ಕಳಸಾ ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ
2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಕರ್ನಾಟಕ ಸಜ್ಜಾಗಿದ್ದು, ಮೇ 10ರಂದು ನಡೆಯಲಿರುವ ಮತದಾನಕ್ಕೂ ಮುನ್ನ ರಾಜ್ಯದಲ್ಲಿ ಮೋದಿ ಮೇನಿಯಾ ಆರಂಭವಾಗಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ.
ಇಂದಿನಿಂದ (ಏಪ್ರಿಲ್ 29) ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಬೀದರ್, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.

ಇದೇ ವೇಳೆ ವಿಜಯಪುರದ ಸೈನಿಕ ಶಾಲೆ ಆವರಣದಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ಮೋದಿ, ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳಾದ ಕಳಸಾ ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆಗಳ ಬಗ್ಗೆ ಮಾತನಾಡಿದರು.
ಮಹಾದಾಯಿ ನದಿಯಿಂದ ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿಗಾಗಿ ದಶಕಗಳಿಂದ ಆ ಭಾಗದ ರೈತರು, ಜನರು ಕಳಸಾ-ಬಂಡೂರಿ ಹೋರಾಟ ನಡೆಸಿದ್ದರು ಎಂಬುದು ಗಮನಾರ್ಹ.
"ಕಳಸಾ ಬಂಡೂರಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡಿದೆ. ವಿಜಯಪುರ ರೈತರಿಗೆ ಅನುಕೂಲವಾಗುವ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯು ಆರಂಭವಾಗಿದೆ. ರೈತರ ಅಭಿವೃದ್ಧಿಗೆ ಬಿಜೆಪಿ ಡಬಲ್ ಎಂಜಿನ ಸರ್ಕಾರ ಕಟಿಬದ್ಧವಾಗಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

"ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿಯೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರಮ ಕೈಗೊಂಡಿವೆ. ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನ ಮಾಡಿದ್ದು, ಈಗ ಮನೆ ಮನೆಗೆ ನೀರು ಬರುತ್ತಿದೆ," ಎಂದರು.
"ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಕಳಸಾ-ಬಂಡೂರಿಗಾಗಿ ಹೋರಾಟ ನಡೆಸಿದ ರೈತರಿಗೆ ಲಾಠಿ ರುಚಿ ನೀಡಿದರು. ಹಲವು ವರ್ಷಗಳಿಂದ ನೆನೆಗುದಿ ಬಿದ್ದಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಕಾಂಗ್ರೆಸ್ ತಿರುಗಿಯೂ ನೋಡಲಿಲ್ಲ," ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
"ಬಿಜೆಪಿ ಸರ್ಕಾರವು ತನ್ನ ಯೋಜನೆಗಳಲ್ಲಿ ಪಾರದರ್ಶಕತೆ ತಂದಿದೆ. ಎಲ್ಲ ಪರಿಹಾರದ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಕ್ರೆಡಿಟ್ ಆಗುತ್ತಿದೆ. ಇಡೀ ದೇಶದಲ್ಲಿ ಕಿಸಾನ್ ಸಮ್ಮಾನ್ ನಿಧಿಯ ಹಣ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗುತ್ತಿದೆ. ವಿಜಯಪುರದ ರೈತರ ಖಾತೆಗಳಿಗೂ ಹಣ ಜಮೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಪೂರ್ಣ ಹಣ ಬರುತ್ತಲೇ ಇರಲಿಲ್ಲ," ಎಂದು ಆರೋಪಿಸಿದರು.

"ಈ ಹಿಂದೆ ಬಡ ಜನರಿಗೆ ತಲುಪಬೇಕಾದ ಹಣವನ್ನು ಹಾಡಹಗಲೇ ಲೂಟಿ ಮಾಡಲಾಗುತ್ತಿತ್ತು. ಬಿಜೆಪಿ ಸರ್ಕಾರ ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಫಲಾನುಭವಿಗಳು ಪೂರ್ಣ ಪರಿಹಾರ ಪಡೆಯುತ್ತಿದ್ದಾರೆ. ದೆಹಲಿಯಿಂದ ಬಿಡುಗಡೆಯಾಗುವ 1 ರೂಪಾಯಿಯೂ ಸೋರಿಕೆಯಾಗಲ್ಲ," ಎಂದು ಮೋದಿ ತಿಳಿಸಿದರು.
"ಕೇಂದ್ರದಿಂದ 1 ರೂಪಾಯಿ ಬಿಡುಗಡೆಯಾದರೆ, ಫಲಾನುಭವಿಗೆ 15 ಪೈಸೆ ಮಾತ್ರ ದೊರೆಯುತ್ತದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿಯೇ ಹೇಳಿದ್ದರು ಎಂದು ರಾಜೀವ್ ಗಾಂಧಿ ಹೇಳಿಕೆಯನ್ನು ನೆನಪಿಸಿದರು. ಪಂಚಾಯತಿಯಿಂದ ಪಾರ್ಲಿಮೆಂಟ್‌ವರೆಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪರಿಸ್ಥಿತಿ ಹಾಗಿತ್ತು," ಎಂದು ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
"ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿದೆ. ಬಿಜೆಪಿ ಸರ್ಕಾರದ ನೀತಿಯಿಂದ ಇಂದು ನಮ್ಮ ಮಹಿಳೆಯರಿಗೆ ಹೊಸ ಶಕ್ತಿ ದೊರೆತಿದೆ. ಬಿಜೆಪಿ ಸರ್ಕಾರ ಜನ್ ಧನ್ ಬ್ಯಾಂಕ್ ಖಾತೆ ಮಹಿಳೆಯರ ಜೀವನ ಬದಲಿಸಿದೆ. ಈ ಖಾತೆಯ ಮೂಲಕ ಸರ್ಕಾರಿ ಯೋಜನೆಗಳ ಹಣ ನೇರ ವರ್ಗಾವಣೆಯಾಗುತ್ತಿದೆ," ಎಂದರು.
"ಕಾಂಗ್ರೆಸ್ ಸರ್ಕಾರಗಳು ಮಹಿಳೆಯರ ಕಲ್ಯಾಣಕ್ಕೆ ಗಂಭೀರ ಯತ್ನವನ್ನೇ ಮಾಡಲಿಲ್ಲ. ಡಬಲ್ ಎಂಜಿನ್ ಸರ್ಕಾರ ಆಧುನಿಕ ಸಂಪರ್ಕ, ಮೂಲಸೌಕರ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದೆ. ವಿಜಯಪುರ- ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇದರಿಂದ ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ," ಎಂದು ಜನರಿಗೆ ತಿಳಿಸಿದರು.












Click it and Unblock the Notifications