ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ, ನೀವೂ ಹಾಕಿ: ಸಿಎಂ ಬೊಮ್ಮಾಯಿ ಮನವಿ
ಉಡುಪಿ, ಆಗಸ್ಟ್ 13: "ನಾನು ಮರಣ ಹೊಂದಿದ ನಂತರ ನನ್ನ ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ನೀವು ಸಹಿ ಹಾಕಿ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಸಾರ್ವಜನಿಕರಿಗೆ ಕರೆ ನೀಡಿದರು.
"ಇಂದು (ಆಗಸ್ಟ್ 13) ವಿಶ್ವ ಅಂಗಾಂಗ ದಾನ ದಿನವಾಗಿದ್ದು, ಈ ದಿನ ನಾನು ಕೂಡ ಅಂಗಾಂಗ ದಾನ ಪತ್ರಕ್ಕೆ ಸಹಿ ಹಾಕುತ್ತೇನೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಉಡುಪಿಯ ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, "ಇತ್ತೀಚೆಗೆ ಕಿಡ್ನಿ ಸಹಿತ ಬೇರೆ ಬೇರೆ ಅಂಗಾಂಗ ದಾನ ಮಾಡುವುದು ಮತ್ತು ಅಂಗಾಂಗಗಳನ್ನು ಯಶಸ್ವಿಯಾಗಿ ಕಸಿ ಮಾಡುವುದು ನಡೆಯುತ್ತಿದೆ," ಎಂದು ತಿಳಿಸಿದರು.

"ಹೆಚ್ಚಿನ ಜನರು ಅಂಗಾಂಗ ದಾನಕ್ಕೆ ಮುಂದೆ ಬಂದರೆ, ನಮ್ಮ ಮರಣದ ನಂತರವೂ ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯವಿದೆ. ಇವತ್ತು ವಿಶ್ವ ಅಂಗಾಂಗ ದಾನ ದಿನದಂದು ನಾನೂ ಅಂಗಾಂಗ ದಾನಕ್ಕೆ ಸಹಿ ಹಾಕುತ್ತೇನೆ. ಅಂಗಾಂಗ ದಾನಕ್ಕೆ ಎಲ್ಲ ಸಾರ್ವಜನಿಕರಿಗೂ ಕರೆ ನೀಡುತ್ತಿದ್ದೇನೆ," ಎಂದು ಹೇಳಿದರು.
"ಅಂಗಾಂಗ ದಾನ ಮಾಡುವ ಮೂಲಕ ಮಣ್ಣಲ್ಲಿ ಮಣ್ಣಾಗುವ ಅಂಗಾಂಗಗಳು ಉಪಯೋಗವಾಗಿ ಇನ್ನೊಂದು ಜೀವ ಉಳಿಯಲು ಸಾಧ್ಯವಿದ್ದರೆ ಯಾಕೆ ಹಾಗೆ ಮಾಡಬಾರದು? ಆದ್ದರಿಂದ ಎಲ್ಲರೂ ವಿಶ್ವ ಅಂಗಾಂಗ ದಿನದಂದು ಎಲ್ಲರೂ ಅಂಗಾಂಗ ದಾನ ಮಾಡಲು ಸಂಕಲ್ಪ ಮಾಡೋಣ," ಎಂದರು.
"ಜೀವ ಉಳಿಸುವ ಈ ಪುಣ್ಯ ಕಾರ್ಯಕ್ಕೆ ಎಲ್ಲರೂ ಮುಂದೆ ಬರಬೇಕು. ಸಂಕಷ್ಟದಲ್ಲಿ ಇರುವ ಜೀವ ಉಳಿಸಲು ಸಹಕಾರಿಯಾಗಬೇಕು. ಕುಟುಂಬದವರ ಮನವೊಲಿಸಿ. ಜೀವ ಹೋದ ನಂತರ ಇನ್ನೊಂದು ಜೀವ ಉಳಿಸಿ," ಎಂದು ಸಿಎಂ ಬಸವರಾಜ ಬೊಮ್ಮಾಯಿ ಕರೆ ಕೊಟ್ಟರು.

ಈ ಕುರಿತು ಟ್ವಿಟ್ಟರ್‌ನಲ್ಲಿಯೂ ಹಂಚಿಕೊಂಡಿರುವ ಸಿಎಂ ಬೊಮ್ಮಾಯಿ, "ಜೀವವನ್ನು ಉಳಿಸಿ, ಹೊಸ ಜೀವನ ಕಟ್ಟಿ ಕೊಡುವ ಅಂಗಾಂಗ ದಾನದ ಮಹತ್ವ ಮತ್ತು ಅಗತ್ಯತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಎಲ್ಲರೂ ಪ್ರಯತ್ನಿಸೋಣ. ಈ ವಿಶ್ವ ಅಂಗಾಂಗ ದಾನ ದಿನದಂದು, ಅಂಗಾಂಗ ದಾನದ ಬಗ್ಗೆ ಇರುವ ಸಂಶಯಗಳನ್ನು, ಹಿಂಜರಿಕೆಯನ್ನು ನಿವಾರಿಸುವ ದೃಢ ಸಂಕಲ್ಪ ತಾಳೋಣ,'' ಎಂದು ತಿಳಿಸಿದ್ದಾರೆ.
"ಇನ್ನು ಶಾಲೆಗಳನ್ನು ಆರಂಭಿಸುವ ಬಗ್ಗೆ ತಜ್ಞರ ವರದಿಯ ಆಧಾರದಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ. ಬೆಂಗಳೂರಿಗೆ ಹೋದ ತಕ್ಷಣ ಮತ್ತೆ ತಜ್ಞರ ತುರ್ತು ಸಭೆಯನ್ನು ಕರೆಯುತ್ತೇವೆ. ಅವರ ಅಭಿಪ್ರಾಯಗಳನ್ನು ತೆಗೆದುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ," ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಇನ್ನು ನಿನ್ನೆ (ಗುರುವಾರ) ಉಡುಪಿಯ ಶ್ರೀಕೃಷ್ಣ ಮಠಕ್ಕೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಉಡುಪಿ ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ. ದರ್ಶನದ ಬಳಿಕ ಪರ್ಯಾಯ ಶ್ರೀಗಳ ಆಶೀರ್ವಾದ ಪಡೆದ ಸಿಎಂ, "ನಾನೊಬ್ಬ ಶ್ರೀಕೃಷ್ಣನ ಭಕ್ತ, ಮಠಕ್ಕೆಂದೇ ಉಡುಪಿಗೆ ಬರುತ್ತಿದ್ದೆ. ಈಗ ಮುಖ್ಯಮಂತ್ರಿಯಾಗಿ ಬಂದು ಕೃಷ್ಣನ ದರ್ಶನದ ಅನುಗ್ರಹವಾಗಿದೆ. ಇದಕ್ಕಿಂತ ಸೌಭಾಗ್ಯ ಬೇರೇನಿದೆ," ಎಂದು ಕೃಷ್ಣನ ಮೇಲಿನ ತನ್ನ ಅಪರಿಮಿತ ಭಕ್ತಿಯನ್ನು ತೋರಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಕರಾವಳಿ ಪ್ರವಾಸ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಅಲ್ಲಲ್ಲಿ ಕಟೌಟ್, ಹೋರ್ಡಿಂಗ್ಸ್ ಹಾಕಿದ್ದರು. ಈ ಬಗ್ಗೆ ಪಕ್ಷಕ್ಕೆ ಮನವಿ ಮಾಡಿದ ಸಿಎಂ, "ಯಾರೂ ಶುಭಕೋರುವ ಹಾಗೂ ಸ್ವಾಗತ ಕೋರುವ ಕಟೌಟ್, ಹೋರ್ಡಿಂಗ್ಸ್ ಹಾಕಬೇಡಿ. ನಾನು ಮುಖ್ಯಮಂತ್ರಿಯಾದರೂ ನಾಡಿನ ಸೇವಕ. ನಿಮ್ಮ ಈ ಕಟೌಟ್ ನನ್ನ ಈ ಭಾವನೆಯನ್ನು ಕಡಿಮೆಯಾಗುವಂತೆ ಮಾಡಬಾರದು," ಅಂತಾ ಪಕ್ಷದ ಕಾರ್ಯಕರ್ತರಿಗೆ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಜನರ ಮಹಾತ್ವಾಕಾಂಕ್ಷೆಯ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ. ಉಡುಪಿ ಜನರ 24 ವರ್ಷಗಳ ಬೇಡಿಕೆಗೆ ಈ ಮೂಲಕ ಜೀವ ತುಂಬಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬೊಮ್ಮಾಯಿ ಅವರೇ ಸಿಎಂ ಆಗಿ ಬಂದು, ಜಿಲ್ಲಾ ಆಸ್ಪತ್ರೆಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.












Click it and Unblock the Notifications