ವಿಡಿಯೋ; ವಿವಾಹ ವಯಸ್ಸು 21ಕ್ಕೆ ಏರಿಕೆ, ಸ್ವರ್ಣವಲ್ಲಿ ಶ್ರೀ ವಿರೋಧ
ಉಡುಪಿ, ಡಿಸೆಂಬರ್ 22; ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹೆಣ್ಣು ಮಕ್ಕಳ ವಿವಾಹದ ವಯಸ್ಸು 18 ರಿಂದ 21ಕ್ಕೆ ಏರಿಕೆ ಮಾಡಲು ಅನುಮೋದನೆ ನೀಡಲಾಗಿದೆ. ಈ ನಿರ್ಣಯದ ಪರ, ವಿರೋಧದ ಚರ್ಚೆಗಳು ಆರಂಭವಾಗಿದೆ.
ಮಹಿಳಾವಾದಿಗಳು, ಯುವತಿಯರು ಕೇಂದ್ರದ ಈ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ವಿರೋಧಗಳೂ ಬರುತ್ತಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಉಡುಪಿಯಲ್ಲಿ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತ ಪಡಿಸಿದರು.
ಉಡುಪಿಯ ಕೃಷ್ಣಮಠದ ವಿಶ್ವಾರ್ಪಣಂ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಶ್ರೀಗಳು ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದರು. "ಕೇಂದ್ರದ ಈ ನಿರ್ಧಾರದಿಂದ ಹಿಂದೂಗಳಿಗೆ ಅನ್ಯಾಯವಾಗುತ್ತದೆ. ದೇಶದಲ್ಲಿ ಕ್ರೈಸ್ತರಿಗೆ, ಮುಸ್ಲಿಮರಿಗೆ ವಿವಾಹದ ಕಾನೂನು ಬೇರೆ ಇದೆ. ನೀವು ಮಾಡುತ್ತಿರುವ ಹೊಸ ನಿರ್ಣಯ ಹಿಂದೂಗಳಿಗೆ ಮಾತ್ರ ಯಾಕೆ?" ಎಂದು ಪ್ರಶ್ನಿಸಿದರು.

"ಎಲ್ಲರಿಗೂ ಅನ್ವಯವಾಗುವ ರೀತಿ ನೀವು ಯಾಕೆ ಕಾನೂನು, ಕಾಯ್ದೆ ಯಾಕೆ ರೂಪಿಸುತ್ತಿಲ್ಲ. ಎಲ್ಲರಿಗೆ ಸಮಾನ ಕಾಯ್ದೆ ಜಾರಿಗೆ ತನ್ನಿ. ಅದಕ್ಕೆ ನಮ್ಮ ಪೂರ್ತಿ ಬೆಂಬಲವಿದೆ" ಎಂದು ಸೋಂದಾ ಸ್ವರ್ಣವಲ್ಲಿ ಶ್ರೀಗಳು ಹೇಳಿದ್ದಾರೆ.
"ಮುಸ್ಲಿಮರ ಕಾನೂನಲ್ಲಿ ವಿವಾಹದ ವಯಸ್ಸು ಈಗಲೂ 15 ಇದೆ. ಈ ಕಾನೂನಿನ ಪ್ರಕಾರ ಮುಸ್ಲಿಮರ ಜನಸಂಖ್ಯೆ ಏರಿಕೆ ಪ್ರಮಾಣ ಜಾಸ್ತಿ ಇದೆ. ಜಪಾನ್, ಬ್ರಿಟನ್, ಅಮೆರಿಕದಲ್ಲಿ ಮದುವೆಗೆ 16 ರಿಂದ 18 ವಯೋಮಿತಿ ಇದೆ. ಸರಕಾರ ಕೊಡುವ ವೈಜ್ಞಾನಿಕ ಕಾರಣಗಳು ಬಗ್ಗೆ ನಮಗೆ ಒಪ್ಪಿಗೆ ಇದೆ. ಇದರಿಂದ ಹೆಣ್ಣುಮಕ್ಕಳಿಗೆ ತೊಂದರೆ ಆಗಬಾರದು ಎಂಬುದಕ್ಕೆ ನಮ್ಮಸಹಮತಿ ಇದೆ" ಎಂದರು.
"ತಡವಾದ ವಿವಾಹದಿಂದ ವಿಚ್ಛೇದನ ಜಾಸ್ತಿಯಾಗುತ್ತಿದೆ. ಕುಟುಂಬ ವ್ಯವಸ್ಥೆ ಶಿಥಿಲಗೊಂಡಿದೆ, ವಿವಾಹದ ವಯಸ್ಸನ್ನು ಸರಕಾರ ಏರಿಕೆ ಮಾಡಿರುವುದರಿಂದ ಇನ್ನಷ್ಟು ಸಮಸ್ಯೆಗಳು ಬಾಧಿಸಲಿದೆ. ಈ ಕಾನೂನು ಆದರೆ ಹಿಂದೂಗಳ ಜನಸಂಖ್ಯೆ ಕಮ್ಮಿ ಆಗಲಿದೆ" ಎಂದು ಆತಂಕ ವ್ಯಕ್ತಪಡಿಸಿದರು.
"ಹಿಂದೂಗಳ ಸಂಖ್ಯೆ ಇಳಿಕೆಯಾಗುತ್ತಿರುವ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲಿ ಸಂತರು ಕಳವಳಗೊಂಡಿದ್ದಾರೆ. ನಮ್ಮ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವ ಅಪಾಯವಿದೆ. ಇದರ ಬಗ್ಗೆ ಗಂಭೀರವಾದ ಚಿಂತನೆ ಮಾಡಬೇಕಾಗಿದೆ" ಎಂದು ಸ್ವರ್ಣವಲ್ಲಿ ಶ್ರೀಗಳು ಅಭಿಪ್ರಾಯಪಟ್ಟರು.
"ಕೇಂದ್ರದಲ್ಲಿ ಹಿಂದುತ್ವದ ಸರ್ಕಾರ ಇದೆ. ರಾಜ್ಯದಲ್ಲೂ ಹಿಂದುತ್ವ ಪರವಾಗಿ ಕೆಲಸ ಮಾಡುವ ಸರ್ಕಾರ ಇದೆ. ಆದರೆ ಹಿಂದೂ ಧರ್ಮದ ವಿಚಾರವಾಗಿ ಒಳ್ಳೆಯ ಕೆಲಸಗಳನ್ನು ಮಾಡುವ ಕಾನೂನನ್ನು ಸರ್ಕಾರಕ್ಕೆ ತರಲಾಗುತ್ತಿಲ್ಲ" ಎಂದರು.
"ಧಾರ್ಮಿಕ ದತ್ತಿ ಕಾನೂನನ್ನು ರಾಜ್ಯದಲ್ಲಿ ವ್ಯವಸ್ಥಿತವಾಗಿ ಜಾರಿಗೆ ತರಬೇಕೆಂದು 40 ಹೋರಾಟ ಮಾಡಲಾಗುತ್ತಿದೆ. ದೇವಸ್ಥಾನಗಳ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ದೇವಸ್ಥಾನಗಳನ್ನು ಭಕ್ತರೇ ನೋಡಿಕೊಳ್ಳುವಂತೆ ಮಾಡಬೇಕೆಂದು" ಸ್ವಾಮೀಜಿ ಆಗ್ರಹಿಸಿದರು.
"ಮುಸ್ಲಿಮರಿಗೆ ವಕ್ಫ್ ಬೋರ್ಡ್ ಇದೆ, ಮುಸ್ಲಿಮರ ಎಲ್ಲಾ ಗೊಂದಲಗಳು ಈ ವಕ್ಫ್ ಬೋರ್ಡ್‌ನಲ್ಲಿ ತೀರ್ಮಾನ ಆಗಿ ಬಗೆಹರಿಯುತ್ತದೆ. ಸರ್ಕಾರ ಈ ವಕ್ಫ್ ಬೋರ್ಡ್ ವಿಚಾರದಲ್ಲಿ ತಲೆ ಹಾಕೋದಿಲ್ಲ. ಹಾಗೆಯೇ ಹಿಂದೂಗಳ ದೇವಸ್ಥಾನಗಳಲ್ಲೂ ಸ್ವಾಯತ್ತತೆ ಬೇಕು" ಎಂದು ಹೇಳಿದರು.
"ಪೇಜಾವರ ಶ್ರೀಗಳ ಕೊನೆಯ ಪರ್ಯಾಯದಲ್ಲಿ ಧರ್ಮ ಸಂಸತ್ ಅನ್ನು ಮಾಡಿ ಧಾರ್ಮಿಕ ದತ್ತಿ ಕಾನೂನನ್ನು ಸಮರ್ಪಕ ಅನುಷ್ಠಾನ ಮಾಡಬೇಕೆಂದು ಆಗ್ರಹಿಸಿದ್ದರು. ಆದರೆ ಅದು ಇಂದಿಗೂ ಸಫಲತೆ ಕಾಣಲಿಲ್ಲ. ಸರ್ಕಾರ ದೇಗುಲಗಳ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬಾರದೆಂದು" ಒತ್ತಾಯಿಸಿದರು.












Click it and Unblock the Notifications