ನಾಲ್ವರು ಸಂತ್ರಸ್ತರಿಗೆ ಮನೆಯಲ್ಲೇ ಆಶ್ರಯ ನೀಡಿದ ಅಥಣಿಯ ಮಾಜಿ ಶಾಸಕ
ವಿಜಯಪುರ, ಆ 11: ತೀವ್ರ ನೆರೆಯಿಂದ ಎಲ್ಲೂ ಹೋಗಲಾಗದೇ ಅಸಹಾಯಕ ಸ್ಥಿತಿಯಲ್ಲಿದ್ದ ನಾಲ್ವರಿಗೆ ತಮ್ಮ ನಿವಾಸದಲ್ಲೇ ಅಥಣಿಯ ಮಾಜಿ ಬಿಜೆಪಿ ಶಾಸಕ ಲಕ್ಷ್ಮಣ್ ಸವದಿ ಆಶ್ರಯ ನೀಡಿದ್ದಾರೆ.
ಜಲಾವೃತಗೊಂಡಿದ್ದ ವಿಜಯಪುರ ಜಿಲ್ಲೆಯ ದರೂರು ಗ್ರಾಮದ ಬಸ್ ನಿಲ್ದಾಣದ ಟೆರೇಸ್ ನಲ್ಲಿದ್ದ ನಾಲ್ವರನ್ನು ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದ್ದು, ಅವರನ್ನು ಸವದಿ ಮನೆಗೆ ಸ್ಥಳಾಂತರಿಸಲಾಗಿದೆ.
ಜಿಲ್ಲೆಯ ಈ ಗ್ರಾಮದ ಹಲವರು ನೆರೆಯಲ್ಲಿ ಸಿಲುಕಿಕೊಂಡಿದ್ದಾರೆ ಎನ್ನುವ ಮಾಹಿತಿಯಂತೆ, ಸೇನಾ ಹೆಲಿಕಾಪ್ಟರ್ ಅವರ ರಕ್ಷಣೆಗೆ ಧಾವಿಸಿತ್ತು, ಈ ವೇಳೆ, ಬಸ್ ನಿಲ್ದಾಣದ ಮೇಲೆ ಕೂತಿದ್ದ ಇವರನ್ನು ರಕ್ಷಣೆ ಮಾಡಲಾಗಿದೆ.

ಬಸ್ ನಿಲ್ದಾಣದಿಂದ ರಕ್ಷಿಸಲ್ಪಟ್ಟ ನಾಲ್ವರನ್ನು ಪರಶುರಾಮ್ , ಅಶೋಕ ಗಳತಗಿ, ಗುರುಸಿದ್ದಯ್ಯ ಮತ್ತು ಹನುಮಂತ ಅವಟಿ ಎಂದು ಗುರುತಿಸಲಾಗಿದೆ.
ಇತ್ತ ಪಶ್ಚಿಮ ಘಟ್ಟದ ಭಾಗದಲ್ಲೂ ವ್ಯಾಪಕ ಮಳೆ ಸುರಿಯುತ್ತಿದ್ದು, 85 ಜನರನ್ನು ಎನ್ ಡಿಆರ್ ಎಫ್ ತಂಡ ರಕ್ಷಣೆ ಮಾಡಿದ್ದು, ಇದರಲ್ಲಿ ಇಬ್ಬರು ಗರ್ಭಿಣಿಯರು ಮತ್ತು ಎರಡು ಹಸುಗೂಸು ಸೇರಿದ್ದಾರೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ರುದ್ರ ನರ್ತನ ಮುಂದುವರಿದಿದೆ. ಮನೆ, ತೋಟದ ಮೇಲೆ ಬೃಹತ್ ಗುಡ್ಡ ಕುಸಿದಿದೆ. ಸಿರಿವಾಸೆ ಸಮೀಪದ ಅಡಲುಗದ್ದೆ ಎನ್ನುವ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.












Click it and Unblock the Notifications