• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವ್ಯದಲ್ಲಿ ರೂಪಾಂತರದ ಸವಾಲುಗಳು

By Staff
|

*ಎಂ. ಆರ್‌. ದತ್ತಾತ್ರಿ, ಸನ್ನಿವೇಲ್‌, ಕ್ಯಾಲಿಫೋರ್ನಿಯಾ

ರೂಪಾಂತರ ಸಾಧ್ಯವೇ ?

ರೂಪಾಂತರದ ಮೂಲಭೂತ ಪ್ರಶ್ನೆ ಇದು. ರೂಪಾಂತರದ ಸಾಧ್ಯಾಸಾಧ್ಯತೆಗಳನ್ನು ಗುರುತಿಸುವ ಮುನ್ನ ಕಾವ್ಯದ ಮೂಲಧಾತುಗಳನ್ನು ಅವಲೋಕಿಸಿ ಅವುಗಳ ರೂಪಾಂತರದ ಸಾಧ್ಯತೆಗಳ ಬಗ್ಗೆ ತಿಳಿಯುವುದು ಸೂಕ್ತ. ಮುಂಬಯಿಯಲ್ಲೋ, ನ್ಯೂಯಾರ್ಕ್‌ನಲ್ಲೋ ಜನಜಂಗುಳಿಯ ರಸ್ತೆಯಲ್ಲಿ ಹೋಗುತ್ತಿರುವಾಗ ಎಷ್ಟೋ ದೂರದಲ್ಲಿ ನಿಮ್ಮ ಸ್ನೇಹಿತನೊಬ್ಬ ಹೋಗುತ್ತಿದ್ದಾನೆ. ಅವನ ಇಳಿಬಿದ್ದ ಗುಂಗುರು ಕೂದಲು, ಸ್ವಲ್ಪ ಎತ್ತರದ ಕುತ್ತಿಗೆ ಅಥವಾ ನಡೆಯುವಾಗ ಅವನು ಭುಜವನ್ನು ಅಲುಗಿಸುವ ರೀತಿ, ಇನ್ನೂ ಮೂಲವಾಗಿ ಅವನದೇ ಏಕೀಕೃತವಾದ ಅವನ ಆಕಾರ ಇವುಗಳೆಲ್ಲದರಿಂದಲೋ ಅಥವಾ ಇವ್ಯಾವುದೋ ಒಂದರಿಂದಲೋ ಅವನನ್ನು ಗುರುತಿಸುತ್ತೀರಿ !

ಮಧ್ಯೆ ನಡೆಯುವ ನೂರಾರು ದೇಹಗಳು ನಿಮಗೆ ಅಡ್ಡ ಬರುವುದೇ ಇಲ್ಲ. ಒಂದು ಕವನವೂ ಕೂಡ ಹಾಗೆಯೇ. ತನ್ನದೇ ಆದ ಸಂಕೀರ್ಣತೆಗಳಿಂದ ಕೂಡಿದ ವೈಯುಕ್ತಿಕತೆಗಳನ್ನು ಹೊಂದಿರುತ್ತದೆ. ಕುವೆಂಪು ಬರೆದ ಕವನಗಳು ಕುವೆಂಪು ಹಸ್ತಾಕ್ಷರವಿದ್ದಂತೆ, ಹಾಗೆಯೇ ಯೇಟ್ಸ್‌ನ ಕವನಗಳು ಯೇಟ್ಸ್‌ನಷ್ಟೇ ವಿಶಿಷ್ಟವಾಗಿರುತ್ತವೆ. ಕವನಗಳು ಬೆಳೆಯುವ ಗಿಡಗಳಂತೆ ತಮ್ಮ ಮಣ್ಣಿಗನುಗುಣವಾಗಿರುತ್ತವೆ ಮತ್ತು ಕವಿಯ ಅನುಭವವನ್ನು ಹೀರಿರುತ್ತವೆ.

ಕಾವ್ಯವು ಕವಿಯ ಮಾನಸ ಸರೋವರದಲ್ಲಿ ಅರಳುವ ಕಮಲವಾದರೂ ಭೌತಿಕ ಬದುಕಿನ ಜೊತೆಗಿನ ತನ್ನ ಸಂಬಂಧವನ್ನು ಕವಿಯ ಅನುಭವದ ಮೇಲೆ ಪಡೆಯುತ್ತವೆ. ಅನುಭವಗಳು ಕವಿಯ ವೈಯಕ್ತಿಕ ನೆಲಗಟ್ಟಿನಲ್ಲಿ ಹೆಪ್ಪುಗಟ್ಟಿರುತ್ತವೆ. ಅಲ್ಲಿಗೆ ಕಾವ್ಯವು ಕವಿಯ ವೈಯಕ್ತಿಕ ಅಭಿವ್ಯಕ್ತಿಯ ಕ್ರಿಯೆಯಾಗಿ ನಿಲ್ಲುತ್ತದೆ ಎಂದಾಯಿತು. ಹೀಗೆ ಕವಿಯು ನೀಡಿದ ದೇಹ ಮತ್ತು ಆತ್ಮಗಳನ್ನು ಹೊತ್ತ ಕವಿತೆಯನ್ನು ನಮ್ಮ ಭಾಷೆಗೆ, ನಮ್ಮ ಸಂಸ್ಕೃತಿಗೆ, ನಮ್ಮ ಅಳುವಿಗೆ, ನಮ್ಮ ನಗುವಿಗೆ, ನಮ್ಮ ಬೈಗುಳಗಳಿಗೆ, ನಮ್ಮ ಕಣ್ಣೀರಿಗೆ ಬದಲಿಸಲು ಸಾಧ್ಯವೇ? ಪಶ್ಚಿಮದ ಹಿಮಾವೃತ ಪ್ರಕೃತಿಯನ್ನು ಕಿಟಕಿಯಾಚೆಯಲ್ಲಿ ನೋಡುತ್ತಾ ಪ್ಲಾಸ್ಟಿಕ್‌ ಕುಂಡದೊಳಗೆ ಬೆಳೆದ ಬೇಸಿಲ್‌ ಗಿಡ ನಮ್ಮ ಅಂಗಳದಾಚೆಯ ಕಟ್ಟೆಯಾಳಗೆ ಕರೀಮಣ್ಣಿನಲ್ಲಿ ಟಿಸಿಲೊಡೆದು ಮುತ್ತೆೈದೆಯರ ಅರಿಶಿಣ ಕುಂಕುಮಕ್ಕೆ ಸಹಜವಾಗಿ ಹಣೆ ನೀಡುವ ಶ್ರೀ ತುಳಸಿಯಾದೀತೆ ? ಪಶ್ಚಿಮದ ಸ್ವಾತಂತ್ರ್ಯದ ಕೂಗು ಪೂರ್ವದ ಪದಗಳಿಗೆ ಎಟುಕೀತೆ ? ಪೂರ್ವದ ಧರ್ಮ ಶ್ರದ್ಧೆ ಪಶ್ಚಿಮದ ‘ ಮಾನವ ಶ್ರೇಷ್ಠ’ ಸಮಾಜದ ಕಿವಿಗಳನ್ನು ಮುಟ್ಟೀತೆ ? ಇವೆಲ್ಲಾ ಕಾವ್ಯದ ರೂಪಾಂತರವನ್ನು ಪ್ರಶ್ನಿಸುವ ಅಂಶಗಳು.

ಕಾವ್ಯವನ್ನು ಭಾಷಾಂತರ ಮಾಡುವುದು ಅಸಾಧ್ಯ. ಹಾಗೆ ಭಾಷಾಂತರ ಮಾಡದೇ ಇರುವುದು ಅಸಾಧ್ಯ ಎಂಬ ಪಿಯೇ ಲೇರೀಸ್‌ನ ಮಾತು ಈ ಸಂದರ್ಭದಲ್ಲಿ ಬಹಳ ಅರ್ಥಪೂರ್ಣವಾಗಿ ಕಾಣುತ್ತದೆ. ಕವಿತೆಯನ್ನು ಅದರ ಹೊರಮೈಯನ್ನು ಒಳತುಪಡಿಸಿ ಭಾಷೆಯಿಂದ ಭಾಷೆಗೆ ರೂಪಾಂತರಿಸುವುದು ಪೂರ್ವ ಪಶ್ಚಿಮಗಳನ್ನು ಒಂದುಗೂಡಿಸಿದಷ್ಟೇ ಕಠಿಣವಾದರೂ, ಲೋಕಾನುಭವವನ್ನೇ ದ್ರವ್ಯವಾಗಿ ಹೊಂದಿರುವ ಕವನದ ಆತ್ಮವನ್ನು ಗುರುತಿಸಿ ಅದರ ರಾಸಾಯನಿಕಗಳಾದ ಪ್ರೀತಿ, ಪ್ರೇಮ, ದ್ವೇಷ, ಕಾಮ ಮುಂತಾದ ಬೆರಕೆಗಳನ್ನು ಆಯ್ದು, ನಮ್ಮಲ್ಲಿನ ಸಮಾನಾಂತರ ಅಭಿವ್ಯಕ್ತಿಗಳನ್ನು ಕಂಡುಹಿಡಿಯುವುದು ಹಾಗೂ ನಾವು ಸೃಷ್ಟಿಸಿದ ದೇಹದೊಳಗೆ ಅಂತಹ ಆತ್ಮವನ್ನು ಪ್ರವೇಶಿಸುವಂತೆ ಮಾಡುವುದು ಸಂಪೂರ್ಣವಾಗಿ ಸಾಧ್ಯವಿಲ್ಲವೆಂದು ತೆಗೆದು ಹಾಕಲಾಗದು ಎಂಬ ಮಾತೇ ರೂಪಾಂತರದ ಪರವಾಗಿ ನಿಲ್ಲುವ ವಾದವಾಗುತ್ತದೆ.

ಏಕೆ ರೂಪಾಂತರ ?

ಒಂದು ಭಾಷೆಯ ಸಾಹಿತ್ಯ ಎಷ್ಟೇ ಶ್ರೀಮಂತವಾದರೂ ಜಗತ್ತು ನಮ್ಮ ಮುಂದಿಡುವ ಅನುಭವದ ವಿಶಾಲತೆಯಲ್ಲಿ ಏನೂ ಇಲ್ಲವಾಗುತ್ತದೆ. ಮೇಲಾಗಿ ಒಂದೇ ದೃಶ್ಯವನ್ನು ಬೇರೆ ಬೇರೆ ಜೊತೆ ಕಣ್ಣುಗಳು ಬೇರೆ ಬೇರೆ ರೀತಿಯಲ್ಲಿ ನೋಡುತ್ತವೆ. ಹಾಗಾಗಿ ಒಂದೇ ಅನುಭವವು ಬೇರೆ ಬೇರೆ ಮೂಸೆಯಿಂದ ಬೇರೆ ಬೇರೆ ಆಕಾರಗಳಲ್ಲಿ ಬರುವುದುಂಟು. ನಿಜ ಜಗತ್ತು ಹೀಗಿರುವಾಗ ನಮಗೆ ತಿಳಿದ ಬೇರೆ ಭಾಷೆಯಲ್ಲಿ ಓದಿದ ಒಂದು ಕವಿತೆಯನ್ನೋ, ಕಥೆಯನ್ನೋ ನಮ್ಮ ಭಾಷೆಗೆ ತರಬೇಕೆಂದುಕೊಳ್ಳುವುದು ಸಾಹಿತ್ಯದ ಇತರ ಆಯಾಮಗಳಂತೆ ಸೃಷ್ಟಿ ಶೀಲ ಕ್ರಿಯೆಯಾಗಿ, ಬೇರೆಯಾಗಿ ಕಂಡದ್ದನ್ನು ಅನುಭವಿಸಿದ್ದನ್ನು ತನ್ನ ಭಾಷೆಯ ಓದುಗರಿಗೂ ತಲುಪಿಸಬೇಕು ಎಂಬ ಹಂಬಲವೇ ರೂಪಾಂತರಕ್ಕೆ ಪ್ರಚೋದನೆಯನ್ನು ನೀಡುವ ಅಂಶವಾಗಿದೆ. ‘ ಅವಳ ಉಡುಗೆ ಇವಳಿಗಿಟ್ಟು ನೋಡಬಯಸಿದೆ’ ಎಂಬ ಬಿ. ಎಂ. ಶ್ರೀ. ಅವರ ಮಾತು ಇಂಥಾ ಪ್ರಚೋದನೆಯನ್ನು ಕುರಿತಾದುದೇ.

ರೂಪಾಂತರ ಸಾಹಿತ್ಯವು ಒಂದು ರೀತಿಯಲ್ಲಿ ಪ್ರವಾಸವಿದ್ದಂತೆ. ಹೊಸ ಊರುಗಳು , ಹೊಸ ಜನ ಮತ್ತು ಹೊಸ ಸಂಸ್ಕೃತಿಗಳನ್ನು ಕಾಲನ ಮತ್ತು ಭಾಷೆಯ ಗಡಿಯನ್ನು ಮೀರಿ ನಮ್ಮ ಮುಂದಿಡುವುದು ಇದರ ವಿಶೇಷ. ಈ ರೀತಿಯ ಬೇರೆ ಭಾಷೆಯು ಸಾಹಿತ್ಯವನ್ನು ಆಯಾಯ ಭಾಷೆ ತಿಳಿಯದೇ ಓದುವ ವಿಧಾನ ಇರದಿದ್ದರೆ, ಇಂಗ್ಲಿಷ್‌ ಹೊರತಾಗಿ, ಆರ್ಥರ್‌ ರಾಂಬೋನಂಥ ಫ್ರೆಂಚ್‌ ಕವಿ, ರಿಲ್ಕನಂಥ ಜರ್ಮನ್‌ ಕವಿ, ಟಾಲ್ಸ್‌ಟಾಯ್‌ಯಂಥ ರಷ್ಯನ್‌ ಬರಹಗಾರ ನಾವರಿವ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. "translation is at the heart of poetry ಎಂದು ರಿಲ್ಕ ಹೇಳಿರುವುದು ಈ ನಿಟ್ಟಿನಲ್ಲೇ.

ಹೇಗೆ ರೂಪಾಂತರ ?

ಕಾವ್ಯದ ಅನುವಾದ, ಅನುವಾದ ಸಾಹಿತ್ಯದ ಬಗೆಗಳಲ್ಲೇ ಕ್ಲಿಷ್ಟವಾದದ್ದು. ಇದಕ್ಕೆ ಕಾರಣ ಅಭಿವ್ಯಕ್ತಿಯಲ್ಲಿ ಕಾವ್ಯದ ಸಂಕೀರ್ಣತೆ. ಹೇಳುವ ಕೆಲವೇ ಸಾಲುಗಳಲ್ಲಿ ಅರ್ಥ ಮತ್ತು ತಂತ್ರಗಳು ದಟ್ಟವಾಗಿ ಕಡೆದಿಟ್ಟ ವಜ್ರದಂತೆ ಒಂದೊಂದು ದಿಕ್ಕಿನಿಂದ ಒಂದೊಂದು ರೀತಿಯಲ್ಲಿ ಬೆಳಕನ್ನು ಪ್ರತಿಫಲಿಸುವ ಕವನವನ್ನು ಅನುವಾದಿಸುವುದು ಹೊಸ ಕವಿತೆಯನ್ನು ಬರೆದಷ್ಟೇ ಕ್ರಿಯಾತ್ಮಕತೆಯಿಂದ ಕೂಡಿದ ಕೆಲಸ. ಚಾರ್ಲ್ಸ್‌ ಸಿಮಿಕ್‌ ಹೇಳುವಂತೆ "Translation is an actors medium. If I cannot make myself believe I am writing the poem I am translating no degree of aesthetic admiration for the work will help me.

ಅನುವಾದಕನು ಮೂಲಕವಿಯ ‘ ಪರಕಾಯ ಪ್ರವೇಶ ’ ಮಾಡಿ ಭಾವ ಭಾಷೆಗಳು ಒಳಗೊಂಡಂತೆ ಕಾವ್ಯದ ಮೂಲವನ್ನು ಸಂಗ್ರಹಿಸಿ ‘ ತಾನು ಬರೆಯುವ ರೀತಿಯಲ್ಲಿ ’ ಹಾಗೂ ‘ ತನ್ನ ಓದುಗರಿಗೆ ’ ನೀಡುವ ಕ್ರಿಯೆ ಇದು ಎಂಬುದು ಚಾರ್ಲ್ಸ್‌ ಸಿಮಿಕ್‌ನ ಅಭಿಮತ. ಅಗಣಿತ ಸಾಧ್ಯತೆಗಳನ್ನು ಒಳಗೊಂಡ ಕಾವ್ಯದ ಅನುವಾದವನ್ನು ಹೀಗೆಯೇ ಮಾಡಬೇಕು ಎಂದು ನಿಯಮಗಳನ್ನು ರೂಪಿಸಲು ಹೊರಡುವುದು ಉದ್ಧಟತನದ ಜೊತೆಗೆ ಮೂರ್ಖತನವೂ ಆದೀತು. ಹೊಸ ಕಾವ್ಯ ರಚನೆಯಂತೆ ಅನುವಾದವೂ ಕೂಡ ಸಾಹಿತ್ಯ ಕ್ರಿಯೆಯ ಸಕಲ ಮಜಲುಗಳನ್ನೂ ಒಳಗೊಂಡು ಅನೇಕ ಸಾಹಸಗಳಿಗೆ ಆಹ್ವಾನ ನೀಡುವ ಕ್ಷೇತ್ರ.

ಮೂಲ ಕಾವ್ಯದಿಂದ ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದನ್ನು ಬದಲಿಸಬೇಕು, ಯಾವ ಛಂದಸ್ಸಿನಲ್ಲಿರಬೇಕು, ಯಾವ ಪ್ರಾಸದಲ್ಲಿರಬೇಕು ಮುಂತಾದುವೆಲ್ಲಾ ಅನುವಾದಕನು ತನಗೆ ತಾನೇ ಕೇಳಿಕೊಳ್ಳುವ ಪ್ರಶ್ನೆಗಳಾಗಿ ನಿಂತಂತೆ, ಅನುವಾದದ ಅಂತಿಮ ಹಂತದ ಗುಣಧರ್ಮಗಳನ್ನು ನಿರ್ದೇಶಿಸುವಂತವೂ ಕೂಡ. ಈ ರೀತಿಯ ನಿರ್ಧಾರಗಳು ಸುಲಭದ ಮಾತಲ್ಲ. ಅನುವಾದದಲ್ಲಿ ಯಾವುದು ಕಳೆದುಹೋಗುವುದೋ ಅದೇ ಕಾವ್ಯ ಎಂಬ ರಾಬರ್ಟ್‌ ಫ್ರಾಸ್ಟ್‌ ನ ಮಾತಾಗಲಿ, ಅನುವಾದದಲ್ಲಿ ಉಳಿದದ್ದೇ ಕಾವ್ಯ ಎನ್ನುವ ಜೋಸೆಫ್‌ ಬ್ರಾಡಸ್ಕಿಯ ಮಾತಾಗಲೀ, ಅನುವಾದಕನ ಜವಾಬ್ದಾರಿಯ ಸಂಕೀರ್ಣತೆಗಳನ್ನ ಸೂಚಿಸುತ್ತದೆ.

ಇಷ್ಟೆಲ್ಲಾ ಗೋಜಲುಗಳನ್ನು ಹರಡಿಕೊಂಡ ಮೇಲೆ ರೂಪಾಂತರ ಸಾಧ್ಯವೇ ಎಂಬ ಪ್ರಶ್ನೆಗೆ ‘ ಕಾವ್ಯ ಭಾಷೆ’ಯು ನಮಗೆ ಉತ್ತರವನ್ನು ನೀಡುತ್ತದೆ. ನಿಗೂಢತೆಗಳ ಕಣಿವೆಯಿಂದ ಧುತ್ತನೆ ಹೊರಹೊಮ್ಮುವ ಕಾವ್ಯ ವ್ಯಕ್ತ ಶರೀರಕ್ಕಾಗಿ ಕವಿಯ ಲೋಕಭಾಷೆಗೆ ಮೊರೆ ಹೋದಂತೆಯೇ ಅವ್ಯಕ್ತವಾಗಿ ತನ್ನದೇ ಕಾವ್ಯ ಭಾಷೆಯ ಆತ್ಮವನ್ನು ಹೊಂದಿರುತ್ತದೆ. ಈ ಕಾವ್ಯಭಾಷೆಯೋ, ಭಾಷೆಯಿಂದ ಬೇರ್ಪಡಿಸಲಾಗದ ಪದಗಳಿಂದ ಮುಕ್ತವಾಗಿ, ಭೌಗೋಳಿಕ ಮತ್ತು ಮಾನವ ನಿರ್ಮಿತ ಗಡಿಗಳನ್ನೆಲ್ಲಾ ಮೀರಿ ಬುದ್ಧಿಗಿಂತ ಹೆಚ್ಚಾಗಿ ಹೃದಯವನ್ನು ತಟ್ಟುವ ಮಾಧ್ಯಮವಾಗುತ್ತದೆ. ಕವಿಯನ್ನು ಉದ್ದೀಪಿಸುವ ಮತ್ತು ಕಾವ್ಯರಚನೆಗೆ ಸ್ಫೂರ್ತಿಯಾಗಿ ನಿಲ್ಲುವ ಕಾರ್ಯದಲ್ಲಿ ಕಾವ್ಯ ಭಾಷೆಯ ಸ್ಥಾನವೇ ಹೆಚ್ಚು. ಲೋಕಭಾಷೆಯು ಕವಿಯ ಅವಕಾಶಗಳಲ್ಲಿ ಒಂದಾಗಿ ಕಾವ್ಯದ ವ್ಯಕ್ತ ಮಾಧ್ಯಮವಾಗಿ ಮೂಡುತ್ತದೆ. ಕಾವ್ಯದಲ್ಲಿ ತನ್ನ ವಿಸ್ತಾರ ಹರಡಿಕೆಯಿಂದ ‘ಕಾವ್ಯಭಾಷೆ’ಯು ಪದಗಳಲ್ಲಿ ಅರ್ಥದ ಮತ್ತು ಭಾವದ ಹೂರಣವನ್ನು ತುಂಬುತ್ತದೆ. ಕಾವ್ಯವನ್ನು ಅನುವಾದಿಸುವ ಮುನ್ನ ಅದರ ಕಾವ್ಯಭಾಷೆಯನ್ನು ಸಂಪೂರ್ಣವಾಗಿ ಗ್ರಹಿಸುವುದು ಅನುವಾದಕನ ಅತ್ಯಗತ್ಯ ಕ್ರಿಯೆಗಳಲ್ಲಿ ಒಂದು.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more