ಉಡುಪಿಯಲ್ಲಿ ಬಿರುಗಾಳಿ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗೆ
Recommended Video

ಉಡುಪಿ, ಮೇ 29: ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಆಗುತ್ತಿರುವ ಬಿರುಗಾಳಿ ಮಳೆಗೆ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ಉಡುಪಿ ಸುತ್ತಮುತ್ತ ಮರಗಳು ಧರೆಗುರುಳಿದ್ದು ಇನ್ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.
ಹೀಗಾಗಿ ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ತಗ್ಗುಪ್ರದೇಶಗಳ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಆ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿನ್ನೆ ರಾತ್ರಿ ಕಾರ್ಕಳದ ಬೈಲೂರಿನಲ್ಲಿ ಸಿಡಿಲಿಗೆ ಪಂಚಾಯತ್ ಸದಸ್ಯೆ ಶಿಲ್ಪಾ ಎಂಬುವರು ಬಲಿಯಾಗಿದ್ದಾರೆ.
ನಿಟ್ಟೂರು ಮತ್ತು ಕೊಡವೂರಿನಲ್ಲಿ ಮನೆಗಳ ಮೇಲೆ ಭಾರೀ ಗಾತ್ರದ ಮರ ಬಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಅನೇಕ ಕಡೆಗಳಲ್ಲಿ ವಿದ್ಯುತ್ ತಂತಿ ಮತ್ತು ಕಂಬಗಳ ಮೇಲೆ ಮರಗಳು ಉರುಳಿ ಬಿದ್ದಿರುವುದರಿಂದ ವಿದ್ಯುತ್ ಸಂಪರ್ಕ ಸರಿಪಡಿಸಲು ಮೆಸ್ಕಾಂ ಹರಸಾಹಸ ಪಡುವಂತಾಗಿದೆ.

ಇವೆಲ್ಲ ಹಾನಿಗಳು ಒಂದೆಡೆಯಾದ್ರೆ , ಮೆಕ್ನು ಚಂಡಮಾರುತದ ಹಾವಳಿ ಕಡಲ ತೀರವಾಸಿಗಳ ನಿದ್ದೆಗೆಡಿಸಿದೆ. ಕಾಪು , ಕಡಪಾಡಿ, ಮಲ್ಪೆಯಲ್ಲಿ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ತೀರವಾಸಿಗಳು ಆತಂಕಗೊಂಡಿದ್ದಾರೆ. ಗಲ್ಫ್ ರಾಷ್ಡ್ರಗಳಲ್ಲಿ ಬೆಚ್ಚಿ ಬೀಳಿಸಿದ್ದ ಮೆಕ್ನು ಚಂಡಮಾರುತ ಕರಾವಳಿಯಲ್ಲೂ ಕಳೆದ ಮೂರು ದಿನಗಳಿಂದ ಜನರ ನಿದ್ದೆಗೆಡಿಸಿದೆ.

ಕಡಲ ಅಲೆಗಳು ಒಂದೇ ಸಮನೆ ಏಳುತ್ತಿದ್ದು ,ತೀರದವರೆಗೂ ರೌದ್ರನರ್ತನ ತೋರುತ್ತಿವೆ. ಹೀಗಾಗಿ ಪ್ರವಾಸಿಗರ ಸಂಖ್ಯೆ ಒಂದೇ ಸಮನೆ ಇಳಿಮುಖಗೊಂಡಿದ್ದು ,ಕಡಲಿಗಿಳಿಯದಂತೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇಂದು ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಇದ್ದು, ಮಳೆಯಾಗುತ್ತಲೇ ಇದೆ.












Click it and Unblock the Notifications