ಕಾಂಗ್ರೆಸ್ ನಲ್ಲಿರುವ ದಲಿತರು ಪಾಪಿಷ್ಠರು: ರಮೇಶ್ ಜಿಗಜಿಣಗಿ
ವಿಜಯಪುರ, ಫೆಬ್ರವರಿ 15: ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿ ಆಗಬೇಕು ಅನ್ನುವುದು ನನ್ನ ಅಭಿಮತ. ಆದರೆ ಅದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಇಲ್ಲಿ ಗುರುವಾರ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ. ಇನ್ನು ಯಾವ ಬೋಳಪ್ಪ ಬಂದರೂ ಮುಖ್ಯಮಂತ್ರಿ ಆಗಲು ಬಿಡುವುದಿಲ್ಲ. ಯಡಿಯೂರಪ್ಪ ಅವರ ನಂತರ ಯಾರು ಬೇಕಾದರೂ ಮುಖ್ಯಮಂತ್ರಿ ಆಗಲಿ ಎಂದರು.
ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿ ಆಗಬೇಕು ಎಂಬ ಬಗ್ಗೆ ಎರಡು ಮಾತಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಗೆ ಮೋಸ ಮಾಡಿದ ಕಾಂಗ್ರೆಸ್, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಆಗಲು ಬಿಟ್ಟಿಲ್ಲ. ಅವರನ್ನು ಮೂಲೆ ಗುಂಪು ಮಾಡಿದೆ ಎಂದು ಹೇಳಿದರು.

ದಲಿತರು ಪಾಪಿಷ್ಠರು ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ದಲಿತರು ಪಾಪಿಷ್ಠರಾಗಿದ್ದರೆ ಅದು ಕಾಂಗ್ರೆಸ್ ನಲ್ಲಿ ಇರುವವರು ಮಾತ್ರ. ಬಿಜೆಪಿಯಲ್ಲಿ ದಲಿತರು ಯಾರೂ ಪಾಪಿಷ್ಠರಲ್ಲ ಎಂದು ರಮೇಶ ಜಿಗಜಿಣಗಿ ಹೇಳಿದರು.
ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳಪೆ ಕಾಲುವೆ ನಿರ್ಮಾಣ ಮಾಡಿದ್ದಾರೆ. ಜಿಲ್ಲೆಯ ಜನರಿಗೆ ಸಚಿವ ಎಂ.ಬಿ. ಪಾಟೀಲ ಮೋಸ ಮಾಡಿದ್ದಾರೆ. ಕಳಪೆ ಕಾಮಗಾರಿ ಮಾಡಿ ಹಣ ತಿಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಒಂದು ಕಡೆ ಚುನಾವಣೆ ಹತ್ತಿರ ಬಂದಿದೆ. ಚುನಾವಣಾ ಖರ್ಚು ಹೋಗಬೇಕು. ಜನರಿಗೆ ಮೋಸ ಮಾಡಿ ಮತ ತೆಗೆದುಕೊಳ್ಳಬೇಕು. ಜಿಲ್ಲೆಯ ಜನರು ಎಂ.ಬಿ.ಪಾಟೀಲರನ್ನು ಕ್ಷಮೆ ಮಾಡಲ್ಲ. ಬಿಜೆಪಿ ಕಾರ್ಯಕರ್ತರು ಕಳಪೆ ಕಾಮಗಾರಿ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಾ ಇದ್ದಾರೆ ಎಂದರು.












Click it and Unblock the Notifications