Udupi: ನಾಲ್ವರ ಬರ್ಬರ ಹತ್ಯೆ: ಕೆಲಸದ ಸ್ಥಳದಲ್ಲಿ ಬೆಳೆದ ಆತ್ಮೀಯತೆಯೇ ಕೊಲೆಗೆ ಕಾರಣನಾ..?
ಉಡುಪಿ, ನವೆಂಬರ್ 15: ದೀಪಾವಳಿ ದಿನವೇ ಉಡುಪಿಯಲ್ಲಿ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಪ್ರಕರಣ ಕರಾವಳಿಯಲ್ಲಿ ಆತಂಕ ಸೃಷ್ಟಿಸಿತ್ತು. ಹಾಡಹಗಲೇ ಮನೆಗೆ ನುಗ್ಗಿದ ಹಂತಹ ನಾಲ್ವರ ಉಸಿರು ನಿಲ್ಲಿಸಿದ್ದ. ಹೀಗಾಗಿ ಉಡುಪಿ ಜಿಲ್ಲೆಯ ನೇಜಾರಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಮನೆ ಮಾಡಿತ್ತು.
ನಾಲ್ವರನ್ನು ಕೊಂದ ಹಂತಕ ಸೈಕೋ ಕಿಲ್ಲರ್ ಇರಬಹುದೇ ಎನ್ನುವ ಭಯದಲ್ಲೇ ಜನ ದಿನ ಕಳೆಯುವಂತಾಗಿತ್ತು. ಆದರೆ ಇದೀಗ ಪೊಲೀಸರ ಸತತ ತನಿಖೆಯಿಂದ ಆರೋಪಿ ಜೈಲು ಪಾಲಾಗಿದ್ದಾನೆ. ಪ್ರವೀಣ್ ಅರುಣ್ ಚೌಗಲೆ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಪ್ರಾಥಮಿಕವಾಗಿ ಇದೊಂದು ವೈಯಕ್ತಿಕ ದ್ವೇಷಕ್ಕೆ ನಡೆದಿರುವ ಕೊಲೆಗಳು ಎನ್ನುವುದು ಕಂಡು ಬಂದಿದೆ.

ಕೊಲೆ ಮಾಡಿ ಆರೋಪಿ ಉಡುಪಿಯಿಂದ ಪರಾರಿಯಾಗಿದ್ದ ಆರೋಪಿ ಬೆಳಗಾವಿಯ ಕುಡಚಿಯ ಸಂಬಂಧಿ ಮನೆಯಲ್ಲಿ ಆಶ್ರಯ ಪಡೆದಿದ್ದ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಉಡುಪಿ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದರು. ಮಹಾರಾಷ್ಟ್ರ ಸಾಂಗ್ಲಿ ಮೂಲದವನಾದ ಆರೋಪಿ ಪ್ರವೀಣ್ ಅರುಣ್ ಚೌಗಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಸದ್ಯ ಆರೋಪಿಯ ವಿಚಾರಣೆ ನಡೆಯುತ್ತಿದ್ದು, ಹಂತಕ ಯಾಕಾಗಿ ನಾಲ್ವರನ್ನು ಕೊಂದ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ವೈಯಕ್ತಿಕ ದ್ವೇಷವೇ, ವ್ಯವಹಾರಿಕಾ ದ್ವೇಷವೇ ಅಥವಾ ಇನ್ಯಾವುದಾರೂ ಕಾರಣ ಇರಬಹುದಾ ಎನ್ನುವ ಅನುಮಾನಗಳು ಸುಳಿದಾಡುತ್ತಿದೆ. ಈ ಎಲ್ಲ ಅನುಮಾನಗಳಿಗೆ ಪುಷ್ಠಿ ಕೊಟ್ಟಿರುವುದೇ ಕೆಲಸದ ಸ್ಥಳ. ಯಾಕೆಂದರೆ ಆರೋಪಿ ಪ್ರವೀಣ್ ಅರುಣ್ ಚೌಗಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಹತ್ಯೆಯಾದ ಅಯ್ನಾಜ್ ಕೂಡ ಏರ್ ಇಂಡಿಯಾ ಸಿಬ್ಬಂದಿಯಾಗಿದ್ದಳು.
ಇನ್ನು ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ನಾಜ್‌ಗೆ ಆರೋಪಿ ಪ್ರವೀಣ್ ಪರಿಚಯವಾಗಿದ್ದು, ಇಬ್ಬರು ಪರಸ್ಪರ ಆತ್ಮೀಯವಾಗಿದ್ದರು ಎನ್ನಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಯ್ನಾಜ್ ಆತನಿಂದ ದೂರವಾಗಿ ಆತನಿಂದ ಅಂತರ ಕಾಯ್ದುಕೊಂಡಿದ್ದಳು ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ಪ್ರವೀಣ್ ಆಕೆಯ ಮನೆಗೆ ನುಗ್ಗಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಅಯ್ನಾಜ್‌ಗಳನ್ನು ಕೊಲೆ ಮಾಡಲು ಬಂದ ಆರೋಪಿ ಆಕೆಯನ್ನು ಕಾಪಾಡಲು ಬಂದ ತಾಯಿ, ತಂಗಿ, ಅಜ್ಜಿ ಹಾಗೂ ತಮ್ಮನಿಗೆ ಚಾಕು ಇರಿದಿದ್ದಾನೆ ಎನ್ನಲಾಗುತ್ತಿದೆ.
ಹಬ್ಬದ ಬೆಳ್ಳಂಬೆಳಗ್ಗೆ ನಡೆದಿದ್ದೇನು..?
ಉಡುಪಿ ಜಿಲ್ಲೆಯ ನೇಜಾರಿನಲ್ಲಿ ದೀಪಾವಳಿ ಹಬ್ಬದ ದಿನ ಬೆಳ್ಳಂಬೆಳಗ್ಗೆ ರಕ್ತದ ಕೋಡಿಯೇ ಹರದಿತ್ತು. ಹದಿನೈದು ನಿಮಿಷದ ಸಮಯ ಅಂತರದಲ್ಲಿ ನಡೆದ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ನೇಜಾರಿನ ಮನೆಗೆ ನುಗ್ಗಿದ ಹಂತಕ ತಾಯಿ ಹಸೀನಾ (46) ಆಕೆಯ ಮಕ್ಕಳಾದ ಅಫ್ನಾನ್ (23), ಅಯಾಂಜ್ (21), ಮತ್ತು ಅಸೀಮ್ (14) ದುಷ್ಕರ್ಮಿಯ ಇರಿದು ಸ್ಥಳದಿಂದ ಪರಾರಿಯಾಗಿದ್ದ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರೆ. ಹಾಜಿರಾ (70) ಗಂಭೀರ ಗಾಯಗೊಂಡಿದ್ದರು.
ಇನ್ನು ಕೊಲೆಯಾದ ಹಸೀನಾ ಪತಿ ನೂರ್ ಮೊಹಮ್ಮದ್ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಹಂತಕನ ಕ್ರೌರ್ಯಕ್ಕೆ ಸಂಪೂರ್ಣ ಕುಟುಂಬವನ್ನು ಕಳೆದುಕೊಂಡ ಬಗ್ಗೆ ಸುದ್ದಿ ಮುಟ್ಟುತ್ತಿದ್ದಂತೆ ನೂರ್ ಮೊಹಮ್ಮದ್ ಸೌದಿ ಅರೇಬಿಯಾದಿಂದ ಉಡುಪಿಗೆ ಬಂದು ಮೃತರ ಅಂತಿಮ ಕಾರ್ಯಗಳನ್ನು ನೆರವೇರಿಸಿದ್ದರು. ಇನ್ನು ಪ್ರಕರಣ ಸಂಬಂಧ ಉಡುಪಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications