ಉಡುಪಿ ಶ್ರೀಕೃಷ್ಣ ಮಠದ ರಥ ಬೀದಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ನಿಷೇಧ
ಇತ್ತೀಚಿಗೆ ಪ್ರೀ ವೆಡ್ಡಿಂಗ್ ಫೋಟೋಶೂಟ್, ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್, ಮೆಟರ್ನಿಟಿ ಫೋಟೋಶೂಟ್ ಮಾಡಿಸುವವರ ಸಂಖ್ಯೆ ಹೆಚ್ಚಾಗಿದ್ದು, ಜೋಡಿಗಳು ಹಾಗೂ ಫೋಟೋಗ್ರಾಫರ್ ಫೋಟೋ ಸುಂದರವಾಗಿ ಬರಲು ಸ್ಥಳ ಯಾವುದು ಎನ್ನುವುದನ್ನು ಮರೆತು ಸಿನಿಮಾ ರೀತಿಯಲ್ಲಿ ಫೋಟೋಶೂಟ್‌ಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಸುತ್ತಲೂ ಇರುವ ಜನರಿಗೆ ಮುಜುಗರವಾಗುತ್ತಿರುವ ಪ್ರಸಂಗಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ಮಠ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮಠದ ಈ ನಿರ್ಧಾರಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ರಥ ಬೀದಿಯ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಸೇರಿದಂತೆ ಮುಜುಗರ ಉಂಟುಮಾಡುವ ಯಾವುದೇ ಫೋಟೋಶೂಟ್‌ಗಳನ್ನು ಮಾಡದಂತೆ ನಿಷೇಧಿಸಿ ಪರ್ಯಾಯ ಪುತ್ತಿಗೆ ಮಠ ಆದೇಶ ಹೊರಡಿಸಿದೆ. ಮುಖ್ಯವಾಗಿ ಮಠದ ರಥ ಬೀದಿಯಲ್ಲಿ ಪ್ರೀ-ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಮಾಡುವುದನ್ನು ನಿಷೇಧಿಸಲಾಗಿದೆ.

ಉಡುಪಿ ಶ್ರೀಕೃಷ್ಣ ಮಠದ ರಥಬೀದಿ ಪಾರಂಪರಿಕ ಕಟ್ಟಡಗಳಿದ್ದು, ಅವುಗಳು ಫೋಟೋಗೆ ಸುಂದರವಾಗಿ ಬರುತ್ತವೆ. ಈ ಹಿನ್ನೆಲೆಯಲ್ಲಿ ಉಡುಪಿ ಮಾತ್ರವಲ್ಲದೇ ಬೆಂಗಳೂರು, ಕೇರಳ ಸೇರಿದಂತೆ ರಾಜ್ಯ ಹಾಗೂ ಸಮೀಪದ ರಾಜ್ಯಗಳಿಂದ ಬರುವ ನೂರಾರು ಜೋಡಿಗಳು ಮಠದ ರಥಬೀದಿಯಲ್ಲಿ ಮನಬಂದಂತೆ ಫೋಟೋಶೂಟ್ ನಡೆಸುತ್ತಿರುತ್ತಾರೆ.
ಅಷ್ಟಮಠಾಧೀಶರು, ಸ್ವಾಮೀಜಿಗಳು, ಯತಿಗಳು, ದಾಸರು ನಡೆದಾಡಿದ ಬೀದಿ ಇದಾಗಿದ್ದು, ಇಂತಹ ಪವಿತ್ರ ಸ್ಥಳದಲ್ಲಿ ಫೋಟೋಶೂಟ್ ಹೆಸರಿನಲ್ಲಿ ಮನಬಂದಂತೆ ವರ್ತಿಸುವುದು ಸರಿಯಲ್ಲ. ಪ್ರತಿನಿತ್ಯ ನಡೆಯುವ ಚಿತ್ರ ವಿಚಿತ್ರ ಫೋಟೋಶೂಟ್‌ಗಳಿಂದ ಸ್ವಾಮೀಜಿಗಳ ಓಡಾಟದ ವೇಳೆ ಮುಜುಗರ ಉಂಟಾಗುತ್ತಿದೆ. ಅಲ್ಲದೇ ಭಕ್ತರಿಗೂ ಕೂಡ ಇದರಿಂದ ಕಿರಿಕಿರಿಯಾಗುತ್ತಿದ್ದು, ಈ ಬಗ್ಗೆ ಅನೇಕರು ದೂರು ಕೂಡ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದ ರಥ ಬೀದಿಯ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಮಾಡುವುದನ್ನು ನಿಷೇಧಿಸಿರುವುದಾಗಿ ಪುತ್ತಿಗೆ ಮಠ ತಿಳಿಸಿದೆ. ಅಲ್ಲದೇ ಅಷ್ಟಮಠಾಧೀಶರು ಹಾಗೂ ಸ್ವಾಮೀಜಿಗಳಿಗೆ ಉಂಟಾಗುತ್ತಿರುವ ಮುಜುಗರದ ಸನ್ನಿವೇಶ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈಗಾಗಲೇ ತಿಳಿಸಲಾಗಿದೆ.
ಧಾರ್ಮಿಕ ಸ್ಥಳವಾಗಿರುವ ಉಡುಪಿ ಶ್ರೀಕೃಷ್ಣ ಮಠಕ್ಕೆ ದೇಶದ ಮೂಲೆ ಮೂಲೆಯಿಂದ ಮಾತ್ರವಲ್ಲದೇ ವಿದೇಶದಿಂದಲೂ ಪ್ರತಿ ದಿನ ಸಾವಿರಾರು ಭಕ್ತರು ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆಯುತ್ತಾರೆ. ಶ್ರೀಕೃಷ್ಣನ ನಾಮ ಜಪ ಸೇರಿದಂತೆ ಅನೇಕ ಧಾರ್ಮಿಕ ಆಚರಣೆಗಳು ಮಠದ ರಥ ಬೀದಿಯಲ್ಲಿ ನಡೆಯುತ್ತಲೇ ಇರುತ್ತದೆ. ಈ ವೇಳೆ ಫೋಟೋಶೂಟ್‌ನಂತಹ ಚಟುವಟಿಕೆಗಳಿಂದ ಭಕ್ತರು ಕೂಡ ಅಸಮಾಧಾನಗೊಂಡಿದ್ದು, ಈ ಸಮಸ್ಯೆ ಬಗೆ ಹರಿಸುವ ದೃಷ್ಟಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದ ಈ ನಿರ್ಧಾರಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications