ಬೂಸ್ಟರ್ ಡೋಸ್‌ಗಳಿಗೆ ವೇದಿಕೆ ಕಲ್ಪಿಸುತ್ತಿದೆ ವಿಶ್ವ ಆರೋಗ್ಯ ಸಂಸ್ಥೆ
ವಾಷಿಂಗ್ಟನ್, ಡಿಸೆಂಬರ್ 23: ವಿಶ್ವ ಆರೋಗ್ಯ ಸಂಸ್ಥೆ(WHO) ಬೂಸ್ಟರ್ ಡೋಸ್‌ಗಳಿಗೆ ವೇದಿಕೆ ಕಲ್ಪಿಸುತ್ತಿದೆ. ಇದರಿಂದ ಅಪಾಯದಲ್ಲಿರುವ ಜನರನ್ನು ರಕ್ಷಿಸಿಕೊಳ್ಳಬಹುದು, ಹಾಗೂ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೂ ಸಹಾಯವಾಗಲಿದೆ ಎಂದು ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಸ್ಟ್ರಾಟೆಜಿಕ್ ಅಡ್ವೈಸರಿ ಗ್ರೂಪ್ ಆಫ್ ಎಕ್ಸ್‌ಪರ್ಟ್ಸ್ ಆನ್ ಇಮ್ಯುನೈಸೇಷನ್(SAGE) ನೀಡಿರುವ ವರದಿಯಲ್ಲಿ ಎರಡನೇ ಡೋಸ್ ಪಡೆದು 6 ತಿಂಗಳ ಬಳಿಕ ದೇಹದಲ್ಲಿ ರೋಗದ ವಿರುದ್ಧ ಹೋರಾಡುವ ಶಕ್ತಿ ಕಡಿಮೆಯಾಗುತ್ತದೆ. ಬೂಸ್ಟರ್ ಲಸಿಕೆಯನ್ನು ನೀಡದಿದ್ದರೆ ರೂಪಾಂತರಿ ವಿರುದ್ಧ ಹೋರಾಟ ಕಷ್ಟ ಎಂದು ಹೇಳಿದೆ.
50 ವರ್ಷ ಮೇಲ್ಪಟ್ಟವರಿಗೆ ಲಸಿಕೆಯ ಪರಿಣಾಮಕಾರಿತ್ವ ಶೇ.10ರಷ್ಟು ಕಡಿಮೆಯಾಗುತ್ತದೆ. ಒಂದೊಮ್ಮೆ ಅವರು ಲಕ್ಷಣಗಳನ್ನು ಹೊಂದಿದ್ದರೆ ಲಸಿಕೆ ಪರಿಣಾಮ ಶೇ.32ರಷ್ಟು ಕಡಿಮೆಯಾಗಲಿದೆ.

ಭಾರತದ ನಿಲುವೇನು?: ಕೋವಿಡ್‌ನಿಂದ ರಕ್ಷಣೆ ಪಡೆಯಲು ದೇಹಕ್ಕೆ ಲಸಿಕೆಯ 2 ಡೋಸ್‌ಗಳು ಸಾಕು. ಬೂಸ್ಟರ್ ಡೋಸ್‌ನ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹೆ ಸಮಿತಿ ಸದಸ್ಯ ಡಾ. ಜಯಪ್ರಕಾಶ್ ಮುಳಿಯಿಲ್ ಪ್ರತಿಪಾದಿಸಿದ್ದಾರೆ.
'ದೇಶದಲ್ಲಿ ಸಣ್ಣಗೆ ಹೆಚ್ಚುತ್ತಿರುವ ರೂಪಾಂತರಿ ಓಮಿಕ್ರಾನ್‌ನಿಂದ ರಕ್ಷಣೆಗಾಗಿ ಬೂಸ್ಟರ್ ಡೋಸ್ ನೀಡಬೇಕೆಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ, ಕೋವಿಡ್ (Covid) ವಿರುದ್ಧದ ಲಸಿಕೆಗಳನ್ನು ಒಂದರ ಮೇಲೊಂದರಂತೆ ಪಡೆಯಲು ಅವು ಆ್ಯಂಟಿಬಯೋಟಿಕ್ಸ್‌ಗಳಲ್ಲ.
ಹೀಗಾಗಿ ಬೂಸ್ಟರ್ ಡೋಸ್ ಅಗತ್ಯವೇ ಇಲ್ಲ ಎಂಬುದು ನನ್ನ ಅಭಿಪ್ರಾಯ. ಹಂದಿ ಜ್ವರಕ್ಕೆ ದೇಹದಲ್ಲೇ ಪ್ರತೀಕಾಯ ಶಕ್ತಿ ಬಂದಿದೆ' ಎಂದು ಅವರು ಹೇಳಿದ್ದಾರೆ. ದೇಹಕ್ಕೆ ತಗುಲುವ ಹೊಸ ರೋಗಗಳ ಪತ್ತೆಯೇ ಲಸಿಕಾ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಪ್ರಕ್ರಿಯೆ ಬಳಿಕ ದೇಹದ ಪ್ರತೀಕಾಯ ವ್ಯವಸ್ಥೆಯು ತನ್ನಿಂದ ತಾನೇ ವೈರಸ್ ವಿರುದ್ಧ ಹೋರಾಡುತ್ತದೆ ಎಂದು ತಿಳಿಸಿದರು.
ಪಾಸಿಟಿವಿಟಿ ದರ ಶೇ. 10 ದಾಟಿದರೆ ನಿರ್ಬಂಧ ಜಾರಿ: ಜಗತ್ತಿನಾದ್ಯಂತ ತಲ್ಲಣಕ್ಕೆ ಕಾರಣವಾಗಿರುವ ಕೋವಿಡ್ ರೂಪಾಂತರಿ ತಳಿ ಓಮಿಕ್ರಾನ್ (Omicron Variant), ಡೆಲ್ಟಾಗಿಂತ ಮೂರು ಪಟ್ಟು ಹೆಚ್ಚು ಸಾಂಕ್ರಾಮಿಕ. ಈ ವೈರಸ್ ನಿಯಂತ್ರಿಸಲು ಸಜ್ಜಾಗಬೇಕು ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಕರೆ ನೀಡಿದೆ.
ಈ ಸಂಬಂಧ ರಾಜ್ಯಗಳಿಗೆ ಪತ್ರ ರವಾನಿಸಿರುವ ಕೇಂದ್ರ ಆರೋಗ್ಯ ಕಾರ‍್ಯದರ್ಶಿ ರಾಜೇಶ್ ಭೂಷಣ್, 'ಸದ್ಯ ದೇಶದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಆದಾಗ್ಯೂಸೋಂಕು ಮತ್ತೊಮ್ಮೆ ಸ್ಫೋಟಗೊಳ್ಳುವುದನ್ನು ನಿಯಂತ್ರಿಸಲು ರಾತ್ರಿ ಕರ್ಫ್ಯೂ, ಸಭೆ ಸಮಾರಂಭ, ವಿವಾಹ ಕಾರ‍್ಯಕ್ರಮ ಮತ್ತು ಅಂತ್ಯ ಸಂಸ್ಕಾರಗಳಲ್ಲಿ ಭಾಗಿಯಾಗಲು ನಿರ್ಬಂಧ ವಿಧಿಸಬೇಕು. ಜೊತೆಗೆ ಕೋವಿಡ್ ಪರೀಕ್ಷೆ ಹೆಚ್ಚಳ, ಸೋಂಕಿತರ ಆಕ್ರಮಣಕಾರಿ ಪತ್ತೆ ಸೇರಿದಂತೆ ವಿವಿಧ ರೀತಿಯಲ್ಲಿ ಕಠಿಣ ನಿಬಂಧನೆ ಹೇರುವ ಅಗತ್ಯವಿದೆ' ಸಲಹೆ ನೀಡಿದ್ದಾರೆ.
ಇದೇ ವೇಳೆ ಕಳೆದ ಒಂದು ವಾರದಿಂದ ಶೇ.10 ಅಥವಾ ಅದಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ದಾಖಲಾಗುತ್ತಿದ್ದರೆ ಅಥವಾ ಶೇ.40ರಷ್ಟುಜನರು ಆಮ್ಲಜನಕ ಬೆಂಬಲದೊಂದಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಅಂತಹ ಪ್ರದೇಶಗಳಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಲೇಬೇಕು.
ವಾರ್ ರೂಮ್‌ಗಳನ್ನು ಸಕ್ರಿಯಗೊಳಿಸಿ, ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್, ಔಷಧ ಸಾಮರ್ಥ್ಯವನ್ನು ಹೆಚ್ಚಿಸಬೇಕು. ವೈದ್ಯಕೀಯ ಮೂಲ ಸೌಕರ‍್ಯ ಹೆಚ್ಚಿಸಲು ತುರ್ತು ಅನುದಾನವನ್ನೂ ಬಳಕೆ ಮಾಡಿಕೊಳ್ಳಬಹುದು. ಇಂಥ ತಂತ್ರವನ್ನು ಅನುಷ್ಠಾನಗೊಳಿಸಿದಾಗ ಮಾತ್ರ ಸ್ಥಳೀಯವಾಗಿ ಸೋಂಕು ಸ್ಫೋಟವಾಗುವುದನ್ನು ನಿಯಂತ್ರಿಸಬಹುದು ಎಂದಿದ್ದಾರೆ.
ಓಮಿಕ್ರಾನ್ ಹೊರತಾಗಿಯೂ ಡೆಲ್ಟಾತಳಿ ಇನ್ನೂ ದೇಶದ ಹಲವು ಭಾಗಗಳಲ್ಲಿ ಸಕ್ರಿಯವಾಗಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯವಾಗಿ ಮತ್ತು ಜಿಲ್ಲಾ ಮಟ್ಟದಲ್ಲಿ ವೈರಸ್ ನಿಗ್ರಹಕ್ಕೆ ಇನ್ನೂ ಹೆಚ್ಚಿನ ಕಠಿಣ, ದೂರದೃಷ್ಟಿಯುಳ್ಳ, ಕ್ರಿಯಾತ್ಮಕ ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯ, ಕೇಂದ್ರಾಡಳಿತ ಜಿಲ್ಲಾ ಮಟ್ಟದಲ್ಲಿ ವೈರಸ್ ನಿಗ್ರಹಕ್ಕೆ ಕೈಗೊಳ್ಳುವ ನಿರ್ಧಾರಗಳು ಪ್ರಮಾಣಿಕವಾಗಿರಲಿ ಮತ್ತು ತ್ವರಿತವಾಗಿರಲಿ ಎಂದು ಕೇಂದ್ರಸರ್ಕಾರ ತಿಳಿಸಿದೆ.












Click it and Unblock the Notifications