ ಅಸಾಧಾರಣವಾಯಿತಲ್ಲ ? ಯೋಚಿಸಿ, ವಿದ್ಯುತ್‌, ವಾಹನಗಳು, ಏರೋಪ್ಲೇನ್‌ಗಳು, ಕಂಪ್ಯೂಟರ್‌ಗಳು, ಚಂದ್ರನ ಮೇಲೆ ಕಾಲಿಟ್ಟದ್ದು , ಜೀನ್‌ಗಳ ರಹಸ್ಯವನ್ನು ಒಡೆಯಲು ಹೊರಟದ್ದು.... ಹೀಗೆ ಪಟ್ಟಿ ಮಾಡುತ್ತಾ ಹೊರಟರೆ ಸಾವಿರಾರು. ಇವೆಲ್ಲಾ ಏಕೆ ಈ ಲಕ್ಷಾಂತರ ವರ್ಷಗಳ ಮನುಷ್ಯನ ಇತಿಹಾಸದಲ್ಲಿ ಕೊನೆಯ ಈ ನೂರೈವತ್ತು ವರ್ಷಗಳಲ್ಲಿ ಕಾಣಿಸಿಕೊಂಡದ್ದು ? ವೈಜ್ಞಾನಿಕ ಪ್ರಗತಿಯನ್ನು ತೋರಿಸುವ ನಕ್ಷಾರೇಖೆ ಹೆಚ್ಚು ಕಡಿಮೆ ಒಂದೇ ಗತಿಯಲ್ಲಿ ಕಾಣಿಸಿಕೊಂಡಿದ್ದು ಯಾಕೆ ಈ ಎರಡು ಅಥವಾ ಮೂರು ಶತಮಾನಗಳಲ್ಲಿ ಅತಿ ಉನ್ನತಿಗೆ ಹಾರಿ ಹೋಯಿತು? ಇದ್ದಕ್ಕಿದ್ದಂತೆಯೇ ಬಹಳ ಬುದ್ಧಿವಂತರಾಗಿಬಿಟ್ಟೆವೇ ಹೇಗೆ? ಪೊದೆಗಳ ಮಧ್ಯೆ ಶಬ್ದವಾಗದಂತೆ ನಡೆವ ಹುಲಿರಾಯ ಬೇಟೆಯ ಹತ್ತಿರವಾದೊಡನೆಯೇ ಛಂಗನೆ ಮಿಂಚಿನ ವೇಗದಲ್ಲಿ ನೆಗೆದಂತೆ!

ಪ್ರಶ್ನೆಯೇನೋ ಬಹಳ ಲಾಜಿಕ್‌ ಆಗಿಯೇ ಇದೆ. ಲಾಜಿಕ್‌ ಗ್ರೂಪಿಗೆ ತಕ್ಕನಾದದ್ದು. ಆದರೆ ವಿಜ್ಞಾನದ ಹುಡುಕಾಟ ಯಾವತ್ತೂ ನಿಂತಿಲ್ಲವಲ್ಲ . ಎಣಿಸುವುದ ಕಲಿತದ್ದು ಸಾಮಾನ್ಯವೇ? ಚಕ್ರವನ್ನು ಹುಡುಕಿದ್ದು ಸಣ್ಣದೇ? ಯೋಗಕ್ಕೆ ಮತ್ತು ಆಯುರ್ವೇದಕ್ಕೆ ಬಲವಾದ ವಿಜ್ಞಾನದ ಬೇಲಿ ಇಲ್ಲವೇ? ಇದೆ, ಖಂಡಿತಾ ಇದ್ದೇ ಇದೆ. ಪ್ರಶ್ನೆ ಕೇಳುವವ ಯಾವತ್ತೂ ಇದನ್ನು ಹೀಗಳೆಯುತ್ತಿಲ್ಲ. ಬದಲಾಗಿ ಅವನು ಕೇಳುತ್ತಿರುವುದು ನಮ್ಮ ವಿಜ್ಞಾನದ ಪರಿಧಿಗಳೇನು ಎಂದು. ಇಂದು ವಿಜ್ಞಾನದಲ್ಲಿ ಎಲ್ಲಿದ್ದೇವೆ ನಾವು? ವಿಜ್ಞಾನ ಮತ್ತು ತಂತ್ರಜ್ಞಾನದ ಗತಿ ಹೀಗೆಯೇ ನೂರಾರು ಸಾವಿರಾರು ಪಟ್ಟು ಗುಣವಾಗುತ್ತಲೇ ಹೋಗುತ್ತದೆಯೋ ಅಥವಾ ಈ ಇನ್ನೂರು ವರ್ಷಗಳು ವಿಶೇಷವಾಗಿ ಕಂಡು ನಾವು ಮತ್ತೆ ಮೊದಲ ರೀತಿಯಲ್ಲಿ ನಿಧಾನಗತಿಗೆ ಮರಳುತ್ತೇವೆಯೋ?

ವಿಜ್ಞಾನದ ಮೊದಲ ಹೆಜ್ಜೆ ಪ್ರಶ್ನೆಯನ್ನು ಕೇಳುವುದು. ಸಮಂಜಸವೋ, ಅಸಮಂಜಸವೋ ಅದು ಪ್ರಶ್ನೆಯನ್ನು ಅರ್ಥಮಾಡಿಕೊಂಡವನ ಅಥವಾ ಉತ್ತರವನ್ನು ಹೇಳಲು ಪ್ರಯತ್ನಿಸುವವನ ಯೋಚನಾ ಲಹರಿಗೆ ಬಿಟ್ಟದ್ದು. ಈ ಪ್ರಶ್ನೆಯನ್ನು ಕೇಳಿದವ ಆ ಮೊದಲ ಹೆಜ್ಜೆಯನ್ನು ಸಮರ್ಪಕವಾಗಿ ಇರಿಸಿದ್ದಾನೆ.

ಆದರೆ ಉತ್ತರ ?... ಬರೀ ಊಹೆಯ ಉತ್ತರದೊಂದಿಗೆ ವಿಜ್ಞಾನ ಸುಮ್ಮನೆ ಕುಳಿತುಕೊಳ್ಳುವುದಿಲ್ಲ . ಆ ಉತ್ತರಕ್ಕೆ ಪುರಾವೆಯನ್ನು ಕೇಳುತ್ತದೆ, ಗಣಿತವನ್ನು ಟೆಲೆಸ್ಕೋಪಾಗಿಸಿ ದೊಡ್ಡದಾಗಿ ನೋಡಲು ಪ್ರಯತ್ನಿಸುತ್ತಾ ಈಗಾಗಲೇ ಪುಸ್ತಕ ಸೇರಿದ ಸೂತ್ರಗಳೊಂದಿಗೆ ತಾಳೆಹಾಕುತ್ತದೆ.

ಲಾಜಿಕ್‌ ಗ್ರೂಪಿನಲ್ಲಿ ಹಾರಾಡಿದ ಆ ಪ್ರಶ್ನೆಗೆ ಪೌಲ್‌ ಎನ್ನುವವರು ನೀಡಿದ ಉತ್ತರ ಬಹಳ ಸಮಂಜಸವಾಗಿ ಕಂಡದ್ದುದರಿಂದ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಗಣಿತದ ಆಸಕ್ತಿ ಇಲ್ಲದಿರುವವರು ಇಲ್ಲಿರುವ ಗಣಿತದ ಪದಗಳನ್ನು ಬಿಡಿಸದೆಯೂ ಒಟ್ಟಾರೆ ಸಾರಾಂಶವನ್ನು ಗ್ರಹಿಸಬಹುದು. ಸಾಧ್ಯವಾದಷ್ಟು ಮಟ್ಟಿಗೆ ಸರಳೀಕರಿಸಿದ್ದೇನೆ.

ವಿಜ್ಞಾನ ಮತ್ತು ತಂತ್ರಜ್ಞಾನದ ಹುಡುಕಾಟಗಳು ಬಹುಗುಣ ಮಾದರಿಯಲ್ಲಿ ಅಭಿವೃದ್ಧಿ ಪಥವನ್ನು ಅನುಸರಿಸುವುದರಿಂದ ಹೀಗಾಗುತ್ತಿದೆ (exponential growth process). ಈ ಗುಣವನ್ನು ನಾವು ಪ್ರಕೃತಿಯ ಯಾವುದೇ ಅಭಿವೃದ್ಧಿಕಾರ್ಯದಲ್ಲೂ ನೋಡುತ್ತೇವೆ. ಯಾವುದೋ ಪ್ರಯೋಗಕ್ಕಾಗಿ ಒಂದು ಜಾರಿನಲ್ಲಿ ಬೆಳೆಯ ಬಿಟ್ಟ ಹುಳುಗಳ ಸಂಖ್ಯೆಯಲ್ಲಾಗಲೀ, ಸಾಂಕ್ರಾಮಿಕ ರೋಗಗಳು ಹರಡುವ ರೀತಿಯಲ್ಲಾಗಲೀ ಅಥವಾ ವಿಜ್ಞಾನವನ್ನು ಗ್ರಹಿಸುವ ಬುದ್ಧಿಕ್ರಿಯೆಯಲ್ಲಾಗಲೀ ಪ್ರಕೃತಿ ಹೂಡುವ ತಂತ್ರವು ಒಂದೇ. ಬದಲಾವಣೆಯ ದರವು ವಸ್ತುವಿನ ಸಾಂದ್ರತೆಯ ಮೇಲೆ (population) ಅವಲಂಬಿತವಾಗಿರುತ್ತದೆ. ಇದನ್ನೇ ಕಲನಶಾಸ್ತ್ರ (Calculus)ದಲ್ಲಿ ಹೇಳುವುದಾದರೆ dp/dt. ಇದೇ ಸೂತ್ರವನ್ನು ತಿರುಚಿ ಹೇಳಬಹುದೆಂದರೆ dp/dt=qp. ಇಲ್ಲಿ q ಒಂದು ಸ್ಥಿರಾಂಕ (constant) ( ಈ ರೀತಿಯಲ್ಲಿ ಸಿಕ್ಕ ಡಿಫೆರೆಂಷಿಯಲ್‌ ಈಕ್ವೇಷನ್‌ನ್ನು ಬಿಡಿಸಿದರೆ ಸಾಂದ್ರತೆಯ ದರವು ನಮಗೆ ಸಿಕ್ಕುತ್ತದೆ. ಗಣಿತದ ರೀತಿಯಲ್ಲಿ ಅದನ್ನು ಹೀಗೆ ನಿರೂಪಿಸಬಹುದು. p(t)=k x exp(qt). ಇಲ್ಲಿ k ಮತ್ತೊಂದು ಸ್ಥಿರಾಂಕ. ಈ ರೀತಿಯ ಬಹುಗುಣವರ್ಧಕ ಸೂತ್ರಗಳು (exponential functions) ಬಹಳ ನಿಧಾನವಾಗಿ ಪ್ರಾರಂಭವಾಗಿ ಒಂದು ಬಿಂದುವಿನಲ್ಲಿ ಸ್ಫೋಟಗೊಂಡು ಅಸಾಧಾರಣ ಪ್ರಗತಿಯತ್ತ ಸಾಗುತ್ತದೆ. ಯಾವಾಗ ಇದು ಘಟಿಸುತ್ತದೆ, ಎಷ್ಟು ಮೇಲಕ್ಕೆ ಏರುತ್ತದೆ ಎನ್ನುವುದನ್ನೆಲ್ಲಾ ಸೂತ್ರದಲ್ಲಿರುವ ಸ್ಥಿರಾಂಕಗಳು ನಿಯಂತ್ರಿಸುತ್ತವೆ.

ನಾವೀಗ ವಿಜ್ಞಾನದ ಗ್ರಹಿಕೆಯಲ್ಲಿ ಈ ರೀತಿಯ ಸ್ಫೋಟ ಹಂತದ ಯಾವುದೋ ಬಿಂದುವಿನಲ್ಲಿದ್ದೇವೆ. ಸ್ಫೋಟದ ಪ್ರಾರಂಭವಿರಬಹುದು, ಮಧ್ಯವಿರಬಹುದು ಅಥವಾ ಕೊನೆಯಿರಬಹುದು, ನಮಗೆ ಗೊತ್ತಿಲ್ಲ . ಬಹುಶಃ ಸ್ಫೋಟದ ಪ್ರಾರಂಭದಲ್ಲಿರಬಹುದು ನಾವು. ಏಕೆಂದರೆ ಈ ಪ್ರಪಂಚದ ಇನ್ನೂ ಅನೇಕ ಮೂಲಭೂತಗುಣಗಳು ನಮಗೆ ಗೊತ್ತಿಲ್ಲ . ಒಂದೊಂದು ಮೂಲಭೂತ ಗುಣಗಳ ಸಂಶೋಧನೆಯೂ ವಿಜ್ಞಾನದ ಪ್ರಗತಿಯ ಈ ಬಹುಗುಣ ನಕ್ಷಾರೇಖೆಯನ್ನು (curve)ಮತ್ತೂ ಮೇಲಕ್ಕೆ ತೆಗೆದುಕೊಂಡು ಹೋಗುತ್ತದೆ.

ಆದರೆ ಮೂಲಭೂತ ಗುಣಗಳ ಸಂಶೋಧನೆಗೆ ನ್ಯೂಟನ್‌ ಅಥವಾ ಐನ್‌ಸ್ಟೈನ್‌ರು ಬೇಕು. ಈ ವಿಷಯದಲ್ಲಿ ನಮಗಿರುವ ಅಲ್ಪ ಇತಿಹಾಸದಲ್ಲಿ ತಿಳಿಯುವುದು ನ್ಯೂಟನ್‌ ಅಥವಾ ಐನ್‌ಸ್ಟೈನ್‌ ಹೆಚ್ಚು ಕಡಿಮೆ ಇನ್ನೂರು ವರ್ಷಗಳಿಗೊಮ್ಮೆ ಕಾಣಿಸುತ್ತಾರೆ. ಹಾಗಾಗಿ ಮುಂದಿನ ನ್ಯೂಟನ್‌ಗಾಗಿ ನಾವು ನೂರುವರ್ಷ ಕಾಯಬೇಕಾಗಬಹುದೇನೋ.

ಇದು ಪೌಲ್‌ನ ಉತ್ತರ. ಪೌಲ್‌ನ ಉತ್ತರವನ್ನು ನಂಬಲೇಬೇಕೆಂದಿಲ್ಲ . ವಿಜ್ಞಾನದ ಯಾವ ಉತ್ತರವನ್ನೂ ನಿಮಗೆ ಮನದಟ್ಟಾಗುವವರೆಗೆ ನಂಬಬೇಕಿಲ್ಲ. ಬಹಳ ಪುರಾವೆಗಳಿಲ್ಲದ ಊಹೆಗಳನ್ನು ಆಧಾರ ಮಾಡಿಕೊಂಡು ಪೌಲ್‌ನ ಉತ್ತರ ಗಾಳಿಗೋಪುರದಂತೆ ನಿಂತಿದೆ. ಮುಂದಿನ ಹತ್ತು ವರ್ಷಗಳಲ್ಲಿ ಐನ್‌ಸ್ಟೈನ್‌, ನ್ಯೂಟನ್‌ರಂತಹ ಹತ್ತಾರುಮಂದಿ ಒಮ್ಮೆಗೇ ಹುಟ್ಟಿಬರುವುದಿಲ್ಲವೆಂದು ಕಡ್ಡಾಯವಾಗಿ ಹೇಳಲು ಬ್ರಹ್ಮನ ಯಾವ ಸೂತ್ರಗಳು ನಮಗೆ ತಿಳಿದಿವೆ?

ಆದರೆ ಒಂದು ವಿಷಯಕ್ಕಾಗಿ ಪೌಲ್‌ನನ್ನು ಅಭಿನಂದಿಸಬೇಕು. ಅದು ಸಮಸ್ಯೆಯನ್ನು ಅರಿತುಕೊಳ್ಳುವ ಪ್ರಯತ್ನ ಮತ್ತು ಅನೇಕಾನೇಕ ಸಾಧ್ಯತೆಗಳಲ್ಲಿ ಹತ್ತಿರವಾದ ಅಥವಾ ಹತ್ತಿರವೆಂದು ಗ್ರಹಿಸಿದ ಒಂದು ಸಾಧ್ಯತೆಯನ್ನು ಬೆಳೆಸಲು ನೋಡುವುದು. ವಿಜ್ಞಾನ ಬೆಳೆದಿರುವುದೇ ಹೀಗಲ್ಲವೆ? ಇಲ್ಲಿ ಕುಳಿತೇ ನಮ್ಮ ಸೌರವ್ಯೂಹದ, ಕ್ಷೀರಪಥದ, ಅನಂತ ವಿಶ್ವದ ಪಡಿಯಚ್ಚನ್ನು ಹಾಳೆಯ ಮೇಲೆ ಮೂಡಿಸಲು ನೋಡುತ್ತಿಲ್ಲವೇ ನಾವು?

ನಮ್ಮಲ್ಲೇ ಇನ್ನೂ ಬಿಡಿಸಲಾಗದ್ದು ಬಹಳ ಇದೆ. ಲ್ಯಾಟಿನ್‌ ಅಮೆರಿಕಾದ ಪ್ರಸಿದ್ಧ ಕವಿ ಎಡ್ವರ್ಡೋ ಒಂದು ಕವಿತೆಯಲ್ಲಿ ಹೇಳುವಂತೆ ಭೂಮಿಯ ಮೇಲೆ ಮೊದಲ ಜೀವಕೋಶ ಒಡೆದು ನಾನೂರೈವತ್ತು ಮಿಲಿಯನ್‌ ವರ್ಷಗಳಾದರೂ ಯಾಕೆ ಇಬ್ಬರ ಸಂಗಡದಲ್ಲಿ ಸುಖವಿರುತ್ತದೆ, ಯಾಕೆ ಅಸಹನೆಗಳು ಜೀವ ಹಿಂಡುತ್ತವೆ, ಯಾಕೆ ಕಣ್ಣಿನಲ್ಲಿ ವ್ಯಕ್ತವಾದದ್ದು ಪದಗಳಾಗುವುದಿಲ್ಲ ಎನ್ನುವುದು ತಿಳಿದಿಲ್ಲ.

ನಾವರಿತಿರುವುದು ಸಾಗರದ ಕಿನಾರೆಯಲ್ಲಿ ಒಂದು ಮರಳ ಕಣ ಎಂದು ಐನ್‌ಸ್ಟೈನ್‌ ವಿನಮ್ರನಾಗಿ ಹೇಳಿದ್ದಾನೆ. ಅವನ ಮಾತಿನ ಸತ್ಯದಷ್ಟೇ ಕತ್ತಲೆಯಲ್ಲಿ ನಾವಿದ್ದೇವೆ.

ಕೋನ, ತ್ರಿಕೋಣಗಳನ್ನು ಬಳಸಿ ಆಕೃತಿಗಳ ವಿಸ್ತೀರ್ಣ ಮತ್ತು ಪರಿಧಿಯನ್ನು ಹೇಳುವ ವಿಜ್ಞಾನಕ್ಕೆ ಯಾವ ಪರಿಧಿ?


ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X