ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಯ’ ಎಷ್ಟು ಹಳತು?

By Staff
|
Google Oneindia Kannada News

ಸೋಜಿಗವೆಂದರೆ, ಕಾಲ- ಸೂಚಕವಾದ ‘ಸಮಯ’ ಎಂಬ ಪದ ವೇದಗಳಲ್ಲಿ ಬಂದಿಲ್ಲ ; ಉಪನಿಷತ್ತುಗಳಲ್ಲಿ ಕಂಡುಬರುವುದಿಲ್ಲ ; ಭಗವದ್ಗೀತೆಯಲ್ಲಿ ಕಾಣಿಸುವುದಿಲ್ಲ ; ಬಹಳ ಪ್ರಾಚೀನವೆಂದು ಬಲ್ಲವರು ಒಪ್ಪುವ, ಆಚಾರ್ಯ ಶ್ರೀ ಶಂಕರರ ಗೀತಾ ಭಾಷ್ಯದಲ್ಲೂ ಈ ‘ಸಮಯ’ ಪದ ಗೋಚರಿಸುವುದಿಲ್ಲ . ಆದರೆ ‘ಕಾಲ’ ಇದೆ.

ಹಾಗೆ ನೋಡಿದರೆ, ‘ಕಾಲ’ ಎಂಬ ಸಮಯ ಸೂಚಕ ಪದ ಸಹ ಮೊಟ್ಟ ಮೊದಲು ನಮಗೆ ಸಿಗುವುದು ಋಗ್ವೇದದ ಹತ್ತನೆಯ ಮಂಡಲದಲ್ಲಿ , 10.42.9ರಲ್ಲಿ . ‘ಉತ ಪ್ರಹಾಂ ಅತಿ ದೀವ್ಯಾಂ ಜಯಾತಿ, ಕೃತಂ ಯಚ್‌ ಶ್ವಘ್ನೀ ವಿಚಿನೋತಿ ಕಾಲೇ। ಯೋ ದೇವಕಾಮೋ ನ ಧನಾ ರುಣದ್‌ ಹಿ ಸಮಿತ್‌ ತಂ ರಾಯಾ ಸೃಜತಿ ಸ್ವಧಾವಾನ್‌।।’ - ಎಂಬಲ್ಲಿ . (ಎದುರಾದವನನ್ನು ಹೊರಗೋಡಿಸಿ, ಅವನು ಗೆಲ್ಲುತ್ತಾನೆ; ಆ (ಸಮರದ) ಕಾಲದಲ್ಲಿ ಒಬ್ಬ ಜೂಜುಗಾರ ಮಾಡುವಂತೆ, ತನ್ನ ಪ್ರತಿಸ್ಪರ್ಧಿಯನ್ನು ಆರಿಸಿಕೊಳ್ಳುತ್ತಾನೆ. ದೇವತೆಗಳನ್ನು ತೃಪ್ತಿಪಡಿಸಲಿಚ್ಛಿಸುವ ವ್ಯಕ್ತಿ ಹಣ ವಿನಿಯೋಗಿಸಲು ಹಿಂದೆಮುಂದೆ ನೋಡುವುದಿಲ್ಲ ; ಅಂಥವನಿಗೆ ಆ ಬಲಶಾಲಿ ಇಂದ್ರ ಸಂಪತ್ತನ್ನು ಅನುಗ್ರಹಿಸುತ್ತಾನೆ- ಎಂಬುದು ಋಷಿ ಕೃಷ್ಣ ಅಂಗೀರಸರ ಭಾವ.)

ಇದು, ಈ ‘ ಕಾಲ’ ಬರುವುದೂ ಅಲ್ಲಿ ಒಂದೇ ಸಲ. ನಂತರ ಅಥರ್ವ ವೇದದಲ್ಲಿ ‘ವೇಳೆ’ ಎಂಬರ್ಥದಲ್ಲೇ ಮತ್ತೆ ‘ಕಾಲ’ ಪ್ರತ್ಯಕ್ಷವಾಗುತ್ತದೆ. (19.53ರ 1-10 ಮತ್ತು 19.54 ರ 1-5 ರಲ್ಲಿ .) ‘ಒಂದು ಕುದುರೆಯಂತೆ ‘ಕಾಲ’; ಅದಕ್ಕೆ ಏಳು ಲಗಾಮುಗಳು; ಸಹಸ್ರಾರು ಕಣ್ಣುಗಳು; ಮುಪ್ಪಿಲ್ಲ (ಮುಗಿವಿಲ್ಲ ); ಸಮೃದ್ಧ ಬಲಶಾಲಿ ಇದು; ಇಡೀ ವಿಶ್ವವೇ ಇದರ ಗಾಲಿಗಳು; (ರಥವನ್ನು ಏರಿದಂತೆ)ಬಲ್ಲವರು, ‘ಕವಿಗಳು’ ಈ ಕಾಲವನ್ನು ಹತ್ತುತ್ತಾರೆ! ... ... ಕಾಲದಲ್ಲಿ ಮನವಿದೆ, ಕಾಲದಲ್ಲಿ ಪ್ರಾಣವಿದೆ, ಕಾಲದಲ್ಲಿಯೇ ಗುರುತಿಸುವ ಹೆಸರೂ ಒಳಗೊಂಡಿದೆ. ಎಲ್ಲರೂ ನಲಿಯುವುದು ಕಾಲ ಬಂದಾಗಲೇ!’- ಇಂಥ ಮಾತುಗಳಿಂದ, ‘ಕಾಲ’ವನ್ನು ವೇಳೆಯ ರೂಪದಲ್ಲೂ , ಪರಮ ಶಕ್ತಿಯಾಂದರ ಸಂಕೇತವಾಗಿಯೂ ವೈದಿಕ ಸಾಹಿತ್ಯ ಬಳಸಿತ್ತು .

ಇವೆರಡರ ನಡುವೆ, ಋಗ್ವೇದೀಯ ಶತಪಥ ಬ್ರಾಹ್ಮಣದಲ್ಲಿ ಹಲವೆಡೆ (ಉದಾಹರಣೆಗೆ, 1.7.3.3, 2.4.2.4, 3.8.3.36 ಇತ್ಯಾದಿ) ‘ಸಮಯ’ ಬಂದು, ಇದಕ್ಕೆ ಹಿಂದೆ ಬಳಕೆಯಲ್ಲಿದ್ದ ಋತುವನ್ನು ಹಿಮ್ಮೆಟ್ಟಿಸುತ್ತದೆ. ಹಿಂದೆ, ಇಂದು, ನಾಳೆಗಳ ನಿರ್ದಿಷ್ಟ ಸೂಚನೆಗೆ, ‘ಭೂತ’, ‘ಭವತ್‌’ ಮತ್ತು ‘ಭವಿಷ್ಯತ್‌’ ರೂಪಗಳನ್ನು ಕಾಣಲು ನಾವು ಶಾಂಖ್ಯಾಯನ ಅರಣ್ಯಕ(7.20) ಗಳ ಕಾಲದವರೆಗೆ ಕಾಯಬೇಕು.

ಛಾಂದೋಗ್ಯ ಉಪನಿಷತ್ತಿನಲ್ಲಿ , ಬೃಹದಾರಣ್ಯಕದಲ್ಲಿ , ಮೈತ್ರಿ, ಶ್ವೇತಾಶ್ವತರ, ತೈತ್ತಿರೀಯ, ಮಹಾನಾರಾಯಣ ಮುಂತಾದ ಉಪನಿಷತ್ತುಗಳಲ್ಲಿ ಕಾಲದ ಪ್ರಸ್ತಾಪ ಬರುತ್ತದೆ. ‘ಕಾಲ’ದ ವಿಚಾರ ಏನೂ ಇಲ್ಲದ ‘ಕಾಲಗ್ನಿರುದ್ರ ಉಪನಿಷತ್‌’ ಎಂಬ ಹೆಸರಿನ ಒಂದು ಶೈವ ಉಪನಿಷತ್ತೂ ಸಹ ಇದೆ.

‘ಕಾಲ’ದ ಸಂವಾದಿಯಾಗಿ, ವೇದ ವಾಂಗ್ಮಯದಲ್ಲಿ ಬರುವ ಪದಗಳನ್ನು ಹೀಗೆ ಪಟ್ಟಿ ಮಾಡಬಹುದು. ಅಷ್ಟಕ (ಹುಣ್ಣಿಮೆಯ ಬಳಿಕ ಬರುವ ಎಂಟನೆಯ ದಿನ), ಅಹನ್‌ (ದಿನ), ಆರ್ತವ (ಋತುಗಳು, ವರ್ಷದ ಭಾಗಗಳು), ಋತು, ಏಕಾಷ್ಟಕ (ಮಾಘ ಮಾಸ, ಕೃಷ್ಣ ಪಕ್ಷ, ಅಷ್ಟಮಿ), ದೋಷ (ಸಂಜೆ), ನಕ್ತ (ರಾತ್ರೆ), ನಿದಾಘ (ಬೇಸಗೆ), ನಿಮೃಚ್‌ (ಸೂರ್ಯಾಸ್ತ), ಪಕ್ಷ (ಅರ್ಧ ತಿಂಗಳು/ಹದಿನೈದು ದಿನಗಳು), ಪರಿವತ್ಸರ (ಒಂದು ಪೂರ್ಣ ವರುಷ), ಪರುಸ್‌/ ಪರ್ವನ್‌ (ಕಾಲದ ಭಾಗ), ಪಾಪಸಮ(ಕೆಟ್ಟ ಋತು), ಪೂರ್ಣಮಾಸ (ಹುಣ್ಣಿಮೆ), ಪೂರ್ವಪಕ್ಷ (ಮಾಸದ ಮೊದಲ ಅರ್ಧ ಭಾಗ), ಪೂರ್ವಾಹ್ನ (ದಿನದ ಮೊದಲ ಅರ್ಧ ಭಾಗ), ಪೂರ್ಣಮಾಸಿ (ಹುಣ್ಣಿಮೆಯ ರಾತ್ರಿ), ಪ್ರಪಿತ್ವಾ (ದಿನದ ಕೊನೆ), ಪ್ರಬುಧ್‌ (ಸೂರ್ಯೋದಯ), ಪ್ರಾತರ್‌(ಬೆಳಗ್ಗೆ), ಪ್ರಾವೃಷ್‌ (ಮಳೆಗಾಲ), ಮಧ್ಯಾಂದಿನ (ದಿನದ ನಡು ಭಾಗ), ಮಧ್ಯಾವರ್ಷ (ಮಳೆಗಾಲದ ನಡುವಿನ ಕಾಲ), ಮಹಾರಾತ್ರ (ಕೆಲವು ಗಂಟೆಗಳು ಕಳೆದ ಮೇಲಿನ ರಾತ್ರಿಯ ವೇಳೆ), ಮಹಾಹ್ನ (ದಿನದ ನಡು ಭಾಗದ ನಂತರದ ವೇಳೆ, ಅಪರಾಹ್ನ), ಮಾಸ (ತಿಂಗಳು), ಯವ್ಯ (ತಿಂಗಳು), ಯುಗ, ರಾತ್ರಿ, ವರ್ಷ (ಮಳೆಗಾಲ), ವಸ್ತು (ಮುಂಜಾನೆ), ಶತಶಾರದ (ನೂರು ಶರದ್‌ ಋತುಗಳು), ಸಂವತ್ಸರ (ವರೌಷ), ಸಂಗವ (ಪರಾಹ್ನ), ಸಂಧಿ (ಅರುಣೋದಯ ಮತ್ತು ಮುಚ್ಚಂಜೆ), ಸಮಾ (ಬೇಸಗೆ), ಸಾಯ (ಸಂಜೆ), ಸಿನೀವಾಲಿ (ಅಮಾವಾಸ್ಯೆ), ಸ್ವಸರ (ಬೆಳಗ್ಗೆ ), ಹಾಯನ (ವರುಷ), ಹಿಮ (ಶೀತ ವಾತಾವರಣ), ಹಿಮಾ (ಚಳಿಗಾಲ), ಹೇಮನ್‌/ ಹೇಮನ್ತ (ಹೇಮಂತ ಋತು), ಹ್ಯಸ್‌ (ನೆನ್ನೆ )- ಇತ್ಯಾದಿ. ಇವೆಲ್ಲಾ ಒಂದು ಕಾಲದಲ್ಲಿ ಸಂಸ್ಕೃತದಲ್ಲಿ ಬಳಕೆಯಲ್ಲಿದ್ದ ಪದಗಳು. ಒಂದು ಭಾಷೆಯನ್ನಾಡುವ ಜನರು ತಮ್ಮ ಅವಶ್ಯಕತೆಗನುಗುಣವಾಗಿ ಆ ಭಾಷೆಯಲ್ಲಿ ಹೊಸ ಹೊಸ ಪದಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಅಲ್ಲಿ ಅದಕ್ಕೊಂದು ಪದ ಇಲ್ಲವೆಂದರೆ, ಅವರಿಗೆ ಅದು ಬೇಕಾಗಿರಲಿಲ್ಲ - ಎಂಬ ಭಾಷಾಶಾಸ್ತ್ರದ ಮೂಲ ನಿಯಮದ ಹಿನ್ನೆಲೆಯಲ್ಲಿ ‘ಸಮಯ’ಕ್ಕೆ ಸಂಬಂಧಿಸಿದ ಈ ಮೇಲಿನ ಪದಗಳನ್ನು ಗಮನಿಸಬೇಕು.

ಪಾಣಿನಿ ತನ್ನ ಸೂತ್ರದಲ್ಲಿ ‘ಕಾಲ’ದ ಬಗ್ಗೆ ‘ಸಮಯ’ದ ಅರ್ಥದಲ್ಲಿ ಬಹಳೆಡೆ ಬಳಸುತ್ತಾನೆ. ಪತಂಜಲಿ ತನ್ನ ಭಾಷ್ಯದಲ್ಲಿ ಪಾಣಿನಿಯ ‘ಕಾಲ ಸಮಯ ವೇಳಾಸು ತುಮುನ್‌’- ಎಂಬಲ್ಲಿ (3.3.167), ಕಾಲದ ಬಗ್ಗೆ ‘ಕಾಲ ಮಲಗಿದ್ದವನಲ್ಲೂ ಎಚ್ಚೆತ್ತಿರುತ್ತದೆ, ಕಾಲವನ್ನು ಗೆಲ್ಲಲಾಗದು’(ಕಾಲೋ ಜಾಗರ್ತಿ ಸುಪ್ತೇಷು, ಕಾಲೋ ಹಿ ದುರತಿಕ್ರಮ :।) ಎಂಬ ಮಹಾಭಾರತದ (ಆದಿಪರ್ವ 1. 248; ಸ್ತ್ರೀಪರ್ವ 2.24; ಶಾಂತಿಪರ್ವ 221.41) ಮಾತುಗಳನ್ನು ಉದ್ಧರಿಸುತ್ತಾನೆ. ಜೊತೆಗೆ, ಕಾಲದ ಬಗ್ಗೆ ಇನ್ನೊಂದು ಮುಖ್ಯ ಸಿದ್ಧಾಂತವನ್ನೂ ಪತಂಜಲಿ ಇಲ್ಲಿ (ಪಾಣಿನಿ 2.2.5 ರ ವಾರ್ತಿಕ 2) ಮಂಡಿಸುತ್ತಾನೆ: ‘ಕಾಲಕ್ಕೂ ಬೆಳವಣಿಗೆಗೂ ಸಂಬಂಧವಿದೆ. ಈ ಚಟುವಟಿಕೆಗೆ ಮುಖ್ಯ ಕಾರಣ ಸೂರ್ಯನ ನಿರಂತರ ಚಲನೆ’.

ಅಂದರೇನು?
ಕಾಲ ಎನ್ನುವುದು ಬೇರೇನೂ ಅಲ್ಲ ; ನಮ್ಮ ಕಣ್ಣಿಗೆ ಗೋಚರಿಸುವ ಎಡೆಬಿಡದ ನಡೆಯುವ ಬದಲಾವಣೆಯನ್ನು ಗುರುತಿಸಲು, ಅಳೆಯಲು ಸಹಾಯಕವಾಗಿರುವ ಒಂದು ಅನುಕೂಲಕರ ಮಾನದಂಡ. ದಿಕ್ಕು (ಆಕಾಶ, ಸ್ಪೇಸ್‌) ಮತ್ತು ಕಾಲ (ಟೈಮ್‌) - ಮಾನವ ಜನಾಂಗದ ಎಲ್ಲಾ ಸಂಸ್ಕೃತಿಗಳಲ್ಲೂ ಬಹಳ ಹಿಂದಿನ ಕಾಲದಿಂದಲೂ ತುಂಬಾ ಚರ್ಚೆಗೊಳಗಾದ ವಿಷಯ.

ನಮ್ಮ ಪುರಾಣಗಳಲ್ಲಿ (ಉದಾಹರಣೆಗೆ, ಕೂರ್ಮ ಪುರಾಣ 1.5, ವಿಷ್ಣು ಪುರಾಣ 1.2.25, ವಾಯು 32.29-30, ವಿಷ್ಣು ಧರ್ಮೋತ್ತರ 1.72.1-7 ಇತ್ಯಾದಿ) ಕಾಲದ ಚರ್ಚೆ ನಡೆದಿದೆ. ತನ್ನ ಇಪ್ಪತ್ತೆೈದು ತತ್ತ್ವಗಳಲ್ಲಿ ಕಾಲವನ್ನು ಒಂದೆದು ಪರಿಗಣಿಸಿದ್ದರೂ, ‘ಸಾಂಖ್ಯ’ ದರ್ಶನ ‘ಕಾಲ’ವನ್ನು ಮರೆತಿಲ್ಲ. ಕಾಲವನ್ನು ತನ್ನ ಒಂಭತ್ತು ‘ದ್ರವ್ಯ’ಗಳಲ್ಲಿ ಒಂದನ್ನಾಗಿ ‘ವೈಶೇಷಿಕ’ ದರ್ಶನ ಪರಿಗಣಿಸಿದೆ.

ಶ್ರೀವಿಜಯನ ‘ಕವಿರಾಜಮಾರ್ಗ’ದಲ್ಲಿ ‘ಸಮಯ’ ಮತ್ತು ‘ಸಮಯವಿರುದ್ಧ’ದ ಹೇಳಿಕೆಯಿದೆ. ಸಾಂಖ್ಯ ದಶಂನಕಾರರಾದ ಕಪಿಲ, ಸುಗತರೆನಿಸಿದ ಗೌತಮ ಬುದ, ವೈಶೇಷಿಕ ಸಿದ್ಧಾಂತದ ಕಣಾದ, ನಾಸ್ತಿಕಮತದ ಚಾರ್ವಾಕನ ಅನುಯಾಯಿ ಲೋಕಾಯುತ- ಇವರುಗಳ ಮಾರ್ಗಭೇದಗಳು ’ಸಮಯ’ಗಳು ; ಅವುಗಳ ತಪ್ಪು ತಿಳಿವಳಿಕೆಯೇ ‘ಸಮಯವಿರುದ್ಧ’; ಈ ದೋಷ ಕಾವ್ಯದಲ್ಲಿ ಸಲ್ಲ - ಎನ್ನುತ್ತದೆ ನೃಪತುಂಗಾನುಮಪ್ಪ ಕವಿರಾಜಮಾರ್ಗಂ.

ವಿಷ್ಣು ಸಹಸ್ರನಾಮದಲ್ಲಿ ಭಗವಂತನನ್ನು ‘ಸಮಯ-ಜ್ಞ’ (358) ಎಂದು ಕರೆದೆವು. ನಮ್ಮ ಸರ್ವಜ್ಞ ‘ಹುಟ್ಟು, ಇರುವು, ಅಳಿವು- ಇವುಗಳ ಸಮಯವನ್ನ ಬಲ್ಲವನು’, ಎಂದು ಒಂದು ವ್ಯಾಖ್ಯೆಯಾದರೆ, ‘ಆರೂ ಬಗೆಯ ‘ಸಮಯ’ಗಳನ್ನು ಬಲ್ಲವನು’, ಎನ್ನುತ್ತದೆ ಶ್ರೀ ಶಾಂಕರ ಭಾಷ್ಯ. ‘ಅಗ್ನಿಯೇ ಮೊದಲಾದವರ ‘ಸಮಯ’ ಅಂದರೆ, ಅಧಿಕಾರವನ್ನು ಬಲ್ಲವನು’ ಎನ್ನುತ್ತಾರೆ ಶ್ರೀ ಪರಾಶರರು. ‘ಭಕ್ತರಿಗೆ ಅಭೀಷ್ಟವನ್ನು ಅನುಗ್ರಹಿಸಲು ತಕ್ಕ ಕಾಲವನ್ನು ಬಲ್ಲವನು’ ಎನ್ನುತ್ತಾರೆ ಸತ್ಯಸಂಧರು.

ಗಣಿತ ಮತ್ತು ಖಗೋಳಶಾಸ್ತ್ರೀಯ ಗ್ರಂಥಗಳಂತೂ ಈ ‘ಕಾಲ’, ಅದರ ಗಣನೆಯ ಬಗ್ಗೆ ವಿಪುಲ ಅದ್ಯಯನ ಸಾಮಗ್ರಿ ಒದಗಿಸಿದೆ (ಇದು ಇನ್ನೊಂದು ಲೇಖನಕ್ಕೆ ಹೊಟ್ಟೆತುಂಬಾ ಆಹಾರ; ಇಲ್ಲಿ ಬೇಡ).


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X