'ಪರ್ಲ್ ಹಾರ್ಬರ್'ಗಿಂತಲೂ ಭೀಕರವಾಗಿದೆ ಕೊರೊನಾ ದಾಳಿ: ಟ್ರಂಪ್
ವಾಷಿಂಗ್ಟನ್, ಮೇ 7: ಕೊರೊನಾವೈರಸ್ ಪರ್ಲ್ ಹಾರ್ಬರ್, 9/11 ದಾಳಿಗಿಂತಲೂ ಭೀಕರವಾದದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಎರಡನೇ ಜಾಗತಿಕ ಮಹಾಸಮರದ ವೇಳೆ ಅಮೆರಿಕದ ಮೇಲೆ ನಡೆದಿದ್ದ ಪರ್ಲ್ ಹಾರ್ಬರ್ ದಾಳಿ ಮತ್ತು ವಿಶ್ವ ವಾಣಿಜ್ಯ ಕಟ್ಟಡದ ಮೇಲಿನ ದಾಳಿಗಿಂತಲೂ ಕೊರೊನಾ ವೈರಸ್ ಭೀಕರವಾಗಿದೆ.
ಪರ್ಲ್ ಹಾರ್ಬರ್ ದಾಳಿ ಎಂದರೇನು? ಫೆಸಿಫಿಕ್ ಮಹಾಸಾಗರದ ಹವಾಯಿ ದ್ವೀಪದ ಬಳಿ ಇರುವ ಅಮೆರಿಕದ ನೌಕಾನೆಲೆ ಮೇಲೆ 1941ರಲ್ಲಿ ಜಪಾನ್ ಅನಿರೀಕ್ಷಿತವಾಗಿ ವೈಮಾನಿಕ ದಾಳಿ ನಡೆಸಿತ್ತು.
ಜಪಾನಿಯನ್ನರಿಂದ ನಡೆದ ಯಾರೂ ಊಹಿಸಿರದ ದಾಳಿಯಿಂದಾಗಿ ಅಮೆರಿಕದ ಅತ್ಯಾಧುನಿಕ ಯುದ್ಧನೌಕೆಗಳು, ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ನಾಶಗೊಂಡಿದ್ದವು. ಸಾವಿರಾರು ಮಂದಿ ಮೃತಪಟ್ಟಿದ್ದರು.
ಅಮೆರಿಕದಲ್ಲಿ ಕೊರೊನಾಗೆ 1 ಲಕ್ಷ ಮಂದಿ ಬಲಿಯಾಗಲಿದ್ದಾರೆ: ಡೊನಾಲ್ಡ್ ಟ್ರಂಪ್
ಈ ಘಟನೆಯು ಅಮೆರಿಕ ಎರಡನೇ ವಿಶ್ವಯುದ್ಧದಲ್ಲಿ ಪಾಲ್ಗೊಳ್ಳುವಂತೆ ಮಾಡಿತು.ಇನ್ನು 2001ರ ಸೆಪ್ಟೆಂಬರ್ 11ರಲ್ಲಿ ಅಮೆರಿಕದ ಎರಡು ವಾಣಿಜ್ಯ ಕಟ್ಟಡಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿ ಧ್ವಂಸಗೊಳಿಸಿದ್ದರು. ಈ ಘಟನೆಯಲ್ಲಿ 3 ಸಾವಿರ ಮಂದಿ ಸಾವನ್ನಪ್ಪಿದ್ದರು.
ನಮ್ಮ ದೇಶದ ಮೇಲೆ ಇದುವರೆಗೆ ನಡೆದಿರದ ಅತ್ಯಂತ ಕೆಟ್ಟ ದಾಳಿಗೆ ನಾವು ಸಾಕ್ಷಿಯಾಗಿದ್ದೇವೆ. ಇದು ನಿಜಕ್ಕೂ ನಾವು ಕಂಡ ಅತ್ಯಂತ ಕೆಟ್ಟ ದಾಳಿ. ಪರ್ಲ್ ಹಾರ್ಬರ್ ದಾಳಿಗಿಂತಲೂ ಭೀಕರವಾಗಿದೆ.
ಪರ್ಲ್ ಹಾರ್ಬರ್ ದಾಳಿಯಲ್ಲಿ ಸಂಭವಿಸಿದ್ದಕ್ಕಿಂತ ಹೆಚ್ಚಿನ ಸಾವು ಕೊರೊನಾ ವೈರಸ್‌ನಿಂದ ಸಂಭವಿಸಿದೆ. ಇದು ವಿಶ್ವ ವಾಣಿಜ್ಯ ಕಟ್ಟಡದ ಮೇಲಿನ ದಾಳಿಗಿಂತಲೂ ಹೆಚ್ಚಿನ ಜನರನ್ನು ಬಲಿತೆಗೆದುಕೊಂಡಿದೆ.
ಆ ದಾಳಿಯಲ್ಲಿ 3 ಸಾವಿರ ಮಂದಿ ಮೃತಪಟ್ಟಿದ್ದರು. ಹಾಗಾಗಿ ವೈರಸ್ ದಾಳಿಯನ್ನು ಯುದ್ಧವೆಂಬಂತೆಯೇ ನೋಡಬೇಕಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.