ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕ ಛತ್ರಿಯಡಿ ಕನ್ನಡ, ಕನ್ನಡಿಗ - ಅಕ್ಕನ ಕಣ್ಣಲ್ಲಿ ಕಾಮನಬಿಲ್ಲು

By Staff
|
Google Oneindia Kannada News

*ಎಸ್ಕೆ. ಶಾಮಸುಂದರ

ಬೆಂಗಳೂರು : ತವರಿನಿಂದ ಅಮೇರಿಕೆಗೆ ಹಾರಿದ ಕನ್ನಡ ಮಾತನಾಡುವ ಜನರು, ಸೀಮೆಯಾಚೆಯಲ್ಲೂ ಕನ್ನಡ ಪರಿಸರವನ್ನು ಉಳಿಸಿಕೊಳ್ಳಲು ಕಟ್ಟಿಕೊಂಡ ಸಂಸ್ಥೆ ಅಕ್ಕ. ಅಮೇರಿಕಾ ಮಾತ್ರವಲ್ಲದೆ, ಕೆನಡಾ ಮತ್ತು ಮೆಕ್ಸಿಕೊ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರೂ ಅಕ್ಕ ಬಳಗದಲ್ಲಿದ್ದಾರೆ. ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರನ್ನು , ಕನ್ನಡ ಕೂಟಗಳನ್ನು ಸೇರಿಸಿಕೊಳ್ಳುವ ಮೂಲಕ ತನ್ನ ಪರಿಧಿಯನ್ನು ಅಗಲಿಸಿಕೊಳ್ಳುವ ಉದ್ದೇಶ ಅಕ್ಕನದು. ವೈಯಕ್ತಿಕ ಕಾರಣಗಳಿಗಾಗಿ ತವರಿಗೆ ಬಂದಿದ್ದ ಅಕ್ಕದ ಅಧ್ಯಕ್ಷ ಅಮರನಾಥ ಗೌಡ ಮಂಗಳವಾರ ಮಧ್ಯಾಹ್ನ ಅನೌಪಚಾರಿಕ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡದ್ದು , ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆ ಕುರಿತು ಅಕ್ಕ ಕಾಣುತ್ತಿರುವ ಕನಸುಗಳನ್ನು . ಸುದ್ದಿಗೋಷ್ಠಿಯಲ್ಲಿ ಬಳಗದ ಕಾರ್ಯದರ್ಶಿ ವಿಶ್ವಾಮಿತ್ರ ಹಾಜರಿದ್ದರು.

ಅಕ್ಕ ಬೆಳೆದು ಬಂದ ಹಂತಗಳನ್ನು , ಅದು ನಿಲುಕಿಸಿಕೊಂಡ ಎತ್ತರಗಳನ್ನು ಕುರಿತು ಅಮರನಾಥ ಗೌಡ ಹೇಳಿಕೊಂಡರು. ಅವನ್ನು ಗುರ್ತಿಸುವುದಾದರೆ -

  • ಅಕ್ಕ ಪ್ರಾರಂಭವಾದದ್ದು 1998 ರಲ್ಲಿ . ಅದೇ ವರ್ಷ ಫೀನಿಕ್ಸ್‌ ನಗರದಲ್ಲಿ ಕನ್ನಡಿಗರ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿತು. ಇತ್ತೀಚೆಗಷ್ಟೇ ಹ್ಯೂಸ್ಟನ್‌ನಲ್ಲಿ ವಿಶ್ವ ಸಹಸ್ರಮಾನ ಸಮ್ಮೇಳನ-2000 ವನ್ನು ನಡೆಸಿತು. ಅಕ್ಕನ ಸದಸ್ಯರು ಮಾತ್ರವಲ್ಲದೆ ಸಿಂಗಪೂರ, ಯು.ಕೆ. , ದುಬೈ ಮತ್ತಿತರ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದ ಸಮ್ಮೇಳನದಲ್ಲಿ , ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರು ರಾಜ್ಯದ ಪ್ರಸಿದ್ಧ ಕಲಾವಿದರೊಂದಿಗೆ ಭಾಗವಹಿಸಿದ್ದರು.
  • ಕನ್ನಡ ಭಾಷೆ, ಸಂಸ್ಕೃತಿ ಅಭಿವೃದ್ಧಿಗಾಗಿ ಅಕ್ಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಕುವೆಂಪು ಸಮಗ್ರ ಕಾವ್ಯ ಪ್ರಕಟಣೆ ಮುಖ್ಯವಾದುದು. ಹಂಪಿ ವಿಶ್ವ ವಿದ್ಯಾಲಯಕ್ಕೆ ಧನ ಸಹಾಯ ಮಾಡುವ ಮೂಲಕ ಬೆಳಕಿಗೆ ಬಂದ ಕುವೆಂಪು ಸಮಗ್ರ ಕಾವ್ಯ, ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಯಾಗಿತ್ತು .
  • ಬಿಳಿಗಿರಿ ರಂಗನ ಬೆಟ್ಟದ ವ್ಯಾಪ್ತಿಯ ಗುಡ್ಡಗಾಡುಗಳಲ್ಲಿ ವಾಸವಾಗಿರುವ ಕನ್ನಡಿಗರ ಆರೋಗ್ಯ, ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಅಕ್ಕ ಹಮ್ಮಿಕೊಂಡಿದೆ.
  • ಅಮೇರಿಕಾಕ್ಕೆ ಭೇಟಿ ಕೊಡುವ ಕನ್ನಡ ಕಲಾವಿದ- ಸಾಹಿತಿಗಳನ್ನು ಗುರ್ತಿಸಿ, ಗೌರವಿಸುವ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿರುವ ಅಕ್ಕ, ಅಮೇರಿಕಾಕ್ಕೆ ಭೇಟಿ ಕೊಟ್ಟ ಗಣ್ಯರು ಅಲ್ಲಿನ ಕನ್ನಡಿಗರೊಂದಿಗೆ ಸ್ಪಂದಿಸಲು ಅನುಕೂಲವಾಗುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ.
  • ಅಮೇರಿಕಾದಲ್ಲಿ ನೆಲೆಸಿರುವ ಕನ್ನಡ ಕಲಾವಿದರಿಗೆ ಹಂಪಿ, ಕದಂಬ, ಮೈಸೂರು ದಸರಾ ಇನ್ನಿತರೆ ಉತ್ಸವಗಳಲ್ಲಿ ಅವಕಾಶ ಮಾಡಿಕೊಡುವ ಬಗ್ಗೆ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾಂದಿಗೆ ಸಮಾಲೋಚನೆ ನಡೆಸಲು ಅಕ್ಕ ಉದ್ದೇಶಿಸಿದೆ. ಅಮೇರಿಕಾದಲ್ಲಿ ಕಾರ್ಯಕ್ರಮಗಳನ್ನು ನೀಡಲು ಬಯಸುವ ರಾಜ್ಯದ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ವ್ಯವಹರಿಸಿ, ಸೂಕ್ತ ಸಲಹೆ ಸಹಕಾರ ನೀಡಲು ಅಕ್ಕ ಮುಂದಾಗಿದೆ.
ವಿಶ್ವದ ನಾನಾ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದು ವೇದಿಕೆಯಡಿ ತರುವ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಕ್ಕನ ಕಣ್ಣಲ್ಲಿ ನೂರಾರು ಕನಸುಗಳಿವೆ. ಅಂದಹಾಗೆ, ಇತ್ತೀಚೆಗಷ್ಟೇ ಅಕ್ಕ ಬಳಗದ ಆಡಳಿತ ಸಮಿತಿಗಾಗಿ ನಡೆದ ಚುನಾವಣೆಯಲ್ಲಿ ಡೆಟ್ರಾಯ್ಟ್‌ ನಲ್ಲಿ ನ ಪ್ರಪ್ರಥಮ ಕನ್ನಡಿಗ ವಕೀಲರೆಂದು ಹೆಸರಾದ ಅಮರನಾಥಗೌಡ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಟೆಕ್ಸಾಸ್‌ ರಾಜ್ಯದ ಸ್ಯಾನ್‌ ಆ್ಯಂಟೋನಿಯಾದ ಡಾ. ವಿಶ್ವಾಮಿತ್ರ ಕಾರ್ಯದರ್ಶಿಯಾಗಿ, ಲಾಸ್‌ ಏಂಜಲೀಸ್‌ನ ಎಂ. ಕೃಷ್ಣಮೂರ್ತಿ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಅವರಿಗೆಲ್ಲ ಶುಭಾಶಯಗಳು, ಅಕ್ಕ ಅಮ್ಮನಾಗಲೆನ್ನುವ ಹಾರೈಕೆಯಾಂದಿಗೆ.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X