ಅವಧಿ ಪೂರ್ವ ವಿಜಯ ಘೋಷಣೆ ಇಲ್ಲ: ಡೊನಾಲ್ಡ್ ಟ್ರಂಪ್ ಸ್ಪಷ್ಟನೆ
ವಾಷಿಂಗ್ಟನ್, ನವೆಂಬರ್ 2: ಮಂಗಳವಾರ ಅಧ್ಯಕ್ಷೀಯ ಚುನಾವಣೆಗಳು ಪೂರ್ಣಗೊಳ್ಳುತ್ತಿದ್ದಂತೆಯೇ ಅವಧಿಗೂ ಮುನ್ನ ಜಯ ಘೋಷಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂಬ ವರದಿಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ. ಆದರೆ ಚುನಾವಣೆ ಬಳಿಕ ಕಾನೂನಾತ್ಮಕ ಹೋರಾಟ ನಡೆಸುವ ಸುಳಿವು ನೀಡಿದ್ದಾರೆ.
ಚುನಾವಣಾ ರಾತ್ರಿಯೇ ಅವಧಿ ಪೂರ್ವ ವಿಜಯ ಘೋಷಣೆ ಮಾಡುತ್ತಾರೆ ಎಂಬ ಮಾಧ್ಯಮ ವರದಿಯ ಬಗ್ಗೆ ನಾರ್ತ್ ಕರೊಲಿನಾದ ಷಾರ್ಲೊಟ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಟ್ರಂಪ್, 'ಇಲ್ಲ. ಅದು ಸುಳ್ಳು ವರದಿ' ಎಂದರು. ಇದೇ ಸಂದರ್ಭದಲ್ಲಿ ಅವರು, ಚುನಾವಣೆಯ ರಾತ್ರಿಯೇ ತಮ್ಮ ತಂಡ ಕಾನೂನು ಹೋರಾಟ ಶುರುಮಾಡುವ ಸುಳಿವು ನೀಡಿದರು.
'ಚುನಾವಣೆ ಬಳಿಕವೂ ಮತಪತ್ರಗಳನ್ನು ಸಂಗ್ರಹಿಸುವುದು ಗಾಬರಿ ಹುಟ್ಟಿಸುವ ಸಂಗತಿ. ರಾಜ್ಯಗಳು ಅಥವಾ ಜನರು ಚುನಾವಣೆ ಮುಗಿದ ಬಳಿಕವೂ ಸುದೀರ್ಘ ಸಮಯದವರೆಗೆ ಮತಪತ್ರ ಪಟ್ಟಿಗಳನ್ನು ಇರಿಸಿಕೊಳ್ಳಲು ಅವಕಾಶ ನೀಡಿರುವುದು ಕೂಡ ಆತಂಕಕಾರಿ ಸಂಗತಿ. ಏಕೆಂದರೆ ಇದು ಮೋಸಗಳಿಗೆ ಕಾರಣವಾಗುತ್ತದೆ' ಎಂದು ಟ್ರಂಪ್ ಹೇಳಿದರು.

'ಚುನಾವಣೆ ಮುಗಿದ ಕೂಡಲೇ ನಾವು ಆ ರಾತ್ರಿಯೇ ನಮ್ಮ ವಕೀಲರ ಜತೆಗೆ ನ್ಯಾಯಾಲಯಕ್ಕೆ ಹೋಗಲಿದ್ದೇವೆ' ಎಂದ ಟ್ರಂಪ್, ಚುನಾವಣಾ ದಿನದ ಬಳಿಕವೂ ಅನೇಕ ರಾಜ್ಯಗಳಲ್ಲಿ ಮತಪತ್ರಗಳನ್ನು ಸಂಗ್ರಹ ಮಾಡಲು ಅವಕಾಶ ನೀಡುವ ಸಂಬಂಧ ಸುಪ್ರೀಂಕೋರ್ಟ್ ತೆಗೆದುಕೊಂಡ ನಿರ್ಧಾರವನ್ನು ಟೀಕಿಸಿದರು.
'ಇದು ಬಹಳ ಅಪಾಯಕಾರಿ ನಿರ್ಧಾರ. ಇದರಲ್ಲಿ ಭಾರಿ ಪ್ರಮಾಣದ ವಂಚನೆ ಮತ್ತು ದುರ್ಬಳಕೆ ನಡೆಯಲಿದೆ ಎಂದು ನನಗೆ ಅನಿಸುತ್ತಿದೆ. ಕಂಪ್ಯೂಟರ್‌ಗಳ ಈ ಆಧುನಿಕ ಯುಗದಲ್ಲಿ ಚುನಾವಣೆಯ ರಾತ್ರಿ ನಮಗೆ ಫಲಿತಾಂಶ ಗೊತ್ತಾಗುವುದಿಲ್ಲ ಎನ್ನುವುದೇ ಆತಂಕ ಹುಟ್ಟಿಸುವ ವಿಚಾರ. ಜನರು ತಮ್ಮ ಮತಪತ್ರಗಳು ಬೇಕೆಂದು ಬಯಸಿದ್ದರೆ ಅವರು ಬಹಳ ಹಿಂದೆಯೇ ಪಡೆದುಕೊಳ್ಳಬಹುದಾಗಿತ್ತು. ಅವರು ಅದೇ ದಿನ ಮತಪತ್ರ ಚಲಾಯಿಸುವ ಅಗತ್ಯವಿರಲಿಲ್ಲ. ಒಂದು ತಿಂಗಳ ಹಿಂದೆಯೇ ಮತಪತ್ರಗಳನ್ನು ಹಾಕಬಹುದಾಗಿತ್ತು' ಎಂದು ಟ್ರಂಪ್ ಕಿಡಿಕಾರಿದ್ದಾರೆ.












Click it and Unblock the Notifications