• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏನೆಂದು ಕರೆಯಲಿ ನಿನ್ನ?

By Staff
|

ಕರೆಯುವವರಿಗೆ ಕಷ್ಟವಾಗಬಾರದು, ಕರೆಸಿಕೊಳ್ಳುವವರಿಗೆ ಮುಜುಗರವಾಗಬಾರದು- ಹಾಗೆ ಮಾತನಾಡುವುದು ಸವಾಲೇ ಸರಿ! ಆದರೆ, ಕರೆಯುವಾಗಿನ ಭಾವಕ್ಕಿಂಥ ಶಬ್ದವೇ ಮುಖ್ಯವಾಗಬಾರದಲ್ಲವೇ?

  • ಶ್ರೀವತ್ಸ ಜೋಶಿ

‘ಬೂತಯ್ಯನ ಮಗ ಅಯ್ಯು’ ಕನ್ನಡ ಸಿನೆಮಾ ನೋಡಿದ ನೆನಪಿದೆಯಾ ? ಅದರಲ್ಲಿನ ‘ಸೋಬಾನ ಸೋಬಾನ ಸೋಬಾನವೇ....’ ಹಾಡುವ ಹೆಂಗಳೆಯರು, ಗುಳ್ಳ- ಮಾದೇವಿಯರ ಮದುವೆಯಲ್ಲಿ ವಧೂ- ವರರನ್ನು ಪರಸ್ಪರ ಹೆಸರು ಹೇಳುವಂತೆ ಒತ್ತಾಯಿಸುತ್ತಾರೆ. ‘ ...ನಿನ್ನಯ ಗಂಡನ ಹೆಸರ್ಹೇಳೇ...’ ಎಂದು ಮಾದೇವಿಗೂ, ‘...ನಿನ್ನಯ ಹೆಂಡತಿ ಹೆಸರ್ಹೇಳು...’ ಎಂದು ಗುಳ್ಳನಿಗೂ ಚುಡಾಯಿಸುತ್ತಾರೆ ; ನಾಚಿ ನೀರಾಗಿ ಅವರಿಬ್ಬರೂ ಹೆಸರು ಹೇಳುತ್ತಾರೆ.

ಹಿಂದಿನ ಕಾಲದಲ್ಲಿ ಗಂಡನಾದವನು ಹೆಂಡತಿಯ ಹೆಸರನ್ನೂ, ಮತ್ತು ಅದಕ್ಕಿಂತ ಕಟ್ಟುನಿಟ್ಟಾಗಿ, ಹೆಂಡತಿಯಾದವಳು ಗಂಡನ ಹೆಸರನ್ನು ಹೇಳಿ ಕರೆಯುವುದು ವಾಡಿಕೆಯಿರಲಿಲ್ಲ. ಅಷ್ಟು ಮಾತ್ರವಲ್ಲ, ಗಂಡನನ್ನು ಮತ್ತು ಗಂಡನ ಕಡೆಯ ಹಿರಿಯರನ್ನೆಲ್ಲ ಬಹುವಚನದಿಂದ ಸಂಬೋಧಿಸುವುದು ಒಬ್ಬ ವಿವಾಹಿತ ಸ್ತ್ರೀಯಿಂದ ನಿರೀಕ್ಷಿತವಾಗಿತ್ತು. ಅದಕ್ಕೆ ಕಾರಣಗಳೂ ಇವೆ. ಹಿಂದೆಲ್ಲ ಅವಿಭಕ್ತ ಕುಟುಂಬಗಳಲ್ಲಿ, ಬಾಲ್ಯವಿವಾಹಗಳಲ್ಲದಿದ್ದರೂ ಸ್ವಲ್ಪ ಎಳವೆಯಲ್ಲೇ ಮದುವೆಗಳಾಗುತ್ತಿದ್ದ ಕಾಲದಲ್ಲಿ, ಗಂಡನ ಮನೆಯಲ್ಲಿ ಅವನ ತಂದೆ, ದೊಡ್ಡಪ್ಪ, ಅಜ್ಜ ಇತ್ಯಾದಿ ಹಿರಿಯರೂ ಇರುತ್ತಿದ್ದರು. ಮಾತ್ರವಲ್ಲ , ಅಜ್ಜನ ಹೆಸರೇ ಮೊಮ್ಮಗನಿಗೂ ಇಡುತ್ತಿದ್ದ ಪದ್ಧತಿಯಿತ್ತು. ಹಿರಿಯರ ಹೆಸರನ್ನು ಹೇಳಿ ಕರೆಯುವುದು ಎಷ್ಟೆಂದರೂ ವಿಧೇಯತೆಯ ಲಕ್ಷಣವಾಗಿರಲಿಲ್ಲ . ಗಂಡನ ಹೆಸರು ಹೇಳಬೇಕಾಗಿ ಬಂದರೂ ಮುಜುಗರ ಪಡುತ್ತಿದ್ದರು.

ಮನೆಯಲ್ಲಿ ಮಕ್ಕಳು -ಮೊಮ್ಮಕ್ಕಳಿಗೆಲ್ಲ ‘ಪ್ರೀತಿಯ ಹೆಸರು’ಗಳು (ಉಪನಾಮಗಳು, / nick names, /petnames) ಇರುವುದಕ್ಕೂ ಅದೇ ಕಾರಣ. ಮೊಮ್ಮಗನಿಗೆ, ಅಜ್ಜನ ನೆನಪಿಗೋಸ್ಕರ ಅಜ್ಜನ ಹೆಸರನ್ನೇ ಇಡುತ್ತಿದ್ದರು. ಪಾಪ, ಅಜ್ಜಿಗೆ ಮೊಮ್ಮಗನ ಹೆಸರು ಹೇಳಿ ಕರೆಯುವಂತಿಲ್ಲ ! ಅದಕ್ಕೆಂದೇ ಪುಟ್ಟು, ಬಾಳು ಅಂತ ಏನಾದರೂ ಪ್ರೀತಿಯ ಹೆಸರು.

ಹೀಗಿದ್ದರೂ, ಮದುವೆಯಲ್ಲಿ ಅಥವಾ ಇನ್ನಿತರ ಕೌಟುಂಬಿಕ ಸಮಾರಂಭಗಳಲ್ಲಿ ಹೆಂಡತಿಯಾದವಳಿಂದ ಅವಳ ಗಂಡನ ಹೆಸರನ್ನು ಹೇಳಿಸುವುದು ಒಂದು ವಿನೋದದ ಕಾರ್ಯಕ್ರಮವಾಗಿರುತ್ತಿತ್ತು. ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಈಗಲೂ ಚಾಲ್ತಿಯಲ್ಲಿರುವ ‘ಮದುವೆ ಒಗಟುಗಳು’ ಇದಕ್ಕೆ ಸಾಕ್ಷಿ. ಮದುವೆಯ ನಂತರ ಗಂಡನ ಮನೆ- ತುಂಬುವ ಹೊಸ ‘ಅತ್ತಿಗೆ’ಯನ್ನು ನಾದಿನಿಯರೆಲ್ಲ ಬಾಗಿಲಲ್ಲೇ ನಿಲ್ಲಿಸಿ, ಗಂಡನ ಹೆಸರನ್ನು ಹೇಳಿದರೆ ಮಾತ್ರ ದಾರಿ ಬಿಡುತ್ತೇವೆ ಎಂದು ಗೋಳು ಹೊಯ್ಯುತ್ತಾರೆ. ಹೆಂಡತಿಯನ್ನು ಒಳಸೇರಿಸಬೇಕಿದ್ದರೆ ನಮಗೆಲ್ಲ ಒಳ್ಳೇ ಬಕ್ಷೀಸು ಕೊಡಬೇಕು ಎಂದು ಅಕ್ಕ ತಂಗಿಯರು ಮದುಮಗನನ್ನೂ ಕಾಡಿಸುತ್ತಾರೆ ! ಈ ಸಂದರ್ಭ, ಮದುಮಗಳು ಕೊನೆಗೂ ಸೋತು ಪ್ರಾಸಬದ್ಧ ಚುಟುಕ / ಒಗಟಿನ ರೂಪದಲ್ಲಿ ಗಂಡನ ಹೆಸರನ್ನು ಹೇಳುತ್ತಾಳೆ. ಉದಾಹರಣೆಗೆ ಪತಿಯ ಹೆಸರು ವಾಸುದೇವ ಎಂದಿಟ್ಟುಕೊಳ್ಳಿ. ‘ಪುಣೆ- ಮುಂಬಯಿ ಮಧೆ ಆಹೆ ಖಂಡಾಲಾ ಘಾಟ್‌ ; ವಾಸುದೇವ ರಾಯಾಂಚೆ ನಾವ ಘೕತೆ ತ್ಸೋಡಾ ಮಲಾ ವಾಟ್‌...’ ಎನ್ನುವ ಒಗಟು. (ಪುಣೆ-ಮುಂಬಯಿ ನಡುವೆ ಇರುವುದು ಖಂಡಾಲಾ ಘಾಟಿ, ವಾಸುದೇವರಾಯರ ಹೆಸರು ಹೇಳುತ್ತಿದ್ದೇನೆ ಬಿಡಿ ನನಗೆ ದಾರಿ.. ಎಂದು ಅರ್ಥ. )ಮರಾಠಿಯಲ್ಲಿ ಇವನ್ನು ‘ ಉಖಾಣೆ’ಎನ್ನುತ್ತಾರೆ. ಕೆಲವರ ಬಳಿ ಉಖಾಣೆಗಳ ದೊಡ್ಡ ಸಂಗ್ರಹವೇ ಇದೆ. ಮದುಮಗಳಿಗೆ ತಮ್ಮ ‘ ಬತ್ತಳಿಕೆ’ಯಿಂದ ಉಖಾಣೆಯ ಒಂದು ಬಾಣ ತೆಗೆದುಕೊಟ್ಟು ಪರಿಸ್ಥಿತಿಯನ್ನು ನಿಭಾಯಿಸಲು ಅವರು ನೆರವಾಗುತ್ತಾರೆ. ಕೆಲವು ಮರಾಠಿ ವೆಬ್‌ಸೈಟ್‌ಗಳಲ್ಲೂ ಈ ಸಂಗ್ರಹಗಳು ಕಂಡು ಬಂದಿವೆ.

ನಮ್ಮ ಕನ್ನಡದಲ್ಲೂ ರಂಜನೀಯ ಒಗಟುಗಳು ಉಪಯೋಗದಲ್ಲಿವೆ. ಅವುಗಳ ಪ್ರಾಸ, ವಿಷಯ, ಪ್ರಸ್ತುತಿ ತುಂಬ ಸರಳವಾಗಿರುತ್ತವೆ. ಕೆಲವು ಸ್ಯಾಂಪಲ್‌ ನೋಡಿ. (ಎಲ್ಲ ಒಗಟುಗಳಲ್ಲಿ ಎಕ್ಸ್‌ವೈ ಎಂಬ ಕಲ್ಪಿತ ಹೆಸರನ್ನು ಬಳಸಿದ್ದೇನೆ. ಎಕ್ಸ್‌ವೈನ ಜಾಗದಲ್ಲಿ ಸರಿಯಾದ ಹೆಸರನ್ನು ಅಳವಡಿಸಿಕೊಳ್ಳುವುದು)

ಮದುವೆಯ ಊಟದ ವೇಳೆ ವರ ವಧುವಿಗೆ ಮತ್ತು ವಧು ವರನಿಗೆ ‘ತುತ್ತು’ ಕೊಡುವುದು (ಲಾಡು, ಜಿಲೇಬಿ ಅಥವಾ ಹೋಳಿಗೆಯ ಒಂದು ಸಣ್ಣ ತುಂಡು) ಮತ್ತು ಆಗ ಒಗಟು ಹೇಳಿಸುವುದು ಕ್ರಮ. ಆ ಸಂದರ್ಭಕ್ಕೆ :‘ಶಿಲ್ಪಕಲೆಗೆ ಹೆಸರಾದುದು ಹಳೆಬೀಡು, ಎಕ್ಸ್‌ವೈ ರಾಯರಿಗೆ ನೀಡುವೆ ನಾ ಬೂಂದಿ ಲಾಡು...’ ಎಂಬ ಒಗಟು. ಮದುವೆಯ ವಿವಿಧ ಸನ್ನಿವೇಶ/ಸಂದರ್ಭಗಳಿಗನುಗುಣವಾಗಿ ಇನ್ನೂ ಕೆಲವು:

‘ಕನ್ನಡಿಯಲ್ಲಿ ಪ್ರತಿಬಿಂಬ ಕಾಣುವುದು ಚಮತ್ಕಾರ. ಎಕ್ಸ್‌ವೈ ರಾಯರಿಗೆ ಮಾಡುವೆ ನಮಸ್ಕಾರ’.
‘ಮಂಗಳ ಸೂತ್ರವಿದು ಸೌಭಾಗ್ಯದ ಅಲಂಕಾರ, ಎಕ್ಸ್‌ವೈ ರಾಯರ ನೆರಳಾಗಿ ಹೂಡುತ್ತೇನೆ ಆದರ್ಶದ ಸಂಸಾರ’.
‘ಹಾಡಿನಲ್ಲಿ ಭಾವ, ಹೂವಿನಲ್ಲಿ ಗಂಧ, ಎಕ್ಸ್‌ವೈ ರಾಯರೊಂದಿಗೆ ಇಂದಿನಿಂದ ನನ್ನ ಬಾಳ ಬಂಧ’.
‘ಕೈಲಾಸ ಪರ್ವತದಲ್ಲಿ ಶಿವ ಪಾರ್ವತಿಯ ಜತೆ, ಕೈ ಹಿಡಿದ ಎಕ್ಸ್‌ವೈ ರಾಯರು ನನ್ನ ಬಾಳಿನ ಜತೆ’.


ಇದಿಷ್ಟು ಒಗಟುಗಳ ವಿಷಯವಾಯಿತು. ಇನ್ನು ದೈನಂದಿನ ಚಟುವಟಿಕೆಗಳಲ್ಲಿ ಹೆಂಡತಿ ಗಂಡನನ್ನು, ಗಂಡ ಹೆಂಡತಿಯನ್ನು ಹೇಗೆ ಕರೆಯುತ್ತಾನೆ /ಳೆ ಎಂಬುದೂ, ಪ್ರಾದೇಶಿಕ ರೀತಿ ರಿವಾಜುಗಳಿಂದ ಮತ್ತು ಆಧುನಿಕತೆಯ ಸಂಪರ್ಕ, ಸೌಲಭ್ಯಗಳ ಕಾರಣದಿಂದ ವಿಧವಿಧ ನಮೂನೆಗಳಲ್ಲಿರುತ್ತದೆ. ‘ರೀ...’ಎಂದು ಗಂಡನನ್ನು ಕರೆಯುವುದು ಮತ್ತು ‘ಲೇ’ ಎಂದು ಹೆಂಡತಿಯನ್ನು ಕರೆಯುವುದು ಕೆಲವು ಪ್ರದೇಶಗಳಲ್ಲಿ ವಾಡಿಕೆ. ಹಾಗಿದ್ದರೇನೇ ಆ ಸಂಸಾರದಲ್ಲಿ ಕಮ್ಯೂನಿಕೇಷನ್‌ ‘ರಿಲೇ’ ಸರಿಯಾಗಿದೆ ಎಂದೂ ಅದೊಂದು ಆರೋಗ್ಯಕರ ಸಂಕೇತ ! ಯಾವಾಗ ಜಗಳ ಹುಟ್ಟಿ ‘ಸಹಸ್ರ ನಾಮಾವಳಿ’ ಪ್ರಾರಂಭವಾಗುತ್ತದೋ, ಅಲ್ಲಿ ಬರುತ್ತದೆ ಸಮಸ್ಯೆ. ಸೂಕ್ಷ್ಮವಾಗಿ ನೀವು ಗಮನಿಸಿದರೆ ತುಂಬ ಹಳೆಯ ನಾಟಕಗಳಲ್ಲಿ, ಸಿನೆಮಾ ಸಂಭಾಷಣೆಯಲ್ಲಿ , ಚಿತ್ರಗೀತೆಗಳಲ್ಲೂ ಹೆಂಡತಿ ಗಂಡನಿಗೆ ಬಹುವಚನ ಉಪಯೋಗಿಸುತ್ತಿದ್ದಳು. ‘ದೂರದ ಬೆಟ್ಟ’ ಚಿತ್ರದ ‘ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ..’ ಗೀತೆಯಲ್ಲಿ, ‘ಈ ಜೀವ ನಿಮ್ಮದೇನೆ... ನಿಮ್ಮ ಪೂಜೆಗ್ಹೂವು ನಾನೆ...’ ಎಂಬ ಸಾಲು ಒಂದು ಉದಾಹರಣೆ. ಪಂಡರೀಬಾಯಿ, ಲೀಲಾವತಿಯರೆಲ್ಲ ಎಷ್ಟು ಸಿನೆಮಾಗಳಲ್ಲಿ ಎಷ್ಟು ಬಾರಿ, ‘ಏನೂಂದ್ರೇ...’ ಅಂತ ತಮ್ಮ ಪತಿಯನ್ನು ಕರೆದಿಲ್ಲ ! ಹಿಂದಿ ಚಿತ್ರಗೀತೆಗಳಲ್ಲೂ ಮೊದಲೆಲ್ಲ ‘ಆಪ್‌’ ಇರುತ್ತಿತ್ತು. ಈಗ ‘ತುಮ್‌’ ಆಗಿದೆ. ಈಗಿನ ಚಿತ್ರಗೀತೆಗಳಲ್ಲಿ ಹೆಸರೇ ಉಸಿರು ! (‘ಸ್ಪರ್ಶ’ ಚಿತ್ರದ ಗೀತೆ ನೆನಪಾಯ್ತೇ?)

ಇಂದಿನ ‘ನ್ಯೂಕ್ಲಿಯಸ್‌’ ಫ್ಯಾಮಿಲಿ ಸೆಟ್‌ಅಪ್‌ನಲ್ಲಿ ಗಂಡ ಹೆಂಡಿರಿಬ್ಬರೂ ಹೆಸರು ಹೇಳಿಯೇ ಮತ್ತು ಏಕವಚನದಲ್ಲಿಯೇ ಕರೆಯುವುದೂ ಕ್ರಮವಾಗಿಬಿಟ್ಟಿದೆ. ಬ್ರಿಟಿಷರ ಪದ್ಧತಿಯಂತೆ ನಮ್ಮ ದೇಶದಲ್ಲಿ ಆಫೀಸುಗಳೆಲ್ಲೆಲ್ಲ ಸರ್‌ನೇಮ್‌ ಉಪಯೋಗಿಸಿ, ಮಿಸ್ಟರ್‌ ಜೋಶಿ, ಮಿಸ್ಟರ್‌ ಗೌಡ, ಮಿಸ್ಟರ್‌ ಹೆಗ್ಡೆ ಅಂತ ಕರೆಯುವುದಕ್ಕೂ ಅಮೆರಿಕನ್‌ ಸಂಪ್ರದಾಯದಂತೆ ಹೆಸರನ್ನು ಹೇಳಿ (ಫರ್ಸ್ಟ್‌ ನೇಮ್‌) ಶ್ರೀವತ್ಸ, ಮಹೇಶ್‌, ಪ್ರಭಾಕರ್‌ ... ಈ ರೀತಿ ಕರೆಯುವುದಕ್ಕೂ ವ್ಯತ್ಯಾಸ ಇದೆ ನೋಡಿ ಹಾಗೆ.

ಹಾಗಾದರೆ, ಹೆಂಡತಿ ಗಂಡನನ್ನು ಹೆಸರು ಹೇಳಿ ಕರೆಯಬಹುದೇ ? ಕರೆಯಬಾರದೇ? ಕಂಪ್ಯೂಟರ್‌ ಪ್ರೋಗ್ರಾಮ್ಮಿಂಗ್‌ನ ಒಂದು ಕಾನ್ಸೆಪ್ಟ್‌ ನನಗಿಲ್ಲಿ ನೆನಪಾಗುತ್ತಿದೆ. ಕಾಲ್‌ ಬೈ ವ್ಯಾಲ್ಯೂ ಮತ್ತು ಕಾಲ್‌ ಬೈ ನೇಮ್‌ ಅಂತ ಒಂದು ಪ್ರೋಗ್ರಾಂ ಇನ್ನೊಂದು ಪ್ರೋಗ್ರಾಮನ್ನು ಕರೆಯುವ ಎರಡು ವಿಧಗಳಿವೆ. ಎರಡಕ್ಕೂ ತಮ್ಮದೇ ಆದ ಗುಣಾವಗುಣ(advantages and disadvantages) ಗಳಿವೆ. ಗಂಡ-ಹೆಂಡಿರ ಸಂಭಾಷಣೆಗೂ ಇದು ಅನ್ವಯವಾಗುತ್ತದೆಯೇ? ಮಹಾಭಾರತ ಮತ್ತಿತರ ಪೌರಾಣಿಕ ಸೀರಿಯಲ್‌ಗಳ ಸಂಭಾಷಣೆಯಂತೆ ‘ಆರ್ಯಪುತ್ರ’, ‘ನಾಥ’ ಎಂದು ಗಂಡನನ್ನು ಸಂಬೋಧಿಸಬೇಕೇ ? ಪಾಶ್ಚಾತ್ಯ ಹನೀ... ಡಾರ್ಲಿಂಗ್‌ ಗಳನ್ನು ಅಳವಡಿಸಿಕೊಳ್ಳಬೇಕೇ ? ಕಾಲಚಕ್ರದಲ್ಲಿ ರೂಪಾಂತರಗೊಂಡ ಶಿಷ್ಟಾಚಾರ- ಸಂಪ್ರದಾಯಗಳಲ್ಲಿ ಇದೂ ಒಂದು. ಅದೇ ಒಳಿತು, ಇದು ಕೆಡುಕು ಎನ್ನುವುದು ನನ್ನ ವಾದವಲ್ಲ. ಕರೆಲು ಬಳಸುವ ಶಬ್ದ ಮುಖ್ಯವಲ್ಲ. ಕರೆಯುವಾಗಿನ ಭಾವ-ಆತ್ಮೀಯತೆ ಮುಖ್ಯ. ಇದು ನನ್ನ ಅಭಿಪ್ರಾಯ. ನಿಮ್ಮದು ?

ಅದೆಲ್ಲ ಇರಲಿ. ನನ್ನ ಅರ್ಧಾಂಗಿನಿ, ನನ್ನ ಪ್ರೀತಿಯ ಸಹನಾ ನನ್ನನ್ನು ಹೇಗೆ ಕರೆಯುತ್ತಾಳೆ ? ಆಕೆ ಈ ವಿಷಯದಲ್ಲಿ ನಿಜವಾಗಿಯೂ ಅದೃಷ್ಟವಂತೆ. ಅವಳು ನನ್ನನ್ನು ಪ್ರೀತಿಯಿಂದ, ಗೌರವದಿಂದ, ಸ್ನೇಹದಿಂದ, ‘ ಶ್ರೀ’ ಎಂದು ಕರೆಯುವುದರಿಂದ ಗೌರವಕ್ಕೆ ಗೌರವವೂ ಆಯಿತು, ಹೆಸರು (short form) ಹೇಳಿ ಕರೆದ ಆತ್ಮೀಯತೆಯೂ ಬಂತು. ಜತೆಯಲ್ಲೇ ಲೋಕರೂಢಿಯಾಗಿರುವ ‘ ರೀ’ಗೆ ಸನ್ನಿಹಿತವಾದದ್ದೂ ಆಯಿತು !

ಸರಿ, ಈ ಲೇಖನಕ್ಕೆ ಸದ್ಯಕ್ಕೆ ಇತಿಶ್ರೀ.
ಇತಿ,
ಶ್ರೀ. !!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X