ಉಡುಪಿ; ಕಟಪಾಡಿಯಲ್ಲಿ ಓವರ್ ಪಾಸ್ ನಿರ್ಮಾಣಕ್ಕೆ ಕೇಂದ್ರದ ಒಪ್ಪಿಗೆ
ಉಡುಪಿ, ಜೂನ್ 15; ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿ ಪ್ರದೇಶದಲ್ಲಿ ಅಂಡರ್ ಪಾಸ್ ಅವಶ್ಯಕತೆಯಿದೆ ಎಂದು ಕ್ಷೇತ್ರದ ಜನತೆ ಹಲವಾರು ವರ್ಷಗಳಿಂದ ಬೇಡಿಕೆಯಿಟ್ಟಿದ್ದರು.
ಹಲವಾರು ಬಾರಿ ಕೇಂದ್ರ ಭೂ ಸಾರಿಗೆ ಸಚಿವರನ್ನು ಭೇಟಿಯಾಗಿ ಕಟಪಾಡಿ ಹೆಚ್ಚಿನ ಜನ ಸಂಚಾರವಿರುವ ಕಾರಣದಿಂದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ಅಂಡರ್ ಪಾಸ್/ ಓವರ್ ಪಾಸ್ ಅನಿವಾರ್ಯತೆಯಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಮನವರಿಕೆ ಮಾಡಿದ್ದರು.
ಕ್ಷೇತ್ರದ ಜನರ ಅಪೇಕ್ಷೆಯಂತೆ ಕೇಂದ್ರ ಸರ್ಕಾರ ಕಟಪಾಡಿಯಲ್ಲಿ ಅಂಡರ್ ಪಾಸ್ ಬದಲು ಓವರ್ ಪಾಸ್ ನಿರ್ಮಿಸಲು ತಾತ್ವಿಕ ಅನುಮೋದನೆಯನ್ನು ನೀಡಿದೆ. ಈ ಯೋಜನೆಯು ಕಾಪು ವಿಧಾನ ಸಭಾ ಕ್ಷೇತ್ರದ ಕಟಪಾಡಿ, ಬಂಟಕಲ್, ಶಿರ್ವ, ಮಟ್ಟು, ಬೆಳ್ಮಣ್ ಪ್ರದೇಶದ ನಿವಾಸಿಗಳಿಗೆ ಸಹಕಾರಿಯಾಗಲಿದೆ.

ಯೋಜನೆಯ ಕುರಿತು ವಿಸ್ತೃತ ಯೋಜನಾ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಯಾರು ಮಾಡುತ್ತಿದ್ದು, ಮುಂದಿನ ತಿಂಗಳಲ್ಲಿ ಯೋಜನೆಯ ಪೂರ್ಣ ವಿವರಗಳು ಲಭ್ಯವಾಗಲಿವೆ.
ಜನಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಕಟಪಾಡಿಯಲ್ಲಿ ಒಟ್ಟು 22.72 ಕೋಟಿಗಳ ವೆಚ್ಚದಲ್ಲಿ ಓವರ್ ಪಾಸ್ ನಿರ್ಮಿಸಲು ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ, ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಗೆ ಸಂಸದರು ಕೃತಜ್ಞತೆ ಸಲ್ಲಿಸಿದ್ದಾರೆ.











Click it and Unblock the Notifications