• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನೆರೆಮನೆ’ ಕನ್ನಡ ಬಂಧುಗಳ ಜೊತೆ ಚಂದ್ರು ಸಾಹಿತ್ಯ ಚಿಂತನ

By Super
|

ಕನ್ನಡದ ಪ್ರಖ್ಯಾತ ಸಾಹಿತಿ, ಚಲನಚಿತ್ರ ನಿರ್ದೇಶಕ ಹಾಗೂ ‘ಅಮೆರಿಕ ಅಮೆರಿಕ’, ‘ಕೊಟ್ರೇಶಿ ಕನಸು’, ‘ನನ್ನ ಪ್ರೀತಿಯ ಹುಡುಗಿ’ ಇತ್ಯಾದಿ ಉತ್ತಮ ಚಿತ್ರಗಳನ್ನು ಕನ್ನಡ ಜನತೆಗೆ ಪರಿಚಯಿಸಿದ ನಾಗತಿಹಳ್ಳಿ ಚಂದ್ರಶೇಖರ ಅವರಿಗೆ ಉತ್ತರ ಕ್ಯಾಲಿಫೋರ್ನಿಯ ನೆರೆಮನೆ ಇದ್ದಹಾಗೆ. ಬಹಳಷ್ಟು ಸಾರಿ ಬೇ ಏರಿಯಾಗೆ ಬಂದು ಇಲ್ಲಿಯವರಲ್ಲಿ ಒಬ್ಬರಾಗಿ ಹೋಗಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದ ಕನ್ನಡಿಗರಿಗೆ ಪ್ರೀತಿಯ ಚಂದ್ರು ಆಗಿದ್ದಾರೆ. ತಮ್ಮ ಅತಿ ಬಿರುಸಾದ, ಬಿಡುವಿಲ್ಲದ ಕಾರ್ಯಕ್ರಮದ ನಡುವೆ ಸಹ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ ಕರೆಗೆ ಓಗೊಟ್ಟು , ‘ಕನ್ನಡ ಸಾಹಿತ್ಯದ ಕಥೆ, ಕಾದಂಬರಿ ಲೋಕ’ದ ಬಗ್ಗೆ ಚಂದ್ರು ಮಾತನಾಡಿದ ವರದಿ ಇಲ್ಲಿದೆ.

ಮೇ 19, 2002 ರ ಭಾನುವಾರ. ಸ್ವಲ್ಪ ಮೋಡ- ಮಳೆಯ ಕಣ್ಣಾಮುಚ್ಚಾಲೆಯ ವಾತಾವರಣ. ಬೆಚ್ಚಗೆ ಹೊದ್ದು , ಬಿಸಿಬಿಸಿ ಕಾಫಿ ಕುಡಿಯುತ್ತಾ ಕನ್ನಡ ಕಾದಂಬರಿ ಓದುವ, ಸ್ವಲ್ಪ ವಿರಮಿಸುವ ಅಥವಾ ಟಿ.ವಿ. ನೋಡುವ ಸಮಯ, ಮಧ್ಯಾಹ್ನ 3-6 ಗಂಟೆ. ಆದರೆ ಉತ್ತರ ಕ್ಯಾಲಿಫೋರ್ನಿಯಾದ, ಕುಪರ್ಟಿನೊ ನಗರದಲ್ಲಿ ಸಾಹಿತ್ಯಾಸಕ್ತರು, ಕನ್ನಡ ಬಳಗದವರು ಮತ್ತು ಕನ್ನಡ ಕೂಟದವರಿಗೆ ಸಾಹಿತ್ಯಾಸ್ವಾದನೆಯ ತವಕ, ತಮ್ಮ ಪ್ರೀತಿಯ ಚಂದ್ರು ಅವರೊಂದಿಗೆ.

ಈ ಕಾರ್ಯಕ್ರಮ, ಸರಳ ಹಾಗೂ ಅನೌಪಚಾರಿಕವಾಗಿ ಸದ್ದು ಗದ್ದಲವಿಲ್ಲದೆ, ಪರಿಮಳ ಮುರಳೀಧರ ಅವರ ಸುಶ್ರಾವ್ಯ ಕಂಠದಲ್ಲಿ ಜಯದೇವಿ ಶಾರದೆಯ ಪ್ರಾರ್ಥನೆಯಾಂದಿಗೆ ಆರಂಭವಾಯಿತು. ಸಾಹಿತ್ಯದ ಮುಂದಿನ ಮಾತುಕತೆಗೆ ಪ್ರಾರ್ಥನೆ ಅರ್ಥಪೂರ್ಣ ನಾಂದಿ ಹಾಡಿತು. ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಅಧ್ಯಕ್ಷ ರಾಮ್‌ಪ್ರಸಾದ್‌ ಅವರು ಅತಿಥಿಯನ್ನು ಹಾಗೂ ನೆರೆದ ಸಾಹಿತ್ಯಾಸಕ್ತರನ್ನು ಸ್ವಾಗತಿಸಿದರು. ಚಂದ್ರು ಅವರನ್ನು ಹರಿಹರೇಶ್ವರ ಅವರು ಸಭೆಗೆ ಪರಿಚಯಿಸಿದರು. ಹರಿಯವರ ಮಾತೇ ಚಂದ. ತಮ್ಮ ಎಂದಿನ ಲವ ಲವಿಕೆಯಾಡನೆ ಚಂದ್ರು ಅವರ ಮೇಷ್ಟ್ರು ಜೀವನದಿಂದ ಹಿಡಿದು, ಉತ್ತಮ ಸಾಹಿತಿಯ, ಸಾಮಾಜಿಕ ಕಾರ್ಯಕರ್ತನ ಆದರ್ಶವನ್ನು ಮತ್ತು ಪ್ರಶಸ್ತಿಯ ಮೇಲೆ ಪ್ರಶಸ್ತಿ ಗಳಿಸಿದ ಚಲನಚಿತ್ರಗಳ ಉತ್ತಮ ನಿರ್ದೇಶಕನ ಅನುಕರಣೀಯ ಗುಣಗಳನ್ನು ಸಭೆಗೆ ಪ್ರೀತಿಯಿಂದ ಪರಿಚಯಿಸಿದರು. ಹರಿಯವರ ಪುಸ್ತಕ ಪ್ರೇಮ ಎಂಥವರನ್ನೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತದೆ. ಈ ಸಭೆಗೆ ಹರಿಯವರು, ಚಂದ್ರು ಅವರ ಅನೇಕ ಪುಸ್ತಕಗಳನ್ನು ತಂದು ತೋರಿಸಿ, ಅವುಗಳ ಬಗ್ಗೆ ಕೆಲವು ಮೆಚ್ಚುಗೆಯ ಮಾತುಗಳೊಂದಿಗೆ ಪರಿಚಯ ಮಾಡಿಕೊಟ್ಟಿದ್ದು ನಿಜಕ್ಕೂ ಮಾದರಿ ಪ್ರಯೋಗ.

ನಮ್ಮಲ್ಲಿ ಬಹಳಷ್ಟು ಜನರಿಗೆ ಚಂದ್ರು ಅವರು ಸಾಹಿತಿಯಾಗಿ, ಚಲನಚಿತ್ರ ನಿರ್ದೇಶಕನಾಗಿ ಗೊತ್ತೇ ವಿನಃ ಉತ್ತಮ ಪರಿಸರ ಪ್ರೇಮಿಯಾಗಿ, ಸಾಮಾಜಿಕ ಕಾರ್ಯಕರ್ತರಾಗಿ ತಿಳಿದಿರಲಿಕ್ಕಿಲ್ಲ. ಹರಿಯವರು ಚಂದ್ರು ಆರಂಭಿಸಿರುವ ಅಭಿವ್ಯಕ್ತಿ ವೇದಿಕೆ, ಅವರ ಆಗಸ್ಟ್‌ 15ರ ಹುಟ್ಟುಹಬ್ಬ ಮತ್ತು ವಿವಾಹದ ವಾರ್ಷಿಕ ದಿನದ ಆಚರಣೆಯ ಹೊಸ ವಿವರಗಳನ್ನು ಸಭೆಗೆ ತಿಳಿಸಿಕೊಟ್ಟಿದ್ದು ಒಂದು ವಿಶೇಷ. ಚಂದ್ರು ಅವರ ಸಾಮಾಜಿಕ ಕಳಕಳಿ, ವಿಧವಾ ವಿವಾಹ ಮತ್ತು ಸಾಮೂಹಿಕ ವಿವಾಹದ ಬಗ್ಗೆ ಅವರ ಆಸಕ್ತಿ, ಒಡನಾಟ ವ್ಯಕ್ತಿ- ಶಕ್ತಿ ಎಂಬ ಹರಿಯವರು ಹೇಳಿದ ಮಾತು ಅತಿಶಯೋಕ್ತಿಯಲ್ಲ. ಚಂದ್ರು ಅವರ ಇನ್ನೊಂದು ಗುಣ- ಸದಾ ಸೇವೆಗೆ ಸಿದ್ಧ ಮತ್ತು ಸಹಾಯ ಹಸ್ತ ನೀಡುವುದು. ಹರಿಯವರ ತಾಯಿಗೆ ಚಂದ್ರು ಚಲನಚಿತ್ರದಲ್ಲಿ ನಟಿಸುವ ಅವಕಾಶ ಕಲ್ಪಿಸಿದ ಸಂದರ್ಭ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತು. ಹರಿಯವರು ಇನ್ನೂ ಬಹಳಷ್ಟು ಮಾತನಾಡಲು ತಯಾರಾದಂತೆ, ಅವರ ಪತ್ನಿ ನಾಗಲಕ್ಷ್ಮಿ ಹರಿಹರೇಶ್ವರ ಅವರು ಪತಿಗೆ ತಮ್ಮ ಗಂಟಲು ನೋವನ್ನು ನೆನಪಿಸಿ, ಚಂದ್ರು ಅವರನ್ನು ಮಾತನಾಡಲು ಕೇಳಿಕೊಂಡರು.

ಚಂದ್ರು ಅವರು ಚಲನಚಿತ್ರದ ಬಗ್ಗೆ ಮಾತನಾಡಲು ಆಸಕ್ತಿ ತೋರದೆ ಸಾಹಿತ್ಯದ ಬಗ್ಗೆ ತಮ್ಮ ಒಲವು ತೋರಿಸಿದ್ದು ಎಲ್ಲರಿಗೂ ಸಂತೋಷ ತಂದಿತು. ಇದಕ್ಕೆ ಮುಖ್ಯ ಕಾರಣ, ಚಂದ್ರು ಅವರ ಪ್ರಕಾರ ಸಾಹಿತ್ಯದ ಸಭೆಯು ಸಹಜತೆ ಮತ್ತು ಕೊಡು-ಕೊಳ್ಳುವ ಸಂಬಂಧ ಹೊಂದಿರುವುದು. ಬಹಳಷ್ಟು ಆಸೆ ಮತ್ತು ಎತ್ತರದ ಗುರಿ ಹೊಂದಿರುವ ಚಂದ್ರು ಅವರು ತಮ್ಮ ಇಲ್ಲಿಯವರೆಗಿನ ಎಲ್ಲಾ ಸಾಧನೆಯನ್ನು ಪ್ರಯಾಣದ ಮೈಲಿಗಲ್ಲು ಎಂದು ಹೇಳಿದರು. ತಮ್ಮ ವಿಸ್ತಾರವಾದ ಸಾಹಿತ್ಯದ ಆಳದಿಂದ ಕನ್ನಡ ಕಥೆ- ಕಾದಂಬರಿಯ ಲೋಕವನ್ನು 2000 ವರ್ಷದ ಹಿಂದಿನಿಂದ ಆರಂಭಿಸಿದರು.

ಆದಿಕವಿ ಪಂಪ, ರತ್ನತ್ರಯರ ಸಾಹಿತ್ಯದ ಕೊಡುಗೆ, ವಚನಕಾರರು, ಅಕ್ಕಮಹಾದೇವಿಯ ವಿಚಾರದ ಬಗ್ಗೆ ನಿರರ್ಗಳವಾಗಿ ಮಾತನಾಡಿದ ಚಂದ್ರು ಅವರು ಕನ್ನಡ ಸಾಹಿತ್ಯದ ಆಳ ಅಗಲ ಮತ್ತು ಮಹತ್ವವನ್ನು ಎತ್ತಿ ತೋರಿಸಿದರು. ಮುದ್ದಣ್ಣನ ಗದ್ಯ, ಕನ್ನಡಿಗರ ಮೇಲಿನ ಆಂಗ್ಲರ ಪ್ರಭಾವ ಮತ್ತು ಪ್ರೇರಣೆಯ ಬಗ್ಗೆ ವಿಷದವಾಗಿ ವಿಮರ್ಶಿಸಿದರು. ಇಲ್ಲಿಯವರೆಗಿನ ಕನ್ನಡ ಸಾಹಿತ್ಯದ ಪ್ರಾಕಾರಗಳು ಮತ್ತು ಸಾಹಿತಿಗಳನ್ನು ಹೆಸರಿಸಿದ ಚಂದ್ರು, ಪಾಶ್ಚಾತ್ಯರಿಂದ ಕನ್ನಡಿಗರಿಗೆ ಬಂದ ಸ್ಫೂರ್ತಿ ಹಾಗೂ ವಿವಿಧ ಬಗೆಯ ಸಾಹಿತ್ಯಿಕ ಚಟುವಟಿಕೆಗಳನ್ನು ಉದಾಹರಣೆಯಾಂದಿಗೆ ತಿಳಿಸಿದರು. ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಸಾಹಿತ್ಯದ ಬಗ್ಗೆ ವಿಚಾರಗಳನ್ನು ಸಭೆಗೆ ತಿಳಿಸಿದರು. ಕನ್ನಡದ ಮುಂದಿನ ನವ ಪ್ರಾಕಾರ ಕವಲುದಾರಿಯಲ್ಲಿದೆಯೆ? ಕಾದು ನೋಡೋಣ ಎಂದ ಚಂದ್ರು ಕನ್ನಡ ಪುಸ್ತಕ ಖರೀದಿಸಿ, ಓದಿ ಕನ್ನಡ ಬೆಳೆಸಿ ಎಂಬ ಕರೆಯನ್ನು ಕೊಟ್ಟರು. ಡಿ.ವಿ.ಜಿ. ಯವರ ಒಂದು ಕಗ್ಗದೊಂದಿಗೆ ತಮ್ಮ ಭಾಷಣವನ್ನು ಮುಗಿಸಿದರು.

ಕನ್ನಡ ಕೂಟದ ಅಧ್ಯಕ್ಷ ರಾಮ್‌ಪ್ರಸಾದ್‌- ಚಂದ್ರುರವರಿಗೆ ಸ್ಮರಣ ಫಲಕವನ್ನು , ಹರಿಯವರು ಕನ್ನಡಕೂಟ ಪ್ರಕಟಿಸಿದ ಸಾಹಿತ್ಯ ಸಂಚಿಕೆಗಳನ್ನು ಅರ್ಪಿಸಿದರು. ಒಂದು ವಿಶೇಷವೆಂದರೆ, ಬಿಸಿ ಬಿಸಿ ಚರ್ಚೆಯಲ್ಲಿದ್ದವರಿಗೆ, ಕುಳಿತಲ್ಲಿಗೆ ಕಾಫಿಯ ಸರಬರಾಜು. ವಿಶ್ವನಾಥ ಮರವಂತೆ, ಸುಮ, ನಾಗಲಕ್ಷ್ಮಿ ಹರಿಹರೇಶ್ವರ, ಜ್ಯೋತಿ ಮಹದೇವ ಮತ್ತು ಉಷಾ ರಾಮ್‌ಪ್ರಸಾದ್‌ರವರ ಸಮಯೋಚಿತ ಸೇವೆ ಎಲ್ಲರಿಗೂ ಆಶ್ಚರ್ಯ ಮತ್ತು ಸಂತೋಷವನ್ನುಂಟು ಮಾಡಿತು. ಅನಂತರ ನಡೆದದ್ದು ಪ್ರಶ್ನೋತ್ತರ.

ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಅನೇಕರು ಸಕ್ರಿಯವಾಗಿ ಪಾಲ್ಗೊಂಡಿದ್ದು ಕನ್ನಡದ ಬಗ್ಗೆ ಅವರಿಗೆ ಇರುವ ಕಳಕಳಿಯನ್ನು ತೋರಿಸಿತು. ಕೊನೆಯಲ್ಲಿ ಸಾಹಿತ್ಯಕ್ಕೆ ಕೊಂಚ ಹೊರತಾಗಿ ಚಂದ್ರು ಅವರ ಸಿನಿಮಾಗಳ ಬಗ್ಗೆಯೂ ಚರ್ಚೆಗೆ ಕಾರ್ಯಕ್ರಮದ ನಿರ್ವಾಹಕರಾಗಿದ್ದ ಹರಿ ಅವರು, ಚಂದ್ರು ಅವರ ಅನುಮತಿಯಾಂದಿಗೆ ಅಪ್ಪಣೆಯಿತ್ತಾಗ ಕೆಲವು ನಿಮಿಷಗಳ ಆಸಕ್ತಿಪೂರ್ಣ ಚರ್ಚೆಗೆ ಇದು ಬಾಗಿಲನ್ನು ತೆರೆಯಿತು. ತಮ್ಮ ಚಿತ್ರಗಳಲ್ಲಿ ಅನಿವಾಸಿ ಭಾರತೀಯರನ್ನು ತೋರಿಸುವ ಬಗೆಗೆ ಮೂಡಿಬಂದ ಅನೇಕ ಪ್ರಶ್ನೆಗಳಿಗೆ ಚಂದ್ರು ಸಮರ್ಥವಾಗಿ ಉತ್ತರಿಸಿದರು.

ವಿಶ್ವನಾಥ ಹುಲಿಕಲ್‌ ಅವರ ವಂದನಾರ್ಪಣೆಯಾಂದಿಗೆ ಕಾರ್ಯಕ್ರಮ ಔಪಚಾರಿಕವಾಗಿ ಮುಕ್ತಾಯವಾಯಿತು. ಕಾರ್ಯಕ್ರಮದ ನೆನಪು, ಚಂದ್ರು ಅವರೊಂದಿಗಿನ ಚಿಂತನ ಮಂಥನ ನೆರೆದಿದ್ದ ಸಹೃದಯರ ಪಾಲಿಗೆ ಕಾಡುವ ಸುಮಧುರ ನೆನಪುಗಳಾಗಿ ಉಳಿದವು.

English summary
Lecterur, Film director an Kannada literaeur Nagathihalli Chandrashekar provides an overview of Kannada literature in a well attended literary meeting organized by North California Kannada Koota at Cupertino on 19 May, 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more