ಕುಡಿಯುವ ನೀರಿನಲ್ಲಿ ವಾಹನ ತೊಳೆದರೆ ಸೂಚನೆ ನೀಡದೆ ಸಂಪರ್ಕ ಕಟ್-ಉಡುಪಿ ನಗರಸಭೆ ಎಚ್ಚರಿಕೆ
ಉಡುಪಿ, ಏಪ್ರಿಲ್ 7: ಕರಾವಳಿಯಲ್ಲಿ ಬೇಸಿಗೆಯ ಧಗೆ ಜೋರಾಗಿದೆ. ಉರಿಬಿಸಿಲು ಜನರ ನೆತ್ತಿ ಸುಡುತ್ತಿದ್ದು, ಇತ್ತ ಬಿಸಿಲ ಝಳಕ್ಕೆ ಜಲಮೂಲಗಳೇ ಬರಿದಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿಯಲ್ಲಿ ನೇತ್ರಾವತಿಯಲ್ಲಿ ಒಳಹರಿವು ಕಡಿಮೆಯಾಗಿದೆ.
ಉಡುಪಿಯಲ್ಲೂ ಸ್ವರ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಉಡುಪಿ ನಗರಸಭಾ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಸ್ವರ್ಣಾ ನದಿಯ ಬಜೆ ಡ್ಯಾಂನಲ್ಲಿ ನೀರಿನ ಸಂಗ್ರಹ ಅತೀ ಕಡಿಮೆಯಾಗುತ್ತಿದ್ದು, ಪ್ರಸ್ತುತ ಕುಡಿಯುವ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರ ಸಭೆ ಸಾರ್ವಜನಿಕಗೆ ವಿಶೇಷ ಪ್ರಕಟನೆ ಹೊರಡಿಸಿದೆ.

ಸಾರ್ವಜನಿಕರು ಕುಡಿಯುವ ನೀರನ್ನು ವಾಹನ ತೊಳೆಯಲು, ಗಿಡಗಳಿಗೆ ನೀರನ್ನು ಬಿಡುವುದು ಕಂಡು ಬಂದಲ್ಲಿ ಆ ಜನರ ನೀರಿನ ಸಂಪರ್ಕವನ್ನು ಯಾವುದೇ ಮುನ್ಸೂಚನೆ ನೀಡದೆ ಕಡಿತಗೊಳಿಸಿ ದಂಡ ವಿಧಿಸಲಾಗುವುದು ಎಂದು ಉಡುಪಿ ನಗರಸಭೆಯ ಪೌರಾಯುಕ್ತರಾದ ರಮೇಶ ಪಿ ನಾಯ್ಕ ವಿಶೇಷ ಪ್ರಕಟನೆ ಹೊರಡಿಸಿದ್ದಾರೆ.
ಬಜೆ ಡ್ಯಾಂನಲ್ಲಿ ಕಡಿಮೆಯಾದ ನೀರಿನ ಪ್ರಮಾಣ
ಉಡುಪಿ ನಗರಸಭಾ ವ್ಯಾಪ್ತಿಯ ಜನರು ಬಳಸುವ ಬಜೆ ಡ್ಯಾಂ ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಘಟ್ಟ ಪ್ರದೇಶದ ಜಲಾನಯನ ಪ್ರದೇಶದಲ್ಲಿ ಮಳೆಯಾದರೆ ಮಾತ್ರ ಸ್ವರ್ಣಾ ನದಿಯಲ್ಲಿ ಹರಿವು ಜಾಸ್ತಿಯಾಗಿ ಬಜೆ ಡ್ಯಾಂ ನಲ್ಲಿ ನೀರಿನ ಶೇಖರಣೆ ಜಾಸ್ತಿಯಾಗಲಿದೆ.ಆದರೆ ಇನ್ನೂ ಮಳೆಯಾಗದ ಹಿನ್ನಲೆಯಲ್ಲಿ ಈ ಭಾರೀ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.
ಸಾಮಾನ್ಯವಾಗಿ, ಬಜೆ ಅಣೆಕಟ್ಟು ಮಾರ್ಚ್ ಮೊದಲ ವಾರದಲ್ಲಿ ಖಾಲಿಯಾಗುತ್ತದೆ ಏಪ್ರಿಲ್ ಎರಡನೇ ವಾರದ ವೇಳೆಗೆ, ನದಿ ಪಾತ್ರದ ಉದ್ದಕ್ಕೂ ಹೊಂಡಗಳಲ್ಲಿ ನಿಂತ ನೀರನ್ನು ಅಣೆಕಟ್ಟಿಗೆ ಪಂಪ್ ಮಾಡಲಾಗುತ್ತದೆ. ಮೇ ಮೊದಲ ವಾರದ ವೇಳೆಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತಿತ್ತು. ಆದರೆ ಈ ವರ್ಷ ನೀರಿನ ಕೊರತೆ ಬಹಳಷ್ಟು ಇರುವುದರಿಂದ ನೀರಿನ ಸರಬರಾಜುನಲ್ಲಿ ವ್ಯತ್ಯವಾಗುವ ಸಾಧ್ಯತೆಗಳಿವೆ.

ಉಡುಪಿ ನಗರದಲ್ಲಿ 17,500 ಮನೆಗಳು, ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ 90 ರಿಂದ 110 ಘಟಕಗಳು, 970 ಫ್ಲಾಟ್‌ಗಳು, ಸಾವಿರ ವಾಣಿಜ್ಯ ಸಂಸ್ಥೆಗಳು, 900 ಹೋಟೆಲ್‌ಗಳು ಮತ್ತು 80 ವಸತಿಗೃಹಗಳನ್ನು ಹೊಂದಿದೆ. ನಗರ ಪ್ರದೇಶದಲ್ಲಿ ಶೇ 90ರಷ್ಟು ವಾಣಿಜ್ಯ ಕಟ್ಟಡಗಳು ಪುರಸಭೆಯ ನೀರನ್ನು ಅವಲಂಬಿಸಿವೆ. ಹಾಗಾಗಿ ಬೇಸಿಗೆಯಲ್ಲಿ ಹೋಟೆಲ್‌ಗಳು ಹೆಚ್ಚು ನೀರು ಬಳಕೆ ಮಾಡುತ್ತಿವೆ. ಟ್ಯಾಪ್ ಸಂಪರ್ಕಗಳು ಈಗ 25,200ಕ್ಕೆ ಏರಿದೆ.
ಏಪ್ರಿಲ್ ಅಂತ್ಯ ಹಾಗೂ ಮೇ ತಿಂಗಳ ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಲಿದ್ದು, ಸರಬರಾಜುನಲ್ಲಿ ವ್ಯತ್ಯವಾಗುವ ಸಾಧ್ಯತೆಗಳಿರುವುದರಿಂದ ಉಡುಪಿ ನಗರಸಭೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಚನೆ ಹೊರಡಿಸಿದೆ.
ಉಡುಪಿಯಲ್ಲಿ ನೀರಿನ ಕೊರತೆ ಉಂಟಾಗಿರುವುದು ರಾಜ್ಯಕ್ಕೆ ಬರ ಎದುರಾಗಿರುವ ಸೂಚನೆ
ಇನ್ನು ಉಡುಪಿ ನಗರಸಭೆ ಹೊರಡಿಸಿರುವ ಪ್ರಕಟಣೆಯನ್ನು ರಾಜ್ಯ ಕಾಂಗ್ರೆಸ್ ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬಿಜೆಪಿ ವಿರುದ್ಧ ಕಿಡಿಕಾರಿದೆ. ಇಂತಹ ಗತಿಗೆಟ್ಟ ಸರ್ಕಾರ ಹಿಂದೆಯೂ ಕಂಡಿಲ್ಲ, ಮುಂದೆಯೂ ಕಾಣುವುದಿಲ್ಲ. ಉಡುಪಿ ಜಿಲ್ಲೆಗೆ ನೀರಿನ ಕೊರತೆ ಉಂಟಾಗಿರುವುದು ರಾಜ್ಯಕ್ಕೆ ಬರದ ಎದುರಾಗಿರುವ ಸೂಚನೆ. ಆದರೆ ಬಿಜೆಪಿ ಸರ್ಕಾರ ಮಾತ್ರ ಬರ ಎದುರಿಸುವ ಕೆಲಸ ಮಾಡದೆ 40% ಕಮಿಷನ್ ಲೂಟಿಗೆ ದಾರಿ ಹುಡುಕುತ್ತಿದೆ. ರಾಜ್ಯಕ್ಕೆ ಬರ ಬಂದರೆ ಬಿಜೆಪಿಗೆ ಕಮಿಷನ್ ವರ ಸಿಕ್ಕಂತೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.












Click it and Unblock the Notifications