ಹಬ್ಬದೂಟ ಘಮ್ಮನೆ, ನೆನಸಿಕೊಂಡ್ರೆ ಜುಮ್ಮನೆ
ಹಬ್ಬದೂಟ ಎಲ್ಲರ ಬಾಯಲ್ಲಿ ನೀರೂರಿಸಿತ್ತು . ಹುಳಿಯನ್ನ , ಮೊಸರನ್ನ, ಹೋಳಿಗೆ, ಬಿಸಿಬೇಳೆ ಬಾತ್, ವಾಂಗೀಬಾತ್, ಖಾರಾಬಾತ್, ಕೇಸರೀಬಾತ್, ಲಾಡು, ಚಕ್ಕಲಿ, ಮಂಗಳೂರು ಬೋಂಡಾ, ಮೈಸೂರು ಪಾಕು ಮತ್ತು ಮೋದಕ- ಅಬ್ಬಬ್ಬಾ! ಎಲ್ಲರೂ ಬಾಯಿ ಚಪ್ಪರಿಸಿದ್ದೇ ಚಪ್ಪರಿಸಿದ್ದು . ವಿಜಯಾ ಜೋಷಿ ಅವರ ನೇತೃತ್ವದಲ್ಲಿ , ಕನ್ನಡ ಕೂಟದ ಹಲವಾರು ಅನ್ನಪೂರ್ಣೆಯರ ಸಹಾಯದಿಂದ ಈ ರಸದೌತಣ ಲಭ್ಯವಾಯಿತು.
ಇಂಚರ ಪ್ರಸ್ತುತ ಪಡಿಸಿತು ಮಿಶ್ರಮಾಧುರ್ಯ
ಕಾರ್ಯಕ್ರಮದ ಉತ್ತರಾರ್ಧವು ‘ಇಂಚರ’ ತಂಡದ ‘ಮಿಶ್ರ ಮಾಧುರ್ಯ’ದಿಂದ ಆರಂಭವಾಯಿತು. ಸುಕುಮಾರ್ ರಘುರಾಂ, ರವಿ ಕಶ್ಯಪ್, ರಾಘವೇಂದ್ರ ಹೆಬ್ಬಳಲು ‘ಇಂಚರ’ವನ್ನು ಹುಟ್ಟುಹಾಕಿದವರು. ಇವರುಗಳು ಅಮೆರಿಕೆಯ ಹಲವಾರು ನಗರಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕಳೆದ ವರ್ಷದ ಕನ್ನಡ ಕೂಟದ ಗಣೇಶನ ಹಬ್ಬದ ಸಮಾರಂಭದಲ್ಲೂ ಹಾಡಿದ್ದರು. ಗಣೇಶನ ಸ್ತುತಿಯಾಂದಿಗೆ ಆರಂಭವಾದ, ಬಹು ಜನರ ಮೆಚ್ಚುಗೆ ಗಳಿಸಿದ ಈ ಕಾರ್ಯಕ್ರಮ, ದೊಡ್ಡರಂಗೇಗೌಡ, ಎಚ್.ಆರ್.ಲೀಲಾವತಿ, ಜಿ.ಪಿ.ರಾಜರತ್ನಂ ಅವರುಗಳ ಭಾವಗೀತೆಗಳನ್ನು ಒಳಗೊಂಡಿತ್ತು . ‘ವಿಜಯನಗರದ ವೀರಪುತ್ರ’ ಚಿತ್ರದ ‘ಅಪಾರ ಕೀರ್ತಿ’ ಯ ಹಾಡಿಗೆ ಈ ಮೂವರು ಗಾಯಕರೊಡನೆ ಪ್ರೇಕ್ಷಕರೂ ದನಿಗೂಡಿಸಿದರು. ಟಿ.ಪಿ.ಕೈಲಾಸಂ ಅವರ ‘ನಮ್ಮ ತಿಪ್ಪಾರಳ್ಳಿ ಬಲು ದೂರ’ ದೊಂದಿಗೆ ಸುಗಮ ಸಂಗೀತ ಕಾರ್ಯಕ್ರಮವನ್ನು ಮುಗಿಸಿದರು. ನಾಗರಾಜ್ ವರದರಾಜನ್ ಕೀಬೋರ್ಡ್, ನಟರಾಜ್ ಗುಜರಾನ್ ಮತ್ತು ಧೃತಿಮಾನ್ ಗಿಟಾರ್, ವಿವೇಕ್ ಗುರುಸ್ವಾಮಿ ತಬಲ, ಹಾಗೂ ಅಂಜನ್ ಶ್ರೀನಿವಾಸ್ ಕಾಂಗೋ ನುಡಿಸಿ ಅತ್ಯುತ್ತಮ ಪಕ್ಕವಾದ್ಯ ಸಹಕಾರವಿತ್ತರು.
ಜಾತ್ರೆಯಾಟ್ಟಿಗೆ ಸಾಯೋಆಟದ ಮಜ
ನೃತ್ಯ, ಸಂಗೀತವಾದ ಮೇಲೆ ಉಳಿದದ್ದು ನಾಟಕ. ಕನ್ನಡ ಸಾಹಿತ್ಯಲೋಕದಲ್ಲಿ ಅತ್ಯುತ್ತಮ ಕವಿ ದ.ರಾ.ಬೇಂದ್ರೆಯವರೆಂದರೆ ಅತಿಶಯೋಕ್ತಿಯಲ್ಲ . ಅಂತಹ ಉನ್ನತ ಕವಿ ಬರೆದ ನಾಟಕಗಳು- ‘ಜಾತ್ರೆ’ ಹಾಗೂ ‘ಸಾಯೋಆಟ’- ಬಹಳ ಜನಪ್ರಿಯವಾಗಿವೆ. ಕವಿ ಬೇಂದ್ರೆ ಮತ್ತು ಅವರ ನಾಟಕ ‘ಸಾಯೋಆಟ’ವನ್ನು ಜನರಿಗೆ ಹಿತಮಿತವಾಗಿ ಪರಿಚಯಿಸಿದವರು ನಾಗಲಕ್ಷ್ಮಿ ಹರಿಹರೇಶ್ವರ. ‘ಸಾಯೋಆಟ’ವನ್ನು ನಿರ್ದೇಶಿಸಿದ ಎಚ್.ಸಿ.ಶ್ರೀನಿವಾಸ್ ಅತ್ಯಂತ ಸಮರ್ಥರು. ಅತ್ಯದ್ಭುತವಾದ ರಂಗಸಜ್ಜಿಕೆ, ಅಭಿನಯ, ಸಂಗೀತ ಹಾಗೂ ನಿರ್ದೇಶನ ಜನರನ್ನು ಬೆರಗುಗೊಳಿಸಿತು. ಕವಿತೆಗೆ ಗಾಯಕ ಹೇಗೆ ಜೀವ ಕೊಡುತ್ತಾನೋ ಹಾಗೆಯೇ ನಾಟಕಕ್ಕೆ ನಿರ್ದೇಶಕ ಜೀವದಾತ. ನಿರ್ದೇಶಕ ಶ್ರೀನಿವಾಸರವರು ನಾಟಕದ ಪ್ರತಿಯಾಂದು ಅಂಗಕ್ಕೂ ನ್ಯಾಯ ಒದಗಿಸಿದರು.
ಕನ್ನಡಕೂಟದ ಸುಮಾರು ಅರವತ್ತು ಜನಕ್ಕೂ ಮೀರಿ ವೇದಿಕೆಯ ಮೇಲೆ ನಿಂತು, ಅಶೋಕ್ ಕುಮಾರ್ ದಿಗ್ದರ್ಶನದಲ್ಲಿ ಸಾಮೂಹಿಕವಾಗಿ ಹಾಡಿದ ನಾಡಗೀತೆ ಮತ್ತು ಭಾರತ ಹಾಗೂ ಅಮೆರಿಕೆಯ ರಾಷ್ಟ್ರಗೀತೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಎಂಥ ಸವಿಯಿದು ಮಂಗಳೂರು, ಧಾರವಾಡ ಹಾಗೂ ಮೈಸೂರು ಕನ್ನಡ
ಸುಮಾರು 500 ಜನರಿಗೂ ಹೆಚ್ಚಾಗಿ ಕನ್ನಡಿಗರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದ ನಿರ್ವಹಣೆ ಅತ್ಯಂತ ವಿಶೇಷವಾಗಿತ್ತು . ಆಶಾ ಬಾಲಕೃಷ್ಣ ಭಟ್ ಮಂಗಳೂರಿನ ಕನ್ನಡದಲ್ಲಿ , ಗಾರ್ಗಿ ಪಂಚಾಂಗಂ ಧಾರವಾಡದ ಕನ್ನಡದಲ್ಲಿ , ಮಧುಕಾಂತ್ ಕೃಷ್ಣಮೂರ್ತಿ ಹಳ್ಳಿ ಕನ್ನಡದಲ್ಲಿ ಹಾಗೂ ಶೋಭಾ ಪ್ರಭಾಕರ್ ಮೈಸೂರಿನ ಕನ್ನಡದಲ್ಲಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕನ್ನಡ ಕೂಟದ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶೋಭಾ ಪ್ರಭಾಕರ್, ರಾಘವೇಂದ್ರ ಹೆಬ್ಬಳಲು, ಹಾಗೂ ಪರಿಮಳಾ ಮುರಳೀಧರ್ ಮತ್ತು ಅಧ್ಯಕ್ಷರಾದ ರಾಂಪ್ರಸಾದ್ ಹೆಬ್ಬಳಲು ಅತ್ಯಂತ ಉನ್ನತ ಶ್ರೇಣಿಯ ಕಾರ್ಯಕ್ರಮಗಳನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದು ಸಂತೋಷದ ವಿಷಯ.
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications