ಅನ್ನ ಕೊಟ್ಟ ದಣಿಯ ಮಗನನ್ನೇ ಕೊಂದು ಅಪಹರಣ ನಾಟಕವಾಡಿದ ಕಿರಾತಕ !
ಯಾದಗಿರಿ, ಜನವರಿ 16: ಇದು ಉಂಡ ಮನೆಗೆ ದ್ರೋಹ ಬಗೆದ ಕಥೆ. ಮಿಗಿಲಾಗಿ ಮಗನಂತೆ ಸಾಕಿದ ಮಾಲೀಕನ ಬದುಕನ್ನೇ ಮುಗಿಸಿದ ಕೆಲಸಗಾರನ ಕಿರಾತಕನ. ಅನ್ನ ಹಾಕಿ ಸಾಕಿದ ದಣಿಯ ಮಗನನ್ನೇ ಕೊಂದು ಚಿನ್ನಾಭರಣ ಕದ್ದ ಕೆಲಸಗಾರ ಅಪಹರಣ ನಾಟಕವಾಡಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ !
ಇಂತಹ ಕೃತ್ಯ ಹೆಸಗಿದ ಕಿರಾತಕನ ಹೆಸರು ಕಿಶೋರ್. ಕೊಲೆಯಾದ ಯುವಕ ನರೇಂದ್ರ. ಈ ಹೃದಯ ವಿದ್ರಾವಕ ಘಟನೆ ನಡೆದಿರುವುದು ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ. ಎಲ್ಲೋ ಇದ್ದ ಹುಡುಗನನ್ನು ನಂಬಿ ಕೆಲಸ ಕೊಟ್ಟು ಅನ್ನ ಹಾಕಿದ ಚಿನ್ನದ ಅಂಗಡಿ ಮಾಲೀಕ ತನ್ನ ಕುಡಿಯನ್ನೇ ಕಳೆದುಕೊಂಡಿದ್ದಾನೆ.
ರಾಜಸ್ಥಾನ ಮೂಲದ ಜಗದೀಶ್ ಚಿನ್ನದ ವ್ಯಾಪಾರಿ. ಯಾದಗಿರಿಯ ಹುಣಸಗಿಯಲ್ಲಿ ಚಿನ್ನದ ಆಭರಣ ಅಂಗಡಿ ಇಟ್ಟುಕೊಂಡಿದ್ದ. ಅಂಗಡಿಯಲ್ಲಿ ಕೆಲಸ ಮಾಡಲೆಂದು ರಾಜಸ್ಥಾನ ಮೂಲದ ಕಿಶೋರ್ ಎಂಬ ಯುವಕನನ್ನು ಕರೆತಂದಿದ್ದ. ಐದಾರು ವರ್ಷದಿಂದ ಕೆಲಸ ಮಾಡುತ್ತಿದ್ದ ಕಿಶೋರ್ ನನ್ನು ತನ್ನ ಮಗನಂತೆ ಸಾಕುತ್ತಿದ್ದ. ಮನೆಯಲ್ಲಿಯೇ ಇಟ್ಟುಕೊಂಡು ಊಟ ಹಾಕುತ್ತಿದ್ದ. ಕೈತುಂಬಾ ಸಂಬಳವೂ ಕೊಡುತ್ತಿದ್ದ. ಅಷ್ಟೇ ನಂಬಿಕೆಯಿಂದ ಕಿಶೋರ್ ಕೂಡ ಕೆಲಸ ಮಾಡುತ್ತಿದ್ದ. ಕಿಶೋರ್ ನನ್ನೇ ಬಿಟ್ಟು ಮಾಲೀಕರು ಊರಿಗೆ ಹೋಗಿ ಬರುತ್ತಿದ್ದರು. ಅಂಗಡಿಯಲ್ಲಿದ್ದ ಚಿನ್ನ ನೋಡಿದ್ದೇ ಕದಿಯುವ ಯೋಜನೆ ರೂಪಿಸಿದ್ದ.
ಚಿನ್ನದ ಸರ ಕಟ್ ಆಗಿದ್ದು, ಅದನ್ನು ಸರಿ ಪಡಿಸಿಕೊಂಡು ಬರುವಂತೆ ಕಿಶೋರ್ ಗೆ ಮಾಲೀಕ ಜಗದೀಶ್ ಹೇಳಿದ್ದಾರೆ. ಚೈನ್ ತೆಗೆದುಕೊಂಡು ಬೇರೆ ಅಂಗಡಿಗೆ ಹೋಗಬೇಕಿದ್ದ. ಚಿನ್ನ ಕದಿಯಲು ತನ್ನ ಸ್ನೇಹಿತ ಅಜಿತ್ ಎಂಬಾತನೊಂದಿಗೆ ಜಗದೀಶ್ ಅವರ ಮನೆಗೆ ಹೋಗಿದ್ದಾನೆ. ಮನೆಯಲ್ಲಿ ಮಾಲೀಕ ಮಗ ನರೇಂದ್ರ ಮಲಗಿದ್ದ. ಮನೆಗೆ ಬಂದ ಕಿಶೋರ್ ಚಿನ್ನಾಭರಣ ಕದಿಯಲು ಯತ್ನಿಸಿದ್ದಾನೆ.
ಇದಕ್ಕೆ ಅಡ್ಡಿ ಪಡಿಸಿದ ಇಂಜಿನಿಯರಿಂಗ್ ಪದವಿ ಓದುತ್ತಿದ್ದ ನರೇಂದ್ರನಿಗೆ ಚಾಕುವಿನಿಂದ ತಿವಿದು ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ. ತನ್ನ ಸ್ನೇಹಿತನ ಜತೆ ಬೈಕ್ ನಲ್ಲಿ ತೆರಳಿ ಅರ್ಧ ತಾಸಿನ ಬಳಿಕ ಮನೆ ಮಾಲೀಕನಿಗೆ ಕರೆ ಮಾಡಿದ್ದಾನೆ. ನರೇಂದ್ರನನ್ನು ಯಾರೋ ಕೊಲೆ ಮಾಡಿ, ನನ್ನನ್ನು ಅಪಹರಣ ಮಾಡಿದ್ದಾರೆ ಎಂದು ತಿಳಿಸಿ ಪೋನ್ ಕರೆ ಕಡಿತಗೊಳಿಸಿದ್ದ. ಗಾಬರಿ ಬಿದ್ದ ಜಗದೀಶ್ ಮನೆಗೆ ಹೋಗಿ ನೋಡುವಷ್ಟರಲ್ಲಿ ಮುದ್ದು ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಜಗದೀಶ್ ಕೂಡಲೇ ಹುಣಸಗಿಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿ ಕಿಶೋರ್ ಮತ್ತು ಸ್ನೇಹಿತನನ್ನು ಬಂಧಿಸಿದ್ದಾರೆ. ಅಪಹರಣ ನಾಟಕವಾಡಿದ್ದ ಕಿಶೋರ್ ಸದ್ಯ ಜೈಲು ಸೇರಿದ್ದಾನೆ. ಮಗನಂತೆ ನಂಬಿ ಸಾಕಿದ ಮಾಲೀಕ ತನ್ನ ಕುಡಿಯನ್ನೇ ಕಳೆದುಕೊಂಡಿದ್ದಾನೆ. ಈ ಕುರಿತು ಹುಣಸಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.