• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಸೀಳ್ಗವನಗಳು’-ಒಂದು ಅಪೂರ್ವ ಕವನ ಸಂಕಲನ :ಭಾಗ-4

By Staff
|

ಅಂದಿನಿಂದ ಇಂದಿನವರೆಗಿನ ಚಡಪಡಿಕೆಗಳು ಮಿಡಿತ ತುಡಿತಗಳು :
ವಿಡಂಬನೆಯಾಂದೇ ಇಡೀ ಸಂಕಲನದ ಮೇಲ್ಮೈ ಎಂದಲ್ಲ. ಆಂತರಿಕ ಸಂಘರ್ಷಗಳ ಮೇಲೆ ಕ್ಷ - ಕಿರಣ, ಸಾಮಾಜಿಕ ಸಮಸ್ಯೆಗಳ ವಿವೇಚನೆ, ತಾತ್ವಿಕ ಚಿಂತನೆಗಳೂ ಕವನಗಳ ವಸ್ತುಗಳಾಗಿವೆ. ತಾತ್ವಿಕವಾದ ಒಗಟುಗಳನ್ನು ಕೇಳಿಕೊಳ್ಳುತ್ತಾ ಉತ್ತರಕ್ಕಾಗಿ ಅಂದಿನಿಂದ ಇಂದಿನವರೆಗೂ ಚಡಪಡಿಸುತ್ತಿರುವ ಪ್ರಶ್ನೋಪನಿಷತ್ತಿನ ಮಿಡಿತ ತುಡಿತಗಳು ‘ಯಾರು ಕರೆದರು ನಿನ್ನ’ಪದ್ಯದಲ್ಲಿದೆ. ನಿಜವಾದ ಪ್ರೀತಿ, ಪ್ರೇಮದ ರೂಪ ರೇಷೆಗೆ ‘ಗಂಡು ಹೆಣ್ಣು’ ಕವನವಿದೆ. ಸಮಯಸ್ಫೂರ್ತಿಗಾಗಿ ಕಾದೂ ಕಾದೂ ಕೊನೆಗೆ ಕವಿ ಹೆಗ್ಗವಿ ಆಗಿ, ಕೈಗೆ ಬಂದದ್ದು ಬಾಯಿಗೆ ಬಾರದೇ ಹೋದ ಭಾವುಕನ ಬಗ್ಗೆ ಅನುಕಂಪ ‘ಸ್ಫೂರ್ತಿ’ಯಲ್ಲಿದೆ.

ಹೊರನೋಟಕ್ಕೆ ಲಘುವಾಗಿ ಚುಡಾಯಿಸುತ್ತಾ, ಸುತ್ತ ಮುತ್ತ ಕಳ್ಳರ ಸಂತೆಯೇ ನೆರೆದಿರುವಾಗ ನೀನೊಬ್ಬ ಸಭ್ಯಸ್ಥನಾಗಿ ಬದುಕಲು ಸಾಧ್ಯವೇ ಎನ್ನುವ ಭಂಡತನದ ವರದಕ್ಷಿಣೆಯ ಸಮರ್ಥನೆ, ಇದು ತಪ್ಪು ಎನ್ನುವ ಛಾಟಿ ಏಟಿಗಿಂತ ತೀಕ್ಣವಾಗಿ ‘ಅಪರಾಧವೇನು ’ಪ್ರಶ್ನೆಯಲ್ಲಿದೆ. ‘ಹೆಣ್ಣು ಯಾಕಿಲ್ಲ’ ಎಂಬಲ್ಲಿ ಯಕ್ಷಗಾನದಲ್ಲಿ ಸಾಂಪ್ರದಾಯಿಕವಾಗಿ ಪುರುಷರೇ ಸ್ತ್ರೀವೇಷ-ಧಾರಿಗಳಾಗುವುದರ ಒಳಗುಟ್ಟು ಇದೆ.

ಶತಮಾನ ಶತಮಾನಗಳ ಹಿಂದಿನಿಂದ ಬೆಳೆಯುತ್ತ ಬಂದು, ನಾಡಿನ ಒಂದು ವಿಶಿಷ್ಟ ಜಾನಪದ ಕಲಾ ಪ್ರಕಾರವೆಂದು ಮೊನ್ನೆ ಮೊನ್ನಿನ ವರೆಗೂ ಮೆರೆದಿದ್ದ ಯಕ್ಷಗಾನಕ್ಕೆ ಈಗ ಬಂದೊದಗಿದ ಪಾಡು ಅವರ ಕರುಳ ಕತ್ತರಿಸಿರಬೇಕು. ‘ಮಂಗನಕೈಲಿ ಮಾಣಿಕ್ಯವಾಯ್ತು’, ‘ಬಡವೆ ಕೊರಳಿನ ಮುತ್ತು’ಆಯ್ತು. - ಎನ್ನುತ್ತ, ‘ಗಾವಿಲರ ಪಾಲಿಗೆ ಗಾಣಿಗರ ಗಾಣವೇ’ ಆಗಿ ಹೋಯ್ತಲ್ಲ ಎಂದು ಪರಿತಪಿಸಿ ಬಿಟ್ಟ ನಿಟ್ಟುಸಿರ ಹಬೆ ‘ಯಕ್ಷಗಾನದ ಪ್ರಾರಬ್ಧ’ದಲ್ಲಿದೆ.

ತಮ್ಮ ಕಾದಂಬರಿಯ ಒಂದು ಪಾತ್ರದ ಬಗ್ಗೆ ಬರೆಯುತ್ತಾ ಒಮ್ಮೆ ಕಾರಂತರು ಹೇಳುತ್ತಾರೆ : ‘‘ ನಾವು ನಿಜತ್ವದಿಂದ ಕನಸಿಗೆ ಸುಲಭವಾಗಿ ಜಿಗಿಯಬಹುದು. ಹಾಗೆ ಹಾರುವವರೂ ಇದ್ದಾರೆ. (ಅಂಥವರಿಗೆ) ಅದು ನಿಜಸ್ಥಿತಿಯಿಂದ ತಪ್ಪಿಸಿಕೊಳ್ಳುವುದಕ್ಕೆ. (ಆದರೆ) ಈತನಿಗೆ ಅದು ಹಾಗೆ ತಪ್ಪಿಸಿಕೊಳ್ಳುವುದಕ್ಕಲ್ಲ. ಈತ ಬಾನಿನಿಂದ ನೆಲಕ್ಕೆ, ನೆಲದಿಂದ ಬಾನಿಗೆ ಬೇಕಾದಂತೆ ಜಿಗಿಯಬಲ್ಲ ವ್ಯಕ್ತಿ! ’’ ತಮ್ಮ ಬಗ್ಗೆಯೂ ಕಾರಂತರು ಈ ಮಾತುಗಳನ್ನು ಆಡಿಕೊಳ್ಳಬಲ್ಲರು. ಇದು ಕಾರಂತರ ಕವಿಹೃದಯದ ಅನನ್ಯ ಗುಣ.

ಸಂಕಲನದ ಉದ್ದಕ್ಕೂ ಜಡತೆಯ ವಿರುದ್ಧ ಪ್ರಚ್ಛನ್ನ ಸಮರವನ್ನ ಕವಿಯಾಂದಿಗೆ ಅನುಭವಿಸುವವರಿಗೆ ನೆನಪಾಗುತ್ತದೆ ‘‘ಮಾರ್ಪಾಟು ಹೊಸ ಜೀವನದ ಮುಖ್ಯ ಕುರುಹು’’. ಇದನ್ನೇ ನಂಬಿದ್ದ ಕಾರಂತರು ಇನ್ನೊಂದೆಡೆ ಹೇಳುತ್ತಾರೆ : ‘‘ ಜಡವಾಗಿ ಯಾರು ಒಂದು ಕಾಲದ ಜನಕ್ಕೆ ಅಂಟಿಕೊಂಡು, ಯಾವುದೇ ಸಾಂಪ್ರದಾಯಿಕ ಸಾಧನ ಶೈಲಿಗಳನ್ನು ಅನುಕರಿಸುತ್ತಾರೋ ಅಂಥ ಜನರ ಸಮಾಜ ಜೀವನವು ಚೈತನ್ಯಮಯವಾಗಿ ಸಾಗಿಲ್ಲವೆಂದು ಹೇಳಬೇಕು’’.

ಅಳಿದ ಮೇಲೆ ಉಳಿವದೇನು ?

ವ್ಯಷ್ಟಿ-ಸಮಷ್ಟಿಯ ಈ ಬದುಕಿನಲ್ಲಿ , ಬದುಕಿನ ಬಗೆ ಬಗೆಯ ಸಂಪರ್ಕ ಸಂದರ್ಭಗಳಲ್ಲಿ ಉಂಟಾದ ಹಿತ- ಅಹಿತ ಪ್ರಭಾವಗಳನ್ನು ಮೇಳವಿಸಿ, ಸಮಗ್ರ ದೃಷ್ಟಿಯಿಂದ ನೋಡಿದಾಗ, ಮಾನವನ ಬಾಳಿನಲ್ಲಿ ಉಳಿಯುವುದು ಏನು ? ಇದನ್ನು ಹುಡುಕುವ ಪ್ರಯತ್ನವನ್ನು ನಿರಂತರ ನಡೆಸಿದ ಕಾರಂತರು ಇನ್ನೊಂದು ಕಡೆ (‘ಅಳಿದ ಮೇಲೆ’ಕಾದಂಬರಿಯ ಮುನ್ನುಡಿ)ಹೇಳುತ್ತಾರೆ : ಸದ್ದು ಗದ್ದಲವೆಲ್ಲ ಅಡಗಿ, ಸಂತೆ ಜಾರಿ ಕರಗಿ ಮರೆಯಾದ ಬಳಿಕ, ‘‘ಬರಿಯ ಸ್ಮರಣೆಗಳಷ್ಟೇ ಆಮೇಲೆ ಉಳಿಯುವ ವಸ್ತುಗಳು, ನಡೆದು ಬಂದ ದಾರಿ ಸಾಗಿದವನು ತನ್ನ ಹೆಜ್ಜೆಯ ಜಾಡನ್ನು ಬಿಟ್ಟು ಹೋಗುವಂತೆ, ಕಳೆದ ಬಾಳು ಅನ್ಯರಲ್ಲಿ ಮೂಡಿಸಿದ ಪ್ರಭಾವಗಳಿಂದ ಉಳಿಯಬಹುದಾದ ವಸ್ತು. ನಮ್ಮ ಬಾಳು ಅದಕ್ಕಿಂತ ಗಾಢವಾದ ಮುದ್ರೆಯಾತ್ತಬಲ್ಲದು, ಎಂದು ನಡೆದ ಎಲ್ಲರೂ ಎಣಿಸಬೇಕಾಗಿಲ್ಲ. ಆ ಲಭ್ಯ ಎಲ್ಲರಿಗೂ ಸಿಗಲಾರದು... ’’ ಈ ಮಾತುಗಳ ಹಿನ್ನೆಲೆಯಲ್ಲಿ ಕಾರಂತರ ಒಂದು ಕವನದಲ್ಲಿ (‘ನೀ ದೊಡ್ಡವನಾಗಲು’) ಆನೆಯನ್ನು ಸಾಸಿವೆಯಲ್ಲಿ ಸೆರೆ ಹಿಡಿದಿಡುವಂತೆ ಸರಳವಾಗಿ ವಿಧಿ ನಿಷೇಧಗಳನ್ನು ತಿಳಿಹೇಳುತ್ತಾರೆ :

‘ದೇಶದಾ ವಿಸ್ತಾರ ಹಿಗ್ಗಿಸಲು ಬೇಡ,
ನಿನ್ನ ಕಣ್ಣಿನ ಅಳತೆಯಲಿರಿಸಿ ನೋಡ... ...
ಗೆದ್ದು ಬಾಳಲು ಬೇಕು, ದೃಷ್ಟಿ ಒಂದೇ ಇರಲಿ.
ಜಗವೆ ಸಿಗಬಹುದೈಯ್ಯ ನಿನ್ನ ಕೈಗೆ ಎಂದೆ.
ಊರು ಕೇರಿಗಳಲ್ಲ, ನಾಡು ಬೀಡುಗಳಲ್ಲ,
ದೇಶಪ್ರಾಂತಗಳೆಲ್ಲ ಮುಷ್ಟಿಯಲ್ಲಿರಲಿ;
ಜಗವ ಕುಗ್ಗಿಸಬೇಕು, ನೀನೆ ಹಿಗ್ಗಲು ಬೇಕು-
ಇರುವುದೊಂದೇ ದಾರಿ ಬಾರಿಸಲು ಜಯಭೇರಿ !’


ಊರ ಗೆದ್ದು ಮಾರ ಗೆಲ್ಲುವುದು ತಾನೇ ? ಜಗವನ್ನೇ ಗೆಲ್ಲುವ ಆಕಾಂಕ್ಷೆಯ, ಭೂಮ ದೃಷ್ಟಿಯ ಸಾಹಸಿಗೆ ಏನಾದರೂ ಹಿತವಚನಗಳುಂಟೆ ? ಇವೆ. ‘ವಿಶ್ವ ಮಾನವ’ ಕವನದ ವಸ್ತುವೇ ಅವು. ಇದೇ ಶಿವರಾಮ ಕಾರಂತರ ಕಾವ್ಯ ಸಂದೇಶ :

‘ವಿಶ್ವ ಮಾನವನಾಗೆ ಕಷ್ಟವೆನಿತಿಲ್ಲ,
ವಿಶ್ವವನು ಮುಷ್ಟಿಯಲಿ ಹಿಡಿವುದೊಂದೇ !....
ಕಾಲಮಾನದ ಬದುಕ ಬಲ್ಲೆಯೇನು ?
ಒಂಟಿ ಮಾನವ ತಲೆಯ ಕಿರಿ ಹೇನು ನೀನು !
ಆತ ಕಣ್ಮುಚ್ಚಿದೊಡೆ ಮಣ್ಣಾಪೆಯೇನು ?
ಲೋಕ ಎತ್ತಲು ಹೊರಟ ಆ ಮಹಿಮರಾರೇನೋ,
ತಮ್ಮ ಕಾಲವು ಸರಿದ ಮರು ಚಣಕೆ ನೆನಪಿಲ್ಲ.
ಬರುವ ಕಾಲದ ಚಿಂತೆ ಇಂದಿನವರಿಗಿಲ್ಲ.
ಲೋಕದ ಹಿತವನು ನೆನೆದು ಪೇಳ್ದರೇನೋ ಮಾತು,
ನಡೆಸಿದವರೆಷ್ಟು ಜನ ? ಅದರೆಣಿಕೆ ಹಾಕು;
ನಡೆಯಬೇಕೆಂದರವರ ಲೆಖ್ಖ ಹಾಕು,
ಅಂಥವರ ಬಾಳ್‌ ಹೊಲದಿ ಬೀಜ ಬಿತ್ತು.
ಚಿಗುರಿದ್ದು ಎಷ್ಟೆಂದು ಅರಸಿ ನೋಡು.
ಅಳಿದ ಊರಿಗೆ ನೀನು ಹಿರಿಯ ಗೌಡ;
ಉಳಿದವರು ಎಷ್ಟೆಂದು ಕಣ್ದೆರೆದು ನೋಡು.
ನಮ್ಮಳತೆಯನೆ ನಾವು ಹಿಗ್ಗಿಸಲು ಬಲಿತು
ಲೋಕವಾಪುದು ಆಗ ಸಾಸಿವೆಯ ಬಿತ್ತು !’(-‘ವಿಶ್ವ ಮಾನವ’ )

=====

(ಪ್ರಕಾಶನ ವಿವರ :

‘‘ ಸೀಳ್ಗವನಗಳು’’ : ಲೇಖಕರು : ಡಾ। ಶಿವರಾಮ ಕಾರಂತ

ಪುಟ : 10 + 82; ಮುದ್ರಣ : 1990

ಪ್ರಕಾಶಕರು : ಎಸ್‌. ಬಿ. ಎಸ್‌. ಪ್ರಕಾಶಕರು ಮತ್ತು ವಿತರಕರು, ರೈಲ್ವೇ ಪ್ಯಾರಲಲ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು 560001)

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X