ಹರಕೆ ತೀರಿಸುವ ಮುನ್ನ ಚಾದರ ಎಳೆದಾರು ಜೋಕೆ; ಇದು ಡಿಕೆಶಿ ಪಾಲಿನ ಕತ್ತಿ ಸೀಳುವ ತಂತಿ ನಡಿಗೆ!
ಈಗ ತಾನೇ ಐಪಿಎಲ್ ಮುಗಿದಿದೆ. ಚಿಕ್ಕ ಗ್ರೌಂಡ್ ಗಳಲ್ಲಿ ಫೋರ್- ಸಿಕ್ಸರ್ ಗಳನ್ನು ಹೊಡೆಯುವ ಬ್ಯಾಟರ್ ಗಳ ವೈಭವ ಇನ್ನೂ ಕಣ್ಣಿನಿಂದ ಸರಿದಿಲ್ಲ. ಇಲ್ಲಿ, ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿದ್ದಾರೆ. ಪಾಪ, ಅವರಿಗೆ ರಾಜಕಾರಣದಲ್ಲಿ ಮೈಲೇಜ್ ತರುವಂಥ 'ಬಜೆಟ್' ಅಂತ ಇರುವುದು ಒಂದೇ. 2027ರ ಪೂರ್ಣಾವಧಿ ಬಜೆಟ್ ಆಗುತ್ತದೆ ಅನ್ನೋದು ಬಿಟ್ಟರೆ, 2028ಕ್ಕೆ ಶಾಸ್ತ್ರಕ್ಕೆ ಅಂತಷ್ಟೇ ಬಜೆಟ್.
ಏಕೆಂದರೆ ಕರ್ನಾಟಕಕ್ಕೆ ಅದು ಚುನಾವಣೆ ವರ್ಷ. ಕಡಿದು ಕಟ್ಟೆ ಹಾಕುವುದು ಅಂತ ಏನಿರುವುದಿಲ್ಲ. ಆ ನಂತರ ಚುನಾವಣೆಯಲ್ಲಿ ಗೆದ್ದು ಬರುವ ಪಕ್ಷ- ಪಕ್ಷಗಳ ಒಕ್ಕೂಟವೇ ಪೂರ್ಣಾವಧಿ ಬಜೆಟ್ ಕೊಡುವುದಕ್ಕೆ ಸಾಧ್ಯ. ಇನ್ನು ಈಗ ಜೂನ್ ನಲ್ಲಿ ಅಧಿಕಾರಕ್ಕೆ ಏರಿ, ಶಿವಕುಮಾರ್ ಏನನ್ನೇ ತಂದರೂ ಅದು ಸಿದ್ದಣ್ಣನ ಅಕೌಂಟಿಗೆ ಜಮೆ ಆಗುತ್ತದೆ. ಇನ್ನು ಈಗಾಗಲೇ ತಂತಿ ನಡಿಗೆಯಂತೆ ಗ್ಯಾರಂಟಿ ಯೋಜನೆ ಜೊತೆಗೆ ಸಾಗುತ್ತಿರುವ ಕಾಂಗ್ರೆಸ್ ಸರ್ಕಾರ ಏದುಸಿರು ಬಿಟ್ಟರೆ ಅದರ 'ಶಕುನ' ಸರಿಯಿಲ್ಲ ಅನ್ನೋ ಹಣೆಪಟ್ಟಿ ಪಾಪ, ಡಿಕೆ ಶಿವಕುಮಾರ್ ಅವರಿಗೆ.

ಇತಿಹಾಸ ಮುಖ್ಯಮಂತ್ರಿ ಪರವಾಗಿಲ್ಲ
ಆದರೆ, ಒಂದು ಸಲ ಸಿಎಂ ಆಗಿಬಿಡಬೇಕು. ಯಾಕೆಂದರೆ ಪ್ರತಿ ಸಲ ಮುಖ್ಯಮಂತ್ರಿ ರೇಸಿನಲ್ಲಿ ಇರುತ್ತದೆ. ಈಗಾಗಲೇ ಹುಲಿ ಮೇಲೆ ಕುಳಿತ ಅನುಭವ ಇದೆಯಲ್ಲ ಅಂತ ಪ್ರತಿ ಅವಕಾಶದಲ್ಲೂ ಹೆಸರು ಕೇಳುತ್ತಲೇ ಇರುತ್ತದೆ. ಶಿವಕುಮಾರ್ ಅವರಿಗೆ ಕನಿಷ್ಠ ಮೂರು ವರ್ಷದ ಅವಧಿಗೆ ಸಿಂಹಾಸನ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು. ಕರ್ನಾಟಕ ಎಲೆಕ್ಷನ್ ಪಾಲಿಟಿಕ್ಸ್ ಇತಿಹಾಸ ಗಮನಿಸಿದರೆ, ಅದು ಕೂಡ ಡಿಕೆಶಿ ಪರವಾಗಿಲ್ಲ. ಆಡಳಿತದಲ್ಲಿದ್ದ ಪಕ್ಷ ಮತ್ತೊಮ್ಮೆ ಒಳ್ಳೆ ಸಂಖ್ಯೆಯ, ಹೆಚ್ಚಿನ ಸಂಖ್ಯೆಯ ಸೀಟು ಗಳಿಸಿದ ಉದಾಹರಣೆ ಕಳೆದ ಎರಡು ದಶಕಗಳಲ್ಲಿಯಂತೂ ಇಲ್ಲ. ನಗರ ಭಾಗಗಳಲ್ಲಿಯಂತೂ ಕಾಂಗ್ರೆಸ್ ಮೇಲಿನ ಸಿಟ್ಟು ಜಾಸ್ತಿ ಇದೆ. ಏನೇ ಗೃಹ ಜ್ಯೋತಿ, ಯುವನಿಧಿ, ಅಕ್ಕಿಭಾಗ್ಯ, ಶಕ್ತಿ, ಗೃಹಲಕ್ಷ್ಮಿ ಯೋಜನೆಗಳು ಇದ್ದರೂ ಅಭಿವೃದ್ಧಿ ಕೆಲಗಳಂತೂ ಇಂಚು ಕೂಡ ಕದಲುತ್ತಿಲ್ಲ.
ಮತ್ತವೇ ಹಳೇ ಫೇಸುಗಳು
ಹೇಗೋ ಒಮ್ಮೆ ಮುಖ್ಯಮಂತ್ರಿ ಆಗಿಬಿಡಬೇಕು ಎಂಬ ತಪನೆಯಲ್ಲಿ ಹಠಕ್ಕೆ ಬಿದ್ದು ಶಿವಕುಮಾರ್ ಕುರ್ಚಿ ಪಟ್ಟಿಯಲ್ಲಿ ಕೈ ಒತ್ತಿಟ್ಟಿದ್ದಾರೆ. ಸುತ್ತಮುತ್ತ ನೋಡಿದರೆ ಮತ್ತವೇ ಹಳೇ ಫೇಸುಗಳು. ಸಿದ್ದರಾಮಯ್ಯ ಎಲ್ಲಿ ಇಲ್ಲ ಅನ್ನೋ ಹಾಗೆ ಸಿದ್ದಣ್ಣನ ಕ್ಯಾಂಡಿಡೇಟುಗಳು. ಹಾಗಿದ್ದರೆ ಬೆಂಬಲ ಕೊಟ್ಟವರಿಗೆ ಶಿವಕುಮಾರ್ ಏನು ಋಣ ಸಂದಾಯ ಮಾಡಬಹುದು? ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಿಬಿಟ್ಟರೆ ಹೇಳಿ. ಹೈಕಮ್ಯಾಂಡ್ ಇರುವಂಥ ಅಥವಾ ಗಟ್ಟಿಯಾಗಿ ಇರುವಂಥ ಪಕ್ಷಗಳಲ್ಲಿ ಫುಲ್ಲು ಪವರ್ ಅನ್ನೋದು ಕನಸಲ್ಲಿ ಕನಸಿನ ಮಾತು. ಎಲ್ಲೋ ಒಬ್ಬರು ವೈಎಸ್ ರಾಜಶೇಖರ ರೆಡ್ಡಿ, ಇಲ್ಲೆಲ್ಲೋ ಬಿ.ಎಸ್. ಯಡಿಯೂರಪ್ಪ ಅಂಥ ಹೆಸರುಗಳು ಕಾಣುವುದಕ್ಕೆ ಸಿಗಬಹುದು, ಅಷ್ಟೇ.
ಅಹಿಂದ ಸಿದ್ಧಾಂತದ ಮುಂದುವರಿಕೆ ಹೇಗೆ?
ಇದಂತೂ ಡಿಕೆ ಶಿವಕುಮಾರ್ ಅವರ ಬೌಂಡರಿ ಮ್ಯಾಚ್ ಕ್ರಿಕೆಟ್. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಕೆಸಿ ವೇಣುಗೋಪಾಲ್, ಸುರ್ಜೇವಾಲಾ... ಉಫ್ ಇನ್ನೂ ಎಷ್ಟು ಜನಕ್ಕೆ ಶಿವಕುಮಾರ್ ಅವರು ಉತ್ತರ ಹೇಳ್ತಾನೇ ಇರಬೇಕು. ಇದರ ಮಧ್ಯೆ ಸಿದ್ದಣ್ಣ 'ಅಹಿಂದ ಸಿದ್ಧಾಂತ'ದ ಮುಖವಾಡವನ್ನು ಬೇರೆ ಸದಾ ಹಾಕಿಕೊಂಡಿರಬೇಕು. ದೇವಸ್ಥಾನ- ಗುಡಿಗಳಿಗೂ ಮೇಲಿಂದ ಮೇಲೆ ಹೋದರೆ "ಬ್ರದರ್ಸ್" ಬೇಜಾರು ಮಾಡಿಕೊಳ್ತಾರೆ ಶಿವಕುಮಾರ್ ಅನ್ನೋರು ಸಹ ಬೇಕಾದಷ್ಟು ಜನ ಇದ್ದಾರೆ.
ಯತೀಂದ್ರ- ಜಾರಕಿಹೊಳಿ ಮಗ್ಗುಲು ಮುಳ್ಳು
ಇದೆಲ್ಲಕ್ಕಿಂತ ಯತೀಂದ್ರ ಸಿದ್ದರಾಮಯ್ಯ ಸರ್ಕಾರದಲ್ಲಿ ಇದ್ದಾರೆ, ಇನ್ನೂ ತಮಾಷೆ ಅಂದರೆ, ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಅಂದರೆ ಸತೀಶ್ ಜಾರಕಿಹೊಳಿ ಆಗಬಹುದು ಅಂದಿದ್ದರಲ್ಲ ಯತೀಂದ್ರ, ಅವರು ಸಹ ಸಂಪುಟದಲ್ಲಿ ಇದ್ದಾರೆ. ಅಲ್ಲಿಗೆ ಶಿವಕುಮಾರ್ ಅವರ 'ಬಯಕೆ ಶಾಸ್ತ್ರ' ಮುಗಿಸಿದಂತೆ ಆಗುತ್ತದೆಯೇ ವಿನಾ ಅಧಿಕಾರ ಚಲಾಯಿಸುವುದು, ಬಲಿಷ್ಠರಾಗುವುದು, ಹೆಸರು ಗಳಿಸುವುದು ಇವೆಲ್ಲ ದೂರದ ಮಾತಾಯಿತು.
ಹರಿಪ್ರಸಾದ್ ಬಂದರು ದಾರಿ ಬಿಡಿ
ಇನ್ನು ಬಿ.ಕೆ. ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಂದು ಕೂತಿದ್ದಾರೆ. ಅಲ್ಲಿಗೆ ಡಿ.ಕೆ. ಶಿವಕುಮಾರ್ ಅವರಿಗೆ ತುಂಬ ಬಿಗಿಯಾದ ಪಕ್ಷ ಶಕ್ತಿಕೇಂದ್ರವೊಂದು ಸೃಷ್ಟಿಯಾಗಿದೆ. ಹರಿಪ್ರಸಾದ್ ಅವರು ಕಾಂಗ್ರೆಸ್ ಹೈಕಮಾಂಡ್ ಹ್ಯಾಂಡ್. ಅವರಿಗೆ ಕಾಂಗ್ರೆಸ್ ಸಿದ್ಧಾಂತ ಅನ್ನೋದು ಮೈ ಮೇಲಿನ ಚರ್ಮದ ರೀತಿ. ಉಳಿದ ಎಲ್ಲ ವಿಷಯಗಳನ್ನು ಪಕ್ಕಕ್ಕಿಟ್ಟು, ಹರಿಪ್ರಸಾದ್ ಅವರ ಮುಂದಿನ ದಿನಗಳಲ್ಲಿನ ಹೇಳಿಕೆಗಳಿಗೆ ಉತ್ತರ, ಸ್ಪಷ್ಟನೆ, ಸಮಜಾಯಿಷಿ ಕೊಡುವುದಕ್ಕೆ ಅಂತಲೇ ಬಹುಶಃ ಒಬ್ಬರನ್ನು ನೇಮಿಸುವ ಸ್ಥಿತಿ ಬರಬಹುದು. ಇನ್ನು ಸಿದ್ದರಾಮಯ್ಯ ಅವರೇನೂ ರಾಜಕೀಯ ಸನ್ಯಾಸ ತೆಗೆದುಕೊಂಡಿಲ್ಲ. ಹೈಕಮಾಂಡ್ ಗಮನಕ್ಕೆ ತರಬೇಕಾದ ವಿಷಯಗಳನ್ನು ಖಡಾಖಂಡಿತವಾಗಿ ತರುತ್ತಾರೆ. ಅಲ್ಲಿಗೆ ಶಿವಕುಮಾರ್ ಅವರು ಇಂಡಿಗೋ ವಿಮಾನದ ಎಕಾನಮಿ ಕ್ಲಾಸ್ ಟಿಕೆಟ್ ನಲ್ಲಿ ಲಾಂಗ್ ಟೂರ್ ಮಾಡಿದಂಥ ಅನುಭವವನ್ನು ಖಂಡಿತಾ ಪಡೆಯುತ್ತಾರೆ.
ಹರಕೆ ತೀರುವ ಮುನ್ನ ಚಾದರ ಎಳೆದಾರು
ಶಿವಕುಮಾರ್ ಅವರು ಮುಖ್ಯಮಂತ್ರಿ ಆದಲ್ಲಿ ಇಂಥಿಂಥ ಕಡೆಗೆ ಹರಕೆ ತೀರಿಸುವುದಾಗಿ ಅಂದುಕೊಂಡಿರುವಂಥ ಅವರ ಅಭಿಮಾನಿಗಳು, ಕುಟುಂಬಸ್ಥರು, ಸ್ವತಃ ಶಿವಕುಮಾರ್ ಅವರು ಆದಷ್ಟು ಬೇಗ ಹರಕೆ ಮುಗಿಸಿಬಿಡುವುದು ಒಳ್ಳೆಯದು. ಏಕೆಂದರೆ, ಹೆಚ್ಚೆಂದರೆ ಒಂದು ವರ್ಷ ಆಡಳಿತ ನಡೆಸಿದಲ್ಲಿ ಅದು ಅದೃಷ್ಟ, ಹರಕೆ ಫಲವೇ ಆಗಿರುತ್ತದೆ. ಹರಕೆ ತೀರಿಸುವ ಮುನ್ನವೇ ಸಿಂಹಾಸನದ ಕೆಳಗಿನ ಚಾದರ ಎಳೆದುಬಿಟ್ಟರೆ ಶ್ಯಾನೇ ಬೇಜಾರಾಗಿಬಿಡುತ್ತದೆ.
ಮಾಧ್ಯಮ- ಸಾಮಾಜಿಕ ಮಾಧ್ಯಮಗಳಲ್ಲಿ ಹೊಗಳಿಕೆಯೋ ಹೊಗಳಿಕೆ
ಕಳೆದೊಂದು ವಾರದಲ್ಲಿ ಪ್ರಮುಖ ಮಾಧ್ಯಮಗಳಲ್ಲಿ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಧಿಕಾರಕ್ಕೆ ಏರಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಗ್ಗೆ ಜಪ- ತಪ ಎಲ್ಲವೂ ಆಗಿಹೋಗಿದೆ. ಕತ್ತರಿಸಿ ಎತ್ತಿಟ್ಟುಕೊಳ್ಳಬೇಕಾದ ಲೇಖನಗಳು ಮೀಡಿಯಾ- ಸೋಷಿಯಲ್ ಮೀಡಿಯಾಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಹೋಗಿವೆ. ಪ್ರಾಯಶಃ ಇನ್ನೊಂದು ತಿಂಗಳು ಇದು ಮುಂದುವರಿಯಬಹುದು. ಆ ನಂತರ ಹೇಗಿದ್ದರೂ 'ಅದು ಹಾಗಲ್ಲ, ಹೀಗೆ' ಅನ್ನೋ ಸಾಲು ಸಾಲಾದ ಪತ್ರಿಕಾ ಹೇಳಿಕೆ, ಪತ್ರಿಕಾಗೋಷ್ಠಿಗಳ ಕಾಲವಾಗದಿದ್ದಲ್ಲಿ ಕೇಳಿ.
ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡಾಗಲೇ ಹೀಗೆಲ್ಲ ಆಗುತ್ತೆ ಅಂತ ನಾನು ಭವಿಷ್ಯ ಹೇಳಿದ್ದೆ ಅಂತ ಮತ್ತೊಮ್ಮೆ ನಿಮ್ಮೆದುರು ಲೇಖನ ತರುತ್ತೇನೆ ಎಂಬ ಭರವಸೆಯಲ್ಲಿ.... ಒಪ್ಪಿಸಿಕೊಳ್ಳಬೇಕು.
ಬರಹ - ಶ್ರೀನಿವಾಸ ಮಠ












Click it and Unblock the Notifications