ಭಾಷೆ..ಗಡಿ ದಾಟಿದ ಯಕ್ಷಗಾನ: ಉಡುಪಿಯಲ್ಲಿ ಮೋದಿ ಊರಿನ ಕುವರರಿಗೆ ತರಬೇತಿ
ಉಡುಪಿ, ಜೂನ್ 21: ಭಾಷೆಯ ಗಡಿಗಳನ್ನು ದಾಟಿ ಯಕ್ಷಗಾನ ಬೆಳೆಯುತ್ತಿದೆ. ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು, ಕೃಷ್ಣ ನಗರಿ ಉಡುಪಿಗೆ ಯಕ್ಷಗಾನ ಕಲಿಯಲು ಬಂದಿದ್ದಾರೆ. ಗುರು ಬನ್ನಂಜೆ ಸಂಜೀವ ಸುವರ್ಣರ ಮಾರ್ಗದರ್ಶನದಲ್ಲಿ ಹಿಂದಿ ಯಕ್ಷಗಾನದ ಶಿಬಿರ ಏರ್ಪಟ್ಟಿದೆ.
ಕನ್ನಡದ ಕಲೆ ಯಕ್ಷಗಾನಕ್ಕೆ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳೇ ಮನಸೋತಿದ್ದಾರೆ. ಭವಿಷ್ಯದ ಚಲನಚಿತ್ರರಂಗ ಮತ್ತು ಟಿವಿ ಪರದೆಯನ್ನು ಅಲಂಕರಿಸದಿರುವ ಯುವ ಕಲಾವಿದರು 20 ದಿನಗಳಿಂದ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ.

ಗುರುಬನಂಜೆ ಸಂಜೀವ ಸುವರ್ಣ ಅವರು, ಸಾಂಪ್ರದಾಯಿಕ ಹೆಜ್ಜೆಗಾರಿಕೆಯನ್ನು ಕಲಿಸುವುದರ ಜೊತೆಗೆ ಯಕ್ಷಗಾನ ಪ್ರದರ್ಶನಕ್ಕೆ ಈ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ಪ್ರತಿದಿನ ಹನ್ನೆರಡು ಗಂಟೆಗೂ ಅಧಿಕ ಕಾಲ ವಿದ್ಯಾರ್ಥಿಗಳು ಬೆವರಿಳಿಸಿ ಯಕ್ಷಗಾನದ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನವನ್ನು ನೀಡಲಿದ್ದಾರೆ.

ರಾಷ್ಟ್ರೀಯ ನಾಟಕ ಶಾಲೆಯ ಕಲಿಕೆಯ ಭಾಗವಾಗಿ ಕಳೆದ ಹಲವಾರು ವರ್ಷಗಳಿಂದ ಯಕ್ಷಗಾನವನ್ನು ಒಂದು ಪಠ್ಯವಾಗಿ ಕಲಿಸಲಾಗುತ್ತದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದ್ದು, ದೇಶದ ನಾನಾ ಭಾಗಗಳ ಕಲಾವಿದರು ಅಪರೂಪದ ಕರಾವಳಿಯ ಕಲೆಯನ್ನು ಅಭ್ಯಸಿಸುವಂತಾಗಿದೆ. ಅದಮಾರು ಮಠದ ಆಶ್ರಯದಲ್ಲಿ ಈ ಶಿಬಿರ ಏರ್ಪಟ್ಟಿದ್ದು, ಗಾನನಾಟ್ಯ ಸಂಭಾಷಣೆಯ ಅಪರೂಪದ ಕಲೆ ದೇಶದ ಮೂಲೆ ಮೂಲೆಗಳಿಂದ ಕಲಾವಿದರನ್ನು ಆಕರ್ಷಿಸುತ್ತಿದೆ.

ಉಡುಪಿಯಲ್ಲಿ ಅಪರೂಪದ ಕರಿ ಚಿರತೆ ಪತ್ತೆ
ಉಡುಪಿಯಲ್ಲಿ ಮತ್ತೊಮ್ಮೆ ಅಪರೂಪದ ಕರಿ ಚಿರತೆಯೊಂದು ಪತ್ತೆಯಾಗಿದೆ. ಬೇಟೆ ಅರಸಿ ಬಂದ ಈ ಚಿರತೆ ಬಾವಿಗೆ ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದೆ. ಇಲ್ಲಿನ ಮಂದಾರ್ತಿ ಸಮೀಪದ ಶಿರೂರು ಹೆಮ್ಮಣಿಕೆ ಎಂಬಲ್ಲಿ ಈ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ಶೇಖರ್ ಶೆಟ್ಟಿ ಎಂಬವರ ರಬ್ಬರ್ ತೋಟದ ಸಮೀಪವೇ ಇರುವ ಕೃಷ್ಣ ನಾಯ್ಕ ಎಂಬವರ ಜಾಗದಲ್ಲಿರುವ ತೆರೆದ ಬಾವಿಗೆ ತಡರಾತ್ರಿ ಕರಿ ಚಿರತೆ ಬಿತ್ತೆನ್ನಲಾಗಿದೆ. ಸಂಜೆ ವೇಳೆಗೆ ಬಾವಿಯಲ್ಲಿ ಚಿರತೆ ಬಿದ್ದ ಬಗ್ಗೆ ತಿಳಿದ ತಕ್ಷಣ ಶೇಖರ್ ಶೆಟ್ಟಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಬಾವಿ ಸುತ್ತ ಬಲೆ ಹಾಕಿ ಕರಿ ಚಿರತೆ ರಕ್ಷಣೆಗೆ ಮುಂದಾದರು. ಆದರೆ ಕಾರ್ಯಾಚರಣೆ ವೇಳೆ ಚಿರತೆ ಬಲೆಯಿಂದ ಸರಿದು ಸಮೀಪದ ತೋಟದೊಳಕ್ಕೆ ಓಡಿ ಹೋಯಿತೆನ್ನಲಾಗಿದೆ. ಈ ಮೂಲಕ ಕರಿ ಚಿರತೆ ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆ ಬಂದು ಕಾಡು ಪ್ರದೇಶ ಸೇರಿದೆ ಎಂದು ತಿಳಿದುಬಂದಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ ನಿರ್ದೇಶನದಲ್ಲಿ ಶಂಕರ ನಾರಾಯಣ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ, ಉಪವಲಯ ಅರಣ್ಯಾಧಿಕಾರಿ ನಾಗರಾಜ ಮತ್ತು ಸಿಬ್ಬಂದಿ, ಸ್ಥಳೀಯರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications