ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಜಲಿಯ ನಾಗ ಐತಾಳರು ಮತ್ತು ಉರುಟು ಭೂತಕನ್ನಡಿ

By Staff
|
Google Oneindia Kannada News

*ಶಾಂತಾರಾಮ ಸೋಮಯಾಜಿ, ಸ್ಯಾನ್‌ ಲೂಯಿಸ್‌ ಒಬಿಸ್ಪೊ, ಕ್ಯಾಲಿಫೋರ್ನಿಯಾ

Naga Aithalaಲಾಸ್‌ ಏಂಜಲಿಸ್‌ ನೆರೆಕರೆಯ ಆರ್ಕೇಡಿಯಾವನ್ನು ಇತ್ತೀಚೆಗೆ ಕೆಲವು ತಿಂಗಳಿಂದ ತಮ್ಮ ಸ್ವಂತ ಊರು ಮಾಡಿಕೊಂಡ ನಾಗ ಐತಾಳರ ಮನೆಯ ಮುಂದಿನ ಅಂಗಳದಲ್ಲಿ ನಲವತ್ತು-ಐವತ್ತು ವರ್ಷ ಪ್ರಾಯದ ತೊಗಟೆಯ ಮರವೊಂದಿದೆ. ಹುಲ್ಲಿನೆಸಳಿನಂತಹ ಎಲೆಗಳಿರುವ ಇದು, ಪೈನ್‌ ಅಥವ ಫರ್‌ ಜಾತಿಯ ಮರವಿರಬಹುದು. ಒಂದು ವೇಳೆ ಅದಕ್ಕೊಂದು ಚೌಕದ ಕಟ್ಟೆ ಇರುತ್ತಿದ್ದಲ್ಲಿ, ಆ ಕಟ್ಟೆಯ ಮೇಲೆ ಕೂತು ಐತಾಳರೊಂದಿಗೆ ಸಾಹಿತ್ಯ ಚರ್ಚೆ ನಡೆಯುತ್ತಿದ್ದಲ್ಲಿ, ಇನ್ನೊಂದು ಎರಡು-ಮೂರು ವರ್ಷಗಳಲ್ಲೆ ಆ ಮರವೂ ಕನ್ನಡದಲ್ಲೇ ಮಾತಾಡುತ್ತದೇನೋ! ಬೇಂದ್ರೆಯವರ ಕವನಗಳನ್ನು ಹಾಡಿ ಅರ್ಥ ಸ್ಪಷ್ಟ ಮಾಡಿತೇನೋ! ಕಾರಂತರ ಕಾದಂಬರಿಗಳ ಪಾತ್ರಗಳ ವಿಶ್ಲೇಷಣೆ ಮಾಡಿತೇನೋ! ಅನಂತಮೂರ್ತಿಗಳ, ಹಿಂದಿನ ಮತ್ತು ಇತ್ತೀಚಿನ ಬರಹಗಳ ಸತ್ವ ವ್ಯತ್ಯಾಸ ಗುರುತು ಮಾಡಿಸುತ್ತಿತ್ತೇನೋ! ಏಕೆಂದರೆ....

ಏಕೆಂದರೆ, ಹುಡುಗಾಟದ ಅಂತರಂಗದ, ವಾತ್ಸಲ್ಯ ವ್ಯಕ್ತಿತ್ವದ, ಮೋಹಕ ಮಾತುಗಳ, ಗಾಢ ಸ್ನೇಹದ ಐತಾಳರಿಗೆ, ತಮ್ಮಲ್ಲಿರುವ ಕನ್ನಡ ಸಾಹಿತ್ಯದ ರುಚಿಯ ಸ್ವಲ್ಪಾಂಶವನ್ನು ಆ ಮುದಿ ಮರಕ್ಕೆ ನಾಟಿಸುವುದು ಕಷ್ಟದ ಕೆಲಸವಾಗಲಾರದು. ಅವರ ಧೈರ್ಯ ಅಂತಹುದು. ನಿಷ್ಠೆ ತೀರ ಅಪರೂಪದ್ದು. ಪ್ರೀತಿ ಬಲು ಸಹಜವಾದದ್ದು. ಮನಸ್ಸು ಮಾಡಿದರೆ ಸಾಧಿಸಿಯಾರು, ಖಂಡಿತ. ನಾಗ ಐತಾಳರ ಕನ್ನಡ ಅಭಿಮಾನ ಅಂತಹುದು. ನಳಿನಿ ಮೈಯರ ಇತ್ತೀಚೆಗಿನ ಕಥಾ ಸಂಕಲನದಿಂದ ಹಿದಿದು, ಕಾರಂತರ ‘ಮರಳಿ ಮಣ್ಣಿಗೆ’ಯವರೆಗೆ; ಮನೋಹರ ಗ್ರಂಥಮಾಲೆಯ ಸುಮಾರು ಐವತ್ತು ವರ್ಷದ ಹಿಂದಿನ ಪುಸ್ತಕದಿಂದ ಹಿಡಿದು, ಜಿ.ಎಸ್‌.ಶಿವರುದ್ರಪ್ಪನವರ ಸಮಗ್ರ ಕಾವ್ಯದ ವರೆಗೆ; ನರಸಿಂಹ ಸ್ವಾಮಿಯವರ ‘ಮೈಸೂರು ಮಲ್ಲಿಗೆ’ಯ ಮೊದಲ ಮುದ್ರಣದಿಂದ ಹಿಡಿದು, ಜಯಂತ ಕಾಯ್ಕಿಣಿಯವರ ಇತ್ತೀಚೆಗಿನ ಸಂಕಲನದವರೆಗೆ ಅವರು ಎಷ್ಟೋ ಪುಸ್ತಕಗಳನ್ನು ಓದಿ, ನಾಜೂಕಾಗಿ ಜೋಡಿಸಿದ್ದಾರೆ.

ಐತಾಳರ ಮನೆಯಲ್ಲಿ ಬೆಳಕು ಬೆಳಗಾಗುದೇ ತಡ, ಲಾಸ್‌ ಏಂಜಲಿಸ್‌ನ ಸುಮಾರು ಐವತ್ತು ಪರ್ಸೆಂಟ್‌ ಕಾಗೆಗಳೆಲ್ಲ ಆ ನೆರೆಕರೆಗೆ ಹಾರಿ ಬಂದು, ಬೆಳಕಿನ ಪಟದ ಸೂಚನೆ ಕೊಡುತ್ತವೆ. ಯಾವುದೋ ಊರಿನ ಸಮುದ್ರ ಹಕ್ಕಿಗಳು ಹರಟೆಯ ಸುದ್ದಿಯನ್ನು ತಲಪಿಸುತ್ತವೆ. ....ತಾನು ಇತ್ತೀಚೆಗೆ ವಹಿಸಿಕೊಂಡ ಪುಸ್ತಕ ಪ್ರಕಟಣೆಯಾಂದರ ಜವಾಬ್ದಾರಿಯ ಬಗ್ಗೆ ಯೋಚನೆಗಳನ್ನು ನಿಡಿಸಿಕೊಂಡು, ಇರುವ ಕೆಲವೇ ಕೆಲವು ತಲೆಕೂದಲುಗಳನ್ನು ಒಂದೊಂದು ಕಡೆಗೆ ಇಂತಿಷ್ಟು ಎಂದು ತಿರುಗಿಸಿಕೊಂಡು, ನಾಗ ಐತಾಳರು ಹಾಸಿಗೆಯಲ್ಲಿ ಕಣ್ಣು ಬಿಡುತ್ತಾರೆ.

ಈ ಅಸಾಧಾರಣ ಹುಮ್ಮಸ್ಸಿನ, ಮೃದು ಹೃದಯದ, ಮುಪ್ಪನ್ನು ಒದ್ದು ತಳ್ಳಿದ ರಸಿಕನಿಗೆ, ಉರುಟು ಭೂತಕನ್ನಡಿಯ ನೆರವಿರದೆ ಪುಸ್ತಕದ ಅಕ್ಷರಗಳು ಕಾಣುವುದಿಲ್ಲ. ಬಾತಂತೆ ಕಂಡು ಬರುವ ಪಾದಗಳಿಂದ ಹೆಚ್ಚಿನ ಓಡಾಟ ಸಾಧ್ಯವಿಲ್ಲ. ಆಗಷ್ಟೆ, ಎರಡು ನಿಮಿಷಗಳ ಹಿಂದೆ ಕನ್ನಡಕ ಎಲ್ಲಿಟ್ಟಿದ್ದೇನೆಂದು ನೆನಪಾಗದವರಿಗೆ, ದಶಕಗಳ ಹಿಂದಿನ ಘಟನೆಗಳ ಸ್ಪಷ್ಟ ನೆನಪು. ತಾನು ಬರೆದದ್ದನ್ನು ತಾನೇ ಓದಲು ಕಷ್ಟಪಡಬೇಕಾದ ಸ್ಥಿತಿಯಲ್ಲಿ, ಬರೆದು ಪ್ರಕಟಿಸುವ ಉತ್ಸಾಹ. (ಇತ್ತೀಚೆಗಿನ ಪುಸ್ತಕ: ‘ಅಮೇರಿಕನ್ನಡಿಗನೊಬ್ಬನ ದಿನಚರಿಯಿಂದ’, ವಸಂತ ಪ್ರಕಾಶನ, ಬೆಂಗಳೂರು, 2002). ತನ್ನ ಸಂಕಷ್ಟದ ಸ್ಥಿತಿಯನ್ನು ಮರೆತು, ಎರಡು ದಶಕಗಳ ಹಿಂದೆ ತನ್ನ ಮನೆಯಾಕೆ ಖಾಹಿಲೆಯಿಂದ ನರಳಿ ಕಳೆದ ವಾತಾವರಣವನ್ನು ಬಿಡಿಸಿ ಹೇಳುವ ಸೂಕ್ಷ್ಮ ಮನಸ್ಸು. ಯಾರೋ ಒಬ್ಬರನ್ನು ಇನ್ನೊಬ್ಬರ ಹೆಸರು ಹಿಡಿದು ಕರೆಯುವ ಮರೆವಿನ ಜೀವದಲ್ಲಿ, ತನ್ನವಳೊಂದಿಗೆ ಇನ್ನೂ ಹದಿನೇಳರ ಪ್ರಣಯಿಯಂತೆ ಕಾಫಿ ಬೇಡುವ ತುಂಟತನ.....ಮತ್ತು ಈ ಎಲ್ಲದರ ಮಧ್ಯೆ, ಕನ್ನಡದ ಹುಚ್ಚು ದಿನದಿಂದ ದಿನಕ್ಕೆ ಬೆಳೆದು ಬಡಿದು ಎಬ್ಬಿಸಿ ಕಾಡುತ್ತಿದೆ.

ಅದೇ ಉತ್ಸಾಹ, ಶ್ರದ್ಧೆ, ಮತ್ತು ಸಾಹಸ - ಈ ಸನ್ನಾಹದೊಂದಿಗೆ ಐತಾಳರಲ್ಲಿ ಹುಟ್ಟಿದ್ದು ಒಂದು ಸಣ್ಣ ಮಟ್ಟಿನ ಕಥಾಶಿಬಿರ - ಚರ್ಚೆಯ ಸಾರಥ್ಯ -ಸಣ್ಣ ಕತೆಯ ವೈಶಿಷ್ಟ್ಯವೇನು? ಆರಂಭ ಹೇಗೆ? ಎಷ್ಟು ಪಾತ್ರಗಳಿರಬೇಕು? ಬೆಳವಣಿಗೆ ಯಾವ ರೀತಿ? ಶೈಲಿ ಹೇಗಿರಬೇಕು? ಸ್ವಂತ ಅನುಭವದ ಪಾಲೆಷ್ಟು? - ಇಂತಹ ಹಲವಾರು ಪ್ರಶ್ನೆಗಳ ಬಗ್ಗೆ ಕುತೂಹಲ. ಅದಲ್ಲದೆ, ತನ್ನಂತೆ, ಇದೇ ಕುತೂಹಲದಿಂದ ಕುದಿಯುತ್ತಿರುವ, ಮತ್ತು ಬರೆಯುವ ಆಸಕ್ತಿ ಹೊಂದಿದ ಕೆಲ ಕನ್ನಡಿಗರನ್ನು ಪತ್ತೆ ಹಚ್ಚಿ, ಅವರಿಗೆಲ್ಲ ಶಿಬಿರಕ್ಕೆ ಆಮಂತ್ರಣ ಕೊಟ್ಟು, ಊಟದ ಲಂಚದ ಸೂಚನೆಯಾಂದಿಗೆ ತಮ್ಮ ಮನೆಗೆ ಬರಹೇಳಿದರು (ಡಿಸೆಂಬರ 14). ಇದರೊಂದಿಗೆ ಬರೆಯುವ ಹುಮ್ಮಸ್ಸಿರುವವರಿಗೆ, ಬರವಣಿಗೆಗೆ ಪ್ರೇರಣೆಯಾಗಲೆಂದು, ಖ್ಯಾತ ಲೇಖಕ, ನಾ. ಡಿಸೋಜರ ಇತ್ತೀಚೆಗಿನ ಕತೆಯಾಂದರ (ಕರಿಮರದ ಕುರ್ಚಿ, ಸುಧಾ ವಾರಪತ್ರಿಕೆ, ಏಪ್ರಿಲ್‌ 18) ವಸ್ತುವನ್ನು ಕೊಟ್ಟು, ‘ಒಂದು ಪುಟದ ಕತೆಯನ್ನು ಬರೆದು ತನ್ನಿ, ಎಲ್ಲರೆದುರಿಗೆ ಓದಿ’, ಎಂದು ತಿಳಿಸಲಾಯ್ತು. ಆ ಶಿಬಿರದ ಮೊಡರೇಟರ್‌ ಆಗಿರುವ ಅವಕಾಶ ನನ್ನದಾಗಿತ್ತು.

ಕಥಾ ವಸ್ತು: ಡಾಕ್ಟರ್‌ ವಾಸುದೇವ ಪೈಗಳು ಒಂದು ಹಳ್ಳಿಯೂರಿಗೆ ಬಂದು ತಮ್ಮ ವೈದ್ಯಗಿರಿಯನ್ನು ಆರಂಭಿಸಿದರು. ಆತ್ಮೀಯ ಅಂತಃಕರಣದ ಪೈಗಳು ಕೆಲವೇ ವರ್ಷಗಳಲ್ಲಿ ಬಹಳ ಒಳ್ಳೆಯ ಡಾಕ್ಟರರೆಂದು ಆ ಹಳ್ಳಿಯ ಸುತ್ತ-ಮುತ್ತ ಹೆಸರು ಪಡೆದರು. ಅವರಿಗೊಬ್ಬಳು ಮಗಳು. ಹೆಸರು ವಂದನಾ. ಅವಳು ವೈದ್ಯಕೀಯ ಕಲಿತು, ತನ್ನ ತಂದೆಯಾಂದಿಗೆ ಕೆಲಸ ಮಾಡಿದಳು. ದಾವಣಗೆರೆಯಲ್ಲಿ ನರ್ಸಿಂಗ್‌ ಹೋಮ್‌ ನಡೆಸುತ್ತಿದ್ದ ಸುಮನ್‌ ಪ್ರಭುವಿನೊಂದಿಗೆ ಆಕೆಯ ಮದುವೆಯ ನಂತರ ಅವಳು ದಾವಣಗೆರೆಗೆ ಹೊರಟು ಹೋದಳು. ಮನೆಯಲ್ಲಿ ಗಂಡ-ಹೆಂಡತಿ ಮಾತ್ರ. ವಾಸುದೇವ ಪೈಗಳು ಮುದುಕರಾಗುತ್ತಿದ್ದರು. ನರ್ಸಿಂಗ್‌ ಹೋಮ್‌ನ ಕಾರ್ಯಭಾರ ಕಷ್ಟವಾಗತೊಡಗಿತು. ಕೊನೆಗದನ್ನು ಮಾರಿ, ಅಲ್ಲೇ ಕನ್ಸಲ್ಟೆಂಟ್‌ ಆಗಿ ಕೆಲ ಕಾಲ ಕೆಲಸ ಮುಂದುವರಿಸಿದರು. ಆದರೆ, ಅದು ಕೂಡ ಬೇಜಾರಾಗತೊಡಗಿ, ಮಗಳಿರುವ ದಾವಣಗೆರೆಗೆ ಹೋಗುವ ನಿರ್ಧಾರ ತೆಗೆದುಕೊಂಡರು. ತಮ್ಮ ಬಳಿಯಿದ್ದ ಕೆಲ ಸಾಮಾನುಗಳನ್ನು ಮಾರಿದರು. ಉಳಿದ ಸಾಮಾನು - ಕುರ್ಚಿ, ಮೇಜು, ಮಂಚ - ಇವನ್ನೆಲ್ಲಾ ಎರಡೆರಡು ಲಾರಿಗಳಲ್ಲಿ ತುಂಬಿಸಿ, ಪೈ ದಂಪತಿಗಳು ತಮ್ಮ ಹಳ್ಳಿಯೂರನ್ನು ಬಿಟ್ಟರು.

ಈ ಕಥಾವಸ್ತುವನ್ನು ಮುಖ್ಯವಾಗಿಟ್ಟು, ಲಾಸ್‌ ಏಂಜಲಿಸ್‌ನ ನಾಲ್ಕು ಉತ್ಸಾಹಿ ಬರಹಗಾರರು (ಶ್ರೀನಿವಾಸ ಭಟ್ಟ, ವೆಂಕಟಪ್ಪ ಐತಾಂಡಹಳ್ಳಿ, ನಾಗ ಐತಾಳ, ಮಾಳೂರು ನಾಗರಾಜ್‌), ಒಂದು ಪುಟದ ಸಣ್ಣ ಕತೆ ಬರೆದು ತಂದು, ಐತಾಳರ ಲಿವಿಂಗ್‌ ರೂಮಿನಲ್ಲಿ ನೆರೆದ ಸಾಹಿತ್ಯರಸಿಕರ ಮುಂದೆ ಓದಿದರು. ಕತೆಯ ಆರಂಭ, ಶೈಲಿ, ತಂತ್ರ, ಭಾಷೆ, ಮುಂತಾದ ಲಕ್ಷಣಗಳ ಬಗ್ಗೆ ಚರ್ಚೆ ನಡೆದು, ಓದಿದ ಕತೆಗಳಲ್ಲಿನ ಲೋಪ-ದೋಷ, ಬಿಗಿ, ಸತ್ವ, ಧಾಟಿ ಇತ್ಯಾದಿ ವೈಶಿಷ್ಟ್ಯಗಳನ್ನು ನೆರೆದವರು ಎತ್ತಿ ತೋರಿಸಿದರು. ಈ ಕತೆಗಳಿಂದ ಆರಿಸಿದ ಕೆಲ ತುಣುಕುಗಳು:

‘..ಹೆಂಡತಿ ಪಾರ್ವತಿ ಅಲ್ಲಿಂದ ಕೂಗಿದರು - ‘ಏನು ಬೇಕಾಗಿತ್ತು? ನನಗೆ ಬಹಳ ಕೆಲಸವಿದೆ. ಹೀಗೆಲ್ಲ ಮೂರು ನಿಮಿಷಕ್ಕೊಂದು ಬಾರಿ ಕರೆಯುತ್ತಾ ಇದ್ದರೆ ಹೇಗೆ? ನಿಮಗೇ ಗೊತ್ತಲ್ಲ, ನಾಳೆ ನಾವು ದಾವಣಗೆರೆಗೆ ಹೊರಡಬೇಕಲ್ಲಾ! ..... ಅದೇನಿದೆಯೋ ಅಲ್ಲಿಂದಲೇ ಹೇಳಿ ...’ ಅದಕ್ಕೆ ವಾಸುದೇವ ಪೈಗಳು - ‘ಅಲ್ಲ ಕಣೇ, ಈ ಗೋಡೆ ನೋಡು ಬಾ ಎಂದು ಕರೆದೆ ಕಣೇ’ ‘ಗೋಡೇಲೇನಿದೆ ನೋಡೋಕ್ಕೆ?’ - ಪಾರ್ವತಮ್ಮನ ಉತ್ತರ. ‘ನಿನಗೆ ಜ್ಞಾಪಕವಿಲ್ಲವೇನೇ? ನಮ್ಮ ವಂದನಾ ಬೆಳೆಯುತ್ತಿದ್ದಾಗ, ಅವಳ ಎತ್ತರವನ್ನು ನಾವು ಗುರುತು ಹಾಕಿಟ್ಟಿದ್ದುದು? ಅದನ್ನೇ ತೋರಿಸುವಾ ಎಂದು ಕರೆದೆ. ನೋಡು ಇಲ್ಲಿ, ಮಗು ಒಂದು ತಿಂಗಳಾಗಿದ್ದಾಗ ಮಾಡಿದ ಗುರುತು....’ ಹೀಗೆ ವಾಸುದೇವ ಪೈಗಳು ತಮ್ಮ ಮಗಳ ನೆನೆಪಿನಲ್ಲಿ ತೇಲಿ ಹೋದರು. ಪಾರ್ವತಮ್ಮ ಬಂದು ಪಕ್ಕದಲ್ಲಿ ಬಂದು ನಿಂತದ್ದೇ ಗೊತ್ತಾಗಲಿಲ್ಲ ....’

‘..ಇನ್ನು ದಾವಣಗೆರೆಯಲ್ಲಿ ತಮ್ಮ ಬದಲಾದ ಹೊಸ ಜೀವನಕ್ಕೆ ಸನ್ನಾಹ ಮಾಡಿಕೊಳ್ಳಬೇಕು. ಹಾಗೆಂದು, ಮನಸ್ಸನ್ನು ಹದಕ್ಕೆ ತಂದುಕೊಂಡು ವಾಸುದೇವ ಪೈಗಳು ಮನೆಯಿಂದ ಹೊರಗೆ ಬಂದರು. ಆದರೆ, ಅವರಿಗೆ ತಿಳಿಯದಂತೆ ಅವರನ್ನು ಮನೆಯ ಹಿತ್ತಲಿನ ಮಾವಿನ ಮರದ ಕಡೆಗೆ ಕೊಂಡೊಯ್ದಿತ್ತು. ಅದೇ ಮರದ ಕೆಳಗೆ, ಮಗು ಅನಂತನ ಅಂತಿಮ ಕ್ರಿಯೆ ನಡೆದಿದ್ದುದು. ಮರದ ಕೊಂಬೆಯಲ್ಲಿ ಅನಂತನ ಪ್ರೀತಿಯ ಜೋಕಾಲಿ ಇನ್ನೂ ತೂಗುತ್ತಿತ್ತು.....’

‘..ಒಂದೇ ಸಮನೆ ಜೋರಾಗಿ ಬೀಳುತ್ತಿದ್ದ ಮಳೆ. ಐದಾರು ದಿನಗಳಿಂದ ಸೂರ್ಯನ ದರ್ಶನವೇ ಇಲ್ಲ. ಕುರ್ಚಿಯ ಮೇಲೆ ಬೆನ್ನು ಮುಂದೆ ಮಾಡಿಕೊಂಡು ಕುಳಿತು, ಹೆಂಡತಿ ತಂದು ಕೊಟ್ಟ ಸ್ಟೀಲ್‌ ಕಪ್ಪಿನಿಂದ ಕಾಫಿ ಕುಡಿಯುತ್ತ ವಾಸುದೇವ ಪೈಗಳು ಆ ದಿನದ ಉದಯವಾಣಿ ಪತ್ರಿಕೆಯನ್ನು ತಿರುವಿ ಹಾಕುತ್ತಿದ್ದರು. ಓದುತ್ತಿದ್ದ ಲೇಖನದ ಮೇಲೆ ನೀರ ಹನಿಗಳೆರಡು ಪಟ್‌ ಎಂದು ಬಿದ್ದಾಗ, ಸಹಜವಾಗಿ ತಲೆಯೆತ್ತಿ, ಚಾವಡಿಯ ಕಡೆಗೆ ಕಣ್ಣು ಸರಿದಾಗ, ಅರಿವಿಲ್ಲದೆ ಅವರ ದೃಷ್ಟಿಗೆ ಬಿತ್ತು - ಗೋಡೆಯ ಮೊಳೆಗೆ ತೂಗು ಹಾಕಿದ ಸ್ಟೆತಸ್ಕೋಪು....’

ಮೂಲ ಕತೆಯನ್ನು (ಕರಿ ಮರದ ಕುರ್ಚಿ) ಎಲ್ಲರಿಗೂ ಹಂಚಿ, ‘ನೀವು ಬರೆದ ಕತೆಯನ್ನು ಈ ವಿಶೇಷ ಕತೆಯಾಂದಿಗೆ ಹೋಲಿಸಿ ನೋಡಿ’, ಎಂಬ ಸಲಹೆಯಾಂದಿಗೆ ಸುಮಾರು ನಾಲ್ಕು ಗಂಟೆಗಳ ಆ ಕಾರ್ಯಕ್ರಮ ಮುಕ್ತಾಯಗೊಂಡಿತು. ಹೊರಗೆ ಅಂಗಳದಲ್ಲಿ ಐತಾಳರ ಮುದಿ ಮರದ ನೆರಳು, ಅವರ ಮನೆಯ ಮಾಡಿನ ಮೇಲೆ ಬಾಗಿ ಕುಳಿತಿತ್ತು. ತಮ್ಮ ಭೂತಕನ್ನಡಿಯನ್ನು ಮನೆಯಾಳಗೆಲ್ಲ ಹುಡುಕಾಡಲು ಹೊರಟಿದ್ದ ಗಂಡನ ಬಗ್ಗೆ ಅಭಿಮಾನದ ಕಣ್ಣರಳಿಸಿಕೊಂಡ ಐತಾಳರ ಮಡದಿ, ಲಕ್ಷ್ಮಿ ಹೇಳಿದರು - ‘ಹುಡುಕಾಡಲಿ, ಬಿಡಿ....ಹಾಗಾದರೂ ಸ್ವಲ್ಪ ಎಕ್ಸರ್‌ಸೈಜ್‌ ಆಗಲಿ...’ ಎಂದು.

Post your views

ಲಾಸ್‌ ಏಂಜಲಿಸ್‌ನಲ್ಲಿ ‘ಅಂಜಲಿ’ ಕಥಾಕಮ್ಮಟ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X