ಉಡುಪಿ ವಿಡಿಯೋ ಪ್ರಕರಣ: ತನಿಖೆ ಕೈಗೆತ್ತಿಕೊಂಡ ಸಿಐಡಿ ತಂಡ
ಮಂಗಳೂರು, ಆಗಸ್ಟ್, 10: ರಾಜ್ಯಾದ್ಯಂತ ಸಂಚಲನ ಮೂಡಿಸಿದ ಉಡುಪಿ ಪ್ಯಾರಾ ಮೆಡಿಕಲ್ ಕಾಲೇಜು ವಿಡಿಯೋ ಪ್ರಕರಣವನ್ನು ಸಿಐಡಿ ತಂಡ ಕೈಗೆ ತೆಗೆದುಕೊಂಡಿದೆ. ಪ್ರಕರಣದ ತನಿಖೆಯನ್ನು ಸಿಐಡಿ ಎಸ್.ಪಿ. ರಾಘವೇಂದ್ರ ಹೆಗಡೆ ನೇತೃತ್ವದ ತಂಡ ಮಾಡುತ್ತಿದ್ದು, ಬೆಂಗಳೂರಿಂದ ಉಡುಪಿಗೆ ಸಿಐಡಿ ಎಸ್.ಪಿ. ನೇತೃತ್ವದ ತಂಡ ಆಗಮಿಸಿದೆ.
ನೇತ್ರ ಜ್ಯೋತಿ ಕಾಲೇಜಿಗೆ ಭೇಟಿ ಕೊಟ್ಟ ಸಿಐಡಿ ತಂಡ ಸಂತ್ರಸ್ತ ವಿದ್ಯಾರ್ಥಿನಿಯಿಂದ ಹೇಳಿಕೆ ಪಡೆದಿದೆ. ಜುಲೈ 18ರಂದು ನಡೆದ ಘಟನೆಯ ಬಗ್ಗೆ ಪೂರ್ಣ ಹೇಳಿಕೆ ದಾಖಲಿಸಿಕೊಂಡ ಸಿಐಡಿ ಆಡಳಿತ ಮಂಡಳಿ, ಕಾಲೇಜಿನ ಸಿಬ್ಬಂದಿಗಳ ಹೇಳಿಕೆಗಳನ್ನು ದಾಖಲು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಎಡಿಜಿಪಿ ಮನೀಶ್ ಕರ್ಬೀಕರ್ ಕೂಡ ಉಡುಪಿಗೆ ಆಗಮಿಸಿದ್ದಾರೆ. ನಂತರ ಉಡುಪಿಯ ಪ್ರವಾಸಿ ಮಂದಿರದಲ್ಲಿ ಮಹತ್ವದ ಸಭೆ ಮಾಡಿದ್ದಾರೆ.

ಸಭೆ ವೇಳೆ ಎಡಿಜಿಪಿ ಮನೀಶ್ ಕರ್ಬೀಕರ್ ಅವರು ಉಡುಪಿ ಎಸ್‌ಪಿ ಅಕ್ಷಯ್ ಮಚ್ಚೀಂದ್ರ, ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ ಜೊತೆ ಚರ್ಚೆ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಉಡುಪಿ ಕಾಲೇಜುಗೂ ಸಿಐಡಿ ಎಡಿಜಿಪಿ ಮನೀಶ್ ಕರ್ಬೀಕರ್ ಭೇಟಿ ನೀಡಿದ್ದು, ಕಾಲೇಜು ವಿದ್ಯಾರ್ಥಿನಿಯರು ಮತ್ತು ಕಾಲೇಜು ಆಡಳಿತ ಮಂಡಳಿ ಜೊತೆ ಸಭೆ ನಡೆಸಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮನೀಶ್ ಮಾತನಾಡಿ, ಉಡುಪಿಯಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಉಡುಪಿ ಪೊಲೀಸರು ನಡೆಸಿದ ತನಿಖೆ ರಿಪೋರ್ಟ್ ಪಡೆದುಕೊಳ್ಳಲಾಗಿದೆ. ಪೊಲೀಸ್ ಮತ್ತು ಸಿಐಡಿ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಮುಂದೆ ಏನೇನು ತನಿಖಾ ಪ್ರಕ್ರಿಯೆ ನಡೆಸಬೇಕೆಂದು ಚರ್ಚಿಸಲಾಗಿದೆ ಎಂದರು.
ತನಿಖಾಧಿಕಾರಿಯಾಗಿ ಸಿಐಡಿ ಡಿವೈಎಸ್‌ಪಿ ಅಂಜುಮಾಲ ಅವರನ್ನು ನೇಮಕ ಮಾಡಲಾಗಿದೆ. ತನಿಖೆಯ ಮೇಲ್ವಿಚಾರಣೆಯನ್ನು ಸಿಐಡಿ ಎಸ್.ಪಿ ರಾಘವೇಂದ್ರ ಹೆಗಡೆ ನಡೆಸುತ್ತಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ತನಿಖಾಧಿಕಾರಿ ಕೈ ಸೇರಲಿದೆ. ಪ್ರಕರಣದ ತನಿಖೆ ಆದ ನಂತರ ಕೋರ್ಟ್‌ಗೆ ಮುಂದಿನ ವರದಿ ಕೊಡುತ್ತೇವೆ. ಸಿಐಡಿ ತನಿಖೆ ಉಡುಪಿಯಲ್ಲಿ ಮುಂದುವರೆಯಲಿದ್ದು, ಮೂರು ಮೊಬೈಲ್ ಎಫ್ಎಸ್ಎಲ್ ವರದಿ ತನಿಖೆಯ ಒಂದು ಭಾಗವಾಗಿ ನಾವು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.












Click it and Unblock the Notifications