ವಿಜಯಪುರ; ಇವಿಎಂ ಒಡೆದ ಗ್ರಾಮಸ್ಥರು, 30 ಜನರು ಪೊಲೀಸ್ ವಶಕ್ಕೆ
ವಿಜಯಪುರ, ಮೇ 10; ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನದ ವೇಳೆ ಮತಯಂತ್ರ ಒಡೆದು ದಾಂಧಲೆ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 30 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯದಲ್ಲಿ ಮತದಾನ ಬಿರುಸುಗೊಂಡಿದ್ದು, ಮಧ್ಯಾಹ್ನ 3 ಗಂಟೆಯ ತನಕ ಶೇ 52.03ರಷ್ಟು ಮತದಾನವಾಗಿದೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮುಸಬಿನಾಳ ಗ್ರಾಮದಲ್ಲಿ ಮಧ್ಯಾಹ್ನ ದಾಂಧಲೆ ನಡೆದಿದೆ. ಹೆಚ್ಚುವರಿ ಮತಯಂತ್ರಗಳನ್ನು ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ಜನರು ಅದನ್ನು ಉರುಳಿಸಿ ಜಖಂಗೊಳಿಸಿದ್ದಾರೆ. ಇವಿಎಂ ಒಡೆದು ಹಾಕಿ ಗಲಾಟೆ ಮಾಡಿದ್ದಾರೆ.

ಇವಿಎಂ ವಾಪಸ್ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡಿದ್ದರು. ಆಗ ಸಿಬ್ಬಂದಿ ಸರಿಯಾಗಿ ಉತ್ತರ ನೀಡದ ಕಾರಣ ಜನರು ಆಕ್ರೋಶಗೊಂಡು ಮತದಾನವಾದ ಯಂತ್ರಗಳನ್ನು ವಾಪಸ್ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಭಾವಿಸಿ ಗಲಾಟೆ ಎಬ್ಬಿಸಿದ್ದರು.
ಘಟನಾ ಸ್ಥಳಕ್ಕೆ ವಿಜಯಪುರ ಎಸ್‌ಪಿ ಹೆಚ್. ಡಿ. ಆನಂದ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, "ಗ್ರಾಮಸ್ಥರು ಇವಿಎಂ, ವಿವಿಪ್ಯಾಟ್ ಒಡೆದು ಹಾಕಿದ್ದಾರೆ. ಇವಿಎಂ ಸಾಗಣೆ ಮಾಡುತ್ತಿದ್ದ ಕಾರನ್ನು ಜಖಂಗೊಳಿಸಿದ್ದಾರೆ. ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.
"ಈ ಘಟನೆಗೆ ಸಬಂಧಿಸಿದಂತೆ 30 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಯಾರೇ ಕಾನೂನು ಕೈಗೆ ತೆಗೆದುಕೊಂಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದರು.
ಅರ್ಧಕ್ಕೆ ಮತದಾನ ಸ್ಥಗಿತಗೊಳಿಸಿ ಮತಯಂತ್ರಗಳನ್ನು ವಾಪಸ್ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಗಲಾಟೆ ಮಾಡಿದ್ದರು. ಮತಯಂತ್ರ, ವಿವಿಪ್ಯಾಟ್ ಇದ್ದ ಕಾರಿನ ಮೇಲೆ ದಾಳಿ ಮಾಡಿ ಅದನ್ನು ಜಖಂಗೊಳಿಸಿದ್ದರು. ಅಲ್ಲದೇ ಸಿಬ್ಬಂದಿ ಮೇಲೆ ಸಹ ಹಲ್‌ಲೆ ಮಾಡಿದ್ದರು. ಇವಿಎಂ ಬದಲಾವಣೆ ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಚುನಾವಣಾ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications