ಜೋಮ್ಲು ತೀರ್ಥ ಜಲಪಾತಕ್ಕೆ ಬಂದಿದ್ದ ಯುವಕ ನೀರುಪಾಲು
ಉಡುಪಿ, ಅಕ್ಟೋಬರ್ 28: ಉಡುಪಿ ಜಿಲ್ಲೆಯ ಹೆಬ್ರಿ ಸಂತೆಕಟ್ಟೆಯ ಜೋಮ್ಲು ತೀರ್ಥ ಜಲಪಾತಕ್ಕೆ ತೆರಳಿದ್ದ ಯುವಕನೊಬ್ಬ ನೀರು ಪಾಲಾಗಿರುವ ಘಟನೆ ನಡೆದಿದೆ.
ನಾಪತ್ತೆಯಾದ ಯುವಕನನ್ನು ಬ್ರಹ್ಮಾವರ ಸಮೀಪದ ಕೊಕ್ಕರ್ಣೆಯ ಕಾಡೂರು ಗಣಪೆ ನಿವಾಸಿ ಶೇಖರ್ ಶೆಟ್ಟಿ ಎಂಬುವರ ಪುತ್ರ ಸಚಿನ್ ಕುಮಾರ್ ಶೆಟ್ಟಿ (24) ಎಂದು ಗುರುತಿಸಲಾಗಿದೆ.
ಸಚಿನ್ ಸೇರಿದಂತೆ ಏಳು ಮಂದಿ ಜೋಮ್ಲು ತೀರ್ಥಕ್ಕೆ ತೆರಳಿದ್ದು, ಈ ವೇಳೆ ಸಚಿನ್ ಕಾಲು ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ನಂತರ ಈತ ಸುಮಾರು ದೂರ ಈಜಿಕೊಂಡು ಹೋಗಿರುವುದನ್ನು ಇತರರು ನೋಡಿದ್ದಾರೆ ಎಂದು ತಿಳಿದುಬಂದಿದೆ.

ಸಚಿನ್ ಬೆಂಗಳೂರಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ದೀಪಾವಳಿಯ ರಜೆಗೆ ಊರಿಗೆ ಬಂದಿದ್ದ. ಘಟನೆ ನಡೆದ ಸೀತಾನದಿ ಹೊಳೆ ತುಂಬಾ ಆಳವಾಗಿದ್ದು ನಿರಂತರವಾಗಿ ಮಳೆ ಬರುತ್ತಿರುವುದರಿಂದ ಮತ್ತಷ್ಟು ನೀರಿನ ಹರಿವು ಹೆಚ್ಚಾಗಿದೆ. ಸದ್ಯ ಸ್ಥಳೀಯರು ಹಾಗೂ ಪೊಲೀಸರು ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿಲ್ಲ. ಮೃತದೇಹಕ್ಕಾಗಿ ಹೆಬ್ರಿ ಠಾಣಾ ಪೊಲೀಸರು ಮತ್ತು ಸ್ಥಳೀಯ ಯುವಕರು ಶೋಧದಲ್ಲಿ ತೊಡಗಿದ್ದಾರೆ.












Click it and Unblock the Notifications