ಪ್ರಿಯಾಂಕಾ ಚೋಪ್ರಾ ಮೇಲೆ ಗುರಿ ಇಟ್ಟಿದ್ದ ಪಾಕ್ ಗೆ ವಿಶ್ವಸಂಸ್ಥೆಯಿಂದ ಮುಖಭಂಗ
ವಾಷಿಂಗ್ಟನ್, ಆಗಸ್ಟ್ 23: ಯುನಿಸೆಫ್ ನ (United Nations International Children's Emergency Fund) ಗುಡ್ ವಿಲ್ ರಾಯಭಾರಿಯಾಗಿರುವ ಪ್ರಿಯಾಂಕಾ ಚೋಪ್ರಾ ಅವರನ್ನು ಆ ಸ್ಥಾನದಿಂದ ಕಿತ್ತುಹಾಕಬೇಕೆಂದುಪಾಕಿಸ್ತಾನ ವಿಶ್ವಸಂಸ್ಥೆಗೆ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವಸಸ್ಥೆಯ ವಕ್ತಾರರು ಪ್ರಿಯಾಂಕಾ ಚೋಪ್ರಾ ಬೆಂಬಲಕ್ಕೆ ನಿಂತಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಬಾಲಕೋಟ್ ನಲ್ಲಿ ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ನಡೆಸಿದ್ದನ್ನು ಪ್ರಿಯಾಂಕಾ ಚೋಪ್ರಾ ಸ್ವಾಗತಿಸಿದ್ದರು. ಆದರೆ ವಿಶ್ವಸಂಸ್ಥೆಯ ಶಾಂತಿಯ ರಾಯಭಾರಿಯಾಗಿರುವ ಪ್ರಿಯಾಂಕಾ ಚೋಪ್ರಾ, ಯುದ್ಧವನ್ನು ಪ್ರಚೋದಿಸುವುದು, ಸ್ವಾಗತಿಸುವುದು ಸರಿಯಲ್ಲ ಎಂದು ಪಾಕಿಸ್ತಾನ ದೂರಿತ್ತು.
Recommended Video
ಪಾಕಿಸ್ತಾನದ ನಟಿ ಅರ್ಮೀನಾ ಖಾನ್ ಮತ್ತು ಆಕೆಯ ಪ್ರಿಯಕರ ಫೆಸಾಲ್ ಖಾನ್ ಯುನಿಸೆಫ್ ಗೆ ಬರೆದ ಪತ್ರದ ಬಗ್ಗೆ ಮಾತನಾಡಿದ ವಕ್ತಾರರು, "ಪ್ರಿಯಾಂಕಾ ಚೋಪ್ರಾ ಅವರಿಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಎಲ್ಲಾ ಹಕ್ಕೂ ಇದೆ. ಗುಡ್ ವಿಲ್ ರಾಯಭಾರಿಯಾದ ಮಾತ್ರಕ್ಕೆ ಅವರು ತಮ್ಮ ಸ್ವಂತ ಅಭಿಪ್ರಾಯಗಳನ್ನು ಕಟ್ಟಿಹಾಕಿಕೊಳ್ಳಬೇಕಿಲ್ಲ. ಅವರು ಯುನಿಸೆಫ್ ನ ಪ್ರತಿನಿದಿಯ ಸ್ಥಾನದಲ್ಲಿ ನಿಂತು ಯಾವುದಾದರೂ ಹೇಳಿಕೆ ನೀಡಿದರೆ ಅದು ಯುನಿಸೆಫ್ ನ ಹೇಳಿಕೆಯಾಗುತ್ತದೆಯೇ ಹೊರತು, ಒಂದು ದೇಶದ ಪ್ರಜೆಯಾಗಿ ತನ್ನ ದೇಶದ ಬಗ್ಗೆ ಯಾವುದೇ ಹೇಳಿಕೆ ನೀಡಿದರೆ ಅದು ಯುನಿಸೆಫ್ ನ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಆಕೆಯ ವೈಯಕ್ತಿಕ ಹಕ್ಕನ್ನು ಕಸಿಯುವ, ಅಥವಾ ಆಕೆಯನ್ನು ಆ ಸ್ಥಾನದಿಂದ ಕಿತ್ತುಹಾಕುವ ಕೆಲಸವನ್ನು ಮಾಡುವುದಕ್ಕೆ ಬರುವುದಿಲ್ಲ" ಎಂದು ಪಾಕಿಸ್ತಾನಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ಮುಖಭಂಗವನ್ನುಂಟು ಮಾಡಿದೆ.

ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರನ್ನು ಪಾಕಿಸ್ತಾನ ಮಹಿಳೆಯೊಬ್ಬರು ಪ್ರಶ್ನೆಯೊಂದನ್ನು ಕೇಳಿದ್ದರು. "ನೀವು ಮಾನವೀಯತೆಯ ಬಗ್ಗೆ ಮಾತನಾಡುವುದನ್ನು ಕೇಳಿದರೆ ನನಗೆ ಏನು ಹೇಳಬೇಕೋ ಗೊತ್ತಾಗುವುದಿಲ್ಲ. ಏಕೆಂದರೆ ನಾನು ನಿನ್ನ ನೆರೆಯ ಪಾಕಿಸ್ತಾನದವಳು. ನೀವು ಸ್ವಲ್ಪ ಕಪಟಿ ಎಂಬುದು ನನಗೆ ಗೊತ್ತು. ಏಕೆಂದರೆ ನೀವು ಫೆಬ್ರವರಿ 26 ರಂದು 'ಇಂಡಿಯನ್ ಆರ್ಮ್ಡ್ ಫೋರ್ಸ್ ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಜೈ ಹಿಂದ್' ಎಂದು ಟ್ವೀಟ್ ಮಾಡಿದ್ದಿರಿ. ನೀವು ಯುನಿಸೆಫ್ ನ ಶಾಂತಿಯ ರಾಯಭಾರಿ. ಆದರೆ ಪಾಕಿಸ್ತಾನದ ಜೊತೆಗಿನ ಅಣು ಯುದ್ಧವನ್ನು ಪ್ರೋತ್ಸಾಹಿಸುತ್ತಿದ್ದೀರಿ. ಅದರಲ್ಲಿ ಯಾರೂ ಗೆಲ್ಲುವುದಕ್ಕೆ ಸಾಧ್ಯವಿಲ್ಲ" ಎಂದಿದ್ದರು.
ಆಕೆಯ ಮಾತುಗಳನ್ನು ಶಾಂತವಾಗಿಯೇ ಕೇಳಿಸಿಕೊಂಡ ಪ್ರಿಯಾಂಕಾ ಚೋಪ್ರಾ, "ನೀನು ಆಗ ಕೂಗುತ್ತಿದ್ದಾಗಲೇ ನಾನು ನಿನ್ನ ಮಾತನ್ನು ಕೇಳಿಸಿಕೊಂಡೆ ಈಗ ಶಾಂತಿಯಿಂದ ಕೇಳು. ನನಗೆ ಪಾಕಿಸ್ತಾನದಲ್ಲಿ ಸಾಕಷ್ಟು ಸ್ನೇಹಿತರಿದ್ದಾರೆ. ಆದರೆ ನಾನು ಭಾರತೀಯಳು. ಯುದ್ಧ ಎಲ್ಲಕ್ಕೂ ಪರಿಹಾರ ಎಮದು ನಾನು ಎಂದಿಗೂ ಅಂದುಕೊಂಡಿಲ್ಲ. ಆದರೆ ನಾನು ದೇಶಭಕ್ತಳು. ನನ್ನನ್ನು ಪ್ರೀತಿಸುವ ಯಾರಿಗಾದರೂ ನಾನು ನೋವುಂಟು ಮಾಡಿದ್ದರೆ ಕ್ಷಮಿಸಿ ವೈರುದ್ಧ್ಯದ ಅಭಿಪ್ರಾಯಗಳಲಿರಬಹುದು. ಆದರೆ ನಾವು ಇಲ್ಲಿರುವುದು ಕೇವಲ ಪ್ರೀತಿ ಮಾಡುವುದಕ್ಕೆ. ಚೀರಾಡುವುದರಿಂದ ಪ್ರಯೋಜನವಿಲ್ಲ. ಈ ಪ್ರಶ್ನೆಯನ್ನು ಕೇಳಿದ ನಿಮ್ಮ ಹುಮ್ಮಸ್ಸನ್ನು ನಾನು ಮೆಚ್ಚುತ್ತೇನೆ" ಎಂದು ಪ್ರಿಯಾಂಕಾ ಚೋಪ್ರಾ ಉತ್ತರಿಸಿದ್ದರು.












Click it and Unblock the Notifications