ಮೂಕಾಂಬಿಕೆಯ ಸನ್ನಿಧಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯೇಸುದಾಸ್
ಉಡುಪಿ, ಜನವರಿ 10: ಖ್ಯಾತ ಗಾಯಕ ಯೇಸುದಾಸ್ ಅವರಿಗೆ ಇಂದು 79ನೇ ಹುಟ್ಟುಹಬ್ಬದ ಸಂಭ್ರಮ. ತಮ್ಮ ಪರಮ ದೇವತೆ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಯೇಸುದಾಸ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು.
ಹುಟ್ಟುಹಬ್ಬದ ಪ್ರಯುಕ್ತ ಚಂಡಿಕಾ ಹೋಮ ಮತ್ತು ಪೂಜೆ ನಡೆಯಿತು. ಕುಟುಂಬ ಸಹಿತ ಪೂಜೆಯಲ್ಲಿ ಭಾಗಿಯಾದ ಯೇಸುದಾಸ್ ಅವರಿಂದ ಸ್ವರ್ಣಮುಖಿ ಸಭಾಭವನದಲ್ಲಿ ಗಾಯನ ಸೇವೆ ನಡೆಯಿತು. ವಾತಾಪಿ ಗಣಪತಿಂ ಹಾಡಿಗೆ ಯೇಸುದಾಸ್ ಭಾವುಕರಾದರು. ನೆಚ್ಚಿನ ಗಾಯಕನ ಹುಟ್ಟುಹಬ್ಬದಲ್ಲಿ ಕೇರಳದ ಭಕ್ತರೂ ಭಾಗಿಯಾದರು.
ಈ ಸಂದರ್ಭದಲ್ಲಿ ಯೇಸುದಾಸ್ ಅವರ ಹೆಸರಿನಲ್ಲಿ ಸಂಗೀತ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಯೇಸುದಾಸ್ ಅವರು ತಮ್ಮ ಹುಟ್ಟುಹಬ್ಬವನ್ನು ಪ್ರತೀ ವರ್ಷ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಆಚರಿಸಿಕೊಳ್ಳುತ್ತಾರೆ. ಕೇರಳದವರಾದರೂ ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತ. ತಮ್ಮ ಹುಟ್ಟುಹಬ್ಬದಂದು ಬೆಳಗ್ಗೆ ಮೂಕಾಂಬಿಕೆಯ ಎದುರು ಗಾನ ಸೇವೆ ಸಲ್ಲಿಸುತ್ತಾರೆ. ಬಳಿಕ ಚಂಡಿಕಾಯಾಗದಲ್ಲಿ ಪಾಲ್ಗೊಳ್ಳುತ್ತಾರೆ.
ನೂರಾರು ಅಭಿಮಾನಿಗಳು, ಶಿಷ್ಯಂದಿರ ಜೊತೆ ದೇವಿಗೆ ಸಂಗೀತ ಸೇವೆ ಸಲ್ಲಿಸುತ್ತಾರೆ. ಅಂದಹಾಗೆ ಯೇಸುದಾಸ್ ನೋಡಲು ಇಂದು ಜನ ಮುಗಿಬಿದ್ದರು ಹಲವಾರು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಯೇಸುದಾಸ್ ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ . ಮಲೆಯಾಳಂ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಅವರು ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಕುರಿತು ಹಾಡಿದ ಹರಿವರಾಸನಂ ಹಾಡು ಚಿರ ನೂತನ. ಸದ್ಯ ಅಮೇರಿಕಾದಲ್ಲಿ ನೆಲೆಸಿದ್ದರೂ ಇಂದಿಗೂ ಚಿತ್ರರಂಗದ ಬೇಡಿಕೆಯ ಗಾಯಕ.

ಅವರ ಹುಟ್ಟು ಹಬ್ಬವನ್ನು ಲಕ್ಷಾಂತರ ಅಭಿಮಾನಿಗಳು ಗೌರವದಿಂದ ಆಚರಿಸುತ್ತಾರೆ. ಕೊಲ್ಲೂರಿನಲ್ಲಿ ಪ್ರತೀ ವರ್ಷ ಹುಟ್ಟುಹಬ್ಬ ಆಚರಿಸುವಾಗ ಅದೆಷ್ಟೋ ಹೆತ್ತವರು ತಮ್ಮ ಮಕ್ಕಳಿಗೆ ಯೇಸುದಾಸ್ ಕೈಯಿಂದ ಅಕ್ಷರಾಭ್ಯಾಸ ಮಾಡಿಸುತ್ತಾರೆ. ಯೇಸುದಾಸ್ ಇನ್ನಷ್ಟು ಕಾಲ ಅರೋಗ್ಯವಂತರಾಗಿ ಬಾಳಿ, ಇನ್ನಷ್ಟು ಹಾಡುಗಳು ಅವರ ಕಂಠದಿಂದ ಹೊಮ್ಮಲಿ ಎಂಬುದೇ ಅಭಿಮಾನಿಗಳ ಹಾರೈಕೆ.












Click it and Unblock the Notifications