• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನಿವಾಸಿ ಭಾರತೀಯರೆ? ನೀವಿದನ್ನು ಕಡ್ಡಾಯವಾಗಿ ಓದಿ,31 ಕೊನೆ ದಿನ...

By Staff
|

* ಎಸ್‌.ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

ಅಮೆರಿಕಾದ ಸಾಮಾಜಿಕ ಭದ್ರತಾ ಆಡಳಿತ ವಿಭಾಗ (ಸೋಷಿಯಲ್‌ ಸೆಕ್ಟುರಿಟಿ ಆಡ್ಮಿನಿಸ್ಟ್ರೇಷನ್‌) ಪ್ರಪಂಚದ ಬೇರೆ ಬೇರೆ ದೇಶಗಳೊಂದಿಗೆ ಹೊಸ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಮಾಡಿಕೊಳ್ಳಲು ತೊಡಗಿದೆ. ಈ ಸಂದರ್ಭದಲ್ಲಿ ಅದು ಅಮೆರಿಕಾದ ಜನತೆಯನ್ನು ಉದ್ದೇಶಿಸಿ ಒಂದು ಪ್ರಕಟಣೆಯನ್ನು ಹೊರಡಿಸಿ, ಇದರ ಬಗ್ಗೆ ತಮ್ಮ ಸಲಹೆ ಸೂಚನೆಗಳನ್ನು ಅವರಿಗೆ ಕಳಹಿಸುವಂತೆ ಮನವಿ ಮಾಡಿಕೊಂಡಿದೆ.

ಅನಿವಾಸೀ ಭಾರತೀಯರಾಗಿ ಇತ್ತ ಬಂದು, ವಲಸೆಗಾರರಾಗಿ (ಇಮಿಗ್ರೆಂಟ್‌, ನಾನ್‌ ರೆಸಿಡೆಂಟ್‌ ಏಲಿಯನ್‌ ಆಗಿ) ಉಳಿದು, (ಕೆಲವರು ಇಲ್ಲಿನ ಪ್ರಜೆಗಳಾಗಿ) ಜೀವನವಿಡೀ ಇಲ್ಲಿ ದುಡಿದು, ನಿವೃತ್ತರಾಗಿ ಭಾರತಕ್ಕೆ ಮರಳುವ, ಹೊನ್ನ ಸಂಜೆಯನ್ನು ಅಲ್ಲೇ ಕಳೆಯುವ ಮನಸ್ಸುಳ್ಳವರಿಗೆ ಒಂದು ಮುಂದಾಲೋಚನೆಗೆ ಅವಕಾಶ ಇಲ್ಲಿದೆ!

ಕೊನೆಯ ದಿನಾಂಕ : ಜುಲೈ 31, 2001. ಮಂಗಳವಾರದೊಳಗೆ ನಿಮ್ಮ ಸಲಹೆ, ಸೂಚನೆಗಳು ಅವರಿಗೆ ತಲುಪಬೇಕು ! ಬೇಗ ಕಾರ್ಯಪ್ರವೃತ್ತರಾಗಿ!

ಹಿನ್ನೆಲೆ : 1970ರಿಂದಲೂ ಅಮೆರಿಕಾದ ಸೋಷಿಯಲ್‌ ಸೆಕ್ಯುರಿಟಿ ಅಡ್ಮಿನಿಸ್ಟ್ರೇಷನ್‌ (ಎಸ್‌.ಎಸ್‌.ಏ) ಅವರು, ವಿದೇಶಗಳೊಂದಿಗೆ ಹಲವಾರು ಒಪ್ಪಂದಗಳನ್ನು ಮಾಡಿಕೊಳ್ಳುತ್ತಾ ಬಂದಿದ್ದಾರೆ. ಈ ಮೂಲಕ ಕಡಲಾಚೆಯ ವ್ಯವಹಾರಗಳಲ್ಲಿ ತೊಡಗಿರುವ ಅಮೆರಿಕಾದ ಕಂಪನಿಗಳಿಗೆ ಮತ್ತು ಅವುಗಳಲ್ಲಿನ ಉದ್ಯೋಗಸ್ಥರಿಗೆ ನೂರಾರು ಮಿಲಿಯನ್‌ ಡಾಲರ್‌ಗಳು ಪ್ರತಿವರ್ಷವೂ ಉಳಿತಾಯವಾಗಿದೆ. ಹಾಗೆಯೇ, ಇಲ್ಲಿ ಬಂಡವಾಳ ಹೂಡಿ, ಕೆಲಸಗಾರರನ್ನು ತಮ್ಮ ದೇಶಗಳಿಂದ ಇಲ್ಲಿಗೆ ಕಳಿಸುತ್ತಿರುವ ವಿದೇಶೀ ಕಂಪನಿಗಳಿಗೂ ಈ ಒಪ್ಪಂದಗಳಿಂದ ನೂರಾರು ಮಿಲಿಯನ್‌ ಡಾಲರ್‌ಗಳು ಪ್ರತಿವರ್ಷವೂ ಉಳಿತಾಯವಾಗಿದೆ.

ಅಮೆರಿಕಾ ಮತ್ತು ತಾವು ಇಚ್ಛಿಸುವ ಇನ್ನೊಂದು ದೇಶ - ಹೀಗೆ ಎರಡೂ ಕಡೆ ತಮ್ಮ ವೃತ್ತಿ ಜೀವನವನ್ನು ಹಂಚಿಕೊಳ್ಳ ಬಯಸುವವರಿಗಂತೂ ಈ ಒಪ್ಪಂದಗಳು ವೃತ್ತಿಪರ ಪ್ರಯೋಜನಗಳ ರಕ್ಷಣೆಯನ್ನು ಇನ್ನೂ ಉತ್ತಮಗೊಳಿಸುತ್ತದೆ.

ಹೊಸ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲು ಸಂಧಾನದ ಯೋಜನೆಯಲ್ಲಿ ತೊಡಗಿರುವ ಎಸ್‌.ಎಸ್‌. ಏ., ಈಗ ಅಮೆರಿಕಾದ ಜನತೆಯನ್ನು ಕೇಳಿಕೊಳ್ಳುತ್ತಿದೆ : ನಿಮ್ಮ ಅಭಿಪ್ರಾಯದಲ್ಲಿ ಯಾವ ಒಪ್ಪಂದಗಳು ತುಂಬಾ ಪ್ರಯೋಜನಕಾರಿಯಾಗಬಲ್ಲವು ಮತ್ತು ಏಕೆ? ಅವರು ಕೇಳುತ್ತಾರೆ : ‘‘ದಯವಿಟ್ಟು ಇದಕ್ಕಾಗಿ ನಿಮ್ಮ ಸ್ವಲ್ಪ ಕಾಲ ವಿನಿಯೋಗಿಸಿ, ನಮಗೆ ಹೇಳಿ, ‘ಇನ್ನಾವ ರಾಷ್ಟ್ರಗಳೊಂದಿಗೆ ಹೊಸ ಒಪ್ಪಂದ ಮಾಡಿಕೊಳ್ಳೋಣ?’ ಅಮೆರಿಕಾದ ಕಂಪನಿಗಳಿಗೆ ಮತ್ತು ಅವುಗಳ ಉದ್ಯೋಗಸ್ಥರಿಗೆ ತುಂಬಾ ಪ್ರಯೋಜನ ತರಬಲ್ಲ ಈ ಬಗೆಯ ನಿಮ್ಮ ಅಭಿಪ್ರಾಯಗಳು, ನಾವು ಯಾವ ಯಾವ ಸಂಧಾನಗಳಿಗೆ ಆದ್ಯತೆ ಕೊಡಬೇಕು - ಎಂಬುದರ ನಿರ್ಧಾರಕ್ಕೆ ಸಹಾಯ ಮಾಡುತ್ತವೆ! ನಿಮ್ಮ ಸಲಹೆ ಸೂಚನೆಗಳನ್ನೂ ನಾವು ಸ್ವಾಗತಿಸುತ್ತೇವೆ.’’

ಈ ಒಪ್ಪಂದಗಳಿಂದ ಆಗುವ ಪ್ರಯೋಜನವೇನು?

ಮುಖ್ಯವಾದ ಒಂದು ಉದ್ದೇಶವೆಂದರೆ, ಒಂದೇ ದುಡಿಮೆಗೆ, ಅದು ಎರಡೂ ದೇಶಗಳಲ್ಲಿ ನಡೆದಾಗ, ಈಗ ತಗುಲುತ್ತಿರುವ ಸೋಷಿಯಲ್‌ ಸೆಕ್ಯುರಿಟಿ ತೆರಿಗೆಯ ಭಾರವನ್ನು ಇಳಿಸುವುದು. ಈ ‘ಡ್ಯುಯಲ್‌ ಟ್ಯಾಕ್ಸೇಷನ್‌’ಗೆ ಈ ಉದಾಹರಣೆಯನ್ನು ನೋಡಿ : ಒಬ್ಬ ಅಮೆರಿಕಾದ ಪ್ರಜೆ ಅಥವಾ ಅನಿವಾಸಿಯಾಬ್ಬನು ಅಮೆರಿಕಾದ ಕಂಪನಿಯಲ್ಲಿ ಸೇರಿದ್ದರೂ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದಿಟ್ಟುಕೊಳ್ಳಿ. ಈ ಸಂದರ್ಭದಲ್ಲಿ, ಕಂಪನಿಯ ಮಾಲೀಕನೂ ಮ್ತು ಕೆಲಸಗಾರನೂ ಅವನ ಆ ಒಂದೇ ದುಡಿಮೆಯ ವರಮಾನಕ್ಕೆ, ಎರಡೂ ದೇಶಗಳ ಸರಕಾರಕ್ಕೆ ಸೋಷಿಯಲ್‌ ಸೆಕ್ಯುರಿಟಿ ತೆರಿಗೆಯನ್ನು ಕೊಡಬೇಕಾಗುತ್ತದೆ. ಒಪ್ಪಂದ ಮಾಡಿಕೊಂಡರೆ, ಈ ಉಭಯ ತೆರಿಗೆಯ ಭಾರ ಇಳಿಸಿದಂತಾಗುತ್ತದೆ!

ಇನ್ನೊಂದು ಪ್ರಯೋಜನವೂ ಇದೆ: ಈ ನಿದರ್ಶನವನ್ನು ಗಮನಿಸಿ. ಭಾರತೀಯ ವಲಸೆಗಾರರ ಸಂಗತಿಯೆಂದುಕೊಳ್ಳಿ. ಅಲ್ಲಿ ಸ್ವಲ್ಪ ವರ್ಷ ಕೆಲಸ ಮಾಡಿ ಇಲ್ಲಿಗೆ ವಲಸೆ ಬಂದಿದ್ದಾರೆ. ಸೋಷಿಯಲ್‌ ಸೆಕ್ಯುರಿಟಿ ಪ್ರಯೋಜನಗಳು (ಬೆನಿಫಿಟ್ಸ್‌) ಒಬ್ಬ ಕೆಲಸಗಾರನಿಗೆ/ಳಿಗೆ ಸಿಗಬೇಕೆಂದರೆ, ಸಾಕಷ್ಟು ವರ್ಷಗಳು ಆ ವ್ಯಕ್ತಿ ಕೆಲಸ ಮಾಡಿ ‘ಅರ್ಹತೆ’ (‘ಕ್ವಾಲಿಫೈ’ ಗುಣ, ‘ಕ್ರೆಡಿಟ್‌’ಗಳನ್ನು) ಪಡೆದಿರಬೇಕು. ಅಮೆರಿಕಾದಲ್ಲಿ ಮಾಡಿರುವ ಕೆಲಸದ ‘ಕ್ರೆಡಿಟ್‌’ಗಳಷ್ಟೇ ಈಗ ಈ ‘ಅರ್ಹತೆ’ ಗಾಗಿ ಪರಿಗಣಿಸಲಾಗುತ್ತದೆ; ಆ ವ್ಯಕ್ತಿ ಬೇರೊಂದು (ಭಾರತ) ದೇಶದಲ್ಲಿ ಹಿಂದೆ ಮಾಡಿದ ಕೆಲಸ, ಅಥವಾ ಮುಂದೆ, ಇಲ್ಲಿಂದ ಅಲ್ಲಿಗೆ ಹೋಗಿ ಮಾಡುವ ಕೆಲಸ ಏನೂ ಗಣನೆಗೆ ಈಗ ಬರುತ್ತಿಲ್ಲ. ಈ ಹೊಸ ಒಪ್ಪಂದ ಭಾರತದೊಂದಿಗೆ ಸಿಂಧುವಾದರೆ, ಅವಾಗ ಈ ತೊಂದರೆ ಇರುವುದಿಲ್ಲ (ಇನ್ನು ಮುಂದೆಯಾದರೂ ಇರುವುದಿಲ್ಲ!); ‘ಅಲ್ಲಿ ಸಲ್ಲುವವರು ಇಲ್ಲಿಯೂ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ’ - ಎಂದು ನಿವೃತ್ತ ಜೀವನದ ಆರ್ಥಿಕ ಪ್ರಯೋಜನಗಳ ಕನಸುಗಳನ್ನು ನನಸಾಗಿಸಿಕೊಳ್ಳಬಹುದು.

ಈಗ ಯಾವ ಯಾವ ದೇಶಗಳೊಂದಿಗೆ ಅಮೆರಿಕಾ ಒಪ್ಪಂದ ಮಾಡಿಕೊಂಡಿದೆ?

ಮೇಲೆ ವಿವರಿಸಿದ ಸೋಷಿಯಲ್‌ ಸೆಕ್ಯುರಿಟಿ ಒಪ್ಪಂದಗಳನ್ನು ಅಮೆರಿಕಾ ಸಂಯುಕ್ತ ಸಂಸ್ಥಾನ ರಾಷ್ಟ್ರವು ಕೇವಲ ಈ ಹದಿನೆಂಟು ದೇಶಗಳೊಂದಿಗೆ ಇಲ್ಲಯವರೆಗೆ ಮಾಡಿಕೊಂಡಿದೆ :

(ಅಕಾರಾದಿಯಾಗಿ) ಆಸ್ಟ್ರಿಯಾ, ಐರ್‌ಲೆಂಡ್‌, ಇಟಲಿ, ಕೆನಡಾ, ಕೋರಿಯಾ (ದಕ್ಷಿಣ), ಗ್ರೀಸ್‌, ಜರ್ಮನಿ, ನಾರ್ವೇ, ನೆದರ್‌ಲ್ಯಾಂಡ್ಸ್‌, ಫಿನ್ಲೆಂಡ್‌, ಪೋರ್ಚುಗಲ್‌, ಪ್ರಾನ್ಸ್‌, ಬೆಲ್ಜಿಯಮ್‌, ಯುನೈಟೆಡ್‌ ಕಿಂಗ್‌ಡಮ್‌, ಲಕ್ಸೆಂಬರ್ಗ್‌, ಸ್ಪೈನ್‌, ಸ್ವಿಡ್‌ಜರ್‌ಲೆಂಡ್‌ ಮತ್ತು ಸ್ವೀಡನ್‌.

(ಚಿಲಿ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಬಿದ್ದಿದೆ; ಇನ್ನೇನು ಜಾರಿಗೆ ಬರಲಿದೆ!).

ಹೆಚ್ಚಿನ ವಿವರಗಳಿಗೆ, ದಯವಿಟ್ಟು ಈ ಜಾಲತಾಣಕ್ಕೆ ಭೇಟಿ ಕೊಡಿ : http://www.ssa.gov/international.

ನೀವು ಏನು ಮಾಡಬಹುದು?:

ಇಲ್ಲಿಗೆ ದುಡಿದು, ನಿವೃತ್ತರಾಗಿ ಭಾರತಕ್ಕೆ ಮರಳುವ ಮನಸ್ಸುಳ್ಳವರಿಗೆ ಒಂದು ಮುಂದಾಲೋಚನೆಯ ಮಾತು : ವಲಸೆಗಾರರಾಗಿ ಬಂದ ಅನಿವಾಸೀ ಭಾರತೀಯರು ಅಮೆರಿಕಾದ ಪ್ರಜೆಯೇ ಆಗಿರಬಹುದು, ಕೇವಲ ನಿವಾಸಿಯೇ ಆಗಿ ಇರಬಹುದು - ಅವರು ಇಲ್ಲಿ ದುಡಿದಾಗ, ತಮ್ಮ ವರಮಾನ ಅಂಶವಾಗಿ ಸರ್ಕಾರಕ್ಕೆ ಕೊಟ್ಟ ಸೋಷಿಯಲ್‌ ಸೆಕ್ಯುರಿಟಿ ದೇಣಿಗೆಯಿಂದ ಬರುವ (ಮುಖ್ಯವಾಗಿ, ಕೊನೆಗಾಲದ) ಪ್ರಯೋಜನಗಳು ಆ ವ್ಯಕ್ತಿ ಯಾರೇ ಇರಲಿ, ಎಲ್ಲೆ ಇರಲಿ ನಿರಾತಂಕವಾಗಿ ಸಿಗುವ ಹಾಗೆ ಆಗಬೇಕು. ಮುಖ್ಯವಾಗಿ ಭಾರತದೊಡನೆ ಈ ಬಗೆಯ ಒಪ್ಪಂದ ಬೇಗ ಆಗಬೇಕು. ಇದನ್ನು ನಿಮ್ಮ ಪ್ರತಿಕ್ರಿಯೆಯಲ್ಲಿ ಸೂಚಿಸಿ.

ಉಭಯರೀತಿಯ ತೆರಿಗೆಯ ಭಾರ (‘ಡ್ಯುಯಲ್‌ ಟ್ಯಾಕ್ಸೇಷನ್‌ ಲಯಬಿಲಿಟಿ’ ) ಕಳೆಯಲು ಸಲಹೆಗಳನ್ನು ಕಳಿಸಿ. ಇಲ್ಲಿ ಸ್ಪಲ್ಪ ಕಾಲ ದುಡಿದು, ಅಲ್ಲಿಯೂ ದುಡಿಮೆ ಮುಂದುವರಿಸಿಕೊಳ್ಳುವವರಿಗೆ ಒಂದು ಆಶಾಕಿರಣ ಮೂಡುವಂತಾಗಲಿ; ಸರ್ಕಾರಕ್ಕೆ ಕೊಟ್ಟ, ಕೊಡುವ ಸೋಷಿಯಲ್‌ ಸೆಕ್ಯುರಿಟಿ ದೇಣಿಗೆಯಿಂದ ಬರುವ (ಮುಖ್ಯವಾಗಿ, ಕೊನೆಗಾಲದ) ಪ್ರಯೋಜನಗಳು ಎಲ್ಲಿದ್ದರೂ ಸಿಗುವ ಹಾಗೆ ಸಲಹೆಗಳನ್ನು ನೀವು ಎಸ್‌ಎಸ್‌ಏ ಅವರಿಗೆ, ಕರೆದೋ, ಬರೆದೋ ಬೇಗ ಕಳಿಸಿ!

ನಿಮ್ಮ ಅಭಿಪ್ರಾಯ, ಸಲಹೆ ಮತ್ತು ಸೂಚನೆಗಳನ್ನು (ಕ್ಷಮಿಸಿ, ಇಂಗ್ಲೀಷಿನಲ್ಲಿ!) ಈ ಅಂಚೆ ವಿಳಾಸಕ್ಕೆ ಕಳಿಸಬಹುದು; ಈ ವಿ- ಅಂಚೆ ವಿಳಾಸಕ್ಕೆ ‘ಈ - ಮೇಯಿಲ್‌’ ಮಾಡಬಹುದು; ‘ಫ್ಯಾಕ್ಸ್‌’ ಮಾಡಬಹುದು ಅಥವಾ ಫೋನ್‌ನಲ್ಲೂ ಕರೆದು ತಿಳಿಸಬಹುದು.

Social Security Administration,
Office of International Programs,
P.O.Box 17741,
Baltimore, MD 21235-7741
Email
Fax : (410) 966-7025
Phone: (410)965-3856 or (410)965-0377
Please Note: Last date for sending your Comments: July 31, 2001

Record your comments

Click here to go to top
ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more