ಗಂಗಾಧರ ಚಡಚಣ ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಬಂಧನ
ವಿಜಯಪುರ, ಜುಲೈ 27 : ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ. ನ್ಯಾಯಾಲಯಕ್ಕೆ ಶರಣಾಗಲು ಬರುವ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಾಷಾ ನದಾಫ್ ಎಂದು ಗುರುತಿಸಲಾಗಿದೆ. ಗಂಗಾಧರ ಚಡಚಣ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಬಾಷಾ ನದಾಫ್ ಗೋವಾದಲ್ಲಿ ತಲೆಮರೆಸಿಕೊಂಡಿದ್ದ. ಇಂಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶರಣಾಗಲು ಗುರುವಾರ ಆಗಮಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಶಾರ್ಪ್ ಶೂಟರ್ ಧರ್ಮರಾಜ್ ಚಡಚಣ ಎನ್‌ಕೌಂಟರ್ ಮತ್ತು ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಷಾ ನದಾಫ್ ಪ್ರತ್ಯಕ್ಷ ದರ್ಶಿ ಎಂದು ತಿಳಿದುಬಂದಿದೆ. ಧರ್ಮರಾಜ್ ಚಡಚಣ ಮೇಲೆ ಪೊಲೀಸರು ಗುಂಡು ಹಾರಿಸುವಾಗ ಬಾಷಾ ಸ್ಥಳದಲ್ಲಿದ್ದ ಎಂದು ತಿಳಿದುಬಂದಿದೆ.

ವಿಜಯಪುರದ ಕೊಂಕಣಗಾಂವ್‌ನಲ್ಲಿ 2017ರ ಅಕ್ಟೋಬರ್ 30ರಂದು ಧರ್ಮರಾಜ್ ಚಡಚಣ ಎನ್‌ಕೌಂಟರ್ ನಡೆದಿತ್ತು. ಬಳಿಕ ಸ್ಥಳದಲ್ಲಿದ್ದ ಆತನ ಸಹೋದರ ಗಂಗಾಧರ ಚಡಚಣನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಆದರೆ, ಪೊಲೀಸ್ ವಶದಲ್ಲಿದ್ದ ಗಂಗಾಧರ ಚಡಚಣ ನಾಪತ್ತೆಯಾಗಿದ್ದ. ಕೆಲವು ದಿನಗಳ ಹಿಂದೆ ಗಂಗಾಧರ ಚಡಚಣ ಹತ್ಯೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿರುವ ಆರೋಪವಿದೆ.












Click it and Unblock the Notifications