ಇಲ್ಲಿ ಅನ್ನ ತಿಂದು ಪಾಕ್ ಪರ ಘೋಷಣೆ ಕೂಗ್ತಾರೆ ಎಂದು ಗುಡುಗಿದ ಶೋಭಾ
ಉಡುಪಿ, ಫೆಬ್ರವರಿ 21: ಬೆಂಗಳೂರಿನಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ, "ಪಾಕ್ ಪರ ಘೋಷಣೆ ಕೂಗುವವರಿಗೆ ಉಗ್ರ ಶಿಕ್ಷೆ ಆಗಬೇಕು. ಭಾರತ ವಿರೋಧಿ ಘೋಷಣೆ ಕೂಗುವ ಜಾಲ ನಿರ್ಮಾಣ ಆಗಿದೆ. ದೇಶದಲ್ಲಿ ಜಿನ್ನಾ ಮಾನಸಿಕತೆ ಸೃಷ್ಟಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಈ ಸಂಬಂಧ ದೇಶದ ಮತ್ತು ರಾಜ್ಯದ ಕಾನೂನಲ್ಲಿ ಬದಲಾವಣೆ ಆಗಬೇಕು" ಎಂದಿದ್ದಾರೆ.
"ಭಾರತದ ಅನ್ನ ತಿಂದು, ಸಬ್ಸಿಡಿ ಪಡೆದು ಪಾಕ್ ಪರ ಘೋಷಣೆ ಕೂಗ್ತಾರೆ. ಇದರ ಹಿಂದೆ ಇರುವ ವ್ಯಕ್ತಿಗಳ ತನಿಖೆ ಆಗಬೇಕು, ಆಯೋಜಕರ ತನಿಖೆಯೂ ಆಗಬೇಕು. ಅಮೂಲ್ಯ ತಂದೆ ಬಗ್ಗೆಯೂ ತನಿಖೆಯಾಗಬೇಕು. ಅಮೂಲ್ಯ ತಂದೆ ಕೊಪ್ಪದವರು. ಹಿಂದೆ ನಕ್ಸಲರ ಜೊತೆ ಅವರಿಗೆ ಸಂಪರ್ಕ ಇತ್ತು. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಇದೆ. ಅಮೂಲ್ಯ ಹಿನ್ನೆಲೆಯೇನು, ಈಕೆಗೆ ಯಾವ ಸಂಘಟನೆಯ ಜೊತೆ ಸಂಬಂಧ ಇದೆ? ಈ ಎಲ್ಲದರ ಬಗ್ಗೆ ತನಿಖೆಯಾಗಬೇಕು. ಎಲ್ಲರನ್ನೂ ದೇಶದ್ರೋಹದ ಕೇಸಿನ ಮೇಲೆ ಜೈಲಿಗೆ ಹಾಕಬೇಕು" ಎಂದು ಗುಡುಗಿದ್ದಾರೆ.
"ಯಾವುದೇ ವಕೀಲರು ಕೇಸು ನಡೆಸಬಾರದು. ಹುಬ್ಬಳ್ಳಿ ಪ್ರಕರಣದಲ್ಲಿ ಬೆಂಗಳೂರಿನ ವಕೀಲರು ವಾದ ಮಾಡಲು ಹೋಗಿದ್ದಾರೆ. ರಾಷ್ಟ್ರಪ್ರೇಮದ ವಿಚಾರದಲ್ಲಿ ಯಾರೂ ರಾಜಿ ಆಗಬೇಡಿ. ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಆದರೆ ಭಾರತದ ಬಗ್ಗೆ ಅವಹೇಳನ ಮಾಡಿದವರಿಗೆ ಉಗ್ರ ಶಿಕ್ಷೆಯಾಗಬೇಕು" ಎಂದಿದ್ದಾರೆ.

ಇನ್ನು ಅಮೂಲ್ಯಾಗೆ ಮಾತನಾಡಲು ಅವಕಾಶ ನೀಡಬೇಕಿತ್ತು ಎಂದು ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದೆ, "ಡಿಕೆಶಿ ಒರ್ಜಿನಲ್ ಕಾಂಗ್ರೆಸ್ಸಿಗ ಅಲ್ಲ. ನಿಜವಾದ ಕಾಂಗ್ರೆಸ್ಸಿಗರು ಈ ಹೇಳಿಕೆ ನೀಡುತ್ತಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಪಕ್ಷ ಕಾಂಗ್ರೆಸ್ ಅಂತಾರೆ. ಹೇಳಿಕೆ ನೀಡಿದ ಡಿಕೆಶಿ ಬಗ್ಗೆಯೂ ತನಿಖೆಯಾಗಬೇಕು" ಎಂದು ಹೇಳಿದ್ದಾರೆ.












Click it and Unblock the Notifications