• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಹಿಂದೂ ಸಂಗಮ’ ಕನ್ನಡ-ಮಯ ಸಂಭ್ರಮ !

By Staff
|

*ಶಿಕಾರಿಪುರ ಹರಿಹರೇಶ್ವರ, ಕ್ಯಾಲಿಫೋರ್ನಿಯಾ

ಉತ್ತರ ಕ್ಯಾಲಿಫೋರ್ನಿಯಾದ ಒಂದು ವೈಶಿಷ್ಟ್ಯವೇನೆಂದರೆ, ಈ ಪ್ರದೇಶದಲ್ಲಿ ಭಾರತೀಯ ಸಾಹಿತ್ಯ, ಸಂಸ್ಕೃತಿ, ಸಂಗೀತ, ಕಲೆ, ಧರ್ಮ, ಸಮಾಜದ ಬಗ್ಗೆ ಏನೇ ಮಹತ್ವದ ಚಟುವಟಿಕೆಯೇ ಯೋಜನೆಗೊಳ್ಳಲಿ, ಅದರಲ್ಲಿ ಕನ್ನಡಿಗರದ್ದೇ ಸಿಂಹ ಪಾಲು. ಎಷ್ಟಾದರೂ ಭಾರತೀಯ ಗಣಕ ವಿಜ್ಞಾನಿಗಳ ಪ್ರತಿಭೆಯ ಕೆನೆಯೇ ಬಂದು ಅಮೆರಿಕಾದ ಬೇರೆ ಕಡೆಗಿಂತ ಹೆಚ್ಚಾಗಿ ಸಾಂದ್ರವಾಗಿ ಇಲ್ಲಿ ಹೆಪ್ಪುಗಟ್ಟಿದೆಯಲ್ಲವೇ ? ಅದರಲ್ಲೂ ಸಹ ನಮ್ಮ ಕನ್ನಡಿಗರದೇ ದೊಡ್ಡ ಕೈ ತುತ್ತು. ಕೆಲವು ಕಂಪ್ಯೂಟರ್‌ ಕಂಪನಿಗಳಲ್ಲಂತೂ ಮೇಲಿಂದ ಕೆಳಗೆ ಕನ್ನಡವಾಡುವ ಜನರೇ ತುಂಬಿ ತುಳುಕಿ, ಅಲ್ಲಿ ಬೇರೆಯವರೂ ಕನ್ನಡ ಕಲಿತರೆ ಒಳ್ಳೆಯದೇನೋ ಎನ್ನಿಸುವ, ಅವರಿಗೆ ಭಾಸವಾಗುವ ಪರಿಸ್ಥಿತಿ ಬರಲಿದೆ ! ಇರಲಿ.

ಮೊನ್ನೆ ಮೊನ್ನೆಯವರೆಗೆ ಇಲ್ಲಿನ ಭಾರತೀಯ ದೂತಾವಾಸದಲ್ಲಿ ಕೌನ್ಸಿಲ್‌ ಜನರಲ್‌ ಆಗಿ ಇದ್ದ ಮಾನ್ಯ ಬಾಲಚಂದರ್‌ ಅವರು ಕನ್ನಡಿಗರು. ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸುತ್ತಿರುವವರು ಕನ್ನಡಿಗರು. ಸುಗಮ ಸಂಗೀತದಲ್ಲಿ ಹೆಸರು ಮಾಡಿರುವ ವೇದಿಕೆ ‘ರಾಗ’ವನ್ನು ಹುಟ್ಟು ಹಾಕಿ ನಡೆಸುತ್ತಿರುವವರು ಕನ್ನಡಿಗರು. ಕನ್ನಡಿಗ ಮೇಧಾವಿಗಳು ಅಲಂಕರಿಸಿದ ಎತ್ತರದ ಹೊಣೆಗಾರಿಕೆಯ ಹುದ್ದೆಗಳ ಸಂಸ್ಥೆಗಳು ಇಲ್ಲಿವೆ. ಬಗೆ ಬಗೆಯ ವಾಣಿಜ್ಯೋದ್ಯಮದಲ್ಲಿ ಮೇಲೇರಿದ ಕನ್ನಡಿಗರ ವಹಿವಾಟು ಇಲ್ಲಿದೆ. ಕನ್ನಡಿಗರು ಉಪ- ಸಂಪಾದಕರಾಗಿರುವ ಅಧಿಕ ಪ್ರಸಾರದ ಪ್ರಸಿದ್ಧ ಇಂಗ್ಲಿಷ್‌ ಸಾಪ್ತಾಹಿಕ ಇಲ್ಲಿದೆ. ಕನ್ನಡಿಗರು ತಮ್ಮ ತನು ಮನ ಧನ ಕಾಲ ಪರಿಶ್ರಮಗಳನ್ನು ಧಾರೆಯೆರೆದು ಕಟ್ಟಿ ಬೆಳೆಸಿದ, ಬೆಳೆಸುತ್ತಿರುವ ದೇವಸ್ಥಾನಗಳು ಇಲ್ಲಿವೆ; ಕನ್ನಡಿಗರು ನಡೆಸುತ್ತಿರುವ ಸಂಗೀತ ನೃತ್ಯ ಶಾಲೆಗಳು ಇವೆ; ಇತ್ತೀಚೆಗೆ ಉದಯವಾದ ಸಾಹಿತ್ಯ ಪರ ಕನ್ನಡ ಚಟುವಟಿಕೆಗಳಿಗೆ ಕಂಕಣ ತೊಟ್ಟ ‘ಕನ್ನಡ ಬಳಗ’ವಿದೆ; ಎಲ್ಲಕ್ಕೂ ಶಿಖರಪ್ರಾಯವಾಗಿ ಕನ್ನಡಕ್ಕೆ ಸಂಬಂಧಿಸಿದ ಎಲ್ಲ ಬಗೆಯ ಕಾರ್ಯಕ್ರಮಗಳಿಗೆ ಒಂದು ಅತ್ಯುತ್ತಮ ವೇದಿಕೆಯಾಗಿ, ಇಪ್ಪತ್ತೆೈದು ವರ್ಷಕ್ಕೂ ಹೆಚ್ಚು ಕಾಲ ಬೆಳೆದು ಸಮೃದ್ಧವಾಗಿರುವ ನಮ್ಮ ‘ಕನ್ನಡ ಕೂಟ’ವಿದೆ!

ಭಾರತೀಯ ಜಾತ್ರೆಯಲ್ಲಿ ಕನ್ನಡಿಗರದ್ದೇ ಸಿಂಹ ಪಾಲು...

ಕನ್ನಡಿಗರ ಈ ಆಡುಂಬೊಲದಲ್ಲಿ , ಈ ಜುಲೈ ಇಪ್ಪತ್ತೊಂದರ ಶನಿವಾರ ದಿನವಿಡೀ ಒಂದು ವಿಶೇಷ ಮಹೋತ್ಸವ ಜರುಗಲಿದೆ. ಅದೇ ‘ಹಿಂದೂ ಸಂಗಮ’. ಉದ್ದೇಶ : ಭವ್ಯ ಪರಂಪರೆಯುಳ್ಳ ಹಿಂದೂ ಸಮುದಾಯ ಎಚ್ಚೆತ್ತು ಸ್ವಾವಲಂಬಿಯಾಗಿ ಮುನ್ನಡೆಯುತ್ತಿರುವುದರ ಸಾಂಕೇತಿಕ ಸಮಾರಂಭದ ಆಚರಣೆ. ಇಲ್ಲಿನ ಮಿಲ್ಪಿಟಾಸ್‌ ನಗರದ ಎಸ್ಕುಲಾ ಡ್ರೆೃವ್‌ನಲ್ಲಿ ಇರುವ ಮಿಲ್ಪಿಟಾಸ್‌ ಹೈಸ್ಕೂಲಿನ ಸಭಾಂಗಣದಲ್ಲಿ ಬಗೆಬಗೆಯ ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ರಸದೌತಣ ಆ ಸಂಜೆ ಇದೆ. ಮಧ್ಯಾಹ್ನ ಒಂದರಿಂದ ರಾತ್ರಿ ಒಂಬತ್ತರ ವರೆಗೆ ಭರ್ಜರೀ ಕಾರ್ಯಕ್ರಮಗಳು. ಶಾಸ್ತ್ರೀಯ ಸಂಗೀತ, ವಾದ್ಯಸಂಗೀತ, ನೃತ್ಯ, ನಾಟಕ ಪ್ರದರ್ಶನಗಳು; ಪರ್ಯಾಯ ಅಧಿವೇಶನಗಳು, ವಿಚಾರ ಸಂಕಿರಣಗಳು; ಯೋಗ ಮತ್ತು ಆಯುರ್ವೇದ ಕಾರ್ಯಾಗಾರಗಳು; ಯುವ ಜನಾಂಗಕ್ಕೆ ಮತ್ತು ಮಕ್ಕಳಿಗಾಗಿಯೇ ಪ್ರತ್ಯೇಕ ಚಟುವಟಿಕೆಗಳು; ಪುಸ್ತಕ ವಿಭಾಗ; ಕುಶಲಕಲೆಗಳ ಪ್ರದರ್ಶನ, ಮಾರಾಟ ಮಳಿಗೆಗಳು. ಕೊನೆಯಲ್ಲಿ ಶ್ರೀ ಅನೂಪ ಜಲೋಟಾ ಅವರಿಂದ ಭಜನೆ ಮತ್ತು ಘಜಲ್‌ಗಳು; ಸುಮಾರು ಮುನ್ನೂರು ಮಕ್ಕಳು ಭಾಗವಹಿಸಿರುವ ರಾಮಾಯಣ ನಾಟಕ ಪ್ರದರ್ಶನ ! ಉತ್ತರ ಕ್ಯಾಲಿಫೋರ್ನಿಯಾದಲ್ಲಿನ ವಿಶಾಲ ಸ್ಯಾನ್‌ಪ್ರಾನ್ಸಿಸ್ಕೋ ಪ್ರದೇಶದ ಸುತ್ತ ಮುತ್ತಣ ಸುಮಾರು ಮೂವತ್ತು ಭಾರತೀಯ ಸಂಘ ಸಂಸ್ಥೆಗಳು ಒಂದುಗೂಡಿ ನಡೆಸುತ್ತಿರುವ ಈ ಭಾರತೀಯ ಜಾತ್ರೆಯಲ್ಲಿ ಯಥಾ ಪ್ರಕಾರ ಕನ್ನಡಿಗರದ್ದೇ ಸಿಂಹ ಪಾಲು !

ನೋಡಿ ಕನ್ನಡಿಗರ ಪ್ರಾತಿನಿಧ್ಯ ಹೀಗಿದೆ:

 • ‘ಯೋಗ- ಸಂಗಮ’ದ ಮುಖ್ಯ ಭಾಷಣಕಾರರು : ಬೆಂಗಳೂರಿನ ವಿವೇಕಾನಂದ ಯೋಗ ಕೇಂದ್ರದ ಅಂತರರಾಷ್ಟ್ರೀಯ ಸಂಯೋಜಕ ರಘುರಾಮ್‌ ಅವರು.
 • ‘ಬಾಲ ಸಂಗಮ’ದ ಮುಖ್ಯ ಅತಿಥಿ : ಕನ್ನಡದ ಪ್ರಸಿದ್ಧ ಯಕ್ಷಿಣಿಕಾರ ಉದಯ ಜಾದೂಗಾರ್‌
 • ‘ಕಲಾ ಸಂಗಮ’ದ ನಿರ್ವಾಹಕರು : ಅಮೆರಿಕಾದಲ್ಲಿ ನೆಲೆ ನಿಂತು ಭಾರತೀಯ ಅವಶ್ಯಕತೆಗಳಿಗೆ ಓಗೊಡುತ್ತಿರುವ ವಿಶ್ವಸ್ಥ ಪರಿಹಾರ ನಿಧಿ, ‘ಇಂಡಿಯಾ ಡೆವಲಪ್‌ಮೆಂಟ್‌ ರಿಲೀಫ್‌ ಫಂಡ್‌’ನ ಉಪಾಧ್ಯಕ್ಷ ಧಾರವಾಡದ ನಾಗರಾಜ ಪಾಟೀಲರು ಮತ್ತು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಅಧ್ಯಕ್ಷ, ಹಾಡುಗಾರ ರಾಮಪ್ರಸಾದ್‌ ಹೆಬ್ಬಳಲು ಅವರು.
 • ‘ಧರ್ಮ ಸಂಗಮ’ ವಿಚಾರ ಸಂಕಿರಣದ ಸಂಯೋಜಕರು : ‘ಅಮೆರಿಕನ್ನಡ’ದ ಎಸ್‌. ಕೆ. ಹರಿಹರೇಶ್ವರ ಅವರು. ಜೊತೆಗೆ ನೆರವೀಯುವವರು ಅಮೆರಿಕಾದ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಮಂಡಳಿಯ ಪದಾಧಿಕಾರಿಗಳಾದ ವಿಜಯ ರುಈಕರ್‌ ಅವರು. ‘ಸಂಸ್ಕಾರ ಮತ್ತು ಪದ್ಧತಿಗಳು ಆಧುನಿಕ ಕಾಲದಲ್ಲಿ ಹಿಂದೂ ಕುಟುಂಬದ ನಿಲುವು’ ಎಂಬ ವಿಚಾರ ಗೋಷ್ಠಿಯಲ್ಲಿ ಭಾಗವಹಿಸುವ ಮುಖ್ಯರು ಸನಿವೇಲ್‌ ಹಿಂದೂ ಮಂದಿರದ ವಿದ್ವಾನ್‌ ಗಜಾನನ ಜೋಷಿ ಅವರು ಮತ್ತು ಬದರಿಕಾಶ್ರಮದ ಪರಿವ್ರಾಜಕರು ಶ್ರೀ ಓಂಕಾರಾನಂದ ಸ್ವಾಮೀಜಿ ಅವರು.
 • ಸಂಸ್ಕೃತ ಸಂಗಮದ ನಿರ್ವಾಹಕರು : ಸಂಸ್ಕೃತ ಪ್ರಚಾರಕ್ಕೆ ಕಟಿಬದ್ಧರಾದ ‘ಸಂಸ್ಕೃತ ಭಾರತಿ’ಯ ಗೋವಿಂದ ರಾಯರು ಮತ್ತು ಸಂಸ್ಕೃತ ಭಾರತಿಯ ಅಧ್ಯಕ್ಷರು ವಿಠ್ಠಲ್‌ ಭಾವೆ ಅವರು.
 • ರಾಮಾಯಣ ನಾಟಕ ಪ್ರದರ್ಶನದ ಹೊಣೆ ಹೊತ್ತವರು ಇವರು : ‘ಹಿಂದೂ ಸ್ವಯಂ ಸೇವಕ ಸಂಘ’ದ ವೆಂಕಟೇಶಮೂರ್ತಿ ಪ್ರಧಾನ ಸಂಯೋಜಕರು, ಹೆಸರಾಂತ ಕಲಾವಿದೆ ವಿಜಯಾ ಯಕ್ಕುಂಡಿ ಸಲಹೆಗಾರರು, ಖ್ಯಾತ ವಿದುಷಿ ಜಯಶ್ರೀ ವರದರಾಜನ್‌ ಮತ್ತು ಆಲಿ ಅಕ್ಬರ್‌ ಖಾನ್‌ ಸಂಗೀತ ಕಲಾ ಶಾಲೆಯ ಅಧ್ಯಾಪಕ ನಚಿಕೇತ ಶರ್ಮ ಸಂಗೀತ ಸಲಹೆಗಾರರು, ನಂದಿನಿ ಉಮೇಶ್‌, ಗಾರ್ಗಿ ಪಂಚಾಂಗಂ ಮತ್ತು ಜ್ಯೋತಿ ರಾವ್‌ ಇವರುಗಳು ನಾಟಕದ ನಿರ್ದೇಶಕರು.
 • ಎಲ್ಲದಕ್ಕೂ ಶಿಖರ ಪ್ರಾಯವಾಗಿ, ‘ಹಿಂದೂ ಸಂಗಮ’ದ ಮುಖ್ಯ ಅತಿಥಿಗಳಾಗಿ ಭಾರತದಿಂದ ಬಂದು ಅಗ್ರ ಭಾಷಣ ಮಾಡಲಿರುವವರೂ ಕನ್ನಡಿಗರೇ. ಅವರೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನರು, ಸರಸಂಘಚಾಲಕರು, ಕೆ. ಎಸ್‌. ಸುದರ್ಶನ್‌ ಅವರು.
 • ಹೀಗೆ, ಉತ್ತರ ಕ್ಯಾಲಿಫೋರ್ನಿಯಾದ ಭಾರತೀಯರೆಲ್ಲರೂ ಕಾತುರರಾಗಿ ಎದುರುನೋಡುತ್ತಿರುವ ಈ ಹಿಂದೂ ಸಂಗಮ ತನ್ನ ಕನ್ನಡತನದಿಂದ ವಿಜೃಂಭಿಸಿರುವುದು ಎಲ್ಲ ಕನ್ನಡಿಗರಿಗೂ ಹೆಮ್ಮೆ ತಂದಿರುವ ವಿಷಯ.

  ಹೆಚ್ಚಿನ ವಿವರಗಳಿಗೆ ಭೇಟಿ ಕೊಡಿ. http://www.hindusangam.org ಅಥವಾ ಸಂಪರ್ಕಿಸಿ- ನಾಗರಾಜ ಪಾಟೀಲ್‌, ಫೋನ್‌ : (510)797-5601, ವೆಂಕಟೇಶ ಮೂರ್ತಿ, ಫೋನ್‌ : (925) 830-8377

  ಮುಖಪುಟ / ಸಾಹಿತ್ಯ ಸೊಗಡು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more