• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಹಾಡಿನ ಮಳೆ ಅಭಿಮಾನದ ಹೊಳೆ’

By Super
|

ಜನವರಿ 26, ಭಾರತದ ಗಣರಾಜ್ಯೋತ್ಸವ. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಸದಸ್ಯರಿಗೆ ದ್ವಿಗುಣಿತ ಸಂಭ್ರಮ. ಕಾರಣ... ಸಂಕ್ರಾಂತಿ ಹಬ್ಬದ ಆಚರಣೆಯೂ ಅಂದೇ. ಎಂದಿನಂತೆ ಕಿಕ್ಕಿರಿದು ತುಂಬಿದ ಸನ್ನಿವೇಲ್‌ ಹಿಂದೂ ಮಂದಿರದ ಸಮುದಾಯ ಭವನ. ಸಂಜೆ ಐದು ಗಂಟೆಗೆ ಧ್ವನಿವರ್ಧಕಗಳ ಮೂಲಕ ಹೊಮ್ಮಿ ಬಂದ ಪ್ರಾರ್ಥನೆ‘ ಶರಣು ಸಿದ್ಧಿ ವಿನಾಯಕ....' ವನ್ನು ಹಾಡಿದ ಪುಟಾಣಿಗಳು ದೀಪಿಕಾ ಕಿಶೋರ್‌ ಹಾಗೂ ದೀಪಾ ವಿವೇಕಾನಂದ್‌. ತದನಂತರ ದೀಪಿಕಾಳು ‘ನಂದ ತನಯ ಗೋವಿಂದನ ಭಜಿಪುದಾನಂದವಾದ ಮಿಠಾಯಿ...' ಎಂದು ಸಾರಿದಳು.

ಅಲ್ಲಿಂದ ಸಭಿಕರನ್ನು ಗಂಧರ್ವ ಲೋಕಕ್ಕೆ ಕರೆದೊಯ್ದದ್ದು ಪದ್ಮಜಾ ಕಿಶೋರ್‌ ಅವರ ಕಂಠ. ಪದ್ಮಜಾ ಅವರು ಹಾಡಿರುವ, ಪುರಂದರ ದಾಸ ದೀರ್ತನೆಗಳ ಧ್ವನಿಮುದ್ರಿಕೆ ‘ದಾಸ ಗಾನ ಮಂಜರಿ'ಯನ್ನು ಖ್ಯಾತ ಸುಗಮ ಸಂಗೀತ ಸಂಯೋಜಕ, ನಿರ್ದೇಶಕ, ಗಾಯಕ ರವಿ ರವೀಂದ್ರನಾಥ್‌ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ‘ ..ಈ ಸಿ.ಡಿಯಲ್ಲಿ ಪದ್ಮಜಾ ಅವರ ತಂದೆ ಮತ್ತು ಗುರುಗಳಾದ ಟಿ.ಕೆ. ಗೋವಿಂದರಾಯರ ಅತಿ ಶ್ರೇಷ್ಠ ಸಂಗೀತ ಸಂಯೋಜನೆ ಎದ್ದು ಕಾಣುತ್ತದೆ. ಅದಕ್ಕೆ ಅನುಗುಣವಾಗಿ, ಅತಿ ನಿಷ್ಠೆಯಿಂದ ಮನಸೆಳೆಯುವಂತೆ ಸುಶ್ರಾವ್ಯವಾಗಿ ಪದ್ಮಜಾ ಹಾಡಿದ್ದಾರೆ.... ಪದ್ಮಜಾ ಅವರು ತಮ್ಮ ಮನೆಯಲ್ಲೇ ಸಂಗೀತ ಪಾಠ ಶಾಲೆ ಪ್ರಾರಂಭಿಸಿದ್ದು, ಆ ‘ ಗಾನ ಮಂದಿರ'ದ ಮೂಲಕ ಕಲಾ ಸೇವೆ ಮಾಡುತ್ತಿದ್ದಾರೆ' ಎಂದರು.

ರವಿಯವರ ಅಭಿಪ್ರಾಯವನ್ನು ಅನುಮೋದಿಸಿದ ಎಸ್‌.ಕೆ.ಹರಿಹರೇಶ್ವರು ಅವರು, ‘ ಪದ್ಮಜಾ ಮತ್ತು ಕಿಶೋರ್‌ ಇಬ್ಬರೂ ತಮ್ಮ ಸಹೃದಯತೆ ಮತ್ತು ಸಹಜ ಆಸಕ್ತಿ, ಕಾಳಜಿಗಳಿಂದ ಕನ್ನಡ ಮತ್ತು ಸಂಗೀತದ ಸೇವೆ ನಡೆಸುತ್ತಿದ್ದಾರೆ' ಎಂದರು. ಧ್ವನಿ ಮುದ್ರಿಕೆಯ ಬಿಡುಗಡೆಗೊಳಿಸಿದ ಬಳಿಕ, ಪದ್ಮಜಾ ಅವರು, ‘ ತಲ್ಲಣಿಸದಿರು ...'ಎಂದು ಮನವನ್ನು ಸಮಾಧಾನಪಡಿಸಿ, ‘ ಕರೆದರೆ ಬರಬಾರದೇ..' ಎಂದು ಮಂತ್ರಾಲಯ ಗುರು ರಾಘವೇಂದ್ರರಿಗೆ ಕರೆಯಿತ್ತು, ‘ ಅಪರಾಧಿ ನಾನಲ್ಲ ' ಎಂದು ಅರಿಕೆ ಮಾಡಿದರು. ಅವರ ಇಂಪು ಕಂಠದಿಂದ ಹೊಮ್ಮಿದ ಗಾನಸುಧೆ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿತು.

ಸಾಧಕರಿಗೆ ಪ್ರೀತಿಯ ಸನ್ಮಾನ, ಅಭಿಮಾನ ಸಂದಾಯ!

ಪ್ರತಿ ವರ್ಷದ ಪದ್ಧತಿಯಂತೆ, ಈ ಬಾರಿಯೂ ವರ್ಷಪೂರ್ತಿ ಒಬ್ಬರಿಗೊಬ್ಬರು ಕೈಗೂಡಿಸಿ, ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಕರಿಸಿ ನೆರವಾದ, ವರ್ಷದ ಕಾರ್ಯಕ್ರಮಗಳನ್ನು ಅತ್ಯುತ್ತಮವಾಗಿ ಸಂಯೋಜಿಸಿ, ಇಲ್ಲಿನ ಕನ್ನಡಿಗರೆಲ್ಲರ ಮೆಚ್ಚುಗೆ ಗಳಿಸಿದ, ಕಾರ್ಯಕಾರೀ ಸಮಿತಿಯ ಪದಾಧಿಕಾರಿಗಳನ್ನು ಅಧ್ಯಕ್ಷರಾದ ರಾಮ್‌ಪ್ರಸಾದ್‌ ಅವರು ಸಭೆಗೆ ಪರಿಚಯಿಸಿದಾಗ ಸಭಿಕರು ಹರ್ಷೋದ್ಗಾರ ಮಾಡಿದರು.

ಆ ಬಳಿಕ ಸಭಿಕರಿಗೆ ಅಪ್ಸರ ಲೋಕದ ದರ್ಶನ ಭಾಗ್ಯ. ರಂಗು-ರಂಗಿನ ಹಿನ್ನೆಲೆಯಲ್ಲಿ ಸುಸಜ್ಜಿತವಾದ ವೇದಿಕೆಯಲ್ಲಿ , ಕಳೆದೈದು ದಶಕಗಳಿಂದ ಕನ್ನಡ ಚಲನ ಚಿತ್ರಗೀತೆಗಳು ಹಾದು ಬಂದ ಪರಿಸರಗಳತ್ತ ಒಂದು ನೋಟ ಹರಿಸಿದವರು ವೀಣಾ ರಮೇಶ್‌. ತಮ್ಮ ಪ್ರಭಾವ ಪೂರ್ಣ ನಿರೂಪಣೆಯಾಂದಿಗೆ ಸಮರ್ಥ ನಿರ್ದೇಶನದಲ್ಲಿ ಅವರು ಈ ಚಿತ್ರಮಂಜರಿಯನ್ನು ಪ್ರಸ್ತುತಪಡಿಸಿದರು.

ಚಂದ್ರಮನನ್ನೇ ಧರೆಗೆ ಕರೆದ ಯುವ ಜೋಡಿಯಾಂದಾದರೆ, ಆಗುಂಬೆಯಲ್ಲಿ ಪ್ರಿಯತಮೆಯಾಂದಿಗೆ ‘ಅಣ್ಣಾವ್ರು ' ಹಾಡಿ ನಲಿದಂತೆ ಹೆಜ್ಜೆ ಹಾಕಿದ ಜೋಡಿ ಇನ್ನೊಂದು. ಲೆಕ್ಕಾಚಾರವಿಡುವ ನಲ್ಲೆಯನ್ನು ಛೇಡಿಸಿ ಒಲಿಸಿಕೊಳ್ಳಲೆತ್ನಿಸುವ ಶ್ರೀನಾಥರಂತೆ ತನ್ನವಳ ಸುತ್ತಲೂ ಸುತ್ತಿದ ನಲ್ಲನೊಬ್ಬ, ಮಲೆನಾಡಿನರಗಿಣಿಯಾದ ತನ್ನ ನಲ್ಲೆಯನ್ನು ಕಾಣಲು ದೂರದೊರೆಲ್ಲ ಸುತ್ತಿ ಬಂದ ನಲ್ಲ ‘ಬುಳ್ಳ' ಇನ್ನೊಬ್ಬ, ‘ಸಾಂಗ್ಲಿಯಾನ'ನಾಗಿ ‘ಕಾಂಚನ'ಳನ್ನು ಶಂಕರ್‌ನಾಗ್‌ ಛೇಡಿಸಿದಂತೆ ಕೀಟಲೆ ಮಾಡಿ ತನ್ನವಳನ್ನು ಹೊತ್ತುಕೊಂಡೇ ಹೋದ ನಲ್ಲ ಮತ್ತೊಬ್ಬ. ಮತ್ತೆ ಬಂದವರು ‘ಮಿಂಚಂಚೆ' ಅರ್ಥಾತ್‌ ‘ಮಿಂಚು-ಅಂಚೆ'ಯ ಯುಗದವರು. ಕಾರಿನ ಗೀಳು ಮತ್ತು ಹಳ್ಳಿಯ ಬಾಳನ್ನು ಸಮಾನಾಂತರವಾಗಿ ಹೊಮ್ಮಿಸುವ ‘ ಕಾರ್‌... ಕಾರ್‌...' ಹಾಡಿಗೆ ಮನಮೋಹಕವಾಗಿ ನರ್ತಿಸಿದ ಇಬ್ಬರು ತರುಣಿಯರು. ಎಲ್ಲರೂ ನೋಡುಗರ ಗಮನ ಸೆಳೆದರು, ಚಪ್ಪಾಳೆಗಳ ಸುರಿಮಳೆ ಗಿಟ್ಟಿಸಿಕೊಂಡರು.

ಸಾಹಿತ್ಯದ ಅಭಿವ್ಯಕ್ತಿ ರೂಪಕ- ಇದು ಚಿತ್ರಭಾನು!

ಸಂಗೀತದ ಜೊತೆಗೆ ಸಾಹಿತ್ಯವೂ ಮುಖ್ಯವಲ್ಲವೇ? ಮತ್ತೆ ವೇದಿಕೆಯಲ್ಲಿ ಸೇರಿದ್ದು ವಾರ್ಷಿಕ ಸಂಚಿಕೆಯ ಸಂಪಾದಕ ವರ್ಗ, ಇಬ್ಬರು ಸಾಹಿತ್ಯಿಕ ಗಣ್ಯರೊಡನೆ. ಈ ಬಾರಿಯ ಸಾಹಿತ್ಯ ಸಂಚಿಕೆ ‘ ಚಿತ್ರಭಾನು'ವಿನ ಬಿಡುಗಡೆಯ ಹೆಗ್ಗಳಿಕೆಯೆಂದರೆ ಅದನ್ನು ‘ ತ್ರಿಮೂರ್ತಿ ' ರೂಪದಲ್ಲಿ ಸಾದರಪಡಿಸಿದ್ದು.

ಪ್ರಧಾನ ಸಂಪಾದಕ ಹರಿಹರೇಶ್ವರ ಅವರ ನೇತೃತ್ವದಲ್ಲಿ ಸಂಪಾದಕ ಮಂಡಳಿ ಹೊರತಂದ ಇನ್ನೂರ ಹತ್ತು (210) ಪುಟಗಳ ಸಂಚಿಕೆಯನ್ನು, ಪುಸ್ತಕರೂಪದಲ್ಲಿ ಖ್ಯಾತ ಸಾಹಿತಿ ಸಣ್ಣ ಕಥೆಗಾರ, ಕಡೂರು ರಾಮಸ್ವಾಮಿಯವರು ಬಿಡುಗಡೆ ಮಾಡಿ ಸಭೆಯ ಮುಂದಿಟ್ಟರೆ, ಅದೇ ಸಂಚಿಕೆಯ ಗಣಕ ಸಂಪುಟ (ಸಿ.ಡಿ) ವನ್ನು ಮತ್ತೋರ್ವ ಪ್ರಮುಖ ಬರಹಗಾರರಾದ ಎಂ.ವಿ. ನಾಗರಾಜರಾಯರು ಬಿಡುಗಡೆ ಮಾಡಿದರು. ಮತ್ತೂ ವಿಶೇಷವಾಗಿ, ಅದೇ ಸಂಚಿಕೆಯ ಅಂತರ್ಜಾಲ ತಾಣವನ್ನು ಬೆಂಗಳೂರಿನಲ್ಲಿರುವ www.thatskannada.com ಮತ್ತು ಅಂತರ್ಜಾಲ -ಪಾಕ್ಷಿಕ ‘ಸೂಜಿ ಮಲ್ಲಿಗೆ'ಯ ಸಂಪಾದಕ ಎಸ್ಕೆ. ಶಾಮಸುಂದರ್‌ ಅವರು ಉದ್ಘಾಟಿಸಿದರೆ, ಅದೇ ಸಮಯಕ್ಕೆ ಅದನ್ನಿಲ್ಲಿ ಬಿಳಿ ಪರದೆಯ ಮೇಲೆ ಹಾಯಿಸಿ ಸಭಿಕರಿಗೆ ತೋರಿದವರು ನಮ್ಮ ನೆಚ್ಚಿನ ಉದ್ಯಮಿ ಬಿ.ವಿ. ಜಗದೀಶ್‌ ಅವರು. ಈ ಬಗೆಯ ಮುಮ್ಮುಡಿಯ ಬಿಡುಗಡೆ ಹಿಂದೆಂದೂ ನಡೆದಿರದ ಒಂದು ವಿಶೇಷ ಕ್ರಮ. ಬಿಡುಗಡೆಗೆ ಮೊದಲು, ಸಂಪಾದಕ ಮಂಡಳಿಯವರುಗಳಾದ ಆಶಾ ಬಾಲಕೃಷ್ಣ ಅವರು ಕಡೂರು ರಾಮಸ್ವಾಮಿಗಳನ್ನೂ , ಸುಕುಮಾರ್‌ ರಘುರಾಂ ಅವರು ನಾಗರಾಜರಾಯರನ್ನೂ ಸಭೆಗೆ ಪರಿಚಯಿಸಿದರು. ಕೊನೆಯಲ್ಲಿ ಎಂ. ಆರ್‌. ದತ್ತಾತ್ರಿ ಸಂಚಿಕೆಯ ಸಿಂಹಾವಲೋಕನ ಮಾಡಿದರು.

ರಾಮ್‌ಪ್ರಸಾದ್‌ಗೆ ಮತ್ತೆ ಅಧ್ಯಕ್ಷ ಪೀಠ

ಭೋಜನ ವಿರಾಮದ ಬಳಿಕ, ವರ್ಷಾವಧಿ ಚುನಾವಣೆಯ ಫಲಿತಾಂಶವಾಗಿ, ಮತ್ತೆ ರಾಮ್‌ ಪ್ರಸಾದ್‌ ಅವರನ್ನೇ ಮುಂದಿನ ವರ್ಷದ ಅವಧಿಗೂ ಕನ್ನಡ ಕೂಟದ ಅಧ್ಯಕ್ಷರನ್ನಾಗಿ ಘೋಷಿಸಿದರು, ಚುನಾವಣಾ ಅಧಿಕಾರಿ ನಾಗರಾಜ ಪಾಟೀಲರು. ಆಧುನಿಕ ಹಿರಣ್ಯ ಕಶಿಪು ಬಂದು ಘರ್ಜಿಸಿ ಸಭಿಕರನ್ನು ಬೆಚ್ಚಿಸುವ ಮುನ್ನ, ಆ ಆಧುನಿಕ ಪೌರಾಣಿಕ ಸಂಗೀತ ನಾಟಕ ‘ಹಿರಣ್ಯಕಶಿಪು ವಧೆ'ಯ ನಿರ್ದೇಶಕ ಗುರು ಗುರುಸ್ವಾಮಿಯವರು ತಮ್ಮ ಕೃತಿಯ ಪೂರ್ವ ಪರಿಚಯ ನೀಡಿದರು. ನಾಟಕದ ನಿರ್ವಹಣೆ, ಕಲಾವಂತಿಕೆ, ಜೀವಂತಿಕೆ ಹಾಗೂ ಪ್ರಸಕ್ತ ವಿಷಯಗಳ ಪೋಣಿಸುವಿಕೆಯಿಂದಲೂ, ನಚಿಕೇತ ಶರ್ಮ ಮತ್ತು ತಂಡದವರ ಕರ್ಣಾನಂದಕರ ಹಿನ್ನೆಲೆ ಸಂಗೀತದಿಂದಲೂ, ನಂದಿನಿ ಉಮೇಶ್‌ ಅವರ ಸಮರ್ಥ ನಿರ್ದೇಶನದ ಚಿತ್ತಾಕರ್ಷಕ ನೃತ್ಯದಿಂದಲೂ, ನಾಟಕ ಗಮನ ಸೆಳೆಯಿತು. ನಟರೆಲ್ಲರ ಮನೋಜ್ಞ ಅಭಿನಯ, ವಿಶೇಷವಾಗಿ ಪುಟಾಣಿ ನಂದಿತಾಳ ‘ಪ್ರಹ್ಲಾದ ' ಪಾತ್ರ, ಸಭಾಂಗಣವನ್ನು ರಂಗಮಂದಿರವಾಗಿ ಪರಿವರ್ತಿಸಿತು. ಆಧುನಿಕ ಪೌರಾಣಿಕ ಸಂಗೀತ ನಾಟಕ, ನಮ್ಮೆಲ್ಲರನ್ನು ಪೌರಾಣಿಕ ಲೋಕಕ್ಕೇ ಒಯ್ದಿತ್ತು.

ಅಲ್ಲಿಂದ ಸಭೆಯನ್ನು ಹಿಂತಿರುಗಿಸಿದ್ದು, ‘ಯಾರಿಗೆಲ್ಲ ಸನ್ಮಾನ ?' ಅನ್ನುವ ಪ್ರಶ್ನೆ. ಈ ಕಾರ್ಯಕಾರೀ ಸಮಿತಿಯ ಅಧಿಕಾರಾವಧಿಯಲ್ಲಿ ಪ್ರತಿ ಕಾರ್ಯಕ್ರಮದಲ್ಲಿ ಕನ್ನಡಕ್ಕಾಗಿ (ಸಾಹಿತ್ಯ, ಸಂಸ್ಕೃತಿ, ಕಲೆ, ಉದ್ಯಮ,... ಯಾವುದೇ ನೆಲೆಯಿರಲಿ) ವಿಶೇಷ ಸೇವೆ ಸಲ್ಲಿಸಿದ ಇಬ್ಬರು ಗಣ್ಯರನ್ನು ಸನ್ಮಾನಿಸುವ ಪ್ರವೃತ್ತಿ ಬೆಳೆದು ಬಂದಿದೆ. ‘ ಇಂದು ಯಾರಿಗೆ ಸನ್ಮಾನ ? ' ಸಭಿಕರಲ್ಲಿ ಗುಸುಗುಸು. ವೇದಿಕೆಯ ಮೇಲೆ ಹರಿಹರೇಶ್ವರ ಅವರು ಮತ್ತು ರಾಮ್‌ ಪ್ರಸಾದ್‌ ಅವರು ಬಂದಾಗ ಉತ್ತರ ದೊರೆಯಿತು. ಬರಹಗಾರರಿಗೆ ವರವಾಗಿ ದೊರೆತ ಕನ್ನಡ ತಂತ್ರಾಂಶ ‘ಬರಹ'ದ ಸೃಷ್ಟಿಕರ್ತ ಶೇಷಾದ್ರಿ ವಾಸು ಚಂದ್ರಶೇಖರನ್‌ ಅವರಿಗೆ ‘ ಗಣಕರತ್ನ' ಎಂದೂ, ನಗೆ ನಾಟಕಗಳನ್ನು ಬರೆದು, ಆಡಿಸಿ, ತಾನೂ ಪಾತ್ರ ಮಾಡಿ, ಎಲ್ಲರನ್ನೂ ನಕ್ಕು-ನಗಿಸುವ ವರ ಪಡೆದು ಬಂದವರೆಂದೇ ಹೇಳಬಹುದಾದ ಅಲಮೇಲು ಅಯ್ಯಂಗಾರ್‌ ಅವರಿಗೆ ‘ನಾಟಕ ಕಲಾವತಂಸ' ಎಂದೂ ಬಿರುದುಗಳನ್ನಿತ್ತು ಕನ್ನಡ ಬಂಧುಗಳ ಪರವಾಗಿ ಪ್ರಶಸ್ತಿ ಫಲಕಗಳನ್ನು ನೀಡಲಾಯಿತು. ಜೊತೆಗೆ ಕನ್ನಡದ ಅಂತರ್ಜಾಲ ತಾಣ ದಾಟ್ಸ್‌ಕನ್ನಡ.ಕಾಂ ಮತ್ತು ಅಂತರ್ಜಾಲ ಪಾಕ್ಷಿಕ ‘ ಸೂಜಿ ಮಲ್ಲಿಗೆ ' ಇವೆರಡರ ಸಮರ್ಥ ಸಂಪಾದಕ ಎಸ್ಕೆ. ಶಾಮಸುಂದರ್‌ ಅವರಿಗೂ ವಿದೇಶದ ಕನ್ನಡಿಗರ ಪ್ರೀತಿ ಅಭಿಮಾನಿಗಳ ಕೃತಜ್ಞತೆಗಳ ಗುರುತಾಗಿ, ವಿಶೇಷವಾಗಿ ಸನ್ಮಾನಿಸಿ, ಪ್ರಶಸ್ತಿ ಫಲಕವನ್ನು ಕೊಡಲಾಯಿತು.

ಮುಂದೆ ಹರಿದು ಬಂದವಳು ‘ ಚಿತ್ರ-ಗಾನ-ಸರಿತಾ' . ಕನ್ನಡ ಚಲನಚಿತ್ರಗಳಲ್ಲಿ ಸಂಗೀತವನ್ನಾಧರಿಸಿದ ಗೀತೆಗಳ ಹೊನಲು. ನಚಿಕೇತ ಶರ್ಮ ಮತ್ತು ತಂಡದವರ ಸುಶ್ರಾವ್ಯ ಕಂಠಗಳಿಂದ ಹೊಮ್ಮಿದ ಸಪ್ತ ಸ್ವರಗಳ ರಾಗ ರಸ ಧಾರೆ, ಅಷ್ಟ ದಿಕ್ಕುಗಳನ್ನು ತುಂಬಿ ನವಚೇತನ ನೀಡಿದ್ದು ವಿಸ್ಮಯವೇನೂ ಅಲ್ಲ. ಅಮೋಘ ಅನುಭವ, ಸುಳ್ಳಲ್ಲ. ಹಾಡುಗಾರಿಕೆ ಮುಗಿಸಿದ ತಂಡ ಎದ್ದು ನಿಂತು ಪರಿಚಯ ಹೇಳಿ, ಕೈಮುಗಿದರೆ ಸಭೆ ಏಕ ಕಂಠದಿಂದ ಇನ್ನೊಂದು ಹಾಡು ಹಾಡಬೇಕೆಂದು ಬೇಡಿಕೆಯಿತ್ತಿದ್ದು ಅದಕ್ಕೆ ಸಾಕ್ಷಿ. ಅದನ್ನೂ ಮನ್ನಿಸಿದ ನಚಿಕೇತ ಅವರು ಸಹೋದರಿ ಗಾರ್ಗಿ ಪಂಚಾಂಗಮ್‌ ಅವರೊಂದಿಗೆ ಮತ್ತೊಂದು ಗೀತೆಯನ್ನು ಹಾಡಿ ಬೇಡಿಕೆಯನ್ನು ಪೂರೈಸಿದರು. ಭಾರತದ ಗಣರಾಜ್ಯ ದಿನವನ್ನು ಮತ್ತೆ ನೆನೆಯುವುದಕ್ಕಾಗಿ ನಾಗರಾಜ ಪಾಟೀಲರು ‘ ವಂದೇ ಮಾತರಂ.. ' ಎಂದು ತಮ್ಮ ಕಂಚಿನ ಕಂಠದಿಂದ ಮಾತೃಭೂಮಿಗೆ ನಮಿಸಿದರೆ ಸಭೆ ಮೌನವಾಗಿ ಗೌರವ ಸೂಚಿಸಿತು. ಮನೋರಂಜನಾ ಸಮಿತಿಯ ರಾಘವೇಂದ್ರ ಹೆಬ್ಬಳಲು ಅವರ ವಂದನಾರ್ಪಣೆ ಹಾಗೂ ಉಭಯರಾಷ್ಟ್ರಗಳ ರಾಷ್ಟ್ರಗೀತೆಗಳೊಂದಿಗೆ ಮುಕ್ತಾಯಗೊಂಡ ಕಾರ್ಯಕ್ರಮದ ನಿರ್ವಹಣೆಯನ್ನು ಸರಸ್ವತಿ ವಟ್ಟಂ ಹಾಗೂ ಜ್ಯೋತಿ ಮಹಾದೇವ್‌ ಅವರು ‘ ತಾಯಿ-ಮಗಳ 'ಸಂಭಾಷಣಾ ಶೈಲಿಯಲ್ಲಿ ವಿನೂತನವಾಗಿ ಮಾಡಿದ್ದರು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
NRI kalarava in North california : Chitrasankranthi festival celebrated in a different way
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more