ಉಡುಪಿ ಹೊಳೆ ಮೀನುಗಾರಿಕೆಯಲ್ಲಿ ಕಲಹ: ಶಿಳ್ಳೆಕ್ಯಾತರ ಮೇಲೆ ಹಲ್ಲೆ,ಬೆದರಿಕೆ..ದೂರು ದಾಖಲು
ಉಡುಪಿ, ಜೂನ್ 23: ಕರಾವಳಿಯ ಮೊಗವೀರ ಮತ್ತು ಮಲೆನಾಡ ಅಲೆಮಾರಿ ಬೆಸ್ತರು ನಡುವೆ ಕಲಹ ನಡೆದಿದೆ. ಮಾತಿಗೆ ಮಾತು ಬೆಳೆದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನಮಗೆ ಕೂಲಿ ಮಾಡಲು ಅವಕಾಶ ಕೊಡಿ ಬದುಕಲು ಬಿಡಿ ಎಂದು ಉಡುಪಿ ಜಿಲ್ಲಾಡಳಿತದ ಮುಂದೆ ಶಿಳ್ಳೆಕ್ಯಾತರು ಬೇಡಿಕೆಯಿಟ್ಟಿದ್ದಾರೆ.
ಬಸ್ರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಇರುವ ಇವರು ಕುಂದಾಪುರ ಸುತ್ತಮುತ್ತ ನೆಲೆಸಿರುವ ಶಿಳ್ಳೆಕ್ಯಾತ ಅಲೆಮಾರಿ ಜನಾಂಗದವರು. ಸ್ಥಳೀಯ ಮೊಗವೀರ ಸಮುದಾಯ ಶಿಳ್ಳೆಕ್ಯಾತರ ಜೊತೆ ಕ್ಯಾತೆ ತೆಗೆದು ಜಗಳವಾಡಿದ್ದಾರೆ ಎನ್ನಲಾಗಿದೆ. ತಿಕ್ಕಾಟ ನಡೆದು ಅಲೆಮಾರಿಗಳು ಗಾಯಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾರೆ.

ಗುಲ್ವಾಡಿ ಹೊಳೆಯಲ್ಲಿ ಕಳೆದ 10 -20 ವರ್ಷಗಳಿಂದ ಶಿಳ್ಳೆಕ್ಯಾತ ಅಲೆಮಾರಿ ಸಮುದಾಯದ ಐದಾರು ಕುಟುಂಬಗಳು ಮೀನು ಹಿಡಿದು ಜೀವನ ನಡೆಸುತ್ತಿದೆ. ನದಿ ಮತ್ತು ಹೊಳೆಯ ತೀರದಲ್ಲಿ ಸಣ್ಣಪುಟ್ಟ ಬಲೆಗಳನ್ನು ಹಾಕಿ ದಿನಗೂಲಿಯನ್ನು ದುಡಿಯುತ್ತಾರೆ. ಇದೇ ವಿಚಾರಕ್ಕೆ ಸ್ಥಳೀಯ ಮೊಗವೀರ ಕಾರ್ವಿ ಸಮುದಾಯದ ನಡುವೆ ಜಗಳ ಶುರುವಾಗಿದೆ. ಹಲವಾರು ವರ್ಷಗಳಿಂದ ಜಗಳ ಹೊಡೆದಾಟಗಳು ನಡೆಯುತ್ತಾ ಬಂದಿದೆ. ಈವರೆಗೆ ವಿಕೊಕಪಕ್ಕೆ ಹೋಗಿರಲಿಲ್ಲ. ಆದರೆ ಕಳೆದ ವಾರ ದೊಡ್ಡ ಮಾರಾ ಮಾರಿಯೇ ನಡೆದುಬಿಟ್ಟಿದೆ.
ಸುಮಾರು 25 ಜನ ಗಂಗೊಳ್ಳಿ ಭಾಗದ ಮೀನುಗಾರರು ತೆಪ್ಪಗಳಿಗೆ ದಾಳಿ ಮಾಡಿದ್ದಾರೆ. ಮಹಿಳೆಯರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಗುಡಿಸಲು ಗಳಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ ಇನ್ನು ಮುಂದೆ ನದಿಗೆ ಇಳಿಯಬಾರದು ಬಲೆ ಬಿಡಲೇಬಾರದು ಕಸುಬು ನಡೆಸಬಾರದು ಎಂದು ತಾಕೀತು ಮಾಡಿದ್ದಾರೆ. ಹಲ್ಲೆ ನಡೆಸಿದವರು ವಿರುದ್ಧ ಶಿಳ್ಳೆಕ್ಯಾತ ಸಮುದಾಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.

ಅಲೆಮಾರಿ ಸಮುದಾಯ ಜೊತೆ ಕೆಲ ಸಂಘಟನೆಗಳು ಬೆಂಬಲವಾಗಿ ನಿಂತಿದೆ. ಈ ಘಟನೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅಲೆಮಾರಿ ಸಮುದಾಯಕ್ಕೆ ಶಿಕ್ಷಣ ಮತ್ತು ಆರ್ಥಿಕ ಶಕ್ತಿಯನ್ನು ಸರಕಾರ ನೀಡಬೇಕು ಎಂದು ಒತ್ತಾಯಿಸಿದೆ.











Click it and Unblock the Notifications