ಉಡುಪಿ ನಾಡದೋಣಿ ದುರಂತ: ಎಲ್ಲ ನಾಲ್ವರು ಮೀನುಗಾರರ ಶವ ಪತ್ತೆ
ಉಡುಪಿ, ಆಗಸ್ಟ್ 18: ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಡೇರಿ ಪ್ರದೇಶದ ಸಮುದ್ರದಲ್ಲಿ ಕಳೆದ ಭಾನುವಾರ ಅವಘಡಕ್ಕೀಡಾದ ನಾಡದೋಣಿಯಲ್ಲಿದ್ದ ಎಲ್ಲ ನಾಲ್ವರು ಮೀನುಗಾರರ ಶವ ಸೋಮವಾರ ಪತ್ತೆಯಾಗಿವೆ.
Recommended Video
ಭಾನುವಾರ ಸಾಗರಶ್ರೀ ಎಂಬ ಮೀನುಗಾರಿಕಾ ದೋಣಿಯು ಬ್ರೇಕ್ ವಾಟರ್ ಗೆ ಡಿಕ್ಕಿ ಹೊಡೆದು ಮುಳುಗಡೆಯಾಗಿತ್ತು. ಈ ಸಂದರ್ಭ ಎಂಟು ಮಂದಿ ಮೀನುಗಾರರನ್ನು ರಕ್ಷಿಸಲಾಗಿತ್ತು. ನಾಲ್ವರು ಮೀನುಗಾರರು ಸಮುದ್ರ ಪಾಲಾಗಿದ್ದರು.
ಸಮುದ್ರದಲ್ಲಿ ಮುಳುಗಿದವರಿಗಾಗಿ ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯ ಮುಳುಗು ತಜ್ಞರು ಶೋಧ ಕಾರ್ಯ ನಡೆಸುತ್ತಿದ್ದರು. ಈ ಪೈಕಿ ಓರ್ವ ಮೀನುಗಾರನ ಶವ ಸೊಮವಾರ ಬೆಳಿಗ್ಗೆ ಸಿಕ್ಕಿದ್ದರೆ, ಉಳಿದ ಮೂವರು ಮೀನುಗಾರರ ಶವ ರಾತ್ರಿ ಹೊತ್ತಿಗೆ ಪತ್ತೆಯಾಗಿವೆ.

ನಾಗರಾಜ ಖಾರ್ವಿ, ಲಕ್ಷ್ಮಣ ಖಾರ್ವಿ, ಶೇಖರ ಖಾರ್ವಿ ಮತ್ತು ಮಂಜುನಾಥ ಖಾರ್ವಿ ಮೃತ ಮೀನುಗಾರರಾಗಿದ್ದಾರೆ. ಇವರೆಲ್ಲ ಸ್ಥಳೀಯರಾಗಿದ್ದು, ಭಾನುವಾರ ಮೀನುಗಾರಿಕೆಗೆಂದು ತೆರಳಿದ್ದರು. ಮೀನು ಹಿಡಿದು ವಾಪಾಸಾಗುವ ಸಂದರ್ಭ ಇವರಿದ್ದ ನಾಡದೋಣಿಯು ಬ್ರೇಕ್ ವಾಟರ್ ನ ಬಂಡೆಗೆ ಡಿಕ್ಕಿ ಹೊಡೆದು ಮುಳುಗಿತ್ತು.
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ಪಿ ವಿಷ್ಣುವರ್ಧನ್ ಸಹಿತ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಮೀನುಗಾರ ಮುಖಂಡರು ಸೇರಿದಂತೆ ಸಾವಿರಾರು ಜನ ದೌಡಾಯಿಸಿದ್ದರು. ಮಳೆ ಮತ್ತು ಕಡಲ ಅಬ್ಬರದ ನಡುವೆಯೂ ತೀವ್ರ ಶೋಧ ಕಾರ್ಯ ನಡೆಸಲಾಗಿತ್ತು.












Click it and Unblock the Notifications