ವಿಜಯಪುರ: ಬೈಕ್ ಮುಟ್ಟಿದ್ದು ಮೈಲಿಗೆ ಎಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿತ
ವಿಜಯಪುರ, ಜುಲೈ 20: ಬೈಕ್ ಮುಟ್ಟಿ ಮೈಲಿಗೆ ಮಾಡಿದ್ದಾನೆ ಎಂದು ಆರೋಪಿಸಿ, ಗ್ರಾಮದ ದಲಿತ ಯುವಕನನ್ನು ಸಾಮೂಹಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಶನಿವಾರ ನಡೆದಿದೆ.
Recommended Video
ಮಿಣಜಗಿ ಗ್ರಾಮದ ಯುವಕ ಕಾಶೀನಾಥ ಯಂಕಪ್ಪ ತಳವಾರ (28) ಎಂಬುವವನು ಹಲ್ಲೆಗೊಳಗಾಗಿದ್ದಾನೆ. ಈತ ಶನಿವಾರ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ನಿಲ್ಲಿಸಿದ್ದ ವಾಹನವನ್ನು ಮುಟ್ಟಿದ ಎಂಬ ಕಾರಣಕ್ಕೆ ಗ್ರಾಮದ 19 ಜನರು ಸೇರಿ ಯುವಕನನ್ನು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.
ಬಳಿಕ ಅದೇ ಮಾರ್ಗದಲ್ಲಿ ಮುದ್ದೇಬಿಹಾಳ ಸಿಪಿಐ ಆನಂದ ವಾಗ್ಮೋಡೆ ವಾಹನ ಬರುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದಾರೆ. ನಂತರ ಆತನನ್ನು ಮುದ್ದೇಬಿಹಾಳ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಥಳಿತಕ್ಕೊಳಗಾದ ಯುವಕ, ಕಳೆದ ಎರಡು ವರ್ಷಗಳ ಹಿಂದೆಯೂ ಇದೇ ಕಾರಣಕ್ಕಾಗಿ ಗೂಸಾ ತಿಂದಿದ್ದನಂತೆ. ಹೀಗಾಗಿ ಹಳೆ ವೈಷಮ್ಯದಿಂದಾಗಿ ಆರೋಪಿಗಳು ಆತನ ಬಟ್ಟೆ ಕಳಚಿ, ಹಿಗ್ಗಾ-ಮುಗ್ಗಾ ಹೊಡೆದಿದ್ದಾರೆ ಎಂದು ತನಿಖೆ ನಡೆಸುತ್ತಿರುವ ಬಸವನ ಬಾಗೇವಾಡಿ ಡಿವೈಎಸ್ಪಿ ಶಾಂತವೀರ ತಿಳಿಸಿದ್ದಾರೆ.
ಆದರೆ, ಫೇಸ್ ಬುಕ್ ನಲ್ಲಿ ಬೈಕ್ ಮುಟ್ಟಿ ಮೈಲಿಗೆ ಮಾಡಿದ ಎಂಬ ಕಾರಣಕ್ಕೆ ಕುಪಿತಗೊಂಡ ಜನ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ ಎಂಬ ಪೋಸ್ಟ್ ವೈರಲ್ ಆಗಿದೆ. ಆದರೆ ಫೇಸ್‍ಬುಕ್ ಪೋಸ್ಟ್‌ನಲ್ಲಿರುವ ಸಾರಾಂಶ ಸುಳ್ಳು ಎಂದು ಡಿವೈಎಸ್ಪಿ ಸ್ಪಷ್ಟಪಡಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಒಬ್ಬೊಬ್ಬರನ್ನು ಠಾಣೆಗೆ ಕರೆದು ತನಿಖೆ ಆರಂಭಿಸಿದ್ದಾಗಿ ಮಾಹಿತಿ ನೀಡಿದರು.












Click it and Unblock the Notifications