ಉಡುಪಿ ವಿಡಿಯೋ ಪ್ರಕರಣ: ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಉಡುಪಿ, ಆಗಸ್ಟ್, 03: ಉಡುಪಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಹಿಂದೂ ಯುವತಿಯರ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎನ್ನಲಾದ ಘಟನೆ ಕುರಿತು ಬಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ನಗರದ ಜೋಡುಕಟ್ಟೆಯಿಂದ ಕೇಷ್ಣಮಠದ ಪಾರ್ಕಿಂಗ್ ಆವರಣದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ 10 ಸಾವಿರಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದು, ಈ ವೇಳೆ ರಾಜ್ಯ ಸರ್ಕಾರ ಹಾಗೂ ಪೊಲೀಸರ ನಡೆಗೆ ಧಿಕ್ಕಾರ ಕೂಗಿದರು. ಅಲ್ಲದೆ ಕೂಡಲೇ ತಪ್ಪಿತಸ್ಥ ಯುವತಿಯರ ವಿರುದ್ಧ ಕ್ರಮ ಕೈಗೊಂಡು, ಸಂತ್ರಸ್ತ ಯುವತಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಜೋಡುಕಟ್ಟೆಯಿಂದ ಆರಂಭವಾದ ಮೆರವಣಿಗೆ ಕೋರ್ಟ್, ಕಲ್ಪನಾ ಸರ್ಕಲ್, ಅಲಂಕಾರ್ ಮಾರ್ಗವಾಗಿ ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಕೃಷ್ಣಮಠದ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ಮುಕ್ತಾಯವಾಯಿತು.
ಮೆರವಣಿಗೆಯಲ್ಲಿ ಶಾಸಕ ಸುನೀಲ್ ಕುಮಾರ್, ಯಶ್ ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಾಮಂತ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ, ಮೂವರ ಬಂಧನ
ಈಗಾಗಲೇ ಉಡುಪಿ ಕಾಲೇಜು ಪ್ರಕರಣ ರಾಜ್ಯದೆಲ್ಲೆಡೆ ಸದ್ದು ಮಾಡಿದ್ದು, ಈ ಪ್ರಕರಣದ ತನಿಖೆ ಮಾಡಲು ನೂತನ ಪೊಲೀಸ್ ಅಧಿಕಾರಿಯನ್ನು ಸಹ ನೇಮಕ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಮಂಗಳೂರಿನಲ್ಲಿ ದಲಿತ ಸಮುದಾಯದ ಅಪ್ರಾಪ್ತೆಯ ಮೇಲೆ ಮೂವರು ಯುವಕರು ಪ್ರತ್ಯೇಕವಾಗಿ ಅತ್ಯಾಚಾರ ಎಸಗಿದ್ದಾರೆ ಘಟನೆ ಇತ್ತೀಚೆಗಷ್ಟೇ ನಡೆದಿತ್ತು.

ದಲಿತ ಸಮುದಾಯದ ಅಪ್ರಾಪ್ತ ಬಾಲಕಿ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿದ್ದಾರೆ ಎನ್ನುವ ಸತ್ಯ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ ಎಂದು ತಿಳಿದುಬಂದಿದ್ದು, ಸದ್ಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇನ್ನು ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದ್ದು, ಬಂಧಿತ ಆರೋಪಿಗಳನ್ನು ಅಕ್ಷಯ್ ದೇವಾಡಿಗ (24), ಕಮಲಾಕ್ಷ ಬೆಳ್ಚಾಡ (30), ಸುಕುಮಾರ ಬೆಳ್ಚಾಡ (28) ಗುರುತಿಸಲಾಗಿದೆ. ಈ ಮೂವರು 2019ರಿಂದ ನಿರಂತರವಾಗಿ ವಿವಿಧೆಡೆ ಅತ್ಯಾಚಾರ ಎಸಗಿದ್ದರು ಎನ್ನುವ ಗಂಭೀರ ಆರೋಪವೂಂದು ಕೇಳಿಬಂದಿದ್ದು, ಇವರ ವಿರುದ್ಧ ಪೋಕ್ಸೋ ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications