ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ರಾಗ ’ನಡೆದು ಬಂದ ದಾರಿಯನ್ನ ಗುರುತಿಸೋಣ

By Staff
|
Google Oneindia Kannada News

ಕೇವಲ ಮೂರು ವರ್ಷಗಳ ಹಿಂದೆ ಸಸಿಯಾಗಿ ಬೆಳೆದ ರಾಗ ತಂಡವು, ಈ ಕಡಿಮೆ ಅವಧಿಯಲ್ಲೆ ಇಂದು ಹೆಮ್ಮರವಾಗಿ ಬೆಳೆದಿರುವುದು ಅತ್ಯಂತ ಸಂತೋಷದ ಸಂಗತಿ.

ಮೊದ ಮೊದಲು ಹಾಡುವುದನ್ನು ಹವ್ಯಾಸ ಮಾಡಿಕೊಂಡ ಸ್ಥಳೀಯ ಕಲಾವಿದರಾದ ಅಶೋಕ್‌ ಕುಮಾರ್‌ ಹಾಗೂ ವಾದಿರಾಜ ಭಟ್‌ ಅವರು, ಬರಬರುತ್ತಾ ತಮ್ಮ ಆಲೋಚನೆಯನ್ನು ವಿಸ್ತರಿಸುತ್ತಾ, ಇದನ್ನೇ ಒಂದು ಗೆಳೆಯರ ಬಳಗವನ್ನಾಗಿ ಮಾಡಿಕೊಂಡು ಬಂದರು. ಇವರಿಬ್ಬರು ‘ರಾಗ’ದ ಪ್ರಧಾನ ಸಂಘಟಕರು. ರಾಂಪ್ರಸಾದ್‌, ಜಗದೀಶ್‌, ಪರಿಮಳಾ ಮುರಳೀಧರ್‌ ಮುಂತಾದವರು ಇವರೊಂದಿಗೆ ಸೇರಿಕೊಂಡರು. ಪ್ರತಿ ವಾರಾಂತ್ಯದಲ್ಲಿ ಅಭ್ಯಾಸ ಮಾಡುತ್ತಾ , ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿ, ಅನೇಕ ಕಾರ್ಯಕ್ರಮಗಳನ್ನು ನೀಡಿ, ಬಂದ ಉತ್ಪತ್ತಿಯನ್ನು ಸಮಾಜಸೇವೆಗೆ ಏಕೆ ವಿನಿಯೋಗಿಸಬಾರದೆಂದು ಆಲೋಚಿಸಿ, ಗಾಯನದ ಅಭ್ಯಾಸಕ್ಕೆ ಹೆಚ್ಚು ಒತ್ತು ಕೊಡಲು ಪ್ರಾರಂಭಿಸಿದರು. ತಮ್ಮ ತಮ್ಮ ಕಛೇರಿಯ ಕೆಲಸ ಮುಗಿದ ನಂತರ, ಎಲ್ಲರೂ ಒಂದು ಕಡೆ ಸೇರಿ, ಪಕ್ಕವಾದ್ಯಗಳೊಂದಿಗೆ ಹಾಡುವುದನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು; ಅದಕ್ಕೆ ತಕ್ಕ ಪ್ರತಿಫಲವೂ ಸಿಕ್ಕಿತು. ಇಂದು ‘ ರಾಗ’ ತಂಡದ ಕೀರ್ತಿ ಹೇಗೆ ಹರಡಿದೆಯೆಂದರೆ, ಅಮೆರಿಕದ ಕನ್ನಡ ಕೂಟಗಳು ತಾವಾಗಿಯೇ ಅರಸಿ ಬಂದು ‘ ರಾಗ’ ಸಂಗೀತ ವೃಂದವನ್ನು ತಮ್ಮಲ್ಲಿಗೆ ಆಹ್ವಾನಿಸುತ್ತಿವೆ.

ಹೀಗೆ 1997ರಲ್ಲಿ ಜನ್ಮ ತಾಳಿದ ‘ ರಾಗ’ ಸಂಗೀತ ವೃಂದದ ಧ್ಯೇಯ ಪ್ರಶಂಸಾರ್ಹವಾದದ್ದು : ಉದಯೋನ್ಮುಖ ಮತ್ತು ನುರಿತ ಪ್ರತಿಭಾವಂತ ಸಂಗೀತಗಾರರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಿಕೊಡುತ್ತ, ಚೆನ್ನಾಗಿ ಅಭ್ಯಾಸ ಮಾಡಿ, ಸುಸಜ್ಜಿತ ವಾದ್ಯವೃಂದದೊಂದಿಗೆ ವೃತ್ತಿ ನಿರತರಷ್ಟೇ ಅಚ್ಚುಕಟ್ಟಾದ ಕಾರ್ಯಕ್ರಮ ಪ್ರದರ್ಶಿಸುವುದು. ‘ ರಾಗ’ ತಂಡವು 1998ರಲ್ಲಿ ನಡೆಸಿದ ತನ್ನ ಮೊದಲ ಕಾರ್ಯಕ್ರಮದಿಂದ ಬಂದ ನಿವ್ವಳ ಉತ್ಪತ್ತಿಯನ್ನು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟಕ್ಕೆ ಕೊಟ್ಟು ಕನ್ನಡದ ಅಭಿವೃದ್ಧಿಗೆ ಸಹಾಯ ಹಸ್ತ ನೀಡಿತು. 1999ರಲ್ಲಿ ಎರಡನೆಯ ಕಾರ್ಯಕ್ರಮ ನಡೆಸಿದಾಗ, ಅಂದು ಬಂದ ನಿವ್ವಳ ಉತ್ಪತ್ತಿಯಾದ ಹತ್ತು ಸಾವಿರ ಡಾಲರ್‌ಗಳನ್ನು ಸನಿವೇಲ್‌ ದೇವಸ್ಥಾನಕ್ಕೆ ನೀಡಿ, ‘ ರಾಗ’ ತಂಡದವರು ದೇವಾಲಯದ ಸಭಾಂಗಣ ಕಟ್ಟುವುದರಲ್ಲಿ ನೆರವಾದರು. 2000 ವರ್ಷ ಅಮೆರಿಕದ ಕನ್ನಡಿಗರು ಮರೆಯಲಾರದ ವರ್ಷ. ಕಾರಣ ? ಹೂಸ್ಟನ್‌ನಲ್ಲಿ ಸಹಸ್ರಮಾನ ವಿಶ್ವ ಕನ್ನಡ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸಿದ್ದು ! ‘ ವಿಶ್ವ ಕನ್ನಡ ಸಮ್ಮೇಳನ ’ ಎಂದ ಮೇಲೆ ಕೇಳಬೇಕೆ ? ಅನೇಕ ವ್ಯವಸ್ಥಿತ ಕಾರ್ಯಕ್ರಮಗಳು, ಹಾಡು ಹಸೆ, ನಾಟಕಗಳು, ಕರ್ನಾಟಕ ಚಲನಚಿತ್ರ ಹಿನ್ನೆಲೆ ಗಾಯಕ-ಗಾಯಕಿಯರಿಂದ ಸುಶ್ರಾವ್ಯ ಸಂಗೀತ, ಪ್ರಸಿದ್ಧ ಲೇಖಕರು, ಕವಿಗಳ ಅಪೂರ್ವ ಸಮಾಗಮ. ಇವೆಲ್ಲದರ ಮುಂದೆಯೂ ‘ ರಾಗ’ತಂಡವು ಬಹಳ ಹೆಸರು ಮಾಡಿತು; ಕೊನೆಯ ದಿನದ ಭೂರಿ ಭೋಜನದ ಕೊನೆಯಲ್ಲಿ ‘ ರಾಗ ’ಪ್ರಸ್ತುತ ಪಡಿಸಿದ ಸಂಗೀತ ಕಾರ್ಯಕ್ರಮ ಅಲ್ಲಿ ನೆರೆದಿದ್ದ ಸಾವಿರಾರು ಜನರ ಮನವನ್ನ ಸೂರೆಗೊಂಡಿತು.

ಈ ಬಾರಿಯ, ಈಗ ನಡೆಸಿದ, ಕಾರ್ಯಕ್ರಮದ ಉದ್ದೇಶವೇ ಒಂದು ವಿಶೇಷ . ಇತ್ತೀಚೆಗೆ ನಡೆದ ಭಯೋತ್ಪಾದಕರ ಅಮಾನುಷ ಕೃತ್ಯದಿಂದ ಇಡೀ ಅಮೆರಿಕ ತಲ್ಲಣಗೊಂಡಿದೆ. ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ. ಇದನ್ನು ಗಮನದಲ್ಲಿಟ್ಟುಕೊಂಡು, ಸಂತ್ರಸ್ತರ ಪರಿಹಾರ ನಿಧಿ ಸಂಗ್ರಹಣೆಗಾಗಿ, ‘ ರಾಗ’ ತಂಡವು ದಿನಾಂಕ 6 ಅಕ್ಟೋಬರ್‌ರಂದು ಈ ಕಾರ್ಯಕ್ರಮವನ್ನು ನಡೆಸಿತು. ಈ ಸಾರಿ ಬಂದ ನಿವ್ವಳ ಆದಾಯವನ್ನು, ಶಂಕರ ನೇತ್ರಾಲಯದ ಅಮೆರಿಕಾ ಶಾಖೆಯ ಮುಖಾಂತರ, ವಿಶ್ವ ವಾಣಿಜ್ಯ ಕೇಂದ್ರ ದುರಂತದಲ್ಲಿ ಸಾವಿಗೀಡಾದ ದುಃಖಿ ಕುಟುಂಬಗಳ ಪರಿಹಾರ ನಿಧಿಗೆ ವಿನಿಯೋಗಿಸಲಾಗುವುದು ಎನ್ನುತ್ತಾರೆ ಕನ್ನಡ ಕೂಟದ ಅಧ್ಯಕ್ಷ ರಾಂ ಪ್ರಸಾದ್‌ ಅವರು.

‘ ರಾಗ’ ತಂಡದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಗಾಯಕರುಗಳಾದ ಅಶೋಕ್‌ ಕುಮಾರ್‌, ವಾದಿರಾಜ್‌ ಭಟ್‌, ರಾಮ್‌ಪ್ರಸಾದ್‌, ಶೇಷ ಪ್ರಸಾದ್‌, ಬಿ.ವಿ. ಜಗದೀಶ್‌, ರವಿ ಕುಮಾರ್‌, ಪರಿಮಳಾ ಮುರಳಿಧರ್‌, ಚಂದ್ರಿಕಾ ಶಂಕರ್‌, ಶ್ರೀರಂಜಿನಿ ಆನಂದ್‌, ಶೋಭಾ ಪ್ರಭಾಕರ್‌, ಸುನೀಲ್‌ ಶಂಕರ್‌- ಮುಂತಾದ ಕಲಾವಿದರು ತಮ್ಮ ಸುಶ್ರಾವ್ಯ ಕಂಠದಲ್ಲಿ ಚಿತ್ರಗೀತೆಗಳನ್ನೂ , ಭಾವಗೀತೆಗಳನ್ನೂ ಹಾಡಿ ಜನರನ್ನು ರಂಜಿಸುತ್ತಾರೆ; ಹಾಗೂ ಪಕ್ಕ ವಾದ್ಯಗಳಲ್ಲಿ ನುರಿತ ಕಲಾವಿದರುಗಳಾದ ಸತೀಶ್‌ ತಾರೆ, ರವೀಂದ್ರ ಭಾರತಿ, ಅಂಜನ್‌ ಶ್ರೀನಿವಾಸ್‌, ಮಹೇಶ್‌ ಕುಮಾರ್‌, ನಟರಾಜ್‌, ಪ್ರಣವ್‌ ಜುಂಕಾವಾಲಾ , ಧೃತಿಗುಪ್ತ , ಸುನಿಲ್‌ ಶಂಕರ್‌, ವಾದಿರಾಜ ಭಟ್‌ ಮತ್ತು ಅಶೋಕ್‌ ಕುಮಾರ್‌- ಇವರುಗಳು ಇದ್ದಾರೆ. ಇಂಥ ಕಲೆಯ ಕೆನೆಯ ತೆನೆಯೇ ಮೊನ್ನೆಯ ಕಾರ್ಯಕ್ರಮವನ್ನು ನಡೆಸಿದಾಗ ಅದು ಯಶಸ್ವಿಯಾಗದೇ ಇನ್ನೇನು ?


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X