ಅಫ್ಘಾನಿಸ್ತಾನ ತಾಲಿಬಾನ್ ಹಿಡಿತದಲ್ಲಿದ್ದರೂ ಅಮೆರಿಕಕ್ಕೆ ಬೆದರಿಕೆ: ಬೈಡನ್
ವಾಷಿಂಗ್ಟನ್, ಆಗಸ್ಟ್ 20: ಅಫ್ಘಾನಿಸ್ತಾನ ತಾಲಿಬಾನ್ ಹಿಡಿತದಲ್ಲಿದ್ದರೂ, ಅಲ್-ಖೈದಾ ಸೇರಿದಂತೆ ಬೇರೆ ದೇಶಗಳಲ್ಲಿರುವ ಹಲವು ಉಗ್ರ ಸಂಘಟನೆಗಳಿಂದ ಅಮೆರಿಕಕ್ಕೆ ಬೆದರಿಕೆ ಬಂದಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರದಲ್ಲಿದ್ದರೂ ಸಹ, ಆ ದೇಶದ ಅತೀ ದೊಡ್ಡ ಬೆದರಿಕೆಗಳಾಗಿದ್ದ ಉಗ್ರಗಾಮಿ ಸಂಘಟನೆಗಳನ್ನು ತೊಡೆದುಹಾಕಿದ್ದೇವೆ.
ಈ ಕುರಿತಂತೆ ಎಬಿಸಿಯ ಗುಡ್ ಮಾರ್ನಿಂಗ್ ಅಮೇರಿಕಾ ದಲ್ಲಿ ಗುರುವಾರ ಪ್ರಸಾರವಾದ ಸಂದರ್ಶನದಲ್ಲಿ ಬೈಡೆನ್ ಮಾತನಾಡಿದ್ದು, ಅರಾಜಕತೆಯಿಲ್ಲದೆ ಅಫ್ಘಾನಿಸ್ತಾನವನ್ನು ತೊರೆಯಲು ಸಾಧ್ಯವೇ ಇರಲಿಲ್ಲ. ಅವ್ಯವಸ್ಥೆಗಳು ಉದ್ಭವಿಸದ ಸನ್ನಿವೇಶದಲ್ಲಿ ಅಲ್ಲಿಂದ ಹೊರ ಹೋಗಲು ನಾವು ನಿರ್ಧರಿಸಿದೆವು. ಎಲ್ಲವನ್ನೂ ವ್ಯವಸ್ಥಿತ ಹಂತಕ್ಕೆ ತಂದು ಅಲ್ಲಿಂದ ನಿರ್ಗಮಿಸಲು ಸಾಧ್ಯವಿರಲಿಲ್ಲ.
ಆದರೆ ಅಲ್ಲಿ ಈಗ ದಿಢೀರ್ ಬೆಳವಣಿಗೆ ನಮಗೆ ಆಘಾತವನ್ನು ಮತ್ತು ಅಚ್ಚರಿಯನ್ನುಂಟು ಮಾಡಿವೆ. ಅಲ್ಲಿ ಗೋಜಲು-ಗೊಂದಲ ಉಂಟಾಗಿದೆ. ಇಂತಹ ಸನ್ನಿವೇಶವಿಲ್ಲದೆ ಹೊರಹೋಗಲು ಬೇರೆ ದಾರಿಯೇ ಇರಲಿಲ್ಲ. ಅಮೆರಿಕ ಬೆಂಬಲಿತ ಅಫ್ಘನ್ ಸರ್ಕಾರದ ಹಠಾತ್ ಕುಸಿತದ ಆಘಾತಗೊಂಡಿದ್ದೇವೆ.
ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಜನರನ್ನು ಕರೆತರಲು ಸಾವಿರಾರು ಸೇನಾ ಪಡೆಗಳನ್ನು ಕಳುಹಿಸಲಾಗುವುದು. ಸ್ಥಳಾಂತರ ಪ್ರಕ್ರಿಯೆಯು ತಾವು ಯುದ್ಧ ಅಂತ್ಯಗೊಳಿಸಲು ನೀಡಿರುವ ಆಗಸ್ಟ್ 31ರ ಗಡುವಿನ ಒಳಗೆ ಪೂರ್ಣಗೊಳ್ಳಲಿದೆ. ಅಗತ್ಯವಿದ್ದರೆ ಈ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.
ಆಪ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳಿಗೆ ಅಮೆರಿಕ ಸರ್ಕಾರದ ಸೇನಾಪಡೆಗಳ ಹಿಂಪಡೆತ ನಿರ್ಧಾರವೇ ಕಾರಣ ಎಂದು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಇದರ ನಡುವೆಯೇ ತಮ್ಮ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ.
ಅಫ್ಘಾನಿಸ್ತಾನದಲ್ಲಿನ ಅವ್ಯವಸ್ಥೆಗಳಿಂದಾಗಿ ಅಮೆರಿಕನ್ನರು ಜೀವ ಕಳೆದುಕೊಳ್ಳುವುದು ಸೂಕ್ತವಲ್ಲ. ಸತತ 20 ವರ್ಷಗಳ ಬಳಿಕ ಆಫ್ಘಾನಿಸ್ತಾನ ತನ್ನ ಅವ್ಯವಸ್ಥೆ ಸರಿಪಡಿಸಿಕೊಳ್ಳಲು ಅನ್ಯಮಾರ್ಗವನ್ನು ಯೋಚಿಸಬೇಕು ಎಂದು ಅಮೆರಿಕದ ಪ್ರಜೆ ಸೆಬಾಸ್ಟಿಯನ್ ಗಾರ್ಸಿಯಾ ಹೇಳಿದ್ದಾರೆ.
ಕೊರೊನಾವೈರಸ್ ಸಾಂಕ್ರಾಮಿಕದ ನಂತರ ಅಮೆರಿಕ ಆರ್ಥಿಕತೆಯನ್ನು ಪುನರ್ ನಿರ್ಮಿಸುವಂತಹ ದೇಶೀಯ ಸಮಸ್ಯೆಗಳ ಮೇಲೆ ಬೈಡನ್ ಸರ್ಕಾರ ತನ್ನ ನೀತಿ ಕಾರ್ಯಸೂಚಿಯನ್ನು ಹೆಚ್ಚಾಗಿ ಕೇಂದ್ರೀಕರಿಸಿದೆ. ಹೀಗಾಗಿ ಅಮೆರಿಕ ಹಿತಾಸಕ್ತಿರಹಿತ ವಿಚಾರಗಳ ವೆಚ್ಚಗಳಿಗೆ ಬ್ರೇಕ್ ಹಾಕಲು ಬೈಡನ್ ಸರ್ಕಾರ ನಿರ್ಧರಿಸಿತ್ತು.
ಅದರಂತೆ ಆಫ್ಘಾನಿಸ್ತಾನದಲ್ಲಿ ಸೇನೆ ನಿರ್ವಹಣೆ ಮೇಲೆ ಮಾಡಲಾಗುತ್ತಿರುವ ಸಾವಿರಾರು ಕೋಟಿ ರೂಗಳನ್ನು ನಿಯಂತ್ರಿಸಲು ಅಮೆರಿಕ ಸರ್ಕಾರ ಯೋಜನೆ ರೂಪಿಸಿದೆ. ಅದರಂತೆ ಆಗಸ್ಟ್ ತಿಂಗಳಾಂತ್ಯದ ವೇಳೆಗೆ ಆಫ್ಘಾನಿಸ್ತಾನದಲ್ಲಿರುವ ಅಮೆರಿಕದ ಸಂಪೂರ್ಣ ಸೇನಾ ತುಕಡಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಮುಂದಾಗಿತ್ತು.
ಆದರೆ ಅಷ್ಟರೊಳಗೇ ತಾಲಿಬಾನಿಗರು ಕಂಡುಕೇಳರಿಯದ ರೀತಿಯಲ್ಲಿ ಆಫ್ಘಾನಿಸ್ತಾನದ ಎಲ್ಲ ಪ್ರದೇಶಗಳನ್ನು ಆಕ್ರಮಿಸಿಕೊಂಡು ಅಂತಿಮವಾಗಿ ರಾಜಧಾನಿ ಕಾಬುಲ್ ನಗರವನ್ನೂ ವಶಕ್ಕೆ ಪಡೆದಿದ್ದಾರೆ.

ತಾಲಿಬಾನ್ ಸಹಕಾರ
ತಾಲಿಬಾನ್ ನಿಯಂತ್ರಿತ ಕಾಬೂಲ್‌ನಲ್ಲಿ ಒಪ್ಪಿಕೊಂಡಿದ್ದ ಸಮಯಕ್ಕಿಂತ ಹೆಚ್ಚು ಅವಧಿ ಇದ್ದರೂ, ಅಫ್ಘಾನಿಸ್ತಾನದಲ್ಲಿ ಒಬ್ಬರೇ ಒಬ್ಬ ಅಮೆರಿಕದ ಪ್ರಜೆಯನ್ನು ಅಲ್ಲಿರಲು ಬಿಡುವುದಿಲ್ಲ ಎಂದು ಬೈಡನ್ ಹೇಳಿದ್ದಾರೆ.
'ಅಲ್ಲಿರುವ ಪ್ರತಿ ಅಮೆರಿಕನ್ ಪ್ರಜೆಯನ್ನೂ ಸ್ಥಳಾಂತರ ಮಾಡುವವರೆಗೂ ಅಮೆರಿಕನ್ ಪಡೆಗಳು ಅಲ್ಲಿಯೇ ಇರಲಿವೆ.ನಮ್ಮ ಕಾರ್ಯಾಚರಣೆಗೆ ತಾಲಿಬಾನಿಗಳು ಕೂಡ ಸಹಕಾರ ನೀಡುತ್ತಿದ್ದಾರೆ. ಅಮೆರಿಕದ ನಾಗರಿಕರು ಹೊರಗೆ ಹೋಗಲು ಬಿಡುತ್ತಿದ್ದಾರೆ. ಸ್ಥಳಾಂತರ ಕಾರ್ಯಗಳನ್ನು ನಡೆಸುವುದಕ್ಕಾಗಿ ಕಾಬೂಲ್ ವಿಮಾನ ನಿಲ್ದಾಣವನ್ನು ಸಂಪೂರ್ಣ ಹಿಡಿತದಲ್ಲಿ ಇರಿಸಿಕೊಳ್ಳುವಂತೆ ತಮ್ಮ ಪಡೆಗಳಿಗೆ ಆದೇಶಿಸಲಾಗಿದೆ. ನಾವು ಅಲ್ಲಿ ಇದ್ದ ಸಂದರ್ಭದಲ್ಲಿ ನಮಗೆ ಸಹಾಯ ಮಾಡಿದವರಿಗೆ ಹೆಚ್ಚು ಕಷ್ಟಗಳನ್ನು ನೀಡಲಾಗುತ್ತಿದೆ ಎಂದು ತಾಲಿಬಾನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ
ಅಫ್ಘಾನಿಸ್ತಾನದಲ್ಲಿನ ಯುದ್ಧದಲ್ಲಿ ಅಮೆರಿಕ ಸೇನೆ ಪಾಲ್ಗೊಳ್ಳುವಿಕೆ ಅರ್ಥಹೀನ ಅಥವಾ ಮೌಲ್ಯ ರಹಿತವಾದದ್ದು ಎಂದು 2/3ರಷ್ಟು ಅಮೆರಿಕನ್ನರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆ NORC ಸೆಂಟರ್ ಫಾರ್ ಪಬ್ಲಿಕ್ ಅಫೇರ್ಸ್‌ನ ಸಮೀಕ್ಷೆಯ ಪ್ರಕಾರ, ಅಧ್ಯಕ್ಷ ಜೋ ಬೈಡನ್ ಅವರ ವಿದೇಶಿ ನೀತಿ ಮತ್ತು ರಾಷ್ಟ್ರೀಯ ಭದ್ರತೆಯ ನಿರ್ವಹಣೆಗೆ ಸಂಬಂಧಿಸಿದಂತೆ ಅಮೆರಿಕವು ಹೆಚ್ಚು ಭಿನ್ನಾಭಿಪ್ರಾಯ ಹೊಂದಿದ್ದರೂ ಸಹ, ಅಫ್ಘಾನಿಸ್ತಾನದಲ್ಲಿನ ಯುದ್ಧವು ಉಪಯುಕ್ತವಾಗಿದೆಯೆಂದು ಅಮೆರಿಕದ ಬಹುಪಾಲು ಜನರು ಅನುಮಾನಿಸಿದ್ದಾರೆ. ಅಲ್ಲದೆ ಆಫ್ಘಾನಿಸ್ತಾನದಲ್ಲಿನ ಯುದ್ಧದಲ್ಲಿ ಅಮೆರಿಕ ಸೇನೆ ಪಾಲ್ಗೊಳ್ಳುವಿಕೆ ಅರ್ಥಹೀನ ಅಥವಾ ಮೌಲ್ಯ ರಹಿತವಾದದ್ದು ಎಂದು 2/3ರಷ್ಟು ಅಮೆರಿಕನ್ನರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ರಾಷ್ಟ್ರೀಯ ಭದ್ರತೆಗಾಗಿ ಅನುಮೋದನೆ
ಏತನ್ಮಧ್ಯೆ, ಬೈಡನ್ ಅವರ ಅಂತಾರಾಷ್ಟ್ರೀಯ ವ್ಯವಹಾರಗಳ ನಿರ್ವಹಣೆಯನ್ನು ಶೇಕಡಾ 47 ರಷ್ಟು ಜನರು ಅನುಮೋದಿಸಿದರೆ, ರಾಷ್ಟ್ರೀಯ ಭದ್ರತೆಗಾಗಿ ಬೈಡನ್ ಅವರನ್ನು ಶೇ.52ರಷ್ಟು ಜನರು ಅನುಮೋದಿಸಿದ್ದಾರೆ. ಆಗಸ್ಟ್ 12 ರಿಂದ 16 ರ ಅವಧಿಯಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ.

ದಶಕಗಳ ಯುದ್ಧ ಅಂತ್ಯ
ಅಫ್ಘಾನಿಸ್ತಾನದಲ್ಲಿ ಎರಡು ದಶಕಗಳ ಯುದ್ಧವು ತಾಲಿಬಾನ್ ಅಧಿಕಾರಕ್ಕೆ ಮರಳುವುದರೊಂದಿಗೆ ಮತ್ತು ಕಾಬೂಲ್ ರಾಜಧಾನಿಯನ್ನು ವಶಪಡಿಸಿಕೊಳ್ಳುವುದರೊಂದಿಗೆ ಅಂತ್ಯವಾಗಿದ್ದು, ಸೇನೆಯನ್ನು ಹಿಂಪಡೆಯುವ ಅಮೆರಿಕ ಅಧ್ಯಕ್ಷರ ನಿರ್ಧಾರದ ಬಳಿಕ ತಾಲಿಬಾನಿಗರು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿದ್ದಾರೆ. ಇದೇ ಕಾರಣಕ್ಕೆ ಅಮೆರಿಕದಲ್ಲಿ ಬೈಡನ್ ದ್ವಿಪಕ್ಷೀಯ ಖಂಡನೆಯನ್ನು ಎದುರಿಸುತ್ತಿದ್ದು, ಅದಾಗ್ಯ ಆಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆಯುವ ನಿರ್ಧಾರಕ್ಕೆ ಅಮೆರಿಕ ಅಧ್ಯಕ್ಷರು ಬದ್ಧರಾಗಿದ್ದಾರೆ. ಯುದ್ಧವನ್ನು ಅನಿರ್ದಿಷ್ಟವಾಗಿ ಮುಂದುವರಿಸಲು ಅನುಮತಿಸುವುದಿಲ್ಲ. ತಮ್ಮ ಈ ನಿರ್ಧಾರಕ್ಕೆ ಅಮೆರಿಕನ್ನರು ಬೆಂಬಲ ನೀಡುತ್ತಾರೆ ಎಂದು ಬೈಡನ್ ಹೇಳಿದ್ದಾರೆ.












Click it and Unblock the Notifications