ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿ.ಡಿ.ಟಿ. ಡೇಸ್‌- ಸ್ವಾಮಿ ಮತ್ತು ಸ್ನೇಹಿತರು !

By Staff
|
Google Oneindia Kannada News

*ಶ್ರೀವತ್ಸ ಜೋಶಿ

Srivatsa JoshiJanardhana Swamyಹೌದು ಸ್ವಾಮಿ ಓದುಗ ಮಹಾಶಯರೇ, ‘ಮಾಲ್ಗುಡಿ ಡೇಸ್‌- ಸ್ವಾಮಿ ಅಂಡ್‌ ಫ್ರೆಂಡ್ಸ್‌ ..’ ನೆನಪಾಯಿತೆ? ಆರ್‌.ಕೆ.ನಾರಾಯಣ್‌ರಂತಹ ಮಹಾನ್‌ ಲೇಖಕರ ಕೃತಿಯನ್ನೇ ಕೃತಿಚೌರ್ಯ ಮಾಡಿದೆನೆಂದು ನನ್ನ ಮೇಲೆ ಆರೋಪ ಹೊರಿಸಬೇಡಿ. ನಮ್ಮಂಥ ಬರವಣಿಗೆಕಾರರಿಗೆ ಆರ್‌.ಕೆ.ಒಬ್ಬ ‘ಗೈಡ್‌’(!). ಸರಿ. ವಿಷಯಕ್ಕೆ ಬರೋಣ. ಈ ಲೇಖನದಲ್ಲಿ ನಾನು ನಿಮಗೆ ಪರಿಚಯಿಸಲಿರುವುದು ನನ್ನ ಸ್ನೇಹಿತ ಜನಾರ್ಧನ ಸ್ವಾಮಿ ಎಂಬ ಕಲಾವಿದನನ್ನ ಮತ್ತು ಅವನ ವಿವಿಧ ಕೃತಿಗಳನ್ನ - ಪ್ರಮುಖವಾಗಿ, ನಮ್ಮ ದಾವಣಗೆರೆ ಬಿ.ಡಿ.ಟಿ. ಇಂಜನಿಯರಿಂಗ್‌ ಕಾಲೇಜಿನ ಹಳೆ ವಿದ್ಯಾರ್ಥಿ ಒಕ್ಕೂಟದ ಅಂತರ್ಜಾಲ ತಾಣವನ್ನ .

ಶಾಲಾ- ಕಾಲೇಜುಗಳಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳ ತಯಾರಿಯಾಂದಿಗೆ parallel ಆಗಿ ನಡೆಯುವ ಚಟುವಟಿಕೆ ಎಂದರೆ ಕ್ಲಾಸ್‌ಮೇಟ್ಸ್‌, ಕಾಲೇಜ್‌ಮೇಟ್ಸ್‌, ಹಾಸ್ಟೆಲ್‌ಮೇಟ್ಸ್‌- ಎಲ್ಲರಿಂದ ‘ಆಟೋಗ್ರಾಫ್‌’ ಸಂಗ್ರಹಿಸಿಟ್ಟುಕೊಳ್ಳುವುದು. (ಈ ಆಟೋಗ್ರಾಫ್‌ ಸಂಗ್ರಹದ ಬಗ್ಗೆಯೇ ಒಂದು ದೊಡ್ಡ ಪ್ರಬಂಧ ಬರೆಯಬಹುದು ಬಿಡಿ!) Best Wishes for bright future.. ನಂಥ ಚಿಕ್ಕ- ಚೊಕ್ಕ ಸಂದೇಶಗಳಿಂದ ಹಿಡಿದು, ಘನ ಕಾವ್ಯಗಳ, ಉದ್ದುದ್ದ quote ಗಳೂ, ಮನ ಬಿಚ್ಚಿ ಮೂಡಿಬರುವ ಈ ಆಟೋಗ್ರಾಫ್‌ ಪುಸ್ತಕಗಳಲ್ಲಿ ಕಾಣಸಿಗುತ್ತವೆ. ನಿಮ್ಮಲ್ಲೂ ಎಸ್ಸೆಲ್ಸಿ , ಪಿಯೂಸಿ, ಪದವಿ ಕಾಲೇಜು ಹೀಗೆ ಪ್ರತ್ಯೇಕ ಆಟೋಗ್ರಾಫ್‌ ಸಂಗ್ರಹ ಇರಬಹುದೆಂದುಕೊಂಡಿದ್ದೇನೆ. ಇರಲಿ, ನಾನು ದಾವಣಗೆರೆಯ ಬಿ.ಡಿ.ಟಿ. ಇಂಜನಿಯರಿಂಗ್‌ ಕಾಲೇಜಲ್ಲಿ 1990 ರಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾಗ, ನನಗಿಂತ ಒಂದು ವರ್ಷ ಜ್ಯೂನಿಯರ್‌ ಆಗಿದ್ದ ಜನಾರ್ಧನ ಸ್ವಾಮಿಯ ಆಟೋಗ್ರಾಫ್‌ ಪುಸ್ತಕದಲ್ಲಿ ಒಂದು ಶುಭ ಹಾರೈಕೆಯನ್ನು ಅಚ್ಚ ಕನ್ನಡದಲ್ಲಿ ಬರೆದಿದ್ದೆ . (ನಾನಾದರೋ ಮರಾಠಿ ದೇಹದಲ್ಲಿ ಕನ್ನಡ ಉಸಿರಾಡುವವನು, ಈ ಸ್ವಾಮಿಯಾದರೋ ತೆಲುಗು ಕಾಯದಲ್ಲಿ ಕನ್ನಡ ಉಸಿರಾಡುವವನು! ಪ್ರಸ್ತುತ ಲೇಖನಕ್ಕೆ ಆ ಸಂಗತಿ ಗೌಣ. just F.Y.I. ಅಷ್ಟೇ.) ಚಿತ್ರದಲ್ಲಿ ಆ ಆಟೋಗ್ರಾಫ್‌ ಪುಸ್ತಕದ scanned image ಇದೆ, ನೋಡಿ; ಓದಿ.
ಆಗಲೇ ಎಂದಂತೆ ಸ್ವಾಮಿ ನನಗಿಂತ ಒಂದು ವರ್ಷ ಜ್ಯೂನಿಯರ್‌. ನನ್ನದು ಕಂಪ್ಯೂಟರ್‌ ಸೈನ್ಸ್‌ ಬ್ರ್ಯಾಂಚ್‌, ಅವನದ್ದು ಇನ್ಸ್ಟ್ರುಮೆಂಟೇಷನ್‌ ಟೆಕ್ನಾಲಜಿ. ಆದರೂ ಅವನ ನನ್ನ ದೋಸ್ತಿ ಸೌಹಾರ್ದಯುತವೇ ಆಗಿತ್ತು . ಕಾರಣವೆಂದರೆ ಸ್ವಾಮಿ ಒಬ್ಬ ವ್ಯಂಗ್ಯ ಚಿತ್ರಕಾರನಾಗಿದ್ದ . ಆ ಕಾಲದಲ್ಲೇ ಅವು ರಚಿಸಿದ ವ್ಯಂಗ್ಯ ಚಿತ್ರಗಳು ದಾವಣಗೆರೆಯ ಜನತಾವಾಣಿ, ನಗರವಾಣಿ ಪತ್ರಿಕೆಗಳಲ್ಲಿ , ಸುಧಾ, ತರಂಗ ಇತ್ಯಾದಿ ಕನ್ನಡ ನಿಯತಕಾಲಿಕಗಳಲ್ಲಿ , ಹಾಗೂ Elections For You ಎಂಬ ಪ್ರೊಫೆಷನಲ್‌ ಪತ್ರಿಕೆಯಲ್ಲಿ ನಿಯಮಿತವಾಗಿ ಪ್ರಕಟವಾಗುತ್ತಿದ್ದವು. ಕೆಲವು ಸ್ಯಾಂಪಲ್‌ ಇಲ್ಲಿವೆ. ಕಾರ್ಟೂನಿಂಗ್‌ ಜೊತೆಯಲ್ಲೇ ಪಠ್ಯ ಚಟುವಟಿಕೆಗಳಲ್ಲೂ ಸ್ವಾಮಿ ಪ್ರಯೋಗಶೀಲ ವ್ಯಕ್ತಿಯಾಗಿದ್ದ. ಹಾಸ್ಟೆಲಲ್ಲಿ ಅವನೇ ಒಂದು ಸೀಮಿತ ವ್ಯಾಪ್ತಿಯ ಮೀಡಿಯಂ ವೇವ್‌ ರೇಡಿಯೋ ಸ್ಟೇಷನ್‌ ನಡೆಸುತ್ತಿದ್ದ! ಅದರ ಡಿಸೈನ್‌, ಡೆಕೋರೇಷನ್‌, ಡಾಟಾ- ಎಲ್ಲವೂ ಅವನದೇ. ಕನ್ನಡ, ಹಿಂದಿ, ತೆಲುಗು ಚಿತ್ರಗೀತೆ ಅದರಲ್ಲಿ ಪ್ರಸಾರ. ಇಂತಹ ಪ್ರತಿಭಾವಂತ ಸ್ನೇಹಿತನಿಗೆ, ಮನಸಾರೆ ಹರಸುತ್ತ ಶುಭ ಹಾರೈಸುತ್ತ ನಾನು ಆ ಆಟೋಗ್ರಾಫ್‌ ಬರೆದಿದ್ದೆ ; ನನ್ನ ಬಿ.ಇ. ವಿದ್ಯಾಭ್ಯಾಸ ಮುಗಿಸಿ ಅವನಿಂದ A cartoon by Janardhana Swamy ಬೀಳ್ಕೊಂಡಿದ್ದೆ.

ವಿದ್ಯಾರ್ಥಿ ಜೀವನದ ನಂತರ ವೃತ್ತಿ ಜೀವನದಲ್ಲಿ ಸ್ವಾಮಿಯನ್ನು ಒಂದೆರಡು ಸಲ ನಾನು ಹೈದರಾಬಾದ್‌ನಲ್ಲಿ , ಬೆಂಗಳೂರಲ್ಲಿ ಯಾವುದೋ ಸಂದರ್ಭಗಳಲ್ಲಿ ಭೇಟಿಯಾಗಿದ್ದೆ . ತೊಂಬ್ತತರ ದಶಕದ ಆದಿಯಲ್ಲಿ ಈಗಿನಂತೆ ಇ-ಮೇಲ್‌, ಚಾಟಿಂಗ್‌ ಎಲ್ಲಿತ್ತು ? ಹಾಗಾಗಿ ನಮ್ಮ ಸಂಪರ್ಕ ಸೀಮಿತವಾಗಿತ್ತು . ನನ್ನ ಮದುವೆಯಾಯಿತು. ಸ್ವಾಮಿ ನನಗಿಂತ ಮೊದಲೇ ಸಂಸಾರಸ್ಥನಾದ.

ಕಳೆದ ವರ್ಷ ಹೀಗೇ ಒಂದು ದಿನ ಅಂತರ್ಜಾಲ- ಮಥನದಲ್ಲಿ ನಾನು ನಿರತನಾಗಿದ್ದಾಗ, ನಮ್ಮ ದಾವಣಗೆರೆಯ ಬಿ.ಡಿ.ಟಿ. ಇಂಜನಿಯರಿಂಗ್‌ ಕಾಲೇಜಿನ ಒಂದು ತಾಣ ಗೋಚರಿಸಿತು. ಯಾರು ಅದರ ‘ಜಾಲಾಧಿಪತಿ’ (web master) ಎಂದು ನೋಡಿದರೆ ನನ್ನ ಕಾಲೇಜು ಸ್ನೇಹಿತ ಜನಾರ್ಧನ ಸ್ವಾಮಿ! ಅಚ್ಚುಕಟ್ಟಾದ ವೆಬ್‌ಸೈಟ್‌. ಸಿಂಪಲ್‌ ಡಿಸೈನ್‌. ಮನ-ಧನ, ಹಾಗೂ ಆತನ ವಿರಾಮವಿಲ್ಲದ ದಿನಗಳಲ್ಲೂ ಅನೇಕ ದಿನಗಳ ಕಾಲವನ್ನೂ ಈ ವೆಬ್‌ಸೈಟ್‌ಗಾಗಿ ವ್ಯಯ ಮಾಡಿರುವ ಸ್ವಾಮಿ, ತನ್ನ ಈ ಶ್ರಮ ಅನೇಕರಿಗೆ ಉಪಯೋಗವಾಗುತ್ತಿರುವ ಬಗ್ಗೆ ಸಂತೋಷ ಪಡುತ್ತಾನೆ. ಮುಖ್ಯವಾಗಿ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಪರ್ಕ ಸೇತುವಾಗಿ ರೂಪುಗೊಂಡಿರುವ ಈ ವೆಬ್‌ಸೈಟ್‌ನಲ್ಲಿ ನೋಂದಾಯಿಸಿರುವವರ ಸಂಖ್ಯೆ ಈಗಾಗಲೇ ಸಾವಿರ ದಾಟಿದೆ. ಎಷ್ಟೆಂದರೂ ದಾವಣಗೆರೆಯ ಬಿ.ಡಿ.ಟಿ. ಕಾಲೇಜು ಕರ್ನಾಟಕದ ಅತ್ಯುತ್ತಮ (ಎಲ್ಲ ಪರಿಮಿತಿಗಳಲ್ಲೂ ಪರಿಗಣಿಸಿ) ಇಂಜನಿಯರಿಂಗ್‌ ಕಾಲೇಜುಗಳಲ್ಲೊಂದು! ರಾಜ್ಯಕ್ಕೆ, ದೇಶಕ್ಕೆ, ಜಗತ್ತಿಗೆ ಅತ್ಯುತ್ತಮ ಇಂಜನಿಯರ್‌ಗಳನ್ನು ಒದಗಿಸಿದ ಹೆಮ್ಮೆ ಈ ಕಾಲೇಜಿನದು.

ನೀವೂ ಬಿ.ಡಿ.ಟಿ. ಹಳೆ ವಿದ್ಯಾರ್ಥಿಯಾಗಿದ್ದರೆ ಮತ್ತು ಇದುವರೆಗೆ ಈ ಸೈಟ್‌ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ಅವಶ್ಯವಾಗಿ ಭೇಟಿ ನೀಡಿ. ಮರೆತು ಹೋದ ಸ್ನೇಹಿತರನೇಕರು ಅಲ್ಲಿ ನಿಮಗೆ ಭೇಟಿಯಾಗುವ ಉಜ್ವಲ ಸಾಧ್ಯತೆಗಳಿವೆ. ಸ್ವರ್ಣ ಜಯಂತಿಯ ಸಡಗರದಲ್ಲಿರುವ ಬಿ.ಡಿ.ಟಿ. ಕಾಲೇಜಿನ unofficially official website ಇದು! ಹಳೆ ವಿದ್ಯಾರ್ಥಿಗಳು ಮಾತ್ರವಲ್ಲದೆ ಹಾಲಿ, ಮಾಜಿ ಪ್ರಾಧ್ಯಾಪಕರೂ ಈ ಸೈಟ್‌ನಲ್ಲಿ ನಿಮಗೆ ಭೇಟಿಯಾಗುತ್ತಾರೆ. ಸ್ವಾಮಿ ಬಿ.ಡಿ.ಟಿ. ದಿನಗಳ ನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ (I.I.Sc.) ಸ್ನಾತಕೋತ್ತರ ವ್ಯಾಸಂಗ ಮುಗಿಸಿದ್ದರೂ ಬಿ.ಡಿ.ಟಿ. ಇಂಜನಿಯರಿಂಗ್‌ ಕಾಲೇಜ್‌ ಬಗ್ಗೆ ವಿಶೇಷ ಒಲವು. ಅದಕ್ಕಾಗಿಯೇ ಆತ ಬಿ.ಡಿ.ಟಿ. ಕಾಲೇಜಿಗೊಂದು ವೆಬ್‌ಸೈಟ್‌ ನಿರ್ಮಿಸಿ ನಡೆಸುವ ಕಾರ್ಯ ಕೈಗೊಂಡಿದ್ದು .

ಸ್ವಾಮಿ ಎಲ್ಲಿದ್ದಾನೆ ಈಗ? ಏನು ಮಾಡುತ್ತಿದ್ದಾನೆ? ಇದ್ದಾನೆ ಸ್ವಾಮಿ, ಇಲ್ಲೇ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ. ನಾವು ಪೋನ್‌ನಲ್ಲಿ ಮಾತಾಡುತ್ತೇವೆ. ಇ- ಮೇಲ್‌ ಕಳಿಸುತ್ತೇವೆ. ಮೊನ್ನೆ ಒಂದು ದಿನ ಅವನೇ ಈ ಆಟೋಗ್ರಾಫ್‌ ಪುಟವನ್ನು ಸ್ಕ್ಯಾನ್‌ ಮಾಡಿ ನನಗೆ ಕಳಿಸಿ, ನಮ್ಮ ಬಿ.ಡಿ.ಟಿ. ದಿನಗಳು ನೆನಪಿವೆಯೇ ಎಂದು ಸರ್‌ಪ್ರೆೃಸ್‌ ಕೊಟ್ಟಿದ್ದ . ನಿಜವಾಗಿ, ನನಗೆ ಈ ‘ಪರಿಚಯ ಲೇಖನ’ ಬರೆಯಲು ಸ್ಫೂರ್ತಿ ಬಂದದ್ದೇ ಅದರಿಂದ. ಸ್ವಾಮಿಯದು ಈಗಲೂ ಅದೇ ಸೌಮ್ಯ ಸ್ವಭಾವ ; ಉತ್ಸಾಹದ ಬುಗ್ಗೆ . ವ್ಯಂಗ್ಯಚಿತ್ರ ರಚನೆಗೆ ಈಗ ಅಷ್ಟಾಗಿ ಸಮಯ ಸಿಗುತ್ತಿಲ್ಲವಂತೆ. ಆದರೂ ಹಿಂದಿನ ಎಲ್ಲ ವ್ಯಂಗ್ಯ ಚಿತ್ರಗಳನ್ನೂ ಪತ್ನಿ ಗೀತಾ ಸ್ಕ್ಯಾನ್‌ ಮಾಡಿ ಡಿಜಿಟಲೈಸ್‌ ಮಾಡಿ ಸಂಗ್ರಹಿಸಿಟ್ಟಿದ್ದಾರಂತೆ. ಅವುಗಳಲ್ಲೇ ಕೆಲವನ್ನು ಮತ್ತು ಭಾವಚಿತ್ರವೊಂದನ್ನು ಈ ಲೇಖನಕ್ಕಾಗಿ ಕಳುಹಿಸುವಂತೆ ಸ್ವಾಮಿಯಲ್ಲಿ ಕೇಳಿದಾಗ , ‘ ಇದೆಲ್ಲ ಯಾಕೆ ಜೋಶಿಯವರೇ ? ನಾನು ಅಂತಹ ದೊಡ್ಡ ಮನುಷ್ಯನಲ್ಲ ! ’ಎಂದು ಸಂಕೋಚಪಟ್ಟುಕೊಂಡ. ಹೋಗಲಿ, ಪ್ರೊಫೆಷನಲ್‌ ಲೈಫ್‌ ಬಗ್ಗೆ ಒಂದು ಪ್ಯಾರಾಗ್ರಾಫ್‌ ಕಳಿಸು ಎಂದಿದ್ದಕ್ಕೆ ಈ ಮಾಹಿತಿ ನೀಡಿದ. ‘ Currently I am leading a project of building 4 processor (Ultra SPARC III ) based next generation computer workstation at Sun Microsystems, CA. This will be one of the very highend workstation you will see from Sun in future. I took this responsibility in this year. Until 2001 December, I was working on an ASIC for another innovative product called Sun Ray (www.sun.com/sunray ). Before that, I was with Cadence R&D working on Systemonchip (SoC) methodology (Cadence filed for a patent on one of the inventions I made there and Sun filed on patent last year on some other work I did.)"

ತಾಂತ್ರಿಕ ಕಣಿವೆ (ಸಿಲಿಕಾನ್‌ ವ್ಯಾಲಿ)ಯಲ್ಲೇ ವಾಸ್ತವ್ಯ ಹೂಡಿರುವ ಈ ‘ಎಲೆ ಮರೆಯ ಕಾಯಿ’ ಕನ್ನಡಿಗ ಸದ್ದಿಲ್ಲದೆ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾನೆ. ‘ ಜನ ಸೇವೆಯೇ ಜನಾರ್ದನ ಸೇವೆ’ ಎಂಬ ಮಾತನ್ನು ಸ್ವಲ್ಪ ಟ್ವಿಸ್ಟ್‌ ಮಾಡಿ ಜನಸೇವೆಯಲ್ಲಿ ನಿರತನಾಗಿದ್ದಾನೆ. ಮತ್ತು ಎಲ್ಲಕ್ಕೂ ಮೇಲಾಗಿ ಹನ್ನೆರಡು ವರ್ಷಗಳ ಹಿಂದೆ ನಾನು ಅವನ ಆಟೋಗ್ರಾಫ್‌ ಪುಸ್ತಕದಲ್ಲಿ ಬರೆದ ಶುಭ ಹಾರೈಗಳು ಅಕ್ಷರಶಃ ನಿಜವಾಗುವಂತೆ ಮಾಡಿದ್ದಾನೆ ! ಈಗ ಬೆಂಗಳೂರಿನಲ್ಲಿ ವಾಸಿಸುತ್ತಿರುವ ತಂದೆ-ತಾಯಿ ವೆಂಕಟಪ್ಪ ಮತ್ತು ಚಿನ್ನಾ ದೇವಿಯವರಿಗೆ, ತಮ್ಮ ಈ ಏಕೈಕ ಪುತ್ರನ ಸಾಧನೆಯಿಂದ ಅಭಿಮಾನವಿದೆ ಎಂದು ಬೇರೆ ಹೇಳಬೇಕಿಲ್ಲವಲ್ಲ !

ಸ್ವಾಮಿಯ ಸ್ವಾಮ್ಯದ ವೆಬ್‌ಸೈಟ್‌ ನೋಡುತ್ತೀರಿ ತಾನೆ ? ಅವನು ರಚಿಸಿದ ಇನ್ನೂ ಕೆಲ ವ್ಯಂಗ್ಯ ಚಿತ್ರಗಳಿಗೆ ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X