• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಂಪ್ ಹೇಳಿದರೆ ನಾನು ಕೊರೊನಾ ವೈರಸ್ ಲಸಿಕೆ ತೆಗೆದುಕೊಳ್ಳೊಲ್ಲ: ಕಮಲಾ ಹ್ಯಾರಿಸ್

|

ವಾಷಿಂಗ್ಟನ್, ಅಕ್ಟೋಬರ್ 8: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವು ಕೊರೊನಾ ವೈರಸ್ ಸೋಂಕಿನ ಸನ್ನಿವೇಶವನ್ನು ನಿರ್ವಹಣೆ ಮಾಡಿದ ರೀತಿ ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಬುಧವಾರ ನಡೆದ ಸಂವಾದದಲ್ಲಿ ಕಮಲಾ ಹ್ಯಾರಿಸ್ ಟ್ರಂಪ್ ಆಡಳಿತದ ವಿರುದ್ಧ ಹರಿಹಾಯ್ದರು.

ಆರೋಗ್ಯ ಕ್ಷೇತ್ರ ಮತ್ತು ಆರ್ಥಿಕತೆ, ಹವಾಮಾನ ವೈಪರೀತ್ಯ ಮತ್ತು ವಿದೇಶಾಂಗ ನೀತಿಗಳ ವಿಚಾರವಾಗಿ ಟ್ರಂಪ್ ಸಾಧನೆಗಳನ್ನು ಕಮಲಾ ಹ್ಯಾರಿಸ್ ಟೀಕಿಸಿದರು. ಟ್ರಂಪ್ ಆಡಳಿತದ ನಾಲ್ಕು ವರ್ಷಗಳಲ್ಲಿ ತೆಗೆದುಕೊಂಡ ಕ್ರಮಗಳನ್ನು ಪೆನ್ಸ್ ಸಮರ್ಥಿಸಿಕೊಂಡರು.

'ನಮ್ಮ ದೇಶದ ಅಧ್ಯಕ್ಷೀಯ ಇತಿಹಾಸದಲ್ಲಿ ಅತ್ಯಂತ ದೊಡ್ಡ ವೈಫಲ್ಯವೇನು ಎಂಬುದನ್ನು ಅಮೆರಿಕದ ಜನರು ಕಂಡಿದ್ದಾರೆ' ಎಂದು ಸಾಲ್ಟ್ ಲೇಕ್ ಸಿಟಿಯ ಉಟಾಹ್ ವಿಶ್ವವಿದ್ಯಾಲಯದಲ್ಲಿ ನಡೆದ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಗಳ ಸಂವಾದದಲ್ಲಿ ಕಮಲಾ ಹ್ಯಾರಿಸ್ ಹೇಳಿದರು.

ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಪೆನ್ಸ್, ಕೊರೊನಾ ವೈರಸ್ ಪಿಡುಗಿಗೆ ಚೀನಾವನ್ನು ದೂಷಿಸಿದರು. ಕೊರೊನಾ ವೈರಸ್‌ನ ಮೂಲ ಕೇಂದ್ರ ಚೀನಾಕ್ಕೆ ಪ್ರಯಾಣಿಸುವುದನ್ನು ಜನವರಿಯಲ್ಲಿ ನಿರ್ಬಂಧಿಸಿದ್ದು ಸೇರಿದಂತೆ, ರೋಗದ ವಿರುದ್ಧ ಹೋರಾಡುವ ಪ್ರಯತ್ನದಲ್ಲಿ ರಿಪಬ್ಲಿಕನ್ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಶ್ಲಾಘಿಸಿದರು. ಮುಂದೆ ಓದಿ...

ಚೀನಾವೇ ಕಾರಣ

ಚೀನಾವೇ ಕಾರಣ

'ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊಟ್ಟ ಮೊದಲ ದಿನದಿಂದಲೂ ಅಮೆರಿಕದ ಆರೋಗ್ಯಕ್ಕೆ ಆದ್ಯತೆ ನೀಡಿದ್ದರು ಎನ್ನುವುದನ್ನು ನಾನು ಅಮೆರಿಕದ ಜನತೆಗೆ ತಿಳಿಸಲು ಬಯಸುತ್ತೇನೆ. ಕೊರೊನಾ ವೈರಸ್‌ಗೆ ಚೀನಾವೇ ಕಾರಣ. ಅದರ ಬಗ್ಗೆ ಅಧ್ಯಕ್ಷ ಟ್ರಂಪ್ ಅವರಿಗೆ ಅಸಮಾಧಾನವಿದೆ' ಎಂದು ಪೆನ್ಸ್ ಹೇಳಿದರು.

ಮಾಸ್ಕ್ ಎಲ್ಲಿತ್ತು?

ಮಾಸ್ಕ್ ಎಲ್ಲಿತ್ತು?

ಟ್ರಂಪ್ ಅವರ ಇತ್ತೀಚಿನ ಸುಪ್ರೀಂಕೋರ್ಟ್ ನಾಮನಿರ್ದೇಶನ ಪ್ರಕಟಿಸುವ ಸಂಬಂಧ ಶ್ವೇತಭವನದಲ್ಲಿ ಕಳೆದ ತಿಂಗಳು ನಡೆದ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕ್ರಮಗಳ ಪಾಲನೆಯಾಗದೆ ಇರುವುದರ ಕುರಿತು ಪೆನ್ಸ್ ಅವರನ್ನು ಪ್ರಶ್ನಿಸಲಾಯಿತು. ಸ್ವತಃ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಇದರಲ್ಲಿ ಭಾಗವಹಿಸಿದ್ದ ಅನೇಕರು ಕೋವಿಡ್ ಪಾಸಿಟಿವ್‌ಗೆ ಒಳಗಾಗಿದ್ದಾರೆ ಎಂದು ಕಮಲಾ ಆರೋಪಿಸಿದರು.

ಜನರಿಗೆ ಸ್ವಾತಂತ್ರ್ಯವಿದೆ

ಜನರಿಗೆ ಸ್ವಾತಂತ್ರ್ಯವಿದೆ

ಈ ಕಾರ್ಯಕ್ರಮ ಹೊರಾಂಗಣದಲ್ಲಿ ನಡೆದಿದ್ದು ಎಂದ ಪೆನ್ಸ್, ಮಾಸ್ಕ್ ಕಡ್ಡಾಯಗೊಳಿಸುವುದು ಹಾಗೂ ಈ ಅಭ್ಯಾಸವನ್ನು ಜನರು ಅಳವಡಿಸಿಕೊಳ್ಲುವಂತೆ ರಾಷ್ಟ್ರವ್ಯಾಪಿ ಉತ್ತೇಜನ ನೀಡುವುದಾಗಿ ಹೇಳಿದ ಹ್ಯಾರಿಸ್ ಮತ್ತು ಜೋ ಬಿಡೆನ್ ಅವರನ್ನು ಟೀಕಿಸಿದರು. ಆರೋಗ್ಯದ ಕುರಿತಾಗಿ ಜನರು ತಮ್ಮದೇ ಆಯ್ಕೆಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಅವರು ಗೌರವಿಸುತ್ತಿಲ್ಲ ಎಂದು ದೂರಿದರು.

ಟ್ರಂಪ್ ಕಟ್ಟಿರುವ ತೆರಿಗೆ ಎಷ್ಟು?

ಟ್ರಂಪ್ ಕಟ್ಟಿರುವ ತೆರಿಗೆ ಎಷ್ಟು?

ಕೊರೊನಾ ವೈರಸ್ ಪಿಡುಗಿನ ನಡುವೆಯೇ ಆರೋಗ್ಯ ಕಾನೂನು ಅಫೋರ್ಡಬಲ್ ಕೇರ್ ಆಕ್ಟ್ ಅನ್ನು (ಎಸಿಎ) ಅಮಾನ್ಯಗೊಳಿಸಲು ಟ್ರಂಪ್ ಆಡಳಿತ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಕಮಲಾ, ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ವರ್ಷಕ್ಕೆ ಕೇವಲ $750 ತೆರಿಗೆ ಪಾವತಿಸುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು. 'ನಾನು ಮೊದಲ ಬಾರಿ ಕೇಳಿದಾಗ $7,50,000 ಎಂದುಕೊಂಡೆ. ಕೊನೆಗೆ ನೋಡಿದರೆ ಅದು $750 ಎಂದು ವ್ಯಂಗ್ಯವಾಡಿದರು.

ಆರ್ಥಿಕತೆ ಮತ್ತು ತೆರಿಗೆ ನೀತಿ ವಿಚಾರವಾಗಿ ಕಮಲಾ ಅವರ ವಾಗ್ದಾಳಿಗೆ ಪ್ರತಿಕ್ರಿಯೆ ನೀಡಿದ ಪೆನ್ಸ್, 'ಒಂದು ದಿನ ಜೋ ಬಿಡೆನ್ ನಿಮ್ಮ ತೆರಿಗೆಗಳನ್ನು ಹೆಚ್ಚಿಸಲಿದ್ದಾರೆ' ಎಂದರು. ಅದಕ್ಕೆ ಕಮಲಾ, ಬಿಡೆನ್ ಅವರು ವರ್ಷಕ್ಕೆ $4,00,000 ಸಂಪಾದನೆ ಮಾಡುವವರ ತೆರಿಗೆ ಹೆಚ್ಚಿಸುವುದಿಲ್ಲ ಎಂದು ಬಿಡೆನ್ ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಿದರು.

ಟ್ರಂಪ್ ಹೇಳಿದರೆ ನಂಬುವುದಿಲ್ಲ

ಟ್ರಂಪ್ ಹೇಳಿದರೆ ನಂಬುವುದಿಲ್ಲ

ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಕಷ್ಟು ಪ್ರಮಾಣದ ಲಸಿಕೆ ಲಭ್ಯವಾಗುವ ವಿಚಾರದಲ್ಲಿ ಟ್ರಂಪ್ ಹೇಳಿಕೆಗಳಿಗಿಂತ ತಾವು ವಿಜ್ಞಾನಿಗಳು ಹೇಳುವ ಮಾತುಗಳನ್ನು ಮಾತ್ರ ನಂಬುವುದಾಗಿ ಕಮಲಾ ಹೇಳಿದರು. ಟ್ರಂಪ್ ಈ ಹಿಂದೆ ಸಾಬೀತಾಗದ ಚಿಕಿತ್ಸೆಗಳ ಬಗ್ಗೆಯೇ ಮಾತನಾಡಿದ್ದರು ಎಂದು ಕಮಲಾ ಟೀಕಿಸಿದರು.

'ವೈದ್ಯರು ನಮಗೆ ಹೇಳಿದರೆ ಮಾತ್ರ ನಾವು ಅದನ್ನು ತೆಗೆದುಕೊಳ್ಳಬೇಕು. ಅವರು ಹೇಳಿದರೆ ಲಸಿಕೆ ತೆಗೆದುಕೊಳ್ಳಲು ನಾನು ಮುಂಚೂಣಿಯಲ್ಲಿರುತ್ತೇನೆ, ಖಂಡಿತವಾಗಿಯೂ. ಆದರೆ ಒಂದು ವೇಳೆ ನಮಗೆ ಅದನ್ನು ತೆಗೆದುಕೊಳ್ಳಲು ಡೊನಾಲ್ಡ್ ಟ್ರಂಪ್ ಹೇಳಿದರೆ ನಾನು ಖಂಡಿತಾ ತೆಗೆದುಕೊಳ್ಳುವುದಿಲ್ಲ' ಎಂದರು.

ಇದಕ್ಕೆ ಪ್ರತಿ ವಾಗ್ದಾಳಿ ನಡೆಸಿದ ಪೆನ್ಸ್, ಲಸಿಕೆ ಕುರಿತಾದ ಸಾರ್ವಜನಿಕರ ವಿಶ್ವಾಸವನ್ನು ಕುಂದಿಸುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದು ಒಪ್ಪುವಂತಹದ್ದಲ್ಲ. ಜನರ ಜೀವನದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.

English summary
US Vice Presidential debate: Kamala Harris said If Donald Trump tells us to take covid vaccine, i am not taking it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X