ಕುಮಾರಸ್ವಾಮಿ ಗ್ರಾಮ ವಾಸ್ತವ್ಯ, ಜನತಾದರ್ಶನಕ್ಕೆ ಚಂಡರಕಿ ಸಿದ್ಧ
ಯಾದಗಿರಿ, ಜೂನ್ 21 : ರಾಜ್ಯದ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಜನತಾದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸನ್ನದ್ಧವಾಗಿದೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಮಾರಂಭದ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಜನತಾ ದರ್ಶನಕ್ಕೆ ಅರ್ಜಿ ಸಲ್ಲಿಸಲು ಇಂದು ಬೆಳಿಗ್ಗೆ ಏಳು ಗಂಟೆಯಿಂದಲೇ ಸಾರ್ವಜನಿಕರು ಬರುತ್ತಿದ್ದಾರೆ, ಇದಕ್ಕಾಗಿ ಜಿಲ್ಲಾಡಳಿತ ಕೌಂಟಿಗಳನ್ನು ತೆರೆದಿದ್ದು, ಅರ್ಜಿ ಸಲ್ಲಿಸಿದವರಿಗೆ ಟೋಕನ್ ನೀಡಲಾಗುತ್ತಿದೆ.
ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಕಾರ್ಯಕ್ರಮವೂ ಜರುಗಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಮುಖ್ಯಮಂತ್ರಿಗಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಯಾದಗಿರಿಯಿಂದ ಗುರುಮಠಕಲ್ ಮಾರ್ಗವಾಗಿ ಚಂಡರಕಿ ಗ್ರಾಮಕ್ಕೆ ಮುಖ್ಯಮಂತ್ರಿಗಳ ಸಾರಿಗೆ ಸಂಸ್ಥೆಯ ಬಸ್ ಮೂಲಕ ಆಗಮಿಸಲಿದ್ದಾರೆ. ಮಾರ್ಗದುದ್ದಕ್ಕೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ತಳಿರು, ತೋರಣ, ಸ್ವಾಗತ ಕಮಾನುಗಳು, ಜನಪದ ಕಲಾ ತಂಡಗಳು ಕುಮಾರಸ್ವಾಮಿಯನ್ನು ಬರಮಾಡಿಕೊಳ್ಳಲು ಅಣಿಯಾಗಿವೆ. ಹೈದರಾಬಾದ್ ಕರ್ನಾಟಕ ಪ್ರದೇಶದ ಈ ಭಾಗದ ಜನತೆ ಮುಖ್ಯಮಂತ್ರಿಗಳ ಈ ಐತಿಹಾಸಿಕ ಕಾರ್ಯಕ್ರಮವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಅಹವಾಲು ಸಲ್ಲಿಸಲು ಕೌಂಟರುಗಳು : ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಸುಮಾರು 15 ಕೌಂಟರುಗಳನ್ನು ಸ್ಥಾಪಿಸಲಾಗಿದೆ. ಮಹಿಳೆಯರು, ವಿಕಲಚೇತನರಿಗೆ ಪ್ರತ್ಯೇಕ ಕೌಂಟರುಗಳಿವೆ.

ವಿವಿಧ ಇಲಾಖೆಗಳ ಯೋಜನೆಗಳನ್ನು ಬಿಂಬಿಸುವ ಪ್ರದರ್ಶನ ಮಳಿಗೆಗಳು, ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆಗಳ ಫಲಕಗಳು, ದೃಶ್ಯ ಮಾಹಿತಿಗಳೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸ್ಥಾಪಿಸಿರುವ ಮಳಿಗೆ ಕಾರ್ಯಕ್ರಮದ ಜನಾಕರ್ಷಣೆಯ ಕೇಂದ್ರವಾಗಿದೆ.
ತಿಂಗಳಲ್ಲಿ ಕನಿಷ್ಠ ಎರಡು ಬಾರಿ ಗ್ರಾಮ ವಾಸ್ತವ್ಯ : ಇಂದಿನಿಂದ ಯಾದಗಿರಿ ಜಿಲ್ಲೆಯ ಚಂಡ್ರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಆರಂಭಿಸುತ್ತಿರುವ ಕುಮಾರಸ್ವಾಮಿಯವರು, ತಿಂಗಳಲ್ಲಿ ಕನಿಷ್ಠ ಎರಡು ಬಾರಿ ಬೇರೆ ಬೇರೆ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಶುಕ್ರವಾರ ತಿಳಿಸಿದರು.

ಬಿಜೆಪಿ ಆಕ್ಷೇಪ : ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯದ ನೆಪದಲ್ಲಿ ಮೃಷ್ಟಾನ್ನ ಭೋಜನ, ವಸತಿ, ಪ್ರವಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಜಾಹೀರಾತುಗಳಿಗೆಂದು ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿದ್ದಾರೆ. ಇದರ ಬದಲಾಗಿ ಅದೇ ಹಣವನ್ನು ಅದೇ ಗ್ರಾಮದ ಅಭಿವೃದ್ಧಿಗೆ ವ್ಯಯಿಸಬಹುದಲ್ಲ ಎಂದು ಪ್ರಶ್ನಿಸಿದ್ದು, ಜನರ ತೆರಿಗೆ ಹಣವನ್ನು ತಮ್ಮ ಇಮೇಜ್ ಬೆಳೆಸಿಕೊಳ್ಳಲು ಅನಗತ್ಯವಾಗಿ ಖರ್ಚು ಮಾಡುತ್ತಿದ್ದಾರೆ ಎಂದು ಕರ್ನಾಟಕ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.












Click it and Unblock the Notifications