ರಾಜ್ಯ ರಾಜಕಾರಣದಲ್ಲಿ ಬದಲಾವಣೆ: ಅಮೆರಿಕದಿಂದ ಕುಮಾರಸ್ವಾಮಿ ಟ್ವೀಟ್
Recommended Video
ನ್ಯೂಜೆರ್ಸಿ, ಜುಲೈ 01: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆಗುತ್ತಿದ್ದು, ಕುಮಾರಸ್ವಾಮಿ ಅವರು ಅಮೆರಿಕಕ್ಕೆ ಹೋಗಿರುವ ಸಮಯದಲ್ಲಿಯೇ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಮೈತ್ರಿ ಸರ್ಕಾರಕ್ಕೆ ಮತ್ತೆ ಆತಂಕ ಎದುರಾಗಿದೆ.
ದೇವಸ್ಥಾನಕ್ಕೆ ಶಂಕು ಸ್ಥಾಪನೆ ಸೇರಿದಂತೆ ಇನ್ನೂ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲೆಂದು ಅಮೆರಿಕಕ್ಕೆ ಸಿಎಂ ಕುಮಾರಸ್ವಾಮಿ ಅವರು ತೆರಳಿದ್ದು, ಅವರು ಅಲ್ಲಿಂದಲೇ ರಾಜ್ಯ ರಾಜಕೀಯದ ಮೇಲೆ ಕಣ್ಣಿಟ್ಟಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಆನಂದ್ ಸಿಂಗ್ ರಾಜೀನಾಮೆ ಸುದ್ದಿಯ ಬೆನ್ನಲ್ಲೆ ಸಿಎಂ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದು, ರಾಜ್ಯದ ಎಲ್ಲ ವಿದ್ಯಮಾನಗಳನ್ನು ಇಲ್ಲಿಂದಲೇ ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಯ ಪ್ರಯತ್ನ 'ನಿರಂತರ ಹಗಲುಗನಸು' ಎಂದು ಹೇಳಿದ್ದಾರೆ.

ನಿದ್ದೆಗೆಟ್ಟು ರಾಜ್ಯ ರಾಜಕಾರಣ ನೋಡುತ್ತಿದ್ದಾರೆ ಸಿಎಂ?
ಭಾರತ ಮತ್ತು ಅಮೆರಿಕದ ಸಮಯ ವ್ಯತ್ಯಾಸವಿದೆ. ಇಲ್ಲಿ ಮಧ್ಯಾಹ್ನ 12:30 ಗಂಟೆ ಆಗಿದ್ದರೆ ಅಮೆರಿಕದಲ್ಲಿ ರಾತ್ರಿ ಮೂರು ಗಂಟೆ ಆಗಿರುತ್ತದೆ. ಆದರೂ ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದ ಮೇಲೆ ಕಣ್ಣಿರಿಸಿದ್ದಾರೆಂದರೆ ಕುಮಾರಸ್ವಾಮಿ ಅವರು ನಿದ್ದೆ ಮಾಡದೆ ರಾಜ್ಯ ರಾಜಕಾರಣವನ್ನು ಗಮನಿಸುತ್ತಿದ್ದಾರೆ. ಮತ್ತು ಇಲ್ಲಿನ ಮುಖಂಡರುಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ಕಾಲಬೈರವೇಶ್ವರ ದೇವಾಲಯದ ಶಂಕುಸ್ಥಾಪನೆ
ಕುಮಾರಸ್ವಾಮಿ ಅವರು ಪ್ರಸ್ತುತ ನ್ಯೂಜೆರ್ಸಿಯಲ್ಲಿ ಸಮರ್‌ಸೆಟ್ ಅಲ್ಲಿ ಕಾಲಬೈರವೇಶ್ವರ ಸ್ವಾಮಿ ದೇವಾಲಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪೂರ್ವ ನಿರ್ಧರಿತ ಕಾರ್ಯಕ್ರಮದ ಪ್ರಕಾರ ಕುಮಾರಸ್ವಾಮಿ ಅವರು ಜುಲೈ 6 ರಂದು ಮರಳಿ ಬರಲಿದ್ದಾರೆ.

ಪ್ರವಾಸ ಮೊಟಕು ಗೊಳಿಸುತ್ತಾರಾ ಸಿಎಂ?
ಆದರೆ ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ಮಹತ್ವದ ಬದಲಾವಣೆಗಳಿಂದಾಗಿ ಕುಮಾರಸ್ವಾಮಿ ಅವರು ಪ್ರವಾಸ ಮೊಟಕುಗೊಳಿಸಿ ಶೀಘ್ರದಲ್ಲಿಯೇ ವಾಪಸ್ ಆಗುವ ಸಾಧ್ಯತೆಯೂ ಇದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

ಖಾಸಗಿ ಪ್ರವಾಸದಲ್ಲಿರುವ ಕುಮಾರಸ್ವಾಮಿ
ಅಮೆರಿಕದಲ್ಲಿ ಕುಮಾರಸ್ವಾಮಿ ಅವರು ದೇವಸ್ಥಾನ ಉದ್ಘಾಟನೆ, ಜುಲೈ 5 ರಂದು ಒಕ್ಕಲಿಗರ ಪರಿಷತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮಧ್ಯೆ ಇನ್ನೂ ಕೆಲವು ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕುಮಾರಸ್ವಾಮಿ ಅವರ ಅಮೆರಿಕ ಭೇಟಿಯು ಸರ್ಕಾರಿಯೇತರ ಭೇಟಿ ಆಗಿದ್ದು, ಸ್ವಂತ ಖರ್ಚಿನಲ್ಲಿ ಕುಮಾರಸ್ವಾಮಿ ಪ್ರವಾಸಕ್ಕೆ ತೆರಳಿದ್ದಾರೆ.












Click it and Unblock the Notifications