ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಚ್ಚನೆ ಮುಂಜಾನೆಯ ಸಾಹಿತ್ಯ ಸಲ್ಲಾಪ

By Staff
|
Google Oneindia Kannada News

*ಸುಕುಮಾರ್‌ ಎಸ್‌. ರಘುರಾಮ್‌, ಆರೆಂಜ್‌ವಿಲ್‌ ಸನಿವೇಲ್‌ : ಉತ್ತರ ಕ್ಯಾಲಿಫೋರ್ನಿಯ ಕನ್ನಡಿಗರ ಭಾಷಾಭಿಮಾನಕ್ಕೆ ಮತ್ತೊಂದು ಉದಾಹರಣೆ ಮೇ 6ರ ಬೆಳಗ್ಗೆ ಸನಿವೇಲ್‌ ನಗರದಲ್ಲಿ ನಡೆದ ಸಾಹಿತ್ಯ ಸಲ್ಲಾಪ. ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಹೊಸದಾಗಿ ಉದಯಿಸಿರುವ ‘ಕನ್ನಡ ಬಳಗ’ ದ ಆಶ್ರಯದಲ್ಲಿ ನಡೆಸಿದ ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ಕಾದಂಬರಿಕಾರ್ತಿ ರೇಖಾ ಕಾಖಂಡಕಿಯವರು ಬಂದಿದ್ದರು. ಹೆಸರಾಂತ ಕವಿ , ವಿಮರ್ಶಕ, ಚಿಂತಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಸಾ. ಶಿ. ಮರುಳಯ್ಯನವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕೆ.ಎಸ್‌.ನ. ಅವರ ‘ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ’ ಎಂಬ ಕವಿತೆಯನ್ನು ಪ್ರಾರ್ಥನೆಯ ರೂಪದಲ್ಲಿ ಹಾಡಿದವರು ಮನೋರಮಾ ಅವರು. ಉತ್ತರ ಕ್ಯಾಲಿಫೋರ್ನಿಯಾದ ಕನ್ನಡಿಗರೆಲ್ಲರ ಪರವಾಗಿ ಕಾಖಂಡಕಿ ದಂಪತಿಗಳನ್ನು ಹಾಗೂ ಮರುಳಯ್ಯ ದಂಪತಿಗಳನ್ನು ಸ್ವಾಗತಿಸಿದವರು ಹರಿಹರೇಶ್ವರ ಮತ್ತು ಅವರ ಪತ್ನಿ ನಾಗಲಕ್ಷ್ಮಿ ಹರಿಹರೇಶ್ವರ. ‘ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ’ ದ ಪರವಾಗಿ ಪುಷ್ಪಾ ಸುಬ್ಬರಾವ್‌ ಅವರು ಅತಿಥಿಗಳನ್ನು ಸನ್ಮಾನಿಸಿದರು.

ನಂತರ ಅಮೆರಿಕಾದ ಹಿರಿ, ಕಿರಿಯ ಕವಿಗಳಿಂದ ಕವಿತಾ ವಾಚನ ನಡೆಯಿತು. ಜ್ಯೋತಿ ಮಹದೇವ್‌, ಡಾ. ಕೆ.ಆರ್‌. ಎಸ್‌. ಮೂರ್ತಿ, ಮಂಗಳ ಕುಮಾರ್‌, ಧಾರವಾಡಕರ್‌, ದತ್ತಾತ್ರಿ ರಾಮಣ್ಣ ಹಾಗೂ ಸುಕುಮಾರ್‌ ರಘುರಾಂ ತಮ್ಮ ಕವನಗಳನ್ನು ಓದಿದರು. ಆಶಾ ಬಾಲಕೃಷ್ಣ ಅವರು ಹಾಸ್ಯ ಪ್ರಬಂಧವೊಂದನ್ನೂ, ವಿಶ್ವನಾಥ ಹುಲಿಕಲ್‌ ಅವರು ಕನ್ನಡ ಕೂಟದ ಸಾಹಿತ್ಯ ವಾರ್ಷಿಕ ಸಂಚಿಕೆ ‘ವಿಷು’ವಿನ ಲೇಖನಗಳ ಸ್ಥೂಲ ವಿಮರ್ಶೆಯ ಆಯ್ದ ಕೆಲವು ಭಾಗಗಳನ್ನು ಓದಿದರು. ಹರಿಹರೇಶ್ವರರ ‘ವಿದೇಶಕ್ಕೆ ಬಂದವರು’ ಎಂಬ ಕವಿತೆಯನ್ನು ನಾಗಲಕ್ಷ್ಮಿ ಹರಿಹರೇಶ್ವರ ಅವರು ವಾಚಿಸಿದರು.

ಅಮೆರಿಕ ಬಗೆಗೆ ಅತಿಥಿಗಳ ಹರ್ಷ : ಮುಖ್ಯ ಅತಿಥಿಗಳಾದ ರೇಖಾ ಕಾಖಂಡಕಿಯವರು ತಮ್ಮ ಭಾಷಣದಲ್ಲಿ ಅಮೆರಿಕೆಯ ಕೆಲವು ರೀತಿ ನೀತಿಗಳನ್ನು ಕೊಂಡಾಡಿದರು. ಇಲ್ಲಿನ ರಸ್ತೆಗಳು, ಸಂಚಾರ ನಿಯಮಗಳು, ವ್ಯವಸ್ಥಿತ ಜೀವನ ಶೈಲಿಯ ಬಗ್ಗೆ ಬಹಳ ಸಂತಸ ವ್ಯಕ್ತ ಪಡಿಸಿದರು. ಈ ಸುಂದರ ಸಮಾರಂಭವನ್ನು ‘ಬೆಚ್ಚನೆಯ ಮುಂಜಾನೆ’ ಎಂದು ಕರೆದರು.

ತಮ್ಮ ಅಧ್ಯಕ್ಷ ನುಡಿಯಲ್ಲಿ ಡಾ. ಸಾ. ಶಿ. ಮರುಳಯ್ಯನವರು ಸಾಹಿತ್ಯದ ಮೂರು ಶಕ್ತಿಗಳನ್ನು ಗುರುತಿಸಿದರು- ಸೃಜನಶೀಲ ಶಕ್ತಿ , ಅನುಭೋಗ ಶಕ್ತಿ ಹಾಗೂ ವಿಮರ್ಶನ ಶಕ್ತಿ. ಸ್ವತಃ ನವೋದಯ ಕವಿಗಳಾದ ಅವರು ಸಾಹಿತ್ಯದ ವಿವಿಧ ಪ್ರಕಾರಗಳ ಸಿಂಹಾವಲೋಕನ ಮಾಡಿ ಭಾವಗೀತೆಯನ್ನು ‘ಭಾವದ ಕಾವು, ನಾದದ ಮೋದ ’ ಎಂದು ಕರೆದರು. ಬೇಂದ್ರೆ, ಕುವೆಂಪು, ಪು.ತಿ.ನ.ರನ್ನು ರತ್ನತ್ರಯರೆಂದು ಕರೆದರಲ್ಲದೆ ಗೋಕಾಕ್‌ ಹಾಗೂ ಅಡಿಗರನ್ನು ನವ್ಯ ಕಾವ್ಯದ ಹರಿಕಾರರೆಂದು ನೆನೆದರು. ಅಲ್ಲಲ್ಲಿ ವರಕವಿ ಬೇಂದ್ರೆಯವರ ಕವಿತೆಗಳ ತುಣುಕುಗಳನ್ನು ನಿರರ್ಗಳವಾಗಿ, ಪುಟಪುಟನೆ ಪುಟಿಸುತ್ತಾ, ಉದ್ಧರಿಸುತ್ತಾ ಸಭಿಕರ ಮನಗೆದ್ದರು. ಸಾಹಿತ್ಯದಲ್ಲಿ ವಿಮರ್ಶಕನ ಪಾತ್ರವನ್ನು ಉದಾಹರಣೆಗಳೊಂದಿಗೆ ಚಿತ್ರಿಸುತ್ತ ಮರುಳಯ್ಯನವರು ಕವಿಯ ಅಂತರಾಳವನ್ನು ಹೊಗಬಲ್ಲ ವಿಮರ್ಶಕನನ್ನು ಒಬ್ಬ ದಾರ್ಶನಿಕ ಹಾಗೂ ಮಾರ್ಗದರ್ಶಿ ಎಂದು ಕರೆದರು.

ಪ್ರಶ್ನೋತ್ತರ - ಕವನ ವಾಚನ : ಸಾಹಿತ್ಯ ಸಲ್ಲಾಪದ ಕೊನೆಯ ಅಂಗ, ಬಿಚ್ಚು ಮನಸ್ಸಿನ ಪ್ರಶ್ನೋತ್ತರದ ನಂತರ ಅತಿಥಿಗಳ ಕಾವ್ಯವಾಚನ ನಡೆಯಿತು. ರೇಖಾ ಕಾಖಂಡಕಿಯವರು ಅಮೆರಿಕೆಗೆ ವಲಸೆ ಬಂದವರನ್ನು ಕುರಿತು ಬರೆದ ಒಂದು ಕವನವನ್ನು ವಾಚಿಸಿದರು. ಪ್ರಾಧ್ಯಾಪಕ ಸಾ. ಶಿ.ಯವರು ಯುವಶಕ್ತಿಯನ್ನು ಕುರಿತ ‘ಅಭಿಮನ್ಯು’ ಎಂಬ ತಮ್ಮ ಕವನ ಓದಿದರು.

ಕಾರ್ಯಕ್ರಮದ ನಡುವೆ ಕೆಲವು ಉತ್ತಮವಾದ ಗೀತೆಗಳನ್ನು ಹಾಡಿ ಮನರಂಜಿಸಿದವರು - ಅಶೋಕ್‌ ಕುಮಾರ್‌ , ನಚಿಕೇತ ಶರ್ಮಾ, ಮನೋರಮಾ ರಾವ್‌, ಹಾಗೂ ಕುಮಾರಿ ದ್ಯುತಿ ಬಾಲಕೃಷ್ಣ. ಆರಂಭದಲ್ಲಿ ಹರಿಹರೇಶ್ವರ ಅವರು ಸ್ವಾಗತ ಬಯಸಿದರು. ಒಂದು ವಿನೂತನ ಶೈಲಿಯಲ್ಲಿ ವಂದನಾರ್ಪಣೆ ನಡೆಯಿತು. ವೇದಿಕೆಯ ಮೇಲೆ ಮಮತಾ ದೇಶಪಾಂಡೆ ಅವರು ವಂದನಾರ್ಪಣೆಯನ್ನು ಮಾಡುತ್ತಿದ್ದಾಗ, ಕನ್ನಡ ಬಳಗದ ಸೂತ್ರಧಾರ ವಿದ್ವಾನ್‌ ಗಜಾನನ ಜೋಶಿಯವರ ಪರವಾಗಿ, ಸಭೆಗೆ ಬಂದ ಪ್ರತಿಯಾಬ್ಬರಿಗೂ ಒಂದೊಂದು ಕನ್ನಡ ಕಾದಂಬರಿಯನ್ನು ಉಡುಗೊರೆಯಾಗಿ ಕೊಡಲಾಯಿತು. ನಾಗಲಕ್ಷ್ಮಿ ಹರಿಹರೇಶ್ವರ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಸುಕುಮಾರ್‌ ಎಸ್‌. ರಘುರಾಂ ಅವರ ಪರಿಚಯ

ಜನಪ್ರಿಯ ಸುಗಮ ಸಂಗೀತ ಗಾಯಕರಾದ ಎಚ್‌.ಆರ್‌. ಲೀಲಾವತಿ ಹಾಗೂ ಎಸ್‌.ಜಿ. ರಘುರಾಂ ಅವರ ಮಗ ಸುಕುಮಾರ್‌, ವೃತ್ತಿಯಿಂದ ಇಂಜಿನಿಯರ್‌ - ಪ್ರವೃತ್ತಿಯಲ್ಲಿ ಕಥೆಗಾರ, ಕವಿ . ಇಂಟೆಲ್‌ ಕಂಪನಿಯಲ್ಲಿ ಡಿಸೈನ್‌ ಇಂಜಿನಿಯರ್‌ ಆಗಿರುವ ಸುಕುಮಾರ್‌ ಅವರ ವಾಸ, ಉತ್ತರ ಕ್ಯಾಲಿಫೋರ್ನಿಯಾದ ಆರೆಂಜ್‌ವಿಲ್‌ನಲ್ಲಿ .

ಕನ್ನಡದ ಪ್ರಮುಖ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಸುಕುಮಾರ್‌ ಅವರ ಕಥೆ, ಕವಿತೆ ಬೆಳಕು ಕಂಡಿವೆ. ಆಕಾಶವಾಣಿ ಹಾಗೂ ದೂರದರ್ಶನಗಳಲ್ಲೂ ಅವರ ಹಾಡುಗಳು- ನಾಟಕಗಳು ಪ್ರಸಾರವಾಗಿವೆ. ತಾಯಿಯಿಂದ ಸಂಗೀತದ ಓನಾಮಗಳನ್ನು ಕಲಿತ ಅವರು, ಎಚ್‌.ಕೆ. ನರಸಿಂಹಮೂರ್ತಿಯವರಿಂದ ಪಿಟೀಲು ಕಲಿತಿದ್ದಾರೆ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X