ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಬೀಸಿದ ನವ ವಸಂತ

By Staff
|
Google Oneindia Kannada News

*ಎಂ. ಆರ್‌. ದತ್ತಾತ್ರಿ

ವಸಂತ ಈಗಾಗಲೇ ಕ್ಯಾಲಿಫೋರ್ನಿಯಾವನ್ನು ಪ್ರವೇಶಿಸಿದ್ದಾನೆ. ಚಿಗುರನ್ನು ಹೊತ್ತ ಗಿಡ ಮರಗಳು, ಕೊರೆಯುವ ಚಳಿ ಕಳೆದು ಹಿತವಾಗಿ ಬೀಸುವ ತಂಗಾಳಿ ವಸಂತನ ಆಗಮನಕ್ಕೆ ಸಾಕ್ಷಿಯಾಗಿ ನಿಂತಿವೆ. ಹೈವೇ ಒಂದರಲ್ಲಿ ಪಯಣಿಸುವಾಗ ಸ್ಯಾನ್‌ ಫ್ರಾನ್ಸಿಸ್ಕೋ ನಗರದ ಸುತ್ತ ಮುತ್ತಲಿನ ರೆಡ್‌ವುಡ್‌ ಅರಣ್ಯ ಪ್ರದೇಶ ಬಣ್ಣ ಬಣ್ಣದ ಕಾಡು ಹೂಗಳಿಂದ ಅ ಲಂಕೃತಗೊಂಡು ಕಣ್ಮನಗಳಿಗೆ ತಂಪನ್ನು ನೀಡುತ್ತಿದೆ. ಪ್ರಕೃತಿಯ ವಸಂತ ಗೀತೆಯ ನಡುವೆಯೇ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡಿಗರು ಏಪ್ರಿಲ್‌ 29ರಂದು ಒಂದುಗೂಡಿದ್ದು ವಸಂತೋತ್ಸವಕ್ಕಾಗಿ. ಅವರೆಲ್ಲರನ್ನೂ ಒಂದೆಡೆ ಸೇರಿಸುವ ಹೊಣೆ ಹೊತ್ತದ್ದು ‘ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ’.

ಅಧ್ಯಕ್ಷ ಹಾಗೂ ಹೆಸರಾಂತ ಹಾಡುಗಾರ ರಾಮ್‌ಪ್ರಸಾದ್‌ರ ನೇತೃತ್ವದಲ್ಲಿನ ಉತ್ಸಾಹೀ ಕಾರ್ಯಕಾರೀ ತಂಡ ಹಿಂದಿನ ಕಾರ್ಯಕ್ರಮಗಳಲ್ಲೇ ಪಣ ತೊಟ್ಟಂತೆ ಸಮಯಕ್ಕೆ ಸರಿಯಾಗಿ ಶೇಷಪ್ರಸಾದರ ಪ್ರಾರ್ಥನೆಯಾಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಎಂದಿನಂತೆಯೇ ಹಾಡು, ನೃತ್ಯಗಳಿಗೆ ಮೊರೆಹೋಗದೆ ಈ ಬಾರಿಯ ವಸಂತೋತ್ಸವದ ವಿಶೇಷವೆಂದರೆ ಸಂತ ಸರ್ವೋತ್ತಮದಾಸರ ಹರಿಕತೆ ಮತ್ತು ಲಕ್ಷ್ಮೀ ಚಂದ್ರಶೇಖರ್‌ರ ಏಕಪಾತ್ರಾಭಿನಯ.

ಕರ್ನಾಟಕದ ಪ್ರಾಚೀನ ಕಲೆಯಾದ ಹರಿಕತೆಯನ್ನು ಜನಪ್ರಿಯಗೊಳಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವವರು ಹಾಗೂ ಹೆಸರಾಂತ ಭಧ್ರಗಿರಿ ಸಹೋದರರಲ್ಲಿ ಒಬ್ಬರಾದವರು ಸಂತ ಸರ್ವೋತ್ತಮ ದಾಸರು. ಇವರು ‘ಕರ್ನಾಟಕ ಕೀರ್ತನ ಕಲಾ ಪರಿಷತ್ತಿ’ನ ಅಧ್ಯಕ್ಷರೂ ಹೌದು. ಸುಮಾರು ಒಂದುವರೆ ಗಂಟೆಯಷ್ಟು ಕಾಲ ತಮ್ಮ ವಾಗ್‌ಲಹರಿಯಲ್ಲಿ ಹರಿಕತೆಯ ಮೂಲ ದ್ರವ್ಯವಾದ ಕೀರ್ತನೆಗಳ ಮೂಲಕ ಹಾಗೂ ‘ನಗೆಯ ಹಾಯಿ ದೋಣಿ’ಗಳಂತೆ ಆಗಾಗ ತೇಲಿ ಬರುತ್ತಿದ್ದ ಉಪಕತೆಗಳ ಮೂಲಕ ಪ್ರೇಕ್ಷಕರ ಮನರಂಜಿಸುವಂತೆಯೇ ಭಕ್ತಿ ಮತ್ತು ನೀತಿಯನ್ನೂ ಹರಿಯಬಿಟ್ಟರು. ಅಂದಿನ ಕಥಾ ಪ್ರಸಂಗ ‘ರುಕ್ಮಿಣೀ ಕಲ್ಯಾಣ’. ಶ್ರೀನಿವಾಸದಾಸರ ದ್ವಾಪರ ವೈಭವವನ್ನು ಸರ್ವೋತ್ತಮ ದಾಸರು ಹಾಡಿದ ವೈಖರಿಗೆ ಸಭೆ ವಿಸ್ಮಿತವಾಗಿ ಚಪ್ಪಾಳೆ ತಟ್ಟಿತು.

ಮುಂದಿನ ಕಾರ್ಯಕ್ರಮ ಲಕ್ಷ್ಮೀ ಚಂದ್ರಶೇಖರ್‌ರ ‘ಇವಳೊಬ್ಬಳು ಹೆಂಗಸು’ ಏಕಪಾತ್ರಾಭಿನಯ. ಕನ್ನಡ ಮತ್ತು ಇಂಗ್ಲಿಷ್‌ ರಂಗಭೂಮಿಗಳಲ್ಲಿ ಕೃಷಿ ಮಾಡಿರುವ ಲಕ್ಷ್ಮೀ ಚಂದ್ರಶೇಖರ್‌ ತಮ್ಮ ಅಭಿನಯದಿಂದ ಜನಪ್ರಿಯರಾದವರು. ಅದರಲ್ಲೂ ಮಾಯಾಮೃಗದ ಅವರ ಮನೋಜ್ಞ ಅಭಿನಯ ಕರ್ನಾಟಕದಲ್ಲಿ ಮನೆಮಾತಾಗಿದೆ.

ಪುರಾಣ ಕಾಲದದಿಂದ ಹಿಡಿದು ಆಧುನಿಕ ವೈಜ್ಞಾನಿಕ ಯುಗದವರೆಗೂ ಕಾಲನ ಪ್ರತಿ ಗತಿಯಲ್ಲೂ ಹೆಣ್ಣು ಅನುಭವಿಸುತ್ತಾ ಬಂದಿರುವ ದೌರ್ಜನ್ಯವೇ ಇವಳೊಬ್ಬಳು ಹೆಂಗಸಿನ ವಸ್ತು. ರಾಮಾಯಣದ ಸೀತೆ, ಮಹಾಭಾರತದ ದ್ರೌಪದಿ, ಗಾಂಧಾರಿ, ಜಾನಪದದ ‘ಕೆರೆಗೆಹಾರ’ವಾದ ಭಾಗೀರಥಿ , ಆಧುನಿಕ ಸಮಾಜದ ಪುರುಷ ದೌರ್ಜನ್ಯಕ್ಕೆ ಸಾಕ್ಷಿಯಾದ ರೂಪ್‌ ಕನ್ವರ್‌, ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಹೀಗೆ ಪ್ರತಿಯಾಂದು ನಿರೂಪಣೆಯಲ್ಲಿಯೂ ಸಮಾಜದ ವ್ಯಾಘ್ರತೆಗೆ ಕನ್ನಡಿ ಹಿಡಿದು ತೋರಿದವರು ಲಕ್ಷ್ಮಿಯವರು. ಅವರ ಸೃಜನ ಶೀಲತೆಗೆ ಸಾಕ್ಷಿಯಾಗಿ ನಿಂತದ್ದು ಬಳಸಿದ ಮುಖವಾಡಗಳು ಹಾಗೂ ಸರಳ ರಂಗಸಜ್ಜಿಕೆ.

ಪ್ರಾರಂಭದಲ್ಲಿ ಅಲಮೇಲು ಅಯ್ಯಂಗಾರ್‌ ಅವರು ಕಲಾವಿದರನ್ನು ಸ್ವಾಗತಿಸಿ, ಪರಿಚಯಿಸಿದರು. ಕೊನೆಯಲ್ಲಿ ನಾಗಲಕ್ಷ್ಮೀ ಹರಿಹರೇಶ್ವರರು ಕಲಾವಿದರಿಗೆ ವಂದನೆಗಳನ್ನು ಅರ್ಪಿಸಿದರು. ಕನ್ನಡ ಕೂಟದ ಅಧ್ಯಕ್ಷ ರಾಮ್‌ಪ್ರಸಾದರವರು ಇಬ್ಬರು ಕಲಾವಿದರನ್ನೂ ‘ವಸಂತೋತ್ಸವ ಪ್ರಶಸ್ತಿ’ ಗಳನ್ನಿತ್ತು ಗೌರವಿಸಿದರು. ‘ಕನ್ನಡ ಬಳಗ ’ದ ಪರವಾಗಿ ಹರಿಹರೇಶ್ವರರವರು ಕಲಾವಿದರನ್ನು ಸನ್ಮಾನಿಸಿದರು.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X